ಸಂಘಟಿತ ಬಿಜೆಪಿಗೆ ಸಂಕಥನರಹಿತ ಇಂಡಿಯ ಒಕ್ಕೂಟದ ಸವಾಲು

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ-ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಈ ಚುನಾವಣೆ ಪ್ರತಿಷ್ಟೆಯಾಗಿ ಪರಿಣಮಿಸಿದೆ.;

Update: 2024-04-05 09:27 GMT

ಲೋಕಸಭೆಗೆ ಮೊದಲ ಹಂತದ ಚುನಾವಣೆ 26ಕ್ಕೆ ನಡೆಯಲಿದೆ. ಕರ್ನಾಟಕದಲ್ಲಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, 358 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇವರಲ್ಲಿ 25 ಮಹಿಳೆಯರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ-ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಈ ಚುನಾವಣೆ ಪ್ರತಿಷ್ಟೆಯಾಗಿ ಪರಿಣಮಿಸಿದೆ.

ಎಚ್.ಡಿ.ದೇವೇಗೌಡರಿಗೆ ಮಗ ಕುಮಾರಸ್ವಾಮಿ(ಮಂಡ್ಯ), ಮೊಮ್ಮಗ ಪ್ರಜ್ವಲ್‌ ರೇವಣ್ಣ(ಹಾಸನ) ಹಾಗೂ ಅಳಿಯ ಡಾ.ಸಿ.ಎನ್.‌ ಮಂಜುನಾಥ್(ಬೆಂಗಳೂರು ಗ್ರಾಮಾಂತರ) ಅವರನ್ನು ಗೆಲ್ಲಿಸಿಕೊಳ್ಳಲೇಬೇಕಾದ ಅನಿವಾರ್ಯವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಸೂರು ಮತ್ತು ಚಾಮರಾಜನಗರದಲ್ಲಿ ಗೆಲುವು ಅನಿವಾರ್ಯ ಆಗಿದ್ದರೆ, ಡಿ.ಕೆ.ಶಿವಕುಮಾರ್‌ ಅವರಿಗೆ ಸೋದರ ಡಿ.ಕೆ.ಸುರೇಶ್‌ ಹಾಗೂ ಒಕ್ಕಲಿಗ ಸಮುದಾಯದದ ಬಾಹುಳ್ಯವಿರುವ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯ ತೋರಿಸಬೇಕಿದೆ. ರಾಜ್ಯದಲ್ಲಿ ಬಿಜೆಪಿ ಚುಕ್ಕಾಣಿಯನ್ನು ಮತ್ತೆ ಕೈಗೆ ತೆಗೆದುಕೊಂಡಿರುವ ಯಡಿಯೂರಪ್ಪ ಅವರಿಗೆ ಮಗ ಬಿ.ವೈ. ರಾಘವೇಂದ್ರ ಸೇರಿದಂತೆ ತಮ್ಮ ಆಯ್ಕೆಯ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು, ಹೈಕಮಾಂಡಿಗೆ ತಮ್ಮ ಬಲವನ್ನು ತೋರಿಸಲೇಬೇಕಾದ ಸವಾಲು ಎದುರಾಗಿದೆ. ಕರ್ನಾಟಕದಲ್ಲಿ ಎರಡನೇ ಹಂತದ ಚುನಾವಣೆ ಮೇ 7ರಂದು ‌14 ಕ್ಷೇತ್ರಗಳಿಗೆ ನಡೆಯಲಿದೆ. 

