ನೀತಿ ಆಯೋಗ ಪುನಾರಚನೆ; ಎಚ್‌.ಡಿ. ಕುಮಾರಸ್ವಾಮಿ ವಿಶೇಷ ಆಹ್ವಾನಿತರಾಗಿ ಆಯ್ಕೆ

ಆಯೋಗದಲ್ಲಿ ನಾಲ್ವರು ಪೂರ್ಣಾವಧಿ ಸದಸ್ಯರು ಮತ್ತು ಬಿಜೆಪಿ ಮಿತ್ರಪಕ್ಷಗಳು ಸೇರಿದಂತೆ 15 ಕೇಂದ್ರ ಸಚಿವರು ಸದಸ್ಯರು ಅಥವಾ ವಿಶೇಷ ಆಹ್ವಾನಿತರಾಗಿರುತ್ತಾರೆ. ನೀತಿ ಆಯೋಗದ ಅಧ್ಯಕ್ಷರಾಗಿ ಪ್ರಧಾನಿ ನರೇಂದ್ರ ಮೋದಿ, ಉಪಾಧ್ಯಕ್ಷರಾಗಿ ಅರ್ಥಶಾಸ್ತ್ರಜ್ಞ ಸುಮನ್ ಕೆ. ಬೆರಿ ಮುಂದುವರಿಯಲಿದ್ದಾರೆ.

Update: 2024-07-17 06:26 GMT

ಕೇಂದ್ರ ಸರ್ಕಾರವು ನೀತಿ(ನ್ಯಾಶನಲ್ ಇನ್‌ಸ್ಟಿಟ್ಯೂಷನ್ ಫಾರ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ) ಆಯೋಗವನ್ನು ಪುನಾರಚಿಸಿದೆ. ಆಯೋಗದಲ್ಲಿ ಎನ್‌ಡಿಎ ಪಾಲುದಾರ ಪಕ್ಷ ಜೆಡಿಎಸ್‌ನ ನಾಯಕ ಹಾಗೂ (ಭಾರಿ ಕೈಗಾರಿಕೆಗಳು ಮತ್ತು ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಆಯೋಗದ ವಿಶೇಷ ಆಹ್ವಾನಿತರಾಗಿ ಆಯ್ಕೆಯಾಗಿದ್ದಾರೆ.

ಆಯೋಗದಲ್ಲಿ ನಾಲ್ವರು ಪೂರ್ಣಾವಧಿ ಸದಸ್ಯರು ಮತ್ತು ಬಿಜೆಪಿ ಮಿತ್ರಪಕ್ಷಗಳು ಸೇರಿದಂತೆ 15 ಕೇಂದ್ರ ಸಚಿವರು ಸದಸ್ಯರು ಅಥವಾ ವಿಶೇಷ ಆಹ್ವಾನಿತರಾಗಿರುತ್ತಾರೆ.  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಧ್ಯಕ್ಷ ಮತ್ತು ಅರ್ಥಶಾಸ್ತ್ರಜ್ಞ ಸುಮನ್ ಕೆ. ಬೆರಿ ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದೇ ರೀತಿ, ವಿಜ್ಞಾನಿ ವಿ.ಕೆ. ಸಾರಸ್ವತ್, ಕೃಷಿ ಅರ್ಥಶಾಸ್ತ್ರಜ್ಞ ರಮೇಶ್ ಚಂದ್, ಮಕ್ಕಳ ತಜ್ಞ ವಿ.ಕೆ. ಪಾಲ್ ಮತ್ತು ಅರ್ಥಶಾಸ್ತ್ರಜ್ಞ ಅರವಿಂದ್ ವೀರಮಾನಿ ಕೂಡ ಪೂರ್ಣಾವಧಿ ಸದಸ್ಯರಾಗಿ ಮುಂದುವರಿಯಲಿದ್ದಾರೆ. ನೀತಿ ಆಯೋಗದ ಪರಿಷ್ಕೃತ ಸಂಯೋಜನೆಯನ್ನು ಪ್ರಧಾನಿ ಅನುಮೋದಿಸಿದ್ದಾರೆ. 

