Priyanka in Wayanad| ಮೊದಲ ಬಾರಿ ನನಗಾಗಿ ಮತ ಕೇಳುತ್ತಿದ್ದೇನೆ ಎಂದ ಪ್ರಿಯಾಂಕಾ ಗಾಂಧಿ

ರೋಡ್ ಶೋ ಬಳಿಕ ವಯನಾಡ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸಹೋದರ ರಾಹುಲ್ ಗಾಂಧಿ, ತಾಯಿ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಇದ್ದರು.;

Update: 2024-10-23 11:53 GMT
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡಿನಲ್ಲಿ ಮುಂಬರುವ ವಯನಾಡ್ ಲೋಕಸಭಾ ಉಪಚುನಾವಣೆಯ ನಾಮನಿರ್ದೇಶನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
Click the Play button to listen to article

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬುಧವಾರ (ಅಕ್ಟೋಬರ್ 23) ನಾಮಪತ್ರ ಸಲ್ಲಿಸಿದ್ದಾರೆ. ರೋಡ್ ಶೋ ಬಳಿಕ ವಯನಾಡ್ ಲೋಕಸಭಾ ಕ್ಷೇತ್ರದಿಂದ  ಪ್ರಿಯಾಂಕಾ ಗಾಂಧಿ ವಾದ್ರಾ ನಾಮಪತ್ರ ಸಲ್ಲಿಸುವ ವೇಳೆ ಸಹೋದರ ರಾಹುಲ್ ಗಾಂಧಿ, ತಾಯಿ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಇದ್ದರು.

ಇದಕ್ಕೂ ಮುನ್ನ ಕಲ್ಪೆಟ್ಟದಲ್ಲಿ ನಡೆದ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ರಾಜಕೀಯ ಪ್ರಚಾರದಲ್ಲಿ 35 ವರ್ಷಗಳ ಅನುಭವವಿದೆ. ತನ್ನ ತಂದೆ ರಾಜೀವ್ ಗಾಂಧಿ, ತಾಯಿ ಸೋನಿಯಾ ಗಾಂಧಿ, ಸಹೋದರ ರಾಹುಲ್ ಗಾಂಧಿ ಮತ್ತು ಪಕ್ಷದ ಇತರ ಸಹೋದ್ಯೋಗಿಗಳ ಪರ ಪ್ರಚಾರ ಮಾಡಿದ್ದೇನೆ. 1989 ರಲ್ಲಿ 17 ವರ್ಷ ವಯಸ್ಸಿನಲ್ಲಿ ನನ್ನ ತಂದೆ ಮತ್ತು ಆಗಿನ ಪ್ರಧಾನಿ ರಾಜೀವ್‌ ಗಾಂಧಿ ಅವರ ಪರ ಮೊದಲ ಬಾರಿ ಪ್ರಚಾರ ಮಾಡಿದ್ದೇನೆ. ಇದೀಗ ಮೊದಲ ಬಾರಿಗೆ ನನಗೆ ಬೆಂಬಲವನ್ನು ಕೇಳುತ್ತಿದ್ದೇನೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ತನಗೆ ಈ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ನೀಡಿದ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೃತಜ್ಞತೆ ಸಲ್ಲಿಸಿದರು.


ಕುಟುಂಬದೊಂದಿಗೆ ರೋಡ್‌ ಶೋ ನಡೆಸಿದ ಪ್ರಿಯಾಂಕ ಗಾಂಧಿ

ಮಂಗಳವಾರ ರಾತ್ರಿ ತನ್ನ ತಾಯಿ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ವಯನಾಡ್‌ಗೆ ಆಗಮಿಸಿದ ಪ್ರಿಯಾಂಕ ಗಾಂಧಿ  ಕಲ್ಪೆಟ್ಟಾ ಹೊಸ ಬಸ್ ನಿಲ್ದಾಣದಿಂದ ತನ್ನ ಸಹೋದರ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ರೋಡ್ ಶೋ ನಡೆಸಿದರು. ರೋಡ್‌ಶೋ ಸಮಯದಲ್ಲಿ ಪ್ರಿಯಾಂಕಾ ಅವರ ಪತಿ ರಾಬರ್ಟ್ ವಾದ್ರಾ ಮತ್ತು ಅವರ ಮಕ್ಕಳ ಪೈಕಿ ಒಬ್ಬರು ತೆರೆದ  ವಾಹನದಲ್ಲಿ ಇತರ ಹಿರಿಯ ಪಕ್ಷ ಮತ್ತು ಐಯುಎಂಎಲ್ ನಾಯಕರೊಂದಿಗೆ ಕಾಣಿಸಿಕೊಂಡರು. ವಾಹನದಲ್ಲಿ ಅವರೊಂದಿಗೆ ಅಮೇಥಿ ಸಂಸದ ಕಿಶೋರಿ ಲಾಲ್ ಶರ್ಮಾ ಕೂಡ ಇದ್ದರು.