ಬಿಜೆಪಿ ತನ್ನ ಕಾರ್ಯಸೂಚಿಯಾದ ʻಹಿಂದು, ಹಿಂದಿ, ಹಿಂದುಸ್ಥಾನʼ ವೆಂಬ ಸಂಕಥನದ ಭಾಗವಾಗಿ ಬಾಲರಾಮನ ಪ್ರತಿಷ್ಠಾಪನೆ, ವಿಧಿ 370 ವಜಾಗೊಳಿಸಿರುವುದಲ್ಲದೆ, ಸಿಎಎಗೆ ಸಿದ್ಧತೆ ನಡೆಸಿದೆ. 2047ರೊಳಗೆ 5 ಟ್ರಿಲಿಯನ್‌ ದೇಶವನ್ನಾಗಿ ಮಾಡುವುದಾಗಿ ಹೇಳಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಇಂಡಿಯ ಒಕ್ಕೂಟ, ಹಲವು ರಾಜ್ಯಗಳಲ್ಲಿ ಮಿತ್ರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ತಿಣುಕುತ್ತಿದೆ. ಪ್ರಾದೇಶಿಕ ಆದ್ಯತೆಗಳು, ಜಾತಿ-ಕೋಮು ಲೆಕ್ಕಾಚಾರವಲ್ಲದೆ ಕೆಲವು ರಾಜ್ಯಗಳಲ್ಲಿ ಮಿತ್ರ ಪಕ್ಷಗಳು ಪರಸ್ಪರ ಸೆಣೆಸಬೇಕಾದ ಪರಿಸ್ಥಿತಿಯಿದೆ. ಯುವಜನರಲ್ಲಿ ನಿರುದ್ಯೋಗ ಪ್ರಮಾಣ ಗಗನ ಮುಟ್ಟಿದೆ ಎಂಬ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ವರದಿ, ರೈತರ ಆತ್ಮಹತ್ಯೆ ಮತ್ತು ಕನಿಷ್ಠ ಬೆಂಬಲ ಬೆಲೆಗಾಗಿ ರೈತರು ನಡೆಸುತ್ತಿರುವ 2 ನೇ ಹಂತದ ಚಳವಳಿ, ಬೆಲೆ ಏರಿಕೆಯಂಥ ಗಂಭೀರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ಪ್ರಸ್ತುತಪಡಿಸುವಲ್ಲಿ ಪ್ರತಿಪಕ್ಷಗಳು ವಿಫಲವಾಗಿವೆ.

2024ರ ಚುನಾವಣೆಯ ಸ್ಥೂಲ ಚಿತ್ರ ಕೆಳಕಂಡಂತಿದೆ

ಹದಿನೆಂಟನೇ ಲೋಕಸಭೆಗೆ 28 ರಾಜ್ಯ ಮತ್ತು 8 ಕೇಂದ್ರಾಡಳಿತ ಪ್ರದೇಶಗಳ 543 ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ; ಏಪ್ರಿಲ್‌ 19, 26, ಮೇ 7, 13, 20, 25 ಮತ್ತು ಜೂನ್‌ 1.

ಒಂದೇ ದಿನ ಚುನಾವಣೆ: 22 ರಾಜ್ಯಗಳು(ಅರುಣಾಚಲ ಪ್ರದೇಶ, ಅಂಡಮಾನ್-ನಿಕೋಬಾರ್‌, ಆಂಧ್ರಪ್ರದೇಶ, ಚಂಡೀಗಡ, ದಾದ್ರಾ ನಗರಹವೇಲಿ, ದಿಲ್ಲಿ, ಗೋವಾ, ಗುಜರಾತ್‌, ಹಿಮಾಚಲ ಪ್ರದೇಶ, ಹರ್ಯಾಣ, ಕೇರಳ, ಲಕ್ಷದ್ವೀಪ, ಲಡಾಖ್‌, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್‌, ಪುದುಚೇರಿ, ಪಂಜಾಬ್‌, ತಮಿಳುನಾಡು, ತೆಲಂಗಾಣ, ಸಿಕ್ಕಿಂ, ಉತ್ತರಾಖಂಡ.

2 ದಿನ: 4 ರಾಜ್ಯಗಳು(ಕರ್ನಾಟಕ, ರಾಜಸ್ಥಾನ, ತ್ರಿಪುರ, ಮಣಿಪುರ).

3 ದಿನ: 2(ಚತ್ತೀಸ್‌ಗಢ, ಅಸ್ಸಾಂ).

4 ದಿನ: 3(ಒಡಿಷಾ, ಮಧ್ಯಪ್ರದೇಶ, ಜಾರ್ಖಂಡ).

