ಚುನಾವಣೆ ಆಯುಕ್ತರನ್ನು ತರಾಟೆಗೆ ತೆದುಕೊಂಡ ಮುಖ್ಯ ಮಾಹಿತಿ ಆಯುಕ್ತ
ಇವಿಎಂ-ವಿವಿ ಪ್ಯಾಟ್ ಸಂಬಂಧಿತ ಆರ್‌ಟಿಐ ಪ್ರಶ್ನೆಗೆ ಪ್ರತಿಕ್ರಿಯಿಸದೆ ಇರುವುದು ನಿಯಮದ ʻಉಲ್ಲಂಘನೆʼ;
ಹೊಸದಿಲ್ಲಿ, ಏಪ್ರಿಲ್ 12- ಇವಿಎಂಗಳು ಮತ್ತು ವಿವಿಪ್ಯಾಟ್ ಯಂತ್ರಗಳ ವಿಶ್ವಾಸಾರ್ಹತೆ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸದ ಚುನಾವಣೆ ಆಯೋಗವನ್ನು ಕೇಂದ್ರ ಮಾಹಿತಿ ಆಯುಕ್ತರು ತರಾಟೆಗೆ ತೆಗೆದುಕೊಂಡಿದ್ದಾರೆ.
ಆರ್‌ಟಿಐ ಮನವಿಗೆ ಚುನಾವಣಾ ಆಯೋಗ(ಇಸಿ) ಉತ್ತರ ನೀಡದಿರುವ ಬಗ್ಗೆ ಕೇಂದ್ರ ಮಾಹಿತಿ ಆಯೋಗ(ಸಿಐಸಿ) ʻತೀವ್ರ ಅಸಮಾಧಾನʼ ವ್ಯಕ್ತಪಡಿಸಿದೆ.
ವಿದ್ಯುನ್ಮಾನ ಮತಯಂತ್ರ (ಇವಿಎಂ), ಮತದಾರರು ಪರಿಶೀಲಿಸಬಹುದಾದ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಮತ್ತು ಮತ ಎಣಿಕೆ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗೆ ಭಾರತೀಯ ಆಡಳಿತ ಸೇವೆಯ ಮಾಜಿ ಅಧಿಕಾರಿ ಎಂ.ಜಿ.ದೇವಸಹಾಯಂ ಅವರು ಸಹಿ ಹಾಕಿದ್ದರು. ಈ ಸಂಬಂಧ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ವಿವರ ಕೋರಿ, ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿಯನ್ನು ಮೇ 2, 2022 ರಂದು ಚುನಾವಣೆ ಆಯೋಗಕ್ಕೆ ಕಳುಹಿಸಲಾಗಿತ್ತು.
ದೇವಸಹಾಯಂ ನವೆಂಬರ್ 22, 2022 ರಂದು ಸಲ್ಲಿಸಿದ ಆರ್‌ಟಿಐ ಅರ್ಜಿಯಲ್ಲಿ, ಪತ್ರವನ್ನು ಯಾರಿಗೆ ಕಳಿಸಲಾಗಿದೆ ಎಂಬ ಬಗ್ಗೆ, ಅರ್ಜಿ ಕುರಿತು ನಡೆದ ಸಭೆಗಳ ವಿವರ ಮತ್ತು ಸಂಬಂಧಿಸಿದ ಕಡತ, ಟಿಪ್ಪಣಿಗಳನ್ನು ಕೋರಿದ್ದರು. ಆದರೆ, ಇಸಿ 30 ದಿನಗಳೊಳಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ದೇವಸಹಾಯಂ ಅವರ ಮನವಿಯನ್ನೂ ಆಲಿಸಲಿಲ್ಲ. ಚುನಾವಣೆ ಆಯೋಗ ಪ್ರತಿಕ್ರಿಯೆ ನೀಡದಿರುವುದನ್ನು ಉಲ್ಲೇಖಿಸಿ, ಅವರು ಸಿಇಸಿಗೆ ಮೇಲ್ಮನವಿ ಸಲ್ಲಿಸಿದರು.
ಮುಖ್ಯ ಮಾಹಿತಿ ಆಯುಕ್ತ ಹೀರಾಲಾಲ್ ಸಮರಿಯಾ ಅವರ ಪ್ರಶ್ನೆಗೆ ಚುನಾವಣೆ ಆಯೋಗದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ತೃಪ್ತಿಕರ ಉತ್ತರ ನೀಡಲು ವಿಫಲರಾದರು. ʻಆರ್‌ಟಿಐ ಕಾಯ್ದೆಯಡಿ ನಿಗದಿಪಡಿಸಿದ ಕಾಲಮಿತಿಯೊಳಗೆ ಅರ್ಜಿಗೆ ಉತ್ತರ ನೀಡದ ಪಿಐಒ ಅವರ ನಡವಳಿಕೆ ಸಮರ್ಪಕವಾಗಿಲ್ಲ. ಆದ್ದರಿಂದ, ಪಿಐಒ ಲಿಖಿತ ವಿವರಣೆ ನೀಡಬೇಕುʼ ಎಂದು ಸಮರಿಯಾ ಹೇಳಿದರು. ಲೋಪಕ್ಕೆ ಇತರರು ಕೂಡ ಜವಾಬ್ದಾರರಾಗಿದ್ದರೆ, ಸಿಪಿಐಒ ಅವರಿಗೆ ಆದೇಶದ ಪ್ರತಿಯನ್ನು ನೀಡಬೇಕು ಮತ್ತು ಅವರ ಲಿಖಿತ ಹೇಳಿಕೆಗಳನ್ನು ಸಿಐಸಿಗೆ ಕಳುಹಿಸಬೇಕು ಎಂದು ಹೇಳಿದರು.
30 ದಿನಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಸಮರಿಯಾ, ಚುನಾವಣಾ ಆಯೋಗಕ್ಕೆ ಸೂಚಿಸಿದ್ದಾರೆ.
ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ), ಭಾರತೀಯ ನಿರ್ವಹಣಾ ಸಂಸ್ಥೆ(ಐಐಎಂ) ಪ್ರಾಧ್ಯಾಪಕರು ಸೇರಿದಂತೆ ತಾಂತ್ರಿಕ ವೃತ್ತಿಪರರು ಮತ್ತು ಶಿಕ್ಷಣ ತಜ್ಞರು, ನಿವೃತ್ತ ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳನ್ಳುನು ಒಳಗೊಂಡ ಗುಂಪು ಇವಿಎಂಗಳು ಮತ್ತು ವಿವಿಪ್ಯಾಟ್ ಯಂತ್ರಗಳು ವಿಶ್ವಾಸಾರ್ಹ ತೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.