ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಸಿ.ಪಿ. ರಾಧಾಕೃಷ್ಣನ್: ಬಿಜೆಪಿಯಿಂದ ಮತ್ತೆ ತಮಿಳರಿಗೆ ಮನ್ನಣೆ

ಮುಂದಿನ ವರ್ಷ ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಸಿ.ಪಿ. ರಾಧಾಕೃಷ್ಣನ್ ಅವರ ಅನಿರೀಕ್ಷಿತ ನಾಮನಿರ್ದೇಶನವು ರಾಜ್ಯದಲ್ಲಿ ಬಿಜೆಪಿಯ ಪ್ರಭಾವವನ್ನು ಹೆಚ್ಚಿಸುವ ಒಂದು ವ್ಯೂಹಾತ್ಮಕ ನಡೆಯೆಂದು ಪರಿಗಣಿಸಲಾಗಿದೆ.;

Update: 2025-08-18 04:46 GMT

ಆಗಸ್ಟ್ 4 ರಂದು ಜಗದೀಪ್ ಧನಕರ್ ಅವರು ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದ ನಂತರ, ಸೆಪ್ಟೆಂಬರ್ 9 ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಭಾರತೀಯ ಜನತಾ ಪಕ್ಷ ನೇತೃತ್ವದ ಎನ್​​ಡಿಎ ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರನ್ನು ತಮ್ಮ ಅಭ್ಯರ್ಥಿಯನ್ನಾಗಿ ಹೆಸರಿಸಿದೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಸೇವೆಯಲ್ಲಿರುವ ಅನುಭವಿ ರಾಜಕಾರಣಿ ರಾಧಾಕೃಷ್ಣನ್ ಅವರ ನಾಮನಿರ್ದೇಶನವು, ವಿಶೇಷವಾಗಿ ಚುನಾವಣಾ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಎನ್​​ಡಿಎ ಪ್ರಭಾವ ಹೆಚ್ಚಿಸುವ ಪ್ರಮುಖ ಹೆಜ್ಜೆಯಾಗಿದೆ.


'ತಮಿಳುನಾಡಿನಲ್ಲಿ ಬಿಜೆಪಿಗೆ ದೊಡ್ಡ ಉತ್ತೇಜನ'

ಈ ಆಯ್ಕೆಯ ಕುರಿತು ಪ್ರತಿಕ್ರಿಯಿಸಿದ ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್ ಅವರು, ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಉಲ್ಲೇಖಿಸಿ, "ಇದು ಎಲ್ಲ ತಮಿಳರಿಗೂ ಸಂದ ಗೌರವ" ಎಂದಿದ್ದಾರೆ.

" ತಮಿಳರೊಬ್ಬರು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದು ಎಲ್ಲರಿಗೂ ಸಂತಸದ ವಿಷಯ. ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ ಬಿಜೆಪಿ, ತಮಿಳರನ್ನು ಗೌರವಿಸುವ ಪರಂಪರೆಯನ್ನು ಮುಂದುವರಿಸಿದೆ" ಎಂದು ನೈನಾರ್ ಅವರು ದ ಫೆಡರಲ್' ಜತೆ ಮಾತನಾಡುತ್ತಾ ತಿಳಿಸಿದ್ದಾರೆ. ಈ ನಿರ್ಧಾರವು ದಕ್ಷಿಣ ಭಾರತದ ರಾಜಕೀಯದಲ್ಲಿ ಪಕ್ಷದ ಪ್ರಭಾವವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ರಾಧಾಕೃಷ್ಣನ್ ಅವರ ಆರಂಭಿಕ ದಿನಗಳಿಂದಲೂ ಅವರ ಆಪ್ತ ಸಹವರ್ತಿಯಾಗಿರುವ ಬಿಜೆಪಿ ನಾಯಕ ಎಸ್.ಆರ್. ಶೇಖರ್ ಮಾತನಾಡಿ , "ಸಾಮಾನ್ಯ ಹಿನ್ನೆಲೆಯಿಂದ ಬಂದು ಅತ್ಯುನ್ನತ ಸ್ಥಾನಕ್ಕೇರಿದ್ದಾರೆ. ಸುಲಭವಾಗಿ ಸಂಪರ್ಕಿಸಬಹುದಾದ ಮತ್ತು ತತ್ವಬದ್ಧ ನಾಯಕ" ಎಂದು ಬಣ್ಣಿಸಿದ್ದಾರೆ. "ಅವರ ಈ ಉನ್ನತಿ ನಮಗೆಲ್ಲರಿಗೂ ಅಪಾರ ಸಂತೋಷದ ಕ್ಷಣ" ಎಂದು ಶೇಖರ್ ತಿಳಿಸಿದ್ದಾರೆ. ಎಐಎಡಿಎಂಕೆ ಜೊತೆಗಿನ ಅವರ ಬಾಂಧವ್ಯ ಮತ್ತು ಕೊಂಗು ಸಮುದಾಯದಲ್ಲಿ ಅವರಿಗಿರುವ ಪ್ರಭಾವವು ಪಕ್ಷಕ್ಕೆ ದೊಡ್ಡ ಅನುಕೂಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

