ಚೆನ್ನೈ: ಟೆಕ್ಕಿ ಹತ್ಯೆ,ಕೆರೆ ಅಂಗಳದಲ್ಲಿ ಶವ ಪತ್ತೆ

Update: 2024-06-26 07:51 GMT

ಸಾಫ್ಟ್‌ವೇರ್ ಇಂಜಿನಿಯರ್ ನಾಪತ್ತೆಯಾದ ಎರಡು ವಾರಗಳ ನಂತರ ಚೆನ್ನೈನ ಹೊರವಲಯದಲ್ಲಿರುವ ಕೆರೆಯಿಂದ ಪೊಲೀಸರು ದೇಹವನ್ನು ತೆಗೆದಿದ್ದಾರೆ ಎಂದು ಮಂಗಳವಾರ ತಿಳಿದುಬಂದಿದೆ. 

ಚೆನ್ನೈ ಸಮೀಪದ ಮರೈಮಲೈ ನಗರದ ನಿವಾಸಿ ಟಿ. ವಿಘ್ನೇಶ್(27), ಶೋಲಿಂಗನಲ್ಲೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸ್ನೇಹಿತರೊಬ್ಬರೊಂದಿಗೆ ಜಗಳವಾಡಿದ ನಂತರ ಅವರನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 

ಕೊಲೆಗೆ ಸಂಬಂಧಿಸಿದಂತೆ ಬಿಹಾರ ಮೂಲದ ವಿಶ್ವನಾಥನ್ (23), ದಿಲ್ಕುಶ್ ಕುಮಾರ್ (24) ಮತ್ತು ಕಾನೂನಿನಡಿ ಸಂಘರ್ಷದಲ್ಲಿರುವ ಬಾಲಕವನ್ನು ಪೊಲೀಸರು ಬಂಧಿಸಿದ್ದಾರೆ. 

ವಿಘ್ನೇಶ್ ಮಂಗಳವಾರ (ಜೂನ್ 11) ಸ್ನೇಹಿತರನ್ನು ಭೇಟಿಯಾಗಲು ಹೋದವರು ರಾತ್ರಿ ಹಿಂತಿರುಗಲಿಲ್ಲ. ತಂದೆ ಅವನಿಗಾಗಿ ಹುಡುಕಾಟ ನಡೆಸಿ, ಆನಂತರ ಸಾರ್ವಜನಿಕರಿಂದ ಮಾಹಿತಿ ಪಡೆಯಲು ಪ್ರಯತ್ನಿಸಿದರು. ಬಳಿಕ ಪೊಲೀಸರಿಗೆ ದೂರು ನೀಡಿದರು. 

ಕರೆ ದಾಖಲೆಯಿಂದ ಸುಳಿವು: ವಿಘ್ನೇಶ್ ಅವರ ಕರೆ ದಾಖಲೆಗಳನ್ನು ಪರಿಶೀಲಿಸಿದಾಗ, ದರೋಡೆ ಮತ್ತು ಕೊಲೆ ಯತ್ನ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ವಿಶ್ವನಾಥನ್ ಎಂಬುವನಿಂದ ಕರೆ ಬಂದಿರು ವುದು ಕಂಡುಬಂದಿದೆ. ಪೊಲೀಸರು ಆತನನ್ನು ಪ್ರಶ್ನಿಸಿದಾಗ, ವಿಘ್ನೇಶ್ ಅವರನ್ನು ಭೇಟಿಯಾಗುವುದನ್ನು ಮೊದಲು ನಿರಾಕರಿಸಿದ. ಆನಂತರ, ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. 

ತಹಶೀಲ್ದಾರ್ ಸಮ್ಮುಖದಲ್ಲಿ ಮರೈಮಲೈನಗರದ ಕೆರೆಯಿಂದ ಶವ ತೆಗೆದ ಪೊಲೀಸರು, ಮರಣೋತ್ತರ ಪರೀಕ್ಷೆಗೆ ಚೆಂಗಲ್ಪಟ್ಟು ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.

ಜೂನ್ 11 ರಂದು ಮಧ್ಯಾಹ್ನ ವಿಘ್ನೇಶ್ ಅವರು ದಿಲ್ಕುಶ್ ಮತ್ತು ಬಾಲಾಪರಾಧಿಯನ್ನು ಭೇಟಿಯಾಗಿದ್ದರು. ಜಗಳ ನಡೆದಿದ್ದು, ದಿಲ್ಕುಶ್ ಗೆ ವಿಘ್ನೇಶ್‌ ಒದ್ದಿದ್ದರು. ವಿಶ್ವನಾಥನ್ ಅವರನ್ನು ಭೇಟಿಯಾಗಿದ್ದ ದಿಲ್ಕುಶ್‌, ವಿಘ್ನೇಶ್‌ ಗೆ ಪಾಠ ಕಲಿಸುವಂತೆ ಕೇಳಿಕೊಂಡಿದ್ದರು. ನಾಲ್ವರೂ ಅಂದು ಸಂಜೆ ಗೋಕುಲಪುರಂ ಕೆರೆ ಬಳಿ ಪಾರ್ಟಿ ಮಾಡಿದ್ದು, ವಿಘ್ನೇಶ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿ, ಕೆರೆಯಲ್ಲಿ ಹೂಳಲಾಗಿತ್ತು. 

ಮಗನನ್ನು ಹುಡುಕುತ್ತಿದ್ದ ವಿಘ್ನೇಶ್‌ ತಂದೆಗೆ, ಪಾರ್ಟಿ ಮುಗಿಸಿ ಮನೆಗೆ ಹೋದ ಎಂದು ವಿಶ್ವನಾಥನ್‌ ಹೇಳಿದ್ದ ಎಂದು ತಿಳಿದುಬಂದಿದೆ. 

Tags:    

Similar News