ಚಲೋ ದಿಲ್ಲಿ | ಕರ್ನಾಟಕದ ಬೆನ್ನಲ್ಲೇ ಕೇರಳದ ಕಹಳೆ; ಪಿಣರಾಯಿಗೆ ದನಿಗೂಡಿಸಿದ ಡಿಎಂಕೆ, ಎಎಪಿ, ಎನ್ಸಿ, ಸಿಪಿಎಂ
ದಕ್ಷಿಣ ರಾಜ್ಯಗಳಿಗೆ ಹಣ ಹಂಚಿಕೆಯ ವಿಷಯದಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ನಿರ್ಲಕ್ಷ್ಯ ಮತ್ತು ಪಕ್ಷಪಾತ ಧೋರಣೆ ವಿರೋಧಿಸಿ, ಕರ್ನಾಟಕ ಸಿಎಂ ಹೋರಾಟದ ಬೆನ್ನಲ್ಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿರೋಧದ ಕಹಳೆ ಮೊಳಗಿಸಿದರು;
ದಕ್ಷಿಣ ರಾಜ್ಯಗಳಿಗೆ ಹಣಕಾಸು ಹಂಚಿಕೆಯಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿರುವುದನ್ನು ವಿರೋಧಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಕೇರಳದ ಎಡ ರಂಗದ (ಎಲ್ಡಿಎಫ್) ನಾಯಕರು ಮತ್ತು ಶಾಸಕರು ಗುರುವಾರ (ಫೆ. 8) ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದರು.
ಕೇಂದ್ರದ ಮಲತಾಯಿ ಧೋರಣೆಯನ್ನು ವಿರೋಧಿಸಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಂತರ್ ಮಂತರ್ ನಲ್ಲಿ ತಮ್ಮ ಸಚಿವ ಸಹೋದ್ಯೋಗಿಗಳು, ಶಾಸಕರು, ಸಂಸದರೊಂದಿಗೆ ನಡೆಸಿದ ಐತಿಹಾಸಿಕ ಪ್ರತಿಭಟನೆಯ ಮಾರನೇ ದಿನವೇ ದಕ್ಷಿಣದ ಮತ್ತೊಂದು ಪ್ರಮುಖ ರಾಜ್ಯ ಕೇರಳ ಕೂಡ ಮುಖ್ಯಮಂತ್ರಿ ನೇತೃತ್ವದಲ್ಲಿ ಕೇಂದ್ರದ ವಿರುದ್ಧ ಪ್ರತಿರೋಧ ದಾಖಲಿಸಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ಡಿಎಂಕೆ ಮುಖಂಡರಾದ ತಿರುಚಿ ಶಿವ, ಪಳನಿವೇಲ್ ತ್ಯಾಗರಾಜನ್, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಮತ್ತಿತರ ಪ್ರಮುಖ ನಾಯಕರು ಕೂಡ ಪಕ್ಷಬೇಧ ಮರೆತು ದಕ್ಷಿಣದ ರಾಜ್ಯಗಳ ಹಕ್ಕೊತ್ತಾಯದ ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಪಿಣರಾಯಿ ವಿಜಯನ್ ಅವರೊಂದಿಗೆ ದನಿಗೂಡಿಸಿದ್ದು ವಿಶೇಷವಾಗಿತ್ತು.
ಉತ್ತರ-ದಕ್ಷಿಣ ವಿಭಜನೆ ಅಲ್ಲ
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಪಿಣರಾಯಿ ವಿಜಯನ್, ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡಬೇಕಾದ ಜಿಎಸ್ ಟಿ ಪಾಲನ್ನು ನೀಡುತ್ತಿಲ್ಲ ಮತ್ತು ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರನ್ನು ಬಳಸಿಕೊಂಡು ಸರ್ಕಾರದ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತಿದೆ. ಒಟ್ಟಾರೆ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಅಭಿವೃದ್ಧಿಗೆ, ಆಡಳಿತಕ್ಕೆ ಅಡ್ಡಗಾಲು ಹಾಕುವಂತಹ ಕ್ಷುಲ್ಲಕತನ ತೋರುತ್ತಿದೆ ಎಂದು ಆರೋಪಿಸಿದರು.
