ಯುಎಪಿಎ ಅಡಿ ಅರುಂಧತಿ ರಾಯ್ ವಿಚಾರಣೆ: ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನುಮತಿ
ಹೊಸದಿಲ್ಲಿ- ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಲೇಖಕಿ ಅರುಂಧತಿ ರಾಯ್ ಮತ್ತು ಕಾಶ್ಮೀರದ ಮಾಜಿ ಪ್ರಾಧ್ಯಾಪಕರೊಬ್ಬರ ಮೇಲೆ ಯುಎಪಿಎ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅನುಮತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ನಂತರ ಅರುಂಧತಿ ರಾಯ್ ಮತ್ತು ಕಾಶ್ಮೀರದ ಕೇಂದ್ರೀಯ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಶೇಖ್ ಶೋಕತ್ ಹುಸೇನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದರು. ಕಾಶ್ಮೀರದ ಸಾಮಾಜಿಕ ಕಾರ್ಯಕರ್ತ ಸುಶೀಲ್ ಪಂಡಿತ್ ಅವರು ಅಕ್ಟೋಬರ್ 28, 2010 ರಂದು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ.
ಅಕ್ಟೋಬರ್ 21, 2010 ರಂದು ಇಲ್ಲಿನ ಕೋಪರ್ನಿಕಸ್ ಮಾರ್ಗ್‌ನ ಎಲ್‌ಟಿಜಿ ಆಡಿಟೋರಿಯಂನಲ್ಲಿ 'ಆಜಾದಿ - ದಿ ಓನ್ಲಿ ವೇ' ಬ್ಯಾನರ್ ಅಡಿ ಆಯೋಜಿಸಿದ ಸಮಾವೇಶದಲ್ಲಿ ರಾಯ್ ಮತ್ತು ಹುಸೇನ್ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಮ್ಮೇ ಳನದಲ್ಲಿ ಸೈಯದ್ ಅಲಿ ಶಾ ಗಿಲಾನಿ, ಎಸ್.ಎ.ಆರ್. ಗೀಲಾನಿ (ಸಂಸತ್ತಿನ ದಾಳಿ ಪ್ರಕರಣದ ಪ್ರಮುಖ ಆರೋಪಿ), ಅರುಂಧತಿ ರಾಯ್, ಡಾ. ಶೇಖ್ ಶೋಕತ್ ಹುಸೇನ್ ಮತ್ತು ವರವರ ರಾವ್ ಪಾಲ್ಗೊಂಡಿದ್ದರು.
ದೂರುದಾರ ಸುಶೀಲ್ ಪಂಡಿತ್ ಅವರು ಸಿಆರ್‌ಪಿಸಿ ಸೆಕ್ಷನ್ 156(3) ಅಡಿ ದೂರು ಸಲ್ಲಿಸಿದ್ದರು. ಹೊಸದೆಹಲಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನವೆಂಬರ್ 27, 2010 ರಂದು ಎಫ್‌ಐಆರ್ ದಾಖಲಿಸಲು ಆದೇಶಿಸಿತು.