ಆಯುಷ್ಮಾನ್ ಭಾರತ್ ವ್ಯಾಪ್ತಿ ವಿಸ್ತರಣೆ: ಹಿರಿಯ ನಾಗರಿಕರಿಗೂ ಇನ್ನು ಸಿಗಲಿದೆ ಆರೋಗ್ಯ ವಿಮೆ
ಆಯುಷ್ಮಾನ್ ಭಾರತ್ ಯೋಜನೆ(ಪಿಎಂಜೆಎವೈ) ಸುಮಾರು 4.5 ಕೋಟಿ ಕುಟುಂಬಗಳ ಆರು ಕೋಟಿ ಹಿರಿಯ ನಾಗರಿಕರಿಗೆ 5 ಲಕ್ಷ ರೂ.ಗಳ ಉಚಿತ ಆರೋಗ್ಯ ವಿಮೆ ರಕ್ಷಣೆಯನ್ನು ನೀಡುತ್ತದೆ.;
ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಯನ್ನು 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲರಿಗೂ ಕೇಂದ್ರ ಸಂಪುಟ ಅನುಮೋದಿಸಿದೆ.
ತಮ್ಮ ಸರ್ಕಾರವು ಸುಲಭವಾಗಿ, ಕೈಗೆಟಕುವ ಮತ್ತು ಉತ್ತಮ ಗುಣಮಟ್ಟದ ಮಟ್ಟದ ಆರೋಗ್ಯ ಸೇವೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ (ಸೆಪ್ಟೆಂಬರ್ 11) ಹೇಳಿದರು.
ಯೋಜನೆಯು ಆದಾಯವನ್ನು ಲೆಕ್ಕಿಸದೆ ಸುಮಾರು 4.5 ಕೋಟಿ ಕುಟುಂಬಗಳ 6 ಕೋಟಿ ಹಿರಿಯ ನಾಗರಿಕರಿಗೆ 5 ಲಕ್ಷ ರೂ. ಉಚಿತ ಆರೋಗ್ಯ ವಿಮೆ ರಕ್ಷಣೆಯನ್ನು ನೀಡಲಿದೆ. ಅರ್ಹ ಫಲಾನುಭವಿಗಳಿಗೆ ಯೋಜನೆಯಡಿ ಹೊಸ ಕಾರ್ಡ್ ವಿತರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ʻಪ್ರತಿಯೊಬ್ಬ ಭಾರತೀಯರಿಗೂ ಕೈಗೆಟಕುವ ಮತ್ತು ಉನ್ನತ ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಬದ್ಧರಾಗಿದ್ದೇವೆ. 70 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಆರೋಗ್ಯ ರಕ್ಷಣೆ ಒದಗಿಸಲು ಆಯುಷ್ಮಾನ್ ಭಾರತ್ ಪಿಎಂ-ಜೆಎವೈ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲು ಇಂದು ಸಂಪುಟ ನಿರ್ಧರಿಸಿದೆ,ʼ ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇವಿ ಯೋಜನೆಗಳು: ಸಂಪುಟ ಅನುಮೋದಿಸಿರುವ ಪಿಎಂ ಇ-ಡ್ರೈವ್ ಯೋಜನೆಯು ಹಸಿರು ಚಲನಶೀಲತೆಯನ್ನು ಹೆಚ್ಚಿಸುತ್ತದೆ ಮತ್ತು ಸುಸ್ಥಿರ ಭವಿಷ್ಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಪಿಎಂ-ಇಬಸ್ ಸೇವಾ ಪಾವತಿ ಭದ್ರತಾ ಕಾರ್ಯವಿಧಾನ (ಪಿಎಸ್‌ಎಂ) ಯೋಜನೆ ಈ ವಲಯದಲ್ಲಿ ಹೆಚ್ಚಿನ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
ಬಸ್, ಆಂಬ್ಯುಲೆನ್ಸ್ ಮತ್ತು ಟ್ರಕ್ ಸೇರಿದಂತೆ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು, 14,335 ಕೋಟಿ ರೂ. ಎರಡು ಪ್ರಮುಖ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪಿಎಂ ಎಲೆಕ್ಟ್ರಿಕ್ ಡ್ರೈವ್ (ಪಿಎಂ ಇ ಡ್ರೈವ್) ಯೋಜನೆಯು ಎರಡು ವರ್ಷಗಳಲ್ಲಿ 10,900 ಕೋಟಿ ರೂ. ಮತ್ತು ಪಿಎಂ-ಇಬಸ್ ಸೇವಾ-ಪಾವತಿ ಭದ್ರತಾ ಕಾರ್ಯವಿಧಾನ (ಪಿಎಸ್‌ಎಂ) ಯೋಜನೆ 3,435 ಕೋಟಿ ರೂ. ವೆಚ್ಚವನ್ನು ಒಳಗೊಂಡಿದೆ.
ಜಲವಿದ್ಯುತ್ ಯೋಜನೆ: ಮುಂದಿನ ಎಂಟು ವರ್ಷಗಳಲ್ಲಿ 31,350 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆಗಳ ಅಭಿವೃದ್ಧಿಗೆ 12,461 ಕೋಟಿ ರೂ.ಗಳಿಗೆ ಸಂಪುಟ ಅನುಮೋದಿಸಿದೆ. ʻಇದರಿಂದ ಜಲವಿದ್ಯುತ್ ಬೆಳವಣಿಗೆ ವೇಗಗೊಳ್ಳುತ್ತದೆ, ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಈ ವಲಯದಲ್ಲಿ ಹೂಡಿಕೆಯನ್ನು ಹೆಚ್ಚಿಸುತ್ತದೆ,ʼ ಎಂದು ಪೋಸ್ಟ್ ಮಾಡಿದ್ದಾರೆ.
ರಸ್ತೆ ನಿರ್ಮಾಣಕ್ಕೆ ಉತ್ತೇಜನ: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-4ಕ್ಕೆ ಸಂಪುಟ ಅನುಮೋದನೆ ನೀಡಿದೆ. ʻಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-4 ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ,ʼ ಎಂದು ಪ್ರಧಾನಿ ಎಕ್ಸ್‌ನಲ್ಲಿ ಬರೆದಿದ್ದಾರೆ.
ಮಿಷನ್ ಮೌಸಮ್: ಹವಾಮಾನ ಸಂಬಂಧಿತ ವಿಜ್ಞಾನ ಮತ್ತು ಸೇವೆಗಳಲ್ಲಿ ದೇಶದ ಸಾಮರ್ಥ್ಯವನ್ನು ಬಲಪಡಿಸುವ ʻಮಿಷನ್ ಮೌಸಮ್ʼ ಗೆ ಸಂಪುಟ ಅನುಮೋದನೆ ನೀಡಿದೆ. ಇದರಿಂದ ಕೃಷಿ, ವಿಪತ್ತು ನಿರ್ವಹಣೆ ಮತ್ತು ಇತರ ಕ್ಷೇತ್ರಗಳಿಗೆ ಪ್ರಯೋಜನ ಆಗಲಿದೆ.