TN Governorʼs Secularism remark | ಕಾಂಗ್ರೆಸ್, ಸಿಪಿಐ(ಎಂ) ಖಂಡನೆ
ʻರಾಜ್ಯಪಾಲರು ಪ್ರಾಯೋಗಿಕವಾಗಿ ಬಲೂನು ಹಾರಿಸುತ್ತಾರೆ; ಪ್ರಧಾನಿ ಮಾಡಲು ಬಯಸಿದ್ದನ್ನು ಪ್ರತಿಧ್ವನಿಸುತ್ತಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ಇಂಥ ವ್ಯಕ್ತಿಯನ್ನು ತಮಿಳುನಾಡಿನಂತಹ ಮಹತ್ವದ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ನೇಮಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಬೃಂದಾ ಕಾರಟ್ ಟೀಕಿಸಿದ್ದಾರೆ.;
ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರ ಸೆಕ್ಯುಲರಿಸಂ ಕುರಿತ ಹೇಳಿಕೆ ವಿವಾದ ಸೃಷ್ಟಿಸಿದೆ. ಕಾಂಗ್ರೆಸ್ ಮತ್ತು ಸಿಪಿಎಂ ಅವರ ಹೇಳಿಕೆಯನ್ನು ಖಂಡಿಸಿವೆ.
ಕನ್ಯಾಕುಮಾರಿ ಜಿಲ್ಲೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ʼಸೆಕ್ಯುಲರಿಸಂ ಎಂಬುದು ಚರ್ಚ್ ಮತ್ತು ರಾಜನ ನಡುವಿನ ಸಂಘರ್ಷದ ನಂತರ ವಿಕಸನಗೊಂಡ ಯುರೋಪಿಯನ್ ಪರಿಕಲ್ಪನೆ. ಆದರೆ, ಭಾರತ ಧರ್ಮ ಕೇಂದ್ರಿತ ರಾಷ್ಟ್ರವಾದ್ದರಿಂದ ಅದು ಸಂವಿಧಾನದ ಭಾಗವಾಗಿರಲಿಲ್ಲ. ಆದರೆ, ತುರ್ತು ಪರಿಸ್ಥಿತಿ ಸಮಯದಲ್ಲಿ ʻಒಬ್ಬ ಅಸುರಕ್ಷಿತ ಪ್ರಧಾನ ಮಂತ್ರಿʼ ಆ ಪದವನ್ನು ಸೇರಿಸಿದರುʼ ಎಂದು ಆರ್.ಎನ್. ರವಿ ಹೇಳಿದ್ದರು.
ಕೆಲವರನ್ನು ಸಮಾಧಾನಪಡಿಸುವ ಪ್ರಯತ್ನ: ಭಾರತದಲ್ಲಿ ಜಾತ್ಯತೀತತೆಯ ಅಗತ್ಯವಿಲ್ಲ. ಆದ್ದರಿಂದ ಅದನ್ನು ಸಂವಿಧಾನದಲ್ಲಿ ಸೇರಿಸಿಲ್ಲ. ಸಂವಿಧಾನವನ್ನು ರಚಿಸುವಾಗ, ಜಾತ್ಯತೀತತೆ ಬಗ್ಗೆ ಚರ್ಚೆ ನಡೆಯಿತು. ಭಾರತ ಧರ್ಮ ಕೇಂದ್ರಿತ ದೇಶ ಮತ್ತು ಯುರೋಪಿನಂತೆ ಯಾವುದೇ ಸಂಘರ್ಷ ನಡೆದಿಲ್ಲ ಎಂದು ಸಂವಿಧಾನ ಸಭೆ ಅದನ್ನು ತಿರಸ್ಕರಿಸಿತು. ತುರ್ತು ಪರಿಸ್ಥಿತಿ(1975-77) ವೇಳೆ ಒಬ್ಬ ಅಸುರಕ್ಷಿತ ಪ್ರಧಾನಿ ಕೆಲವು ವರ್ಗದ ಜನರನ್ನು ಸಮಾಧಾನಪಡಿಸಲು ಜಾತ್ಯತೀತತೆಯನ್ನು ಪರಿಚಯಿಸಿದರು ಎಂದು ಹೇಳಿದ್ದರು. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದರು.