 ದೊಡ್ಡ ಗೌರವ ಮತ್ತು ಸವಲತ್ತು: ಪ್ರಿಯಾಂಕಾ

"ಕೆಲವು ತಿಂಗಳ ಹಿಂದೆ ನಾನು ನನ್ನ ಸಹೋದರನ (ರಾಹುಲ್) ಜೊತೆ ಚೂರಲ್ಮಲಾ ಮತ್ತು ಮುಂಡಕ್ಕೈಗೆ ಭೇಟಿ ನೀಡಿದ್ದೆ. ನಾನು ನನ್ನ ಸ್ವಂತ ಕಣ್ಣುಗಳಿಂದ ವಿನಾಶವನ್ನು ನೋಡಿದೆ. ಇಡೀ ಕುಟುಂಬವನ್ನು ಕಳೆದುಕೊಂಡ ಮಕ್ಕಳನ್ನು, ಮಕ್ಕಳನ್ನು ಕಳೆದುಕೊಂಡ ತಾಯಂದಿರನ್ನು ಭೇಟಿಯಾದೆ. ಭೂಕುಸಿತದಿಂದ ಇಡೀ ಜೀವನ ಕೊಚ್ಚಿಹೋದ ಜನರನ್ನು ನಾನು ಭೇಟಿ ಮಾಡಿದ್ದೇನೆ. ನಾನು ಗಮನಿಸಿದ ಒಂದು ವಿಷಯವೆಂದರೆ,ನಾನು ಭೇಟಿಯಾದ ಪ್ರತಿಯೊಬ್ಬ ವ್ಯಕ್ತಿ, ಅದು ವೈದ್ಯರಾಗಿರಲಿ, ಶಿಕ್ಷಕರಾಗಿರಲಿ, ಗೃಹಿಣಿಯಾಗಿರಲಿ ಅಥವಾ ಬೇರೆ ಯಾರಾದರೂ ಒಬ್ಬರಿಗೊಬ್ಬರು ಸಹಾಯ ಮಾಡುವುದರಲ್ಲಿ ತೊಡಗಿದ್ದರು. ಅವರು ಯಾವುದೇ ದುರಾಸೆಯಿಲ್ಲದೆ ಧೈರ್ಯದಿಂದ, ಪ್ರೀತಿ ಮತ್ತು ವಾತ್ಸಲ್ಯದಿಂದ ಸಂಪೂರ್ಣವಾಗಿ ಸಹಾನುಭೂತಿಯಿಂದ ಪರಸ್ಪರ ಬೆಂಬಲಿಸುತ್ತಿದ್ದರು. ನಿಮ್ಮ ಸಮುದಾಯದ ಭಾಗವಾಗುವುದು ಮತ್ತು ನಿಮ್ಮ ಕುಟುಂಬದ ಭಾಗವಾಗುವುದು ನನಗೆ ದೊಡ್ಡ ಗೌರವ ಮತ್ತು ಸವಲತ್ತು ಎಂದು ಪ್ರಿಯಾಂಕ ಗಾಂಧಿ ಈ ವೇಳೆ ಹೇಳಿದರು. 

 ವಯನಾಡ್‌ಗೆ ಇಬ್ಬರು ಸಂಸದರು: ರಾಹುಲ್ ಗಾಂಧಿ

ಈ ವೇಳೆ ಮಾತನಾಡಿದ ರಾಹುಲ್‌ ಗಾಂಧಿ, ವಯನಾಡ್‌ನಲ್ಲಿ ಇಬ್ಬರು ಸಂಸದರು ಇರುತ್ತಾರೆ. ವಯನಾಡ್ ನನಗಾಗಿ ಮಾಡಿದ್ದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ.  ಅದನ್ನು ವ್ಯಕ್ತಪಡಿಸುವ ಏಕೈಕ ಮಾರ್ಗವೆಂದರೆ ಕೆಲಸಗಳ ಮೂಲಕ. ನಮ್ಮ ದೇಶದಲ್ಲಿ ಇಬ್ಬರು ಸಂಸದರನ್ನು ಹೊಂದಿರುವ ಏಕೈಕ ಕ್ಷೇತ್ರ ವಯನಾಡು. ಒಂದು ಅಧಿಕೃತ ಮತ್ತು ಇನ್ನೊಂದು ಅನಧಿಕೃತ ಅವರು ವಯನಾಡಿನ ಹಿತದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡುತ್ತಾರೆ  ಎಂದು ಅವರು ಹೇಳಿದರು. ವಯನಾಡ್ ಲೋಕಸಭಾ ಕ್ಷೇತ್ರ ಮತ್ತು ರಾಯ್ ಬರೇಲಿ ಕ್ಷೇತ್ರದಿಂದ ಗೆಲುವು ಸಾಧಿಸಿದ ರಾಹುಲ್ ಗಾಂಧಿ ಅವರು ವಯನಾಡ್ ತೆರವು ಮಾಡಲು ನಿರ್ಧರಿಸಿದ್ದರಿಂದ ಈ ಕ್ಷೇತ್ರಕ್ಕೆ ಉಪಚುನಾವಣೆ ಅನಿವಾರ್ಯವಾಗಿದೆ. 