ದಕ್ಷಿಣ ರಾಜ್ಯಗಳು ತಮ್ಮ ಮೇಲಿನ ಕೇಂದ್ರ ಸರ್ಕಾರದ ದಬ್ಬಾಳಿಕೆ, ತಾರತಮ್ಯವನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಗಳು ದೇಶವನ್ನು ಉತ್ತರ-ದಕ್ಷಿಣ ಎಂಬ ವಿಭಜನೆಗೆ ಕುಮ್ಮಕ್ಕು ನೀಡುತ್ತವೆ ಎಂಬ ಪ್ರಧಾನಿ ಮೋದಿಯವರ ಆರೋಪವನ್ನು ತಳ್ಳಿಹಾಕಿದ, ಪಿಣರಾಯಿ, ರಾಜ್ಯದ ಜನರ ಹಿತಾಸಕ್ತಿಗಳನ್ನು ಅರಿಯುವ ಒಳ್ಳೆತನವನ್ನು ಪ್ರಧಾನಮಂತ್ರಿಗಳು ಹೊಂದಬೇಕು ಎಂದು ಕಿವಿಮಾತು ಹೇಳಿದರು.
“ದಕ್ಷಿಣದ ರಾಜ್ಯಗಳಿಗೆ ತೆರಿಗೆ ಪಾಲು, ಅನುದಾನ ಹಂಚಿಕೆಯ ವಿಷಯದಲ್ಲಿ ಮತ್ತು ಅಲ್ಲಿನ ಆಡಳಿತದಲ್ಲಿ ರಾಜ್ಯಪಾಲರ ಮೂಲಕ ಮೂಗು ತೂರಿಸುವ ಕೇಂದ್ರ ಸರ್ಕಾರದ ಪಿತೂರಿಯ ವಿರುದ್ಧ ನಮ್ಮ ಪ್ರಬಲ ಪ್ರತಿರೋಧವನ್ನು ದಾಖಲಿಸಲು ಮತ್ತು ಭಾರತದ ಫೆಡರಲ್ ರಚನೆಯನ್ನು ಕಾಪಾಡಲು ನಾವೆಲ್ಲರೂ ಒಟ್ಟಾಗಿ ಬಂದಿದ್ದೇವೆ. ಇಂದು ನಾವು ಒಂದು ಐತಿಹಾಸಿಕ ಹೋರಾಟದ ಆರಂಭವನ್ನು ಕಾಣುತ್ತಿದ್ದೇವೆ, ಅದು ರಾಜ್ಯಗಳ ಸಮಾನ ಹಕ್ಕನ್ನು ಖಾತ್ರಿಪಡಿಸುವ ಸೂಚನೆಯನ್ನು ನೀಡುತ್ತಿದೆ" ಎಂದು ಅವರು ಹೇಳಿದರು.
"ಇತ್ತೀಚಿನ ವರ್ಷಗಳಲ್ಲಿ, ಒಕ್ಕೂಟ ಸರ್ಕಾರವು ಹಲವಾರು ಕ್ಷೇತ್ರಗಳಲ್ಲಿ ರಾಜ್ಯಗಳ ಅಧಿಕಾರ ಮತ್ತು ಸ್ವಾಯತ್ತತೆಯನ್ನು ಕಬಳಿಸುವ ಕಾನೂನುಗಳನ್ನು ಮಾಡುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡುವ ದುಃಸ್ಸಾಹಸವನ್ನೂ ಮಾಡುತ್ತಿದೆ," ಎಂದು ಪಿಣರಾಯಿ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.
'ಯೂನಿಯನ್ ಓವರ್ ಸ್ಟೇಟ್ಸ್' ಮನಸ್ಥಿತಿ
ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಕೇಂದ್ರ ಸರ್ಕಾರದ ಆದೇಶದಂತೆ ನಡೆದುಕೊಳ್ಳುತ್ತಿದ್ದಾರೆ ಮತ್ತು ರಾಜ್ಯ ಸರ್ಕಾರದ ಆಡಳಿತಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ವಿಜಯನ್ ಕೇಂದ್ರದ ವಿರುದ್ಧ ಕಿಡಿಕಾರಿದರು.
ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದರಲ್ಲಿ 'ಯುನಿಯನ್ ಓವರ್ ಸ್ಟೇಟ್ಸ್' ಮನಸ್ಥಿತಿ ಕಾಣಿಸುತ್ತಿದೆ. ಸಾಂವಿಧಾನಿಕವಾಗಿ, ರಾಜ್ಯಪಾಲರು ರಾಜ್ಯ ಸಚಿವ ಸಂಪುಟದ ಸಲಹೆಯ ಮೇರೆಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ಆದರೆ, ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರು ತಮ್ಮನ್ನು ನೇಮಿಸಿದ ಮೇಲಿನವರ, ಅಂದರೆ ಕೇಂದ್ರ ಸರ್ಕಾರದ ಇಚ್ಛೆಯಂತೆ ವರ್ತಿಸುತ್ತಿರುವ ವಿದ್ಯಮಾನವನ್ನು ನಾವು ನೋಡುತ್ತಿದ್ದೇವೆ,” ಎಂದು ಅವರು ಹೇಳಿದರು.
“ನಾವು ಪಂಜಾಬ್, ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ, ತಮಿಳುನಾಡು ಇತ್ಯಾದಿಗಳಲ್ಲಿ ರಾಜ್ಯಪಾಲರ ಅತಿರೇಕವನ್ನು ನೋಡಿದ್ದೇವೆ. ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ರಾಜ್ಯಪಾಲರು ಶಾಸಕಾಂಗದ ಸ್ವಾಯತ್ತತೆಯಲ್ಲಿ ಮೂಗುತೂರಿಸಿ ತಮ್ಮ ಸಾಂವಿಧಾನಿಕ ಮಿತಿಯನ್ನು ಮೀರಲು ಪ್ರಯತ್ನಿಸುತ್ತಿರುವುದನ್ನು ನಾವು ನೋಡಿದ್ದೇವೆ" ಎಂದು ಅವರು ಹೇಳಿದರು.
ಫೆಡರಲಿಸಂ ಉಳಿವಿಗಾಗಿ ಹೋರಾಟ
ದೇಶದಲ್ಲಿ ಅಪಾಯದಲ್ಲಿರುವ ಒಕ್ಕೂಟ ವ್ಯವಸ್ಥೆ, ಫೆಡರಲಿಸಂ ಉಳಿಸಲು ತಮ್ಮಈ ಪ್ರತಿಭಟನೆ ಎಂದು ವಿಜಯನ್ ಹೇಳಿದರು.
"ಇದು ರಾಜ್ಯಗಳ ವಿಷಯದಲ್ಲಿ ಕೇಂದ್ರ ಮಾಡುತ್ತಿರುವ ತಾರತಮ್ಯದ ವಿರುದ್ಧ ಪ್ರಜಾಪ್ರಭುತ್ವದ ಪ್ರತಿಭಟನೆಯಾಗಿದೆ. ನಮ್ಮ ಜನರ ಹಿತಾಸಕ್ತಿಯನ್ನು ಬಲಿಕೊಡುವ, ತುಳಿಯುವ ಕೇಂದ್ರದ ಧೋರಣೆಯನ್ನು ನೋಡಿಕೊಂಡು ನಾವು ಸುಮ್ಮನಿರಲು ಸಾಧ್ಯವಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ರಾಜ್ಯಗಳ ಒಕ್ಕೂಟವಾಗಿ ಭಾರತವು ಅಭಿವೃದ್ಧಿ ಹೊಂದುವ ರೀತಿಯಲ್ಲಿ ಪರಿಹರಿಸಬೇಕಾಗಿದೆ. ಆದರೆ ರಾಜ್ಯಗಳ ಮೇಲೆ ಅಧಿಕಾರ ಚಲಾಯಿಸುವ ಯಜಮಾನನಾಗಿ ಒಕ್ಕೂಟ ಇರುವಂತೆ ಮಾಡುವುದಲ್ಲ, ”ಎಂದು ಅವರು ಹೇಳಿದರು.
ರಾಜ್ಯಗಳ ವಿರುದ್ಧ ಕೇಂದ್ರ ಯುದ್ಧ ಸಾರಿದೆ
ಪ್ರತಿಭಟನಾಸಭೆಯಲ್ಲಿ ಮಾತನಾಡಿದ ದೆಹಲಿ ಎಎಪಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದ ವಿರೋಧ ಪಕ್ಷಗಳ ನೇತೃತ್ವದ ವಿವಿಧ ರಾಜ್ಯ ಸರ್ಕಾರಗಳ ವಿರುದ್ಧ ಕೇಂದ್ರ ಸರ್ಕಾರ ಸಮರ ಸಾರಿದೆ ಎಂದು ಆರೋಪಿಸಿದರು.
