ಕಾಂಗ್ರೆಸ್ ಅಂಗಡಿ ಶೀಘ್ರವೇ ಮುಚ್ಚಲಿದೆ: ಪ್ರಧಾನಿ ಮೋದಿ
ಸಂಸತ್ತಿನಲ್ಲಿ ಬಜೆಟ್ ಅಧೀವೇಶನದ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯ ಮೇಲಿನ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತು;
"ವಿರೋಧ ಪಕ್ಷಗಳು ಚುನಾವಣೆಗೆ ಸ್ಪರ್ಧಿಸುವ ಧೈರ್ಯವನ್ನು ಕಳೆದುಕೊಂಡಿವೆ ಮತ್ತು ದೀರ್ಘಕಾಲ ವಿರೋಧ ಪಕ್ಷದ ಸ್ಥಾನದಲ್ಲಿಯೇ ಉಳಿಯಲು ನಿರ್ಧರಿಸಿವೆ" ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಮೋದಿ, ಕೆಲವು ವಿರೋಧ ಪಕ್ಷದ ನಾಯಕರು ತಮ್ಮ ಸಂಸದೀಯ ಸ್ಥಾನಗಳನ್ನು ಬದಲಾಯಿಸಲು ಉತ್ಸುಕರಾಗಿದ್ದಾರೆ, ಇನ್ನು ಕೆಲವರು ರಾಜ್ಯಸಭೆಗೆ ತೆರಳಲು ಯೋಜಿಸುತ್ತಿದ್ದಾರೆ ಎಂದು ಹೇಳಿದರು.
"ಪ್ರತಿಪಕ್ಷಗಳು ತೆಗೆದುಕೊಂಡ ನಿರ್ಣಯವನ್ನು ನಾನು ಪ್ರಶಂಸಿಸುತ್ತೇನೆ. ಅವರ ಭಾಷಣದ ಪ್ರತಿಯೊಂದು ಮಾತುಗಳು ನನ್ನ ಮತ್ತು ದೇಶದ ವಿಶ್ವಾಸವನ್ನು ದೃಢಪಡಿಸಿವೆ, ಅವರು ದೀರ್ಘಕಾಲ ಅಲ್ಲಿಯೇ (ವಿರೋಧ ಪಕ್ಷದಲ್ಲಿ) ಇರಲು ನಿರ್ಧರಿಸಿದ್ದಾರೆ" ಎಂದು ಮೋದಿ ಟೀಕಿಸಿದರು.
"ಹಲವು ದಶಕಗಳಿಂದ ನೀವು ಆಡಳಿತ ಪಕ್ಷವಾಗಿದ್ದಿರಿ, ಆದರೆ ಈಗ ನೀವು ಹಲವಾರು ದಶಕಗಳ ಕಾಲ ವಿರೋಧ ಪಕ್ಷವಾಗಿರಲು ನಿರ್ಧರಿಸಿದ್ದೀರಿ. ಜನರು ನಿಮ್ಮನ್ನು ಆಶೀರ್ವದಿಸುತ್ತಾರೆ ಮತ್ತು ಅಲ್ಲಿಯೇ ಇರಿಸುತ್ತಾರೆ. ನೀವು ಹೆಚ್ಚಿನ ಎತ್ತರಕ್ಕೆ ಹೋಗುತ್ತೀರಿ ಮತ್ತು ಶೀಘ್ರದಲ್ಲೇ ಸಾರ್ವಜನಿಕರ ಗ್ಯಾಲರಿಗಳಲ್ಲಿ(ಸದನದ) ಕಾಣಿಸಿಕೊಳ್ಳುತ್ತೀರಿ" ಎಂದು ಅವರು ಹೇಳಿದರು.
"ಕೆಲವು ರಚನಾತ್ಮಕ ಸಲಹೆಗಳನ್ನು ನೀಡಲು ಬಜೆಟ್ ಅಧಿವೇಶನ ಉತ್ತಮ ಅವಕಾಶವಾಗಿದೆ, ಆದರೆ ವಿರೋಧ ಪಕ್ಷದ ಸದಸ್ಯರು ಉತ್ತಮ ಅವಕಾಶವನ್ನು ಕೈಬಿಟ್ಟಿದ್ದಾರೆ" ಎಂದು ಮೋದಿ ಹೇಳಿದರು.