ಸದಸ್ಯರು, ಆಹ್ವಾನಿತರು:

ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ (ರಕ್ಷಣೆ), ಅಮಿತ್ ಶಾ (ಗೃಹ), ಶಿವರಾಜ್ ಸಿಂಗ್ ಚೌಹಾಣ್ (ಕೃಷಿ) ಮತ್ತು ನಿರ್ಮಲಾ ಸೀತಾರಾಮನ್ (ಹಣಕಾಸು) ನಾಲ್ವರು ಪದನಿಮಿತ್ತ ಸದಸ್ಯರು. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ (ರಸ್ತೆ ಸಾರಿಗೆ ಮತ್ತು ಹೆದ್ದಾರಿ), ಜಗತ್ ಪ್ರಕಾಶ್ ನಡ್ಡಾ (ಆರೋಗ್ಯ), ಎಚ್‌.ಡಿ. ಕುಮಾರಸ್ವಾಮಿ (ಭಾರಿ ಕೈಗಾರಿಕೆಗಳು ಮತ್ತು ಉಕ್ಕು), ಜಿತನ್ ರಾಮ್ ಮಾಂಜಿ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು), ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್ (ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ) ವಿಶೇಷ ಆಹ್ವಾನಿತರು.

ಇನ್ನಿತರ ವಿಶೇಷ ಆಹ್ವಾನಿತರೆಂದರೆ, ಕೇಂದ್ರ ಸಚಿವರಾದ ವೀರೇಂದ್ರ ಕುಮಾರ್ (ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ), ಕಿಂಜರಾಪು ರಾಮಮೋಹನ್ ನಾಯ್ಡು (ನಾಗರಿಕ ವಿಮಾನಯಾನ), ಜುಯಲ್ ಓರಮ್ (ಬುಡಕಟ್ಟು ವ್ಯವಹಾರಗಳು), ಅನ್ನಪೂರ್ಣ ದೇವಿ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ), ಚಿರಾಗ್ ಪಾಸ್ವಾನ್ (ಆಹಾರ ಸಂಸ್ಕರಣಾ ಉದ್ಯಮಗಳು) ಮತ್ತು ರಾವ್ ಇಂದ್ರಜಿತ್ ಸಿಂಗ್ (ಅಂಕಿಅಂಶ ಮತ್ತು ಕಾರ್ಯಕ್ರಮದ ಅನುಷ್ಠಾನ).

ಆ ಮೂಲಕ ಎನ್‌ಡಿಗೆ ಪಾಲುದಾರ ಪಕ್ಷಗಳ ನಾಯಕರಾದ ಎಚ್‌.ಡಿ. ಕುಮಾರಸ್ವಾಮಿ ( ಜೆಡಿಎಸ್‌), ಮಾಂಝಿ (ಹಿಂದೂಸ್ತಾನಿ ಅವಾಮ್ ಮೋರ್ಚಾ), ರಾಜೀವ್ ರಂಜನ್ ಸಿಂಗ್ (ಜೆಡಿಯು), ನಾಯ್ಡು (ಟಿಡಿಪಿ) ಮತ್ತು ಚಿರಾಗ್ ಪಾಸ್ವಾನ್ (ಲೋಕ ಜನಶಕ್ತಿ ಪಕ್ಷ)ಕ್ಕೆ  ಸೇರಿದವರು.

ನೀತಿ ಆಯೋಗದ ಉದ್ದೇಶ: 2015 ರಲ್ಲಿ ಮೋದಿ ಸರ್ಕಾರವು 65 ವರ್ಷ ಹಳೆಯದಾದ ಯೋಜನಾ ಆಯೋಗವನ್ನು ರದ್ದುಗೊಳಿಸಿ, ನೀತಿ ಆಯೋಗವನ್ನು ಸ್ಥಾಪಿಸಿತು. ಸಚಿವ ಸಂಪುಟದ ರಚನೆ ನಂತರ ಸರ್ಕಾರ, ನೀತಿ ಆಯೋಗವನ್ನು ಪುನಾರಚಿಸಿದೆ.

Tags:    

Similar News