Delimitation row: ನ್ಯಾಯೋಚಿತ ಕ್ಷೇತ್ರ ಪುನರ್​ವಿಂಗಡಣೆಗೆ ಒಗ್ಗಟ್ಟು ; ಮುಂದಿನ ಸಭೆ ಹೈದರಾಬಾದ್​ನಲ್ಲಿ

ತಮಿಳುನಾಡು ಸಿಎಂ ಸ್ಟಾಲಿನ್​, ಕರ್ನಾಟಕ ಡಿಎ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ, ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, ಒಡಿಶಾ ಕಾಂಗ್ರೆಸ್ ಅಧ್ಯಕ್ಷ ಭಕ್ತ ಚರಣ ದಾಸ್ ಮತ್ತು ಬಿಜು ಜನತಾ ದಳ ಮುಖಂಡ ಸಂಜಯ್ ಕುಮಾರ್ ದಾಸ್ ಬರ್ಮಾ ಚೆನ್ನೈ ಸಭೆಯಲ್ಲಿ ಹಾಜರಿದ್ದರು.;

Update: 2025-03-22 10:35 GMT

ನ್ಯಾಯೋಚಿತವಾಗಿ ಕ್ಷೇತ್ರ ಪುನರ್ ವಿಂಗಡಣೆ ಮಾಡುವಂತೆ ಆಗ್ರಹಿಸಿ ದಕ್ಷಿಣ ರಾಜ್ಯಗಳು ಹಾಗೂ ಪ್ರತಿಪಕ್ಷಗಳು ಆಯೋಜಿಸಿರುವ ಜಂಟಿ ಕಾರ್ಯಪಡೆ ಸಮಿತಿ (JAC)ಯ ಮುಂದಿನ ಸಭೆ ಹೈದರಾಬಾದ್​ನಲ್ಲಿ ನಡೆಯಲಿದೆ. ಶನಿವಾರ ಚೆನ್ನೈನಲ್ಲಿ ನಡೆದ ಸಭೆಯ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ.

‘ಕ್ಷೇತ್ರ ಪುನರ್ ವಿಂಗಡಣೆ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ, ಲೋಕಸಭೆಯಲ್ಲಿ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯ ಕಡಿಮೆ ಮಾಡುವ ಷಡ್ಯಂತ್ರ ನಡೆಸುತ್ತಿದೆ. ವಿಚಾರದಲ್ಲಿ ವಿರೋಧ ಪಕ್ಷಗಳು ಒಗ್ಗಟ್ಟಾಗಿ ಹೋರಾಡಬೇಕಿದೆ’ ಎಂದು ಚೆನ್ನೈ ಸಭೆಯ ನೇತೃತ್ವ ವಹಿಸಿದ್ದ ತಮಿಳುನಾಡು ಸಿಎಂ ಸ್ಟಾಲಿನ್ ಅವರು ಹೇಳಿದ್ದಾರೆ.

‘ನ್ಯಾಯೋಚಿತ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಗೆ ಕಾನೂನು ತಜ್ಞರ ಸಮಿತಿ ರಚಿಸುವ ಅಗತ್ಯವಿದೆ. ಜತೆಗೆ ಕಾನೂನಿನ ಮಾರ್ಗದಲ್ಲೇ ರಾಜಕೀಯ ಹೆಜ್ಜೆಗಳನ್ನಿಡುವ ಕುರಿತು ಸಮಿತಿಯ ಸದಸ್ಯರು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಬೇಕು. ನಾವು ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರ, ಗೆಲುವು ಸಾಧಿಸಲು ಸಾಧ್ಯ’ ಎಂದು ಅವರು ಹೇಳಿದ್ದಾರೆ.

‘ನ್ಯಾಯಯುತ ಬೇಡಿಕೆಗೆ ಒಗ್ಗಟ್ಟಿನಿಂದ ಹೋರಾಡೋಣ. ನಮ್ಮ ಪ್ರಾತಿನಿಧ್ಯ ಯಾವುದೇ ಹಂತದಲ್ಲೂ ಕುಂಠಿತವಾಗದಂತೆ ಎಚ್ಚರವಹಿಸೋಣ. ನ್ಯಾಯಯುತ ಕ್ಷೇತ್ರ ಪುನರ್ ವಿಂಗಡಣೆ ಆಗುವವರೆಗೂ ಎಲ್ಲರೂ ಹೋರಾಡೋಣ’ ಎಂದು ಅವರು ಹೇಳಿದ್ದಾರೆ.

‘ಕ್ಷೇತ್ರ ಪುನರ್ ವಿಂಗಡಣೆಗೆ ವಿರೋಧಪಕ್ಷಗಳ ವಿರೋಧವಿಲ್ಲ. ಬದಲಿಗೆ ಅದನ್ನು ನ್ಯಾಯಯುತವಾಗಿ ನಡೆಸಿ ಮತ್ತು ಯಾವುದೇ ರಾಜಕೀಯ ದುರುದ್ದೇಶ ನುಸುಳದಂತೆ ಎಚ್ಚರವಹಿಸಬೇಕು ಎಂಬುದಷ್ಟೇ ನಮ್ಮ ಬೇಡಿಕೆ’ ಎಂದು ಸ್ಟಾಲಿನ್ ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ ''"ನಮ್ಮ ಸಂಸತ್ ಸ್ಥಾನಗಳು ಕಡಿಮೆಯಾಗಲು ನಾವು ಬಿಡುವುದಿಲ್ಲ. ದಕ್ಷಿಣದ ರಾಜ್ಯಗಳು ದೇಶದ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡುತ್ತಿವೆ. ಶೈಕ್ಷಣಿಕ ಗುಣಮಟ್ಟದಲ್ಲಿ, ಆರ್ಥಿಕ ಬೆಳವಣಿಗೆ ಸೇರಿದಂತೆ ಅನೇಕ ವಿಷಯಗಳಲ್ಲಿ ಸಾಕಷ್ಟು ಮುಂದಿದ್ದೇವೆ, ತೆರಿಗೆ ಪಾವತಿಯಲ್ಲಿ ಮುಂಚೂಣಿಯಲ್ಲಿದ್ದೇವೆ" ಎಂದು ಹೇಳಿದರು.

ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ, ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, ಒಡಿಶಾ ಕಾಂಗ್ರೆಸ್ ಅಧ್ಯಕ್ಷ ಭಕ್ತ ಚರಣ ದಾಸ್ ಮತ್ತು ಬಿಜು ಜನತಾ ದಳ ಮುಖಂಡ ಸಂಜಯ್ ಕುಮಾರ್ ದಾಸ್ ಬರ್ಮಾ ಇದ್ದರು. 

Tags:    

Similar News