ಹಿರಿಯ ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಇನ್ನಿಲ್ಲ
ಹಿರಿಯ ಮಾರ್ಕ್ಸ್‌ವಾದಿ ಯೆಚೂರಿ ಅವರು ಶ್ವಾಸಕೋಶದ ತೀವ್ರ ಸೋಂಕಿನಿಂದ ದೆಹಲಿಯ ಏಮ್ಸ್‌ನಲ್ಲಿ ಆಗಸ್ಟ್ 19 ರಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಹಿರಿಯ ಮಾರ್ಕ್ಸ್‌ವಾದಿ ನಾಯಕ ಸೀತಾರಾಮ್ ಯೆಚೂರಿ ಅವರು ಗುರುವಾರ ಮಧ್ಯಾಹ್ನ 3 ಗಂಟೆಗೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಕಳೆದ 24 ಗಂಟೆಗಳಿಂದ ಅವರ ಸ್ಥಿತಿ ಗಂಭೀರವಾಗಿದ್ದು, ಅವರು ಉಸಿರಾಟದ ಬೆಂಬಲದಲ್ಲಿದ್ದರು. ಕಳೆದ ವಾರದಿಂದ ಯೆಚೂರಿ ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಕ್ಷೀಣಿಸುತ್ತಿತ್ತು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಅವರ ಒಂದು ಶ್ವಾಸಕೋಶ ಕಾರ್ಯ ನಿರ್ವಹಣೆ ಯನ್ನು ನಿಲ್ಲಿಸಿತ್ತು ಮತ್ತು ಇನ್ನೊಂದು ಶ್ವಾಸಕೋಶದಲ್ಲಿ ಶಿಲೀಂಧ್ರ-ಬ್ಯಾಕ್ಟೀರಿಯಾದ ತೀವ್ರ ಸೋಂಕು ಉಂಟಾಗಿತ್ತು. ಕೆಲವು ದಿನಗಳಿಂದ ಅವರ ಮೂತ್ರಪಿಂಡಗಳು ಸಹ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ ಮತ್ತು ಅವರು ಡಯಾಲಿಸಿಸ್‌ಗೆ ಒಳಗಾಗಿದ್ದರು.
ಏಮ್ಸ್ ವೈದ್ಯರು ಉಸಿರಾಟದ ಸೋಂಕು ನಿವಾರಣೆಗೆ ಹೊಸ ಔಷಧಗಳನ್ನು ಬಳಸಿದ್ದರು. ಆದರೆ, ಇಂದು ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಕುಟುಂಬದವರಿಗೆ ತಿಳಿಸಿದರು ಎಂದು ಮೂಲಗಳು ಹೇಳಿವೆ.
ಆಗಸ್ಟ್ 19 ರಿಂದ ಆಸ್ಪತ್ರೆಯಲ್ಲಿ
ಯೆಚೂರಿ ಅವರು ಆಗಸ್ಟ್ 19 ರಿಂದ ಏಮ್ಸ್ ನ ಐಸಿಯುನಲ್ಲಿ ತೀವ್ರವಾದ ಉಸಿರಾಟದ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರ ತಂಡವೊಂದು ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಆಸ್ಪತ್ರೆ ಅವರ ಕಾಯಿಲೆಯ ನಿಖರ ಸ್ವರೂಪವನ್ನು ಬಹಿರಂಗಪಡಿಸದಿದ್ದರೂ, ಯೆಚೂರಿ ಅವರು ʻನ್ಯುಮೋನಿಯಾ ಹೋಲುವ ಎದೆಯ ಸೋಂಕುʼ ಚಿಕಿತ್ಸೆಗೆ ಏಮ್ಸ್‌ಗೆ ದಾಖಲಾಗಿದ್ದರು.
ಅದಕ್ಕೂ ಮುನ್ನ ಅವರು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ʻಕಾಮ್ರೇಡ್ ಸೀತಾರಾಂ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಚಿಕಿತ್ಸೆಗೆ ಸಕಾರಾತ್ಮಕ ಪ್ರತಿಕ್ರಿಯೆ ತೋರಿಸುತ್ತಿದ್ದಾರೆ,ʼ ಎಂದು ಶುಕ್ರವಾರ (ಸೆಪ್ಟೆಂಬರ್ 6) ಪಕ್ಷ ಘೋಷಿಸಿತ್ತು. ಆದರೆ, ಈ ವಾರ ಅವರ ಆರೋಗ್ಯ ಹದಗೆಟ್ಟಿತು.