'ದ ಫೆಡರಲ್' ಜತೆ ಖುಷಿ ಹಂಚಿಕೊಂಡ ರಾಧಾಕೃಷ್ಣನ್ 

ಈ ಅನಿರೀಕ್ಷಿತ ನಾಮನಿರ್ದೇಶನದ ನಂತರ ದ ಫೆಡರಲ್' ಜೊತೆ ಮಾತನಾಡಿದ ಸಿ.ಪಿ. ರಾಧಾಕೃಷ್ಣನ್, "ನನ್ನನ್ನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ನಮ್ಮ ಎನ್​ಡಿಎ ಮಿತ್ರಪಕ್ಷಗಳಿಗೆ ನಾನು ಆಭಾರಿಯಾಗಿದ್ದೇನೆ. ನನ್ನ ಮೇಲಿಟ್ಟಿರುವ ಅವರ ವಿಶ್ವಾಸವು ನನ್ನನ್ನು ವಿನಮ್ರನನ್ನಾಗಿಸಿದೆ ಮತ್ತು ನನ್ನ ಕೊನೆಯುಸಿರಿನವರೆಗೂ ದೇಶಕ್ಕಾಗಿ ಅವಿರತವಾಗಿ ಸೇವೆ ಸಲ್ಲಿಸಲು ನಾನು ಬದ್ಧನಾಗಿದ್ದೇನೆ" ಎಂದು ಹೇಳಿದ್ದಾರೆ.

ಬದುಕು, ಪಯಣ

1957ರ ಅಕ್ಟೋಬರ್​ 20 ರಂದು ತಮಿಳುನಾಡಿನ ತಿರುಪ್ಪೂರಿನಲ್ಲಿ ಜನಿಸಿದ ಚಂದ್ರಪುರಂ ಪೊನ್ನುಸಾಮಿ ರಾಧಾಕೃಷ್ಣನ್ ಅವರ ರಾಜಕೀಯ ಪ್ರಯಾಣವು ತಮ್ಮ 16ನೇ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ದೊಂದಿಗೆ ಪ್ರಾರಂಭವಾಯಿತು. ಸಂಘದ ಅವರ ಆರಂಭಿಕ ಒಡನಾಟವು ಬಿಜೆಪಿಗೆ ಜೀವನಪರ್ಯಂತ ಬದ್ಧರಾಗಿರಲು ದಾರಿ ಮಾಡಿಕೊಟ್ಟಿತು.

ಹಂತ ಹಂತವಾಗಿ ಉನ್ನತ ಸ್ಥಾನಕ್ಕೆ

ಬಿಬಿಎ ಸ್ನಾತಕೋತ್ತರ ಪದವಿ ಹೊಂದಿರುವ ರಾಧಾಕೃಷ್ಣನ್ ಅವರು, 1974ರಲ್ಲಿ ಭಾರತೀಯ ಜನಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇರಿದರು. ತಮಿಳುನಾಡಿನ ತಿರುಚಿಯಲ್ಲಿ ನಡೆದ ಸಮ್ಮೇಳನದಲ್ಲಿ ಬಿಜೆಪಿಗೆ ಸೇರ್ಪಡೆಯಾದ ನಂತರ, 1996ರ ಹೊತ್ತಿಗೆ ಅವರು ಪಕ್ಷದ ಕಾರ್ಯದರ್ಶಿಯಾಗಿ ಮತ್ತು ನಂತರ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡರು.