5 ದಿನ: 2(ಮಹಾರಾಷ್ಟ್ರ, ಜಮ್ಮು-ಕಾಶ್ಮೀರ)

7 ದಿನ: 3(ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ)

ಮೊದಲ ಹಂತದಲ್ಲಿ 102, 2ನೇ ಹಂತದಲ್ಲಿ 89, ಮೂರನೇ ಹಂತದಲ್ಲಿ 94, 4ನೇ ಹಂತದಲ್ಲಿ 96, 5ನೇ ಹಂತದಲ್ಲಿ 49, 6ನೇ ಹಂತದಲ್ಲಿ 57 ಮತ್ತು 7ನೇ ಹಂತದಲ್ಲಿ 57 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

2019ರ ಲೋಕಸಭೆ ಚುನಾವಣೆಯಲ್ಲಿ 303 ಸ್ಥಾನಗಳಲ್ಲಿ ಜಯ ಗಳಿಸಿದ ಬಿಜೆಪಿ, 2 ನೇ ಬಾರಿ ಗದ್ದುಗೆಯೇರಿತು. ಗಳಿಸಿದ ಮತ ಪ್ರಮಾಣ ಶೇ.38. ಮಿತ್ರ ಪಕ್ಷಗಳು ಸೇರಿ ಎನ್‌ಡಿಎ ಬಲ 353ಕ್ಕೆ ಹೆಚ್ಚಿತು. ಕಾಂಗ್ರೆಸ್‌ ನೆಲ ಕಚ್ಚಿ, 52 ಸ್ಥಾನಗಳಿಗೆ ಸೀಮಿತವಾಯಿತು. ಈ ಬಾರಿ ಪ್ರಧಾನಿ ಮೋದಿ ಬಿಜೆಪಿಗೆ 370 ಹಾಗೂ ಎನ್‌ಡಿಎಗೆ 400 ಕ್ಷೇತ್ರಗಳ ಗುರಿ ಇರಿಸಿಕೊಂಡಿದ್ದಾರೆ. ಈವರೆಗೆ 400 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯ ಗಳಿಸಿರುವುದು ಒಮ್ಮೆ ಮಾತ್ರ. 1984ರಲ್ಲಿ ಇಂದಿರಾ ಗಾಂಧಿ ಅವರ ಹತ್ಯೆ ಬಳಿಕ ಎದ್ದ ಅನುಕಂಪದ ಅಲೆಯಲ್ಲಿ ಬೇರೆ ಪಕ್ಷಗಳು ಕೊಚ್ಚಿ ಹೋಗಿ, ಕಾಂಗ್ರೆಸ್‌ 403 ಸ್ಥಾನ ಹಾಗೂ ಚಲಾವಣೆಯಾದ ಮತಗಳಲ್ಲಿ ಶೇ,50ರಷ್ಟು ಮತ ಗಳಿಸಿತು.

ಹಂತ 1: ಮೊದಲ ಹಂತದ ಹಂತದ ಚುನಾವಣೆ ಏಪ್ರಿಲ್‌ 19ರಂದು ನಡೆಯಲಿದ್ದು, 21 ರಾಜ್ಯದ 102 ಕ್ಷೇತ್ರಗಳ ನಾಗರಿಕರು ಮತದಾನ ಮಾಡಲಿದ್ದಾರೆ. ಅರುಣಾಚಲ ಪ್ರದೇಶ, ಮಣಿಪುರ ಮತ್ತು ಮೇಘಾಲಯ((ತಲಾ 2), ಅಸ್ಸಾಂ/ಮಹಾರಾಷ್ಟ್ರ /ಉತ್ತರಾಖಂಡ(ತಲಾ 5), ಬಿಹಾರ(4),ಮಧ್ಯಪ್ರದೇಶ(6),ರಾಜಾಸ್ಥಾನ್(12)‌, ತಮಿಳುನಾಡು(39), ಉತ್ತರಪ್ರದೇಶ(8), ಪಶ್ಚಿಮ ಬಂಗಾಳ(3), ಛತ್ತೀಸ್‌ಗಢ, ಅಂಡಮಾನ್‌ ಮತ್ತು ನಿಕೋಬಾರ್‌, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಪುದುಚೇರಿ, ಮಿಜೋರಾಂ,ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರ(ತಲಾ 1).