ವಿರೋಧ ಪಕ್ಷಗಳು ದೇಶದ 70 ಕೋಟಿ ಜನರನ್ನು ಪ್ರತಿನಿಧಿಸುತ್ತವೆ. ಆದರೆ, ಆ ರಾಜ್ಯಗಳಲ್ಲಿ ಪ್ರತಿಪಕ್ಷಗಳ ಆಡಳಿತವಿದೆ ಎಂಬ ಕಾರಣಕ್ಕೆ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ, ರಾಜ್ಯಗಳ ವಿರುದ್ಧವೇ ಸಮರ ಸಾರಿದೆ. ಆಪ್ ಸರ್ಕಾರಗಳಿಗೆ ಕಿರುಕುಳ ನೀಡಲು ಕೇಂದ್ರವು ಎಲ್ಲಾ ತಂತ್ರಗಳನ್ನು ಬಳಸುತ್ತಿದೆ ಎಂದು ಕೇಜ್ರಿವಾಲ್ ಹೇಳಿದರು.
ಪ್ರತಿಭಟನಾಕಾರರು ತಮ್ಮ ಕುಟುಂಬಗಳಿಗಾಗಿ ಏನನ್ನೂ ಬೇಡಿಕೊಳ್ಳಲು ಅಥವಾ ಕೇಳಲು ಇಲ್ಲಿಗೆ ಬಂದಿಲ್ಲ. ನಾನು 2 ಕೋಟಿ ಜನರ ಹಕ್ಕನ್ನು ಕೇಳಲು ಇಲ್ಲಿಗೆ ಬಂದಿದ್ದೇನೆ. ನೀವು ನಮಗೆ ಹಣ ನೀಡದಿದ್ದರೆ, ನಾವು ಹೇಗೆ ರಸ್ತೆ ನಿರ್ಮಿಸುವುದು?, ವಿದ್ಯುತ್ ನೀಡುವುದು? ಮತ್ತು ಅಭಿವೃದ್ಧಿ ಕೆಲಸ ಮಾಡುವುದು? ಎಂದು ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
ತಮಿಳುನಾಡು ನಾಯಕರಿಂದ ಕಪ್ಪು ಅಂಗಿ ಪ್ರದರ್ಶನ
ಸಂಸದ ಮತ್ತು ಪಕ್ಷದ ಹಿರಿಯ ನಾಯಕ ಟಿ.ಆರ್.ಬಾಲು ನೇತೃತ್ವದಲ್ಲಿ ತಮಿಳುನಾಡಿನ ಡಿಎಂಕೆ ಮತ್ತು ಕಾಂಗ್ರೆಸ್ ಸಂಸದರು ಸಂಸತ್ತಿನ ಸಂಕೀರ್ಣದ ಗಾಂಧಿ ಪ್ರತಿಮೆ ಬಳಿ ʼಕಪ್ಪು ಅಂಗಿʼ ಪ್ರದರ್ಶನವನ್ನು ನಡೆಸಿ ಕೇಂದ್ರದ ವಿರುದ್ಧ ಪ್ರತಿಭಟಿಸಿದರು.
ಇತ್ತೀಚಿನ ಚಂಡಮಾರುತ, ಮಳೆ ಮತ್ತು ಪ್ರವಾಹದಿಂದ ಉಂಟಾದ ಹಾನಿಯಿಂದ ಉಂಟಾಗುವ ಪರಿಸ್ಥಿತಿಯನ್ನು ನಿಭಾಯಿಸಲು ತಮಿಳುನಾಡಿಗೆ ಸೂಕ್ತ ಪರಿಹಾರ ನೀಡದ ಕಾರಣ, ಕೇಂದ್ರದಲ್ಲಿ ಕೇಸರಿ ಪಕ್ಷದ ತಾರತಮ್ಯ ನೀತಿಯನ್ನು ಖಂಡಿಸಿ ತಾವು ಕಪ್ಪು ಅಂಗಿ ಪ್ರದರ್ಶನ ನಡೆಸುತ್ತಿರುವುದಾಗಿ ಅವರು ಹೇಳಿದರು.