“ನೀವು ದೇಶವನ್ನು ಭ್ರಮನಿರಸನಗೊಳಿಸಿ ಬಿಟ್ಟಿದ್ದೀರಿ. ನಾಯಕರು ಬದಲಾದರೂ ನಿಮ್ಮದು ಅದೇ ರಾಗ ಮುಂದುವರಿಯುತ್ತದೆ,” ಎಂದು ಅವರು ಹೇಳಿದರು.
ಈ ಚುನಾವಣಾ ವರ್ಷದಲ್ಲಿ ಪ್ರತಿಪಕ್ಷಗಳು ಜನರಿಗೆ ಏನಾದರೂ ಸಂದೇಶ ನೀಡಬಹುದಿತ್ತು, ಇಂದಿನ ಪ್ರತಿಪಕ್ಷದ ದಯನೀಯ ಸ್ಥಿತಿಗೆ ಕಾಂಗ್ರೆಸ್ ಕಾರಣ. ಕಾಂಗ್ರೆಸ್‌ಗೆ ಉತ್ತಮ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲು ಉತ್ತಮ ಅವಕಾಶವಿತ್ತು, ಆದರೆ ಆ ಪಾತ್ರದಲ್ಲಿ ವಿಫಲವಾಗಿದೆ. ವಿರೋಧ ಪಕ್ಷದಲ್ಲಿರುವ ಇತರ ಯುವಕರಿಗೆ ಮಾತನಾಡಲು ಅವಕಾಶವನ್ನೇ ನೀಡಲಿಲ್ಲ, ಏಕೆಂದರೆ ನಿರ್ದಿಷ್ಟ ವ್ಯಕ್ತಿಯನ್ನು ಮರೆಮಾಡಬಹುದು ಎಂಬ ಭಯ ಇದೆ ಅವರಿಗೆ ಎಂದು ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ ಮೋದಿ ಹೇಳಿದರು.
ಕಾಂಗ್ರೆಸ್ ಅಂತ್ಯ?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮೊಹಬ್ಬತ್ ಕಿ ದುಕಾನ್ (ಪ್ರೀತಿಯ ಅಂಗಡಿ) ಘೋಷವಾಕ್ಯಕ್ಕೆ ತಿರುಗೇಟು ನೀಡಿದ ಪ್ರಧಾನಿ, "ಒಂದೇ ಬಗೆಯ ಉತ್ಪನ್ನವನ್ನು ಪದೇ ಪದೇ ಪರಿಚಯಿಸುತ್ತಿರುವ ಕಾರಣ ಕಾಂಗ್ರೆಸ್ ಶೀಘ್ರದಲ್ಲೇ "ಅಂಗಡಿ ಮುಚ್ಚಬೇಕಾಗಬಹುದು" ಎಂದು ಪ್ರಧಾನಿ ಹೇಳಿದರು.
“ಇದು ಚುನಾವಣೆಯ ಸಮಯ, ನೀವು ಸ್ವಲ್ಪ ಶ್ರಮವಹಿಸಿ, ಹೊಸ ಸಂದೇಶವನ್ನು ಜನರಿಗೆ ಕಳುಹಿಸಬೇಕಾಗಿತ್ತು, ಆದರೆ, ನೀವು ವಿಫಲರಾಗಿದ್ದೀರಿ. ಪ್ರತಿಪಕ್ಷಗಳ ಈಗಿನ ಸ್ಥಿತಿಗೆ ಕಾಂಗ್ರೆಸ್ ಪಕ್ಷವೇ ಕಾರಣ. ಕಾಂಗ್ರೆಸ್‌ಗೆ ಉತ್ತಮ ಪ್ರತಿಪಕ್ಷವಾಗುವ ಅವಕಾಶ ಸಿಕ್ಕಿದೆ. ಆದರೆ, ಕಳೆದ ಹತ್ತು ವರ್ಷಗಳಲ್ಲಿ ಅವರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ..." ಎಂದು ಲೋಕಸಭೆಯಲ್ಲಿ ಮೋದಿ ಹೇಳಿದರು.