ಪ್ರಿಯಾಂಕ ಗಾಂಧಿ ಪ್ರತಿಸ್ಪರ್ಧಿ ಯಾರು? 

ಪ್ರಿಯಾಂಕ ಗಾಂಧಿ ಎಲ್‌ಡಿಎಫ್‌ನ ಸತ್ಯನ್ ಮೊಕೇರಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನವ್ಯಾ ಹರಿದಾಸ್ ವಿರುದ್ಧ ಸ್ಪರ್ಧಿಸಲಿದ್ದಾರೆ. ಕೋಝಿಕ್ಕೋಡ್ ಜಿಲ್ಲೆಯ ನಾದಪುರಂ ಕ್ಷೇತ್ರದ ಮಾಜಿ ಶಾಸಕ ಸತ್ಯನ್ ಮೊಕೇರಿ ಅವರು ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವ ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ನವ್ಯಾ ಹರಿದಾಸ್ ಅವರು ತಮ್ಮ ರಾಜಕೀಯ ಅನುಭವದ ಆಧಾರದ ಮೇಲೆ ಪ್ರಿಯಾಂಕಾ ಗಾಂಧಿಗೆ ಸವಾಲು ಹಾಕಲಿದ್ದಾರೆ. ಸಿಂಗಾಪುರ ಮತ್ತು ನೆದರ್‌ಲ್ಯಾಂಡ್‌ನಲ್ಲಿ ಕೆಲಸ ಮಾಡಿ ಅಂತರಾಷ್ಟ್ರೀಯ ಅನುಭವ ಪಡೆದಿರುವ ಹರಿದಾಸ್, ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಕೋಝಿಕ್ಕೋಡ್‌ನಲ್ಲಿ ದಶಕದ ಕಾಲ ಕೌನ್ಸಿಲರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಮಹಿಳಾ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.

ಮೊದಲ ಬಾರಿಗೆ ಸಂಸದೆಯಾಗಲಿದ್ದಾರೆಯೇ ಪ್ರಿಯಾಂಕಾ!

ಪ್ರಿಯಾಂಕ ಗಾಂಧಿ 2019ರ ಲೋಕಸಭೆ ಚುನಾವಣೆಗೂ ಮುನ್ನ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ್ದರು. ಅಂದಿನಿಂದ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ವಯನಾಡ್ ಮತ್ತು ರಾಯ್ ಬರೇಲಿ ಕ್ಷೇತ್ರಗಳಿಂದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಬಳಿಕ ಅವರು ವಯನಾಡ್ ಕ್ಷೇತ್ರವನ್ನು ತೆರವುಗೊಳಿಸಿದ್ದರು. ಇದೀಗ ಈ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿದ್ದು, ರಾಹುಲ್‌ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ ಅವರು ಚುನಾವಣಾ ಪಾದಾರ್ಪಣೆ ಮಾಡುತ್ತಾರೆ. ಪ್ರಿಯಾಂಕಾ ಗಾಂಧಿ ಆಯ್ಕೆಯಾದರೆ ಮೊದಲ ಬಾರಿಗೆ ಸಂಸದೆಯಾಗುತ್ತಾರೆ ಮತ್ತು ಗಾಂಧಿ ಕುಟುಂಬದ ಮೂವರು ಸದಸ್ಯರು - ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಒಟ್ಟಿಗೆ ಸಂಸತ್ತಿನಲ್ಲಿ ಇರುವುದು ಇದೇ ಮೊದಲ ಬಾರಿಗೆ. ಜಾರ್ಖಂಡ್ ವಿಧಾನಸಭೆಗೆ ಮೊದಲ ಹಂತದ ಮತದಾನದ ಜೊತೆಗೆ ವಯನಾಡ್ ಸಂಸದೀಯ ಸ್ಥಾನ ಮತ್ತು 47 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 13 ರಂದು ಉಪಚುನಾವಣೆ ನಡೆಯಲಿದೆ. ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ. 

Tags:    

Similar News