ಹಂತ 2: 2ನೇ ಹಂತದ ಮತದಾನ ಏಪ್ರಿಲ್‌ 26ರಂದು ನಡೆಯಲಿದ್ದು, 13 ರಾಜ್ಯಗಳ 89 ಕ್ಷೇತ್ರಗಳಲ್ಲಿ ನಾಗರಿಕರು ಮತ ಚಲಾವಣೆ ಮಾಡಲಿದ್ದಾರೆ. ಕ್ಷೇತ್ರಗಳೆಂದರೆ, ಕರ್ನಾಟಕ(14), ಅಸ್ಸಾಂ/ಬಿಹಾರ (ತಲಾ 5), ಛತ್ತೀಸ್‌ಗಢ/ಪಶ್ಚಿಮ ಬಂಗಾಳ(ತಲಾ 3), ಕೇರಳ(20),ಮಧ್ಯಪ್ರದೇಶ(7), ಮಹಾರಾಷ್ಟ್ರ(8),ರಾಜಾಸ್ಥಾನ(13), ಉತ್ತರಪ್ರದೇಶ(8), ಮಣಿಪುರ, ತ್ರಿಪುರ, ಜಮ್ಮು-ಕಾಶ್ಮೀರ(ತಲಾ1).

ಮೂರನೇ ಹಂತ: ಮೇ 7ರಂದು 12 ರಾಜ್ಯಗಳ 94 ಕ್ಷೇತ್ರಗಳ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಲಿದ್ದಾರೆ. ಕರ್ನಾಟಕ(14),ಅಸ್ಸಾಂ(4), ಬಿಹಾರ(5), ಛತ್ತೀಸ್‌ಗಢ(7), ಗೋವಾ(2), ಗುಜರಾತ್(26)‌, ಮಧ್ಯಪ್ರದೇಶ(8), ಮಹಾರಾಷ್ಟ್ರ(11), ಉತ್ತರಪ್ರದೇಶ(10), ಪಶ್ಚಿಮ ಬಂಗಾಳ(4), ಜಮ್ಮು-ಕಾಶ್ಮೀರ(1), ದಾದ್ರಾ-ನಗರ ಹವೇಲಿ ಹಾಗೂ ದಮನ್-ದಿಯು(2).

ನಾಲ್ಕನೇ ಹಂತ: ಮೇ 13ರಂದು ನಡೆಯಲಿರುವ ನಾಲ್ಕನೇ ಹಂತದ ಚುನಾವಣೆಯಲ್ಲಿ 10 ರಾಜ್ಯಗಳ 96 ಕ್ಷೇತ್ರಗಳ ಜನರು ಮತ ಚಲಾವಣೆ ಮಾಡಲಿದ್ದಾರೆ. ಆಂಧ್ರಪ್ರದೇಶ(25), ಬಿಹಾರ(5), ಜಾರ್ಖಂಡ(4),ಮಧ್ಯಪ್ರದೇಶ(8),ಮಹಾರಾಷ್ಟ್ರ(11),ಒಡಿಷಾ(4), ತೆಲಂಗಾಣ(17), ಉತ್ತರಪ್ರದೇಶ(13),ಪಶ್ಚಿಮ ಬಂಗಾಳ(8), ಜಮ್ಮು-ಕಾಶ್ಮೀರ(1).

ಐದನೇ ಹಂತ: 8 ರಾಜ್ಯಗಳ 49 ಕ್ಷೇತ್ರಗಳಲ್ಲಿ ಮೇ 20ರಂದು ಮತಚಲಾವಣೆ ನಡೆಯಲಿದೆ. ಬಿಹಾರ/ಒಡಿಷಾ(ತಲಾ 5), ಜಾರ್ಖಂಡ(3),ಮಹಾರಾಷ್ಟ್ರ(13), ಉತ್ತರಪ್ರದೇಶ(14), ಪಶ್ಚಿಮ ಬಂಗಾಳ(7), ಜಮ್ಮು-ಕಾಶ್ಮೀರ(1), ಲಡಾಖ್(1).