ಏರ್ ಇಂಡಿಯಾ ವಿಮಾನ ಪತನ: 5 ಸುರಕ್ಷತಾ ಲೋಪ, 9 ಶೋಕಾಸ್ ನೋಟಿಸ್ ಜಾರಿ
ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೊಲ್ ಅವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮಾಹಿತಿ ನೀಡಿದ್ದಾರೆ.;
ಅಪಘಾತಕ್ಕೀಡಾಗ ಏರ್ ಇಂಡಿಯಾ ವಿಮಾನ
ಜುಲೈ 12, 2025 ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಪತನಕ್ಕೆ ಸಂಬಂಧಿಸಿದಂತೆ, ಇಲ್ಲಿಯವರೆಗೆ ಐದು ಪ್ರಮುಖ ಸುರಕ್ಷತಾ ಉಲ್ಲಂಘನೆಗಳು ಪತ್ತೆಯಾಗಿವೆ. ಈ ಸಂಬಂಧ ಏರ್ ಇಂಡಿಯಾ ಸಂಸ್ಥೆಗೆ ಒಂಬತ್ತು ಶೋಕಾಸ್ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೊಲ್ ಅವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ಸೋಮವಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ ಅವರು, ಕಳೆದ ಆರು ತಿಂಗಳಲ್ಲಿ ಈ ಐದು ಸುರಕ್ಷತಾ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಒಟ್ಟು ಒಂಬತ್ತು ಶೋಕಾಸ್ ನೋಟಿಸ್‌ಗಳನ್ನು ನೀಡಲಾಗಿದ್ದು, ಅವುಗಳಲ್ಲಿ ಒಂದು ಉಲ್ಲಂಘನೆಗೆ ಸಂಬಂಧಿಸಿದಂತೆ ಜಾರಿ ಕ್ರಮವನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಪಘಾತಕ್ಕೀಡಾದ ವಿಮಾನದ ವಿಶ್ವಾಸಾರ್ಹತೆಯ ವರದಿಯಲ್ಲಿ ಕಳೆದ ಆರು ತಿಂಗಳಲ್ಲಿ ಯಾವುದೇ ಪ್ರತಿಕೂಲ ಅಂಶಗಳು ವರದಿಯಾಗಿಲ್ಲ ಎಂದು ತಿಳಿಸಿದರು.
ಅಪಘಾತಕ್ಕೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ವಿಮಾನ ಅಪಘಾತ ತನಿಖಾ ದಳವು (AAIB) ತನಿಖೆ ನಡೆಸುತ್ತಿದೆ. ತನಿಖೆಯ ಪ್ರಾಥಮಿಕ ವರದಿಯನ್ನು ಜುಲೈ 12 ರಂದು ಪ್ರಕಟಿಸಲಾಗಿದ್ದು, ಅದು ಎಎಐಬಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
ಇದೇ ವೇಳೆ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ಮೇಲ್ಮನೆಯಲ್ಲಿ ಮಾತನಾಡಿ, ಎಎಐಬಿ ಸಂಸ್ಥೆಯು ಅಂತರರಾಷ್ಟ್ರೀಯ ನಿಯಮಗಳ ಪ್ರಕಾರ ಪಕ್ಷಪಾತ ರಹಿತ ತನಿಖೆ ನಡೆಸುತ್ತಿದೆ ಎಂದು ಭರವಸೆ ನೀಡಿದರು. ಅಪಘಾತಕ್ಕೀಡಾದ ವಿಮಾನದ ಬ್ಲ್ಯಾಕ್ ಬಾಕ್ಸ್‌ಗಳಿಂದ ಡೇಟಾವನ್ನು ಯಶಸ್ವಿಯಾಗಿ ಡಿಕೋಡ್ ಮಾಡಲಾಗಿದ್ದು, ತನಿಖೆಯ ಮೊದಲ ಹಂತ ಪೂರ್ಣಗೊಂಡಿದೆ ಎಂದು ಅವರು ಖಚಿತಪಡಿಸಿದರು. ಮಾಧ್ಯಮಗಳ ವರದಿಗಳನ್ನು ಉಲ್ಲೇಖಿಸಿದ ಅವರು, "ನಾವು ತನಿಖೆಯನ್ನು ಸತ್ಯಾಂಶಗಳ ಆಧಾರದ ಮೇಲೆ ಮಾತ್ರ ನೋಡಬೇಕು," ಎಂದು ಒತ್ತಿ ಹೇಳಿದರು.