Chennai Train Accident | ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ: ಗೂಡ್ಸ್‌ಗೆ ಬೆಂಕಿ- 19 ಮಂದಿಗೆ ಗಾಯ

ಬಾಗ್ಮತಿ ಎಕ್ಸ್‌ಪ್ರೆಸ್ ರೈಲು ಗೂಡ್ಸ್‌ ರೈಲಿಗೆ ಡಿಕ್ಕಿಯಾಗಿ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಆದರೆ ಯಾವುದೇ ಸಾವು ವರದಿಯಾಗಿಲ್ಲ ಎಂದು ದಕ್ಷಿಣ ರೈಲ್ವೆ ವ್ಯವಸ್ಥಾಪಕ ನಿರ್ದೇಶಕ ಆರ್.ಎನ್.ಸಿಂಗ್ ತಿಳಿಸಿದ್ದಾರೆ.;

Update: 2024-10-12 06:42 GMT
ಚೆನ್ನೈ ರೈಲು ದುರಂತ

ಮೈಸೂರು- ದರ್ಭಾಂಗ್‌ ಬಾಗ್ಮತಿ ಎಕ್ಸ್‌ ಪ್ರೆಸ್ ರೈಲು ಚೆನ್ನೈ ಸಮೀಪದ ಕವರಪೆಟ್ಟೈನಲ್ಲಿ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 19 ಮಂದಿ ಪ್ರಯಾಣಿಕರು ಗಂಭೀರ ಗಾಯಗೊಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಅ. 11 ರಂದು ಮೈಸೂರಿನಿಂದ ಹೊರಟಿದ್ದ ಬಾಗ್ಮತಿ ಎಕ್ಸ್‌ ಪ್ರೆಸ್‌ ರೈಲು ತಿರುವಳ್ಳೂರು ಜಿಲ್ಲೆಯ ಪೊನ್ನೇರಿ ನಿಲ್ದಾಣ ದಾಟಿದ ನಂತರ ರಾತ್ರಿ 8.30 ರ ಸುಮಾರಿಗೆ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದಿದೆ.

ಪ್ರಯಾಣಿಕರ ರೈಲು ಪೊನ್ನೇರಿ ದಾಟಿದ ನಂತರ ಹಳಿ ಬದಲಿಸಲು ಗ್ರೀನ್‌ ಸಿಗ್ನಲ್‌ ನೀಡಲಾಗಿತ್ತು. ಚಾಲಕ ಕೂಡ ಸರಿಯಾದ ಮಾರ್ಗದರ್ಶನದಲ್ಲೇ ಸಾಗುತ್ತಿದ್ದರು. ಆದರೆ, ಬಾಗ್ಮತಿ ಎಕ್ಸ್‌ಪ್ರೆಸ್‌ ರೈಲು, ಮುಖ್ಯಮಾರ್ಗದ ಬದಲು ಲೂಪ್ ಲೈನ್ ಪ್ರವೇಶಿಸಿತು. ಆಗ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದಿದೆ.

ಅಪಘಾತದ ವೇಳೆ ಪ್ರಯಾಣಿಕ ರೈಲು ಗಂಟೆಗೆ 75 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿತ್ತು. ಡಿಕ್ಕಿಯ ರಭಸದಿಂದ ಗೂಡ್ಸ್‌ ರೈಲಿನ ಬೋಗಿಗೆ ಬೆಂಕಿ ಹೊತ್ತಿಕೊಂಡಿದೆ. ಬಾಗ್ಮತಿ ಎಕ್ಸ್‌ ಪ್ರೆಸ್ ರೈಲಿನ 13 ಬೋಗಿಗಳು ಹಳಿ ತಪ್ಪಿವೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಯಾವುದೇ ಸಾವು ವರದಿಯಾಗಿಲ್ಲ ಎಂದು ದಕ್ಷಿಣ ರೈಲ್ವೆ ವ್ಯವಸ್ಥಾಪಕ ನಿರ್ದೇಶಕ ಆರ್.ಎನ್.ಸಿಂಗ್ ತಿಳಿಸಿದ್ದಾರೆ.

ಪ್ರಯಾಣಿಕರಿಗೆ ವಿಶೇಷ ರೈಲು ವ್ಯವಸ್ಥೆ

ಬಾಗ್ಮತಿ ಎಕ್ಸ್‌ಪ್ರೆಸ್ ರೈಲು ಅಪಘಾತಕ್ಕೀಡಾದ ಪರಿಣಾಮ ಅರಕ್ಕೋಣಂ, ರೇಣಿಗುಂಟಾ ಮತ್ತು ಗುಡೂರ್ ಮೂಲಕ ದರ್ಭಾಂಗಕ್ಕೆ ತೆರಳಬೇಕಿದ್ದ ಪ್ರಯಾಣಿಕರನ್ನು ಪೊನ್ನೇರಿ ಹಾಗೂ ಸೆಂಟ್ರಲ್‌ ಚೆನ್ನೈ ನಿಲ್ದಾಣಗಳಿಗೆ ಮೆಮು ರೈಲಿನ ಮೂಲಕ ಕರೆತಂದು ಶನಿವಾರ ಮುಂಜಾನೆ 4.45ಕ್ಕೆ ವಿಶೇಷ ರೈಲಿನ ಮೂಲಕ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಯಿತು.

