ರಾಮಮಂದಿರ ಶಂಕುಸ್ಥಾಪನೆ ಪ್ರಧಾನ ಅರ್ಚಕ ಲಕ್ಷ್ಮೀಕಾಂತ್ ದೀಕ್ಷಿತ್ ನಿಧನ

ಪ್ರಧಾನ ಅರ್ಚಕರಾಗಿ ರಾಮ ಮಂದಿರದ ಶಂಕುಸ್ಥಾಪನೆ ನೆರವೇರಿಸಿದ್ದರು

Update: 2024-06-22 10:36 GMT

ವಾರಣಾಸಿ (ಯುಪಿ), ಜೂ 22- ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ ನೆರವೇರಿಸಿದ್ದ ಪ್ರಧಾನ ಅರ್ಚಕರಾದ ಆಚಾರ್ಯ ಲಕ್ಷ್ಮೀಕಾಂತ್ ದೀಕ್ಷಿತ್ ಅವರು ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. 

ದೀಕ್ಷಿತ್(86) ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯಪೀಡಿತರಾಗಿದ್ದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಮಣಿಕರ್ಣಿಕಾ ಘಾಟ್‌ನಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ. 

ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಜನವರಿ 22 ರಂದು ಅಯೋಧ್ಯೆ ದೇವಸ್ಥಾನದಲ್ಲಿ ಭಗವಾನ್ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ವಾರಣಾಸಿಯ ಹಿರಿಯ ವಿದ್ವಾಂಸರಲ್ಲಿ ಒಬ್ಬರಾದ ದೀಕ್ಷಿತ್, ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯವರು. ಅವರ ಕುಟುಂಬವು ಹಲವಾರು ತಲೆಮಾರುಗಳಿಂದ ವಾರಣಾಸಿಯಲ್ಲಿ ವಾಸಿಸುತ್ತಿದೆ. 

ದೀಕ್ಷಿತ್ ನಿಧನಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಎಕ್ಸ್‌’ನಲ್ಲಿ ಬರೆದಿರುವ ಪೋಸ್ಟ್‌ನಲ್ಲಿ,ʻಕಾಶಿಯ ಮಹಾನ್ ವಿದ್ವಾಂಸ ಮತ್ತು ಶ್ರೀರಾಮ ಜನ್ಮಭೂಮಿ ಪ್ರಾಣ ಪ್ರತಿಷ್ಠೆಯ ಪ್ರಧಾನ ಅರ್ಚಕರಾದ ಲಕ್ಷ್ಮೀಕಾಂತ್ ದೀಕ್ಷಿತ್ ಅವರ ಅಗಲಿಕೆಯಿಂದ ಅಧ್ಯಾತ್ಮಿಕ ಮತ್ತು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಸಂಸ್ಕೃತ ಭಾಷೆ ಮತ್ತು ಭಾರತೀಯ ಸಂಸ್ಕೃತಿಗೆ ಅವರು ಸಲ್ಲಿಸಿದ ಸೇವೆಗಾಗಿ ಯಾವಾಗಲೂ ಸ್ಮರಣೀಯ ರಾಗಿರುತ್ತಾರೆ,ʼ ಎಂದು ಬರೆದಿದ್ದಾರೆ. 

ʻಅಗಲಿದ ಆತ್ಮಕ್ಕೆ ಸ್ಥಾನ ನೀಡುವಂತೆ ಮತ್ತು ಅವರ ಶಿಷ್ಯರು, ಅನುಯಾಯಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡುವಂತೆ ನಾನು ಭಗವಂತ ಶ್ರೀರಾಮನನ್ನು ಪ್ರಾರ್ಥಿಸುತ್ತೇನೆ,ʼ ಎಂದು ಹೇಳಿದ್ದಾರೆ. 

Tags:    

Similar News