ಸ್ವೀಕಾರಾರ್ಹವಲ್ಲ-ಕಾಂಗ್ರೆಸ್: ಜಾತ್ಯತೀತತೆ ಯುರೋಪಿನ ಪರಿಕಲ್ಪನೆ ಎಂಬ ರಾಜ್ಯಪಾಲರ ಹೇಳಿಕೆ ಅತಿರೇಕದ್ದು ಮತ್ತು ಸ್ವೀಕಾರಾರ್ಹವಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ. ಅವರನ್ನು ತಕ್ಷಣ ವಜಾಗೊಳಿಸುವಂತೆ ಒತ್ತಾಯಿಸಿದೆ.
ʻರಾಜ್ಯಪಾಲರು ಪ್ರಾಯೋಗಿಕವಾಗಿ ಬಲೂನು ಹಾರಿಸುತ್ತಾರೆ; ಪ್ರಧಾನಿ ಮಾಡಲು ಬಯಸಿದ್ದನ್ನು ಪ್ರತಿಧ್ವನಿಸುತ್ತಾರೆ,ʼ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ʻಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮತ್ತು ಸಾಂವಿಧಾನಿಕ ಅಧಿಕಾರಿಯಾಗಿ ಉಳಿದಿರುವ ಈ ವ್ಯಕ್ತಿಯನ್ನು ತಕ್ಷಣ ವಜಾ ಮಾಡಬೇಕು. ರಾಜ್ಯಪಾಲರ ಸ್ಥಾನಕ್ಕೆ ಅಪಮಾನ. ಇದು ಅವರ ಮೊದಲ ಅತಿರೇಕದ ಮತ್ತು ಸ್ವೀಕಾರಾರ್ಹವಲ್ಲದ ಹೇಳಿಕೆಯಲ್ಲ.ಅಜೈವಿಕ ಪ್ರಧಾನಿ ಮಾಡಲು ಬಯಸಿದ್ದನ್ನು ಪ್ರತಿಧ್ವನಿಸುತ್ತಾರೆ,ʼ ಎಂದು ಕಾಂಗ್ರೆಸ್ ನಾಯಕ ಹೇಳಿದರು.
ಆರ್‌ಎಸ್‌ಎಸ್ ತಿಳಿವಳಿಕೆಯ ಪ್ರತಿಬಿಂಬ: ಕಾರಟ್- ಇಂತಹ ಅಭಿಪ್ರಾಯ ಹೊಂದಿರುವವರನ್ನು ರಾಜ್ಯಪಾಲರನ್ನಾಗಿ ನೇಮಿಸಿರುವುದು ನಾಚಿಕೆಗೇಡು.ಇದು ಆರ್‌ಎಸ್‌ಎಸ್ ತಿಳಿವಳಿಕೆಯನ್ನು ಪ್ರತಿಬಿಂಬಿಸುತ್ತದೆ. ಶೀಘ್ರದಲ್ಲೇ ಅವರು ಸಂವಿಧಾನವನ್ನು ವಿದೇಶಿ ಪರಿಕಲ್ಪನೆ ಎಂದು ಪ್ರತಿಪಾದಿಸಬಹುದು ಎಂದು ಸಿಪಿಐ (ಎಂ) ನಾಯಕಿ ಬೃಂದಾ ಕಾರಟ್ ಹೇಳಿದ್ದಾರೆ.
ʻಈ ರಾಜ್ಯಪಾಲರು ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸೆಕ್ಯುಲರಿಸಂ ಸಂವಿಧಾನದ ಅವಿಭಾಜ್ಯ ಅಂಗವಾಗಿದೆ ಮತ್ತು ರಾಜಕೀಯದಿಂದ ಧರ್ಮವನ್ನು ಬೇರ್ಪಡಿಸುವುದು ಸಹ ಅದರೊಳಗೆ ಇದೆ. ಇಂಥ ವ್ಯಕ್ತಿಯನ್ನು ತಮಿಳುನಾಡಿನಂತಹ ಮಹತ್ವದ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ನೇಮಿಸಿರುವುದು ನಾಚಿಕೆಗೇಡಿನ ಸಂಗತಿ,ʼ ಎಂದು ಹೇಳಿದ್ದಾರೆ.