1998 ಮತ್ತು 1999ರಲ್ಲಿ ಅವರು ಕೊಯಮತ್ತೂರಿನಿಂದ ಲೋಕಸಭೆಗೆ ಆಯ್ಕೆಯಾಗಿ, ತಮಿಳುನಾಡು ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು. ಸಂಸದರಾಗಿದ್ದ ಅವಧಿಯಲ್ಲಿ, ಅವರು ಜವಳಿ ಖಾತೆಯ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ, ಹಣಕಾಸು ಸಚಿವಾಲಯದ ಸಲಹಾ ಸಮಿತಿಯ ಸದಸ್ಯರಾಗಿ, ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ ಸಂಸದೀಯ ಸಮಿತಿ ಹಾಗೂ ಷೇರು ಮಾರುಕಟ್ಟೆ ಹಗರಣವನ್ನು ತನಿಖೆ ಮಾಡುವ ವಿಶೇಷ ಸಮಿತಿಯ ಭಾಗವಾಗಿದ್ದರು.

ಬೃಹತ್ ರಥಯಾತ್ರೆಯ ಸರದಾರ

2004 ರಲ್ಲಿ, ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲು ಸಂಸದೀಯ ನಿಯೋಗದ ಭಾಗವಾಗಿ ಭಾರತವನ್ನು ಪ್ರತಿನಿಧಿಸಿದರು ಮತ್ತು ಥೈವಾನ್​ಗೆ ಭೇಟಿ ನೀಡಿದ ಮೊದಲ ಸಂಸದೀಯ ನಿಯೋಗದಲ್ಲಿಯೂ ಭಾಗವಹಿಸಿದ್ದರು. 2003 ರಿಂದ 2006 ರವರೆಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ರಾಧಾಕೃಷ್ಣನ್, ಭಾರತೀಯ ನದಿಗಳ ಜೋಡಣೆ, ಭಯೋತ್ಪಾದನೆ ನಿರ್ಮೂಲನೆ, ಏಕರೂಪ ನಾಗರಿಕ ಸಂಹಿತೆ ಜಾರಿ, ಹಾಗೂ ಅಸ್ಪೃಶ್ಯತೆ ಮತ್ತು ಮಾದಕವಸ್ತುಗಳ ಬಳಕೆಯ ವಿರುದ್ಧ ಜಾಗೃತಿ ಮೂಡಿಸಲು 93 ದಿನಗಳ ಕಾಲ 19,000 ಕಿ.ಮೀ.ಗಳ ರಥಯಾತ್ರೆಯನ್ನು ಕೈಗೊಂಡಿದ್ದರು. ಅವರು ವಿವಿಧ ಕಾರಣಗಳಿಗಾಗಿ ಇನ್ನೂ ಎರಡು ಪಾದಯಾತ್ರೆಗಳನ್ನು ಮುನ್ನಡೆಸಿ, ತಳಮಟ್ಟದಲ್ಲಿ ತಮ್ಮ ಸಂಪರ್ಕವನ್ನು ಬಲಪಡಿಸಿಕೊಂಡರು.

2016 ಮತ್ತು 2019ರ ಚುನಾವಣಾ ಹಿನ್ನಡೆಗಳ ಹೊರತಾಗಿಯೂ, ಅವರ ಸೌಜನ್ಯಯುತ ನಡವಳಿಕೆ ಮತ್ತು ಸಾರ್ವಜನಿಕ ಸೇವೆಗೆ ಬದ್ಧತೆಯು ಅವರಿಗೆ ವ್ಯಾಪಕ ಗೌರವವನ್ನು ತಂದುಕೊಟ್ಟಿತು. 2016 ರಿಂದ 2020 ರವರೆಗೆ ಅಖಿಲ ಭಾರತ ತೆಂಗಿನ ನಾರು ಮಂಡಳಿಯ (All India Coir Board) ಅಧ್ಯಕ್ಷರಾಗಿ ಅವರ ಆಡಳಿತಾತ್ಮಕ ಕೌಶಲ್ಯವು ಮಿಂಚಿತು. ಈ ಅವಧಿಯಲ್ಲಿ ತೆಂಗಿನ ನಾರಿನ ರಫ್ತು ದಾಖಲೆಯ 2,532 ಕೋಟಿ ರೂಪಾಯಿ ತಲುಪಿತ್ತು.

ಅವರ ರಾಜ್ಯಪಾಲರ ಹುದ್ದೆಗಳು ಅವರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದವು: ಅವರು ಫೆಬ್ರವರಿ 2023 ರಿಂದ ಜಾರ್ಖಂಡ್​ನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು, ಕೇವಲ ನಾಲ್ಕು ತಿಂಗಳಲ್ಲಿ ಎಲ್ಲಾ 24 ಜಿಲ್ಲೆಗಳಿಗೆ ಪ್ರಯಾಣಿಸಿ ನಾಗರಿಕರೊಂದಿಗೆ ಸಂವಾದ ನಡೆಸಿದರು. ಅಲ್ಲದೆ, ತೆಲಂಗಾಣದ ರಾಜ್ಯಪಾಲ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿ ಜವಾಬ್ದಾರಿಗಳನ್ನು ವಹಿಸಿಕೊಂಡರು. 2024ರ ಜುಲೈ 31 ರಿಂದ, ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದು, ಸ್ವಚ್ಛ ಮತ್ತು ವಿವಾದ-ಮುಕ್ತ ದಾಖಲೆಯನ್ನು ಉಳಿಸಿಕೊಂಡಿದ್ದಾರೆ.

ಕಾಲೇಜು ಟೇಬಲ್ ಟೆನಿಸ್ ಚಾಂಪಿಯನ್

ಕ್ರೀಡಾಪಟುವಾಗಿದ್ದ ರಾಧಾಕೃಷ್ಣನ್, ಕಾಲೇಜು ಮಟ್ಟದಲ್ಲಿ ಟೇಬಲ್ ಟೆನಿಸ್ ಚಾಂಪಿಯನ್ ಆಗಿದ್ದರು ಮತ್ತು ಸುದೀರ್ಘ ಮಾದರಿಯ ಓಟಗಾರರಾಗಿದ್ದರು. ಅವರಿಗೆ ಕ್ರಿಕೆಟ್ ಮತ್ತು ವಾಲಿಬಾಲ್​​ನಲ್ಲಿಯೂ ಆಸಕ್ತಿ ಇತ್ತು. ಪ್ರವಾಸ ಪ್ರಿಯರಾದ ಅವರು ಅಮೆರಿಕ, ಬ್ರಿಟನ್, ಚೀನಾ ಮತ್ತು ಜಪಾನ್ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದಾರೆ. ರಾಧಾಕೃಷ್ಣನ್ ಅವರಿಗೆ ಒಬ್ಬ ಮಗ ( ಉದ್ಯಮಿ) ಮತ್ತು ಒಬ್ಬ ಮಗಳಿದ್ದಾರೆ.

'ವಿವಾದ-ರಹಿತ ಸ್ವಭಾವ'

ಕಳೆದ 20 ವರ್ಷಗಳಿಂದ ಸಿ.ಪಿ. ರಾಧಾಕೃಷ್ಣನ್ ಅವರನ್ನು ಗಮನಿಸುತ್ತಿರುವ ಹಿರಿಯ ಪತ್ರಕರ್ತ ಟಿ. ರಾಮಕೃಷ್ಣನ್, "ರಾಧಾಕೃಷ್ಣನ್ ಅವರು ಅತ್ಯಂತ ಸುಸಂಸ್ಕೃತ ರಾಜಕಾರಣಿ. ಅವರು ವಿವಾದಗಳಿಗೆ ಅವಕಾಶ ನೀಡುವುದಿಲ್ಲ. ಕಳೆದ ಕೆಲವು ವರ್ಷಗಳಿಂದ ಅವರು ಜಾರ್ಖಂಡ್ ಮತ್ತು ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿಯವರೆಗೆ, ಅವರು ಯಾವುದೇ ವಿವಾದದಲ್ಲಿ ಭಾಗಿಯಾಗಿಲ್ಲ. ಅವರ ರಾಜಕೀಯ ಕುಶಾಗ್ರಮತಿ ಮತ್ತು ಜಾಣ್ಮೆಯೇ ಈ ಉನ್ನತ ಹುದ್ದೆಗೆ ಅವರ ಆಯ್ಕೆಗೆ ಕಾರಣ ಎಂದು ನಾನು ನಂಬುತ್ತೇನೆ" ಎಂದು ಹೇಳಿದರು.

781 ಸದಸ್ಯ ಬಲದ ಚುನಾವಣಾ ಕಾಲೇಜಿನಲ್ಲಿ ಎನ್​​ಡಿಎ 400ಕ್ಕೂ ಹೆಚ್ಚು ಮತಗಳನ್ನು ಹೊಂದಿರುವುದರಿಂದ, ರಾಧಾಕೃಷ್ಣನ್ ಅವರು ಸುಲಭವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. ಇತ್ತ, ವಿರೋಧ ಪಕ್ಷವಾದ 'ಇಂಡಿಯಾ' ಮೈತ್ರಿಕೂಟವು ತನ್ನ ಅಭ್ಯರ್ಥಿಯನ್ನು ಹೆಸರಿಸಲು ಇನ್ನೂ ಕಸರತ್ತು ನಡೆಸುತ್ತಿದೆ. 

Tags:    

Similar News