ಪ್ರಯಾಣಿಕರಿಗೆ ಆಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ. ಈ ಮಧ್ಯೆ, ದಕ್ಷಿಣ ರೈಲ್ವೆ ವಿಭಾಗದ ನಿಲ್ದಾಣಗಳ ಮೂಲಕ ಹಾದುಹೋಗುವ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಕೆಲ ರೈಲುಗಳ ಸಂಚಾರ ರದ್ದುಪಡಿಸಿದರೆ, ಮತ್ತೆ ಕೆಲ ರೈಲುಗಳಿಗೆ ಬದಲಿ ಮಾರ್ಗ ಸೂಚಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ದೇವರ ದಯೆಯಿಂದ ಸಾವಾಗಿಲ್ಲ: ಸಚಿವ ಸೋಮಣ್ಣ

ನವರಾತ್ರಿಯ ಶುಕ್ರವಾರ ತುಂಬ ಒಳ್ಳೆಯ ದಿನವಾಗಿತ್ತು. ಹಾಗಾಗಿ ದೇವರ ದಯೆಯಿಂದ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ. ರೈಲು ಅಪಘಾತದ ಕುರಿತು ತನಿಖೆ ನಡೆಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ತಮಿಳುನಾಡು ಪೊಲೀಸರು, ರೈಲ್ವೆ ಅಧಿಕಾರಿಗಳು ಹಾಗೂ ಎನ್‌ಡಿಆರ್‌ಎಫ್‌ ತಂಡದ ಸಿಬ್ಬಂದಿ ಗಾಯಾಳುಗಳನ್ನು ತ್ವರಿತವಾಗಿ ರಕ್ಷಿಸಿದ್ದಾರೆ. ನಾಪತ್ತೆಯಾದವರ ಕುರಿತು ಶ್ವಾನದಳ ಮೂಲಕ ಪತ್ತೆ ಹಚ್ಚಲಾಗುತ್ತಿದೆ. ರೈಲ್ವೆ ಇಲಾಖೆ ಸಹಾಯವಾಣಿಯನ್ನೂ ಆರಂಭಿಸಿದೆ ಎಂದು ತಿಳಿಸಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಪ್ರಯಾಣಿಕರನ್ನು ಪೊನ್ನೇರಿ ಹಾಗೂ ಸೆಂಟ್ರಲ್‌ ಚೆನ್ನೈ ರೈಲು ನಿಲ್ದಾಣಗಳಿಗೆ ಕರೆತಂದು ಊಟೋಪಚಾರ ಮಾಡಿದ ಬಳಿಕ ಅವರವರ ಸ್ಥಳಗಳಿಗೆ ತೆರಳಲು ಪ್ರತ್ಯೇಕ ರೈಲಿನ ವ್ಯವಸ್ಥೆ ಮಾಡಲಾಯಿತು ಎಂದಿದ್ದಾರೆ.

ರೈಲು ದುರಂತಕ್ಕೆ ವಿಪಕ್ಷ ಕಿಡಿ

ದೇಶದಲ್ಲಿ ಕಳೆದ ಒಂದು ವರ್ಷದಲ್ಲಿ ಪದೇಪದೆ ರೈಲು ಅಪಘಾತಗಳಾಗುತ್ತಿರುವ ಕುರಿತು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸ್ವೀಟ್‌ ಮಾಡಿರುವ ಅವರು, ಮೈಸೂರು-ದರ್ಭಾಂಗ ಎಕ್ಸ್‌ಪ್ರೆಸ್‌ ರೈಲಿನ ಭೀಕರ ಅಪಘಾತವು ಬಾಲಸೋರ್ ಅಪಘಾತವನ್ನು ನೆನಪಿಸುವಂತಿದೆ. ರೈಲು ಅಪಘಾತಗಳಲ್ಲಿ ಸಾಕಷ್ಟು ಮಂದಿ ಜೀವ ಕಳೆದುಕೊಂಡರೂ ಕೇಂದ್ರ ಸರ್ಕಾರ ಪಾಠ ಕಲಿತಿಲ್ಲ. ದುರ್ಘಟನೆ ತಡೆಗೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತಿಲ್ಲ. ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು ಎಂದು ಪ್ರಶ್ನಿಸಿದ್ದಾರೆ.

ಈ ಮಧ್ಯೆ ಘಟನಾ ಸ್ಥಳಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಹಾಗೂ ಉಪ ಮುಖ್ಯಮಂತ್ರಿ ಉದಯಾನಿಧಿ ಸ್ಟಾಲಿನ್‌ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಆಸ್ಪತ್ರೆಗಳಿಗೆ ತೆರಳಿ ಪ್ರಯಾಣಿಕರ ಆರೋಗ್ಯ ವಿಚಾರಿಸಿದರು.

Tags:    

Similar News