ಸೈದ್ಧಾಂತಿಕ ದಿವಾಳಿತನ: ʼಭಯೋತ್ಪಾದಕರ ಪಕ್ಷʼ ಎಂಬ ಖರ್ಗೆ ಹೇಳಿಕೆಗೆ ಜೆ.ಪಿ.ನಡ್ಡಾ ಕಿಡಿ

ದೇಶದ ಅತ್ಯಂತ ಹಳೆಯ ಪಕ್ಷ ಶೋಚನೀಯ ಸ್ಥಿತಿಗೆ ತಲುಪಿದೆ. ಕಾಂಗ್ರೆಸ್ ಪಕ್ಷದ ಮೇಲಿನ ಜನರ ನಂಬಿಕೆ ಕ್ಷೀಣಿಸುತ್ತಿದೆ. ರಾಷ್ಟ್ರವಿರೋಧಿ ಶಕ್ತಿಗಳು, ನಗರ ನಕ್ಸಲರು ಮತ್ತು ದೇಶದ ಮಾನಹಾನಿ ಮಾಡುವವರನ್ನು ಯಾವ ಪಕ್ಷ ಬೆಂಬಲಿಸುತ್ತದೆ ಎಂಬುದು ಜನರಿಗೆ ತಿಳಿದಿದೆ ಎಂದು ಜೆ.ಪಿ.ನಡ್ಡಾ ಅವರು ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.;

Update: 2024-10-14 05:37 GMT

ಚುನಾವಣೆಗಳಲ್ಲಿ ಸತತ ಹಿನ್ನೆಡೆಯಿಂದ ಕಾಂಗ್ರೆಸ್ ಪಕ್ಷ ಸೈದ್ಧಾಂತಿಕವಾಗಿ ದಿವಾಳಿಯಾಗಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಿಜೆಪಿ ʼಭಯೋತ್ಪಾದಕರ ಪಕ್ಷʼ ಎಂಬ ಹೇಳಿಕೆ ʼವಿಫಲ ನಾಯಕʼನನ್ನು ರಕ್ಷಿಸುವ ಹತಾಶೆಯ ಹೇಳಿಕೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರ ಟೀಕೆಗೆ ಭಾನುವಾರ ನವದೆಹಲಿಯಲ್ಲಿ ತಿರುಗೇಟು ನೀಡಿರುವ ನಡ್ಡಾ ಅವರು, ದೇಶದ ಅತ್ಯಂತ ಹಳೆಯ ಪಕ್ಷ ಶೋಚನೀಯ ಸ್ಥಿತಿಗೆ ತಲುಪಿದೆ. ಕಾಂಗ್ರೆಸ್ ಪಕ್ಷದ ಮೇಲಿನ ಜನರ ನಂಬಿಕೆ ಕ್ಷೀಣಿಸುತ್ತಿದೆ. ಹಾಗಾಗಿ ಚುನಾವಣೆಗಳ ಸತತ ಸೋಲಿನ ಬಗ್ಗೆ ಖರ್ಗೆ ಅವರು ಆತ್ಮಾವಲೋಕನ ಮಾಡಿಕೊಳ್ಳಲಿ. ರಾಷ್ಟ್ರವಿರೋಧಿ ಶಕ್ತಿಗಳು, ನಗರ ನಕ್ಸಲರು ಮತ್ತು ದೇಶದ ಮಾನಹಾನಿ ಮಾಡುವವರನ್ನು ಯಾವ ಪಕ್ಷ ಬೆಂಬಲಿಸುತ್ತದೆ ಎಂಬುದು ಜನರಿಗೆ ತಿಳಿದಿದೆ ಎಂದು ನಡ್ಡಾ ಹೇಳಿದ್ದಾರೆ.

ಕಾಂಗ್ರೆಸ್ ಅನ್ನು ನಗರ ನಕ್ಸಲರು ನಡೆಸುತ್ತಿರುವ ಪಕ್ಷ ಎಂದು ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ʼಭಯೋತ್ಪಾದಕರ ಪಕ್ಷʼ ಎಂದು ಕರೆದಿದ್ದರು.

ಸವಾಲೊಡ್ಡಲು ಸಾಧ್ಯವಾಗುತ್ತಿಲ್ಲ

ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಮತ್ತು ಬಡವರ ಪರವಾದ ನೀತಿಗಳಿಗೆ ಸವಾಲೊಡ್ಡಲು ಕಾಂಗ್ರೆಸ್ಗೆ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್‌ ನಾಯಕತ್ವ ಬಿಜೆಪಿ, ನರೇಂದ್ರ ಮೋದಿ ಹಾಗೂ ದೇಶವನ್ನು ದೂಷಿಸಲು ಆರಂಭಿಸಿದೆ ಎಂದು ಜೆ.ಪಿ. ನಡ್ಡಾ ಕಿಡಿಕಾರಿದ್ದಾರೆ.

ಹರ್ಯಾಣ ಚುನಾವಣೆ ಫಲಿತಾಂಶ ಕುರಿತು ರಾಜಕೀಯ ತಜ್ಞರು ಮತ್ತು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್‌ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ, ಕಾಂಗ್ರೆಸ್‌ ಸೋಲಿನ ನಂತರ ಅದರ ನಾಯಕರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಈ ನಿಟ್ಟಿನಲ್ಲಿ ಖರ್ಗೆ ಅವರ ಹೇಳಿಕೆ ಹಾಸ್ಯಾಸ್ಪದ ಮಾತ್ರವಲ್ಲದೇ ಅವರ ಪಕ್ಷದ ಸಾಮರ್ಥ್ಯ ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ.

ಗಡಿಯಾಚೆಗಿನ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದ ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿಗಳಿಗೆ ಕಾಂಗ್ರೆಸ್ ಪುರಾವೆ ಹುಡುಕುತ್ತಿದೆ. ಕಾಂಗ್ರೆಸ್ಸಿನ ʼವಿಫಲ ಉತ್ಪನ್ನʼವಾಗಿರುವ ರಾಹುಲ್‌ ಗಾಂಧಿ ಅವರನ್ನು ರಕ್ಷಿಸುವ ಮತ್ತು ಮುನ್ನೆಲೆಗೆ ತರುವ ಪ್ರಯತ್ನದಲ್ಲಿ ಇಡೀ ಪಕ್ಷದ ನಾಯಕತ್ವ ಬೌದ್ಧಿಕ ಅವನತಿಗೆ ಬಂದು ನಿಂತಿದೆ ಎಂದು ಟೀಕಾ ಪ್ರಹಾರ ನಡೆಸಿದರು.

Tags:    

Similar News