ಮಾನನಷ್ಟ ಮೊಕದ್ದಮೆ ಪ್ರಕರಣ, ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಬಂಧನ

ನರ್ಮದಾ ಬಚಾವೋ ಆಂದೋಲನದ ಮುಖ್ಯಸ್ಥರಾಗಿದ್ದ ಮೇಧಾ ಪಾಟ್ಕಾರ್‌ ವಿರುದ್ದ ದೆಹಲಿ ನ್ಯಾಯಾಲಯವು ಜಾಮೀನು ರಹಿತ ವಾರಂಟ್‌ ಹೊರಡಿಸಿದ ಎರಡು ದಿನಗಳ ನಂತರ ದೆಹಲಿ ಪೊಲೀಸರು ಬಂಧಿಸಿದ್ದಾರೆ.;

Update: 2025-04-25 11:16 GMT

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು 25 ವರ್ಷಗಳ ಹಿಂದೆ ಹೂಡಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ, ದೆಹಲಿ ಪೊಲೀಸರು ಶುಕ್ರವಾರ (ಏಪ್ರಿಲ್ 25) ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರನ್ನು ಬಂಧಿಸಿದ್ದಾರೆ.  ನರ್ಮದಾ ಬಚಾವೋ ಆಂದೋಲನದ ಮುಖ್ಯಸ್ಥರಾಗಿರುವ ಮೇಧಾ ಪಾಟ್ಕರ್‌ ವಿರುದ್ದ ದೆಹಲಿ ನ್ಯಾಯಾಲಯವು ಜಾಮೀನು ರಹಿತ ವಾರಂಟ್‌ ಹೊರಡಿಸಿದ ಎರಡು ದಿನಗಳ ನಂತರ ದೆಹಲಿ ಪೊಲೀಸರು ಬಂಧಿಸಿದ್ದಾರೆ. 

ಮಂಗಳವಾರ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಮೇಧಾ ಪಾಟ್ಕರ್​, ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಡ್‌ ಸಲ್ಲಿಸಲು ಎರಡು ವಾರಗಳ ಸಮಯ ಕೇಳಿದ್ದರು, ಆದರೆ ಹೈಕೋರ್ಟ್‌ ಅವರ ಮನವಿ ತಿರಸ್ಕರಿಸಿ,  ವಿಚಾರಣಾಧೀನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ತಿಳಿಸಿತ್ತು. ಅಂತೆಯೇ ಮೇ 3ರಂದು ಪ್ರಕರಣ ವಿಚಾರಣೆಗೆ ಬರಲಿದೆ.

ಸಕ್ಸೇನಾ ಮುಖ್ಯಸ್ಥನಾಗಿರುವ ಎನ್‌ಜಿಒ, ನರ್ಮದಾ ಬಚಾವೋ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದರೂ, ಗುಜರಾತ್‌ ಸರ್ಕಾರದ ಸರ್ದಾರ್‌ ಸರೋವರ ಯೋಜನೆಗೆ ಗುಪ್ತವಾಗಿ ಬೆಂಬಲ ನೀಡುತ್ತಿದೆ ಎಂದು ಮೇಧಾ ಪಾಟ್ಕರ್​ ೨೦೦೦ರ ನವೆಂಬರ್‌ 25 ರಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದರು. ನರ್ಮದಾ ಬಚಾವೋ ಆಂದೋಲನಕ್ಕೆ ಸಕ್ಸೇನಾ ಚೆಕ್‌ ನೀಡಿದ್ದು, ಅದು ಬೌನ್ಸ್‌ ಆಗಿತ್ತು ಎಂದು ಪಾಟ್ಕರ್‌ ಆರೋಪಿಸಿದ್ದರು.

ಕಳೆದ ವರ್ಷ ಪಾಟ್ಕರ್‌ ಹೇಳಿಕೆಯು ಮಾನನಷ್ಟ ಪ್ರಕರಣದಡಿ ಅಪರಾಧ ಎಂದು ಪರಿಗಣಿಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ, ಐದು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಹೆಚ್ಚುವರಿ ಸೆಷನ್‌ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್‌ ಸಿಂಗ್‌, ಶಿಕ್ಷೆಯನ್ನು ಒಂದು ವರ್ಷಕ್ಕೆ ಹೆಚ್ಚಿಸಿದ್ದರು. 

1956 ಡಿಸೆಂಬರ್‌ನಲ್ಲಿ ಜನಿಸಿದ ಮೇಧಾ ಪಾಟ್ಕರ್‌ ಮಹಿಳೆಯರು, ದಲಿತರು, ಆದಿವಾಸಿಗಳು, ಕಾರ್ಮಿಕರು ಸೇರಿದಂತೆ ಅನ್ಯಾಯಕ್ಕೊಳಗಾದವರ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟದೊಂದಿಗೆ ಅವರಿಗೆ ಹಲವಾರು ಗೌರವಗಳು ಲಭಿಸಿದ್ದರೂ ಅಷ್ಟೇ ಟೀಕೆಗೆ ಒಳಗಾಗಿದ್ದಾರೆ. 

Tags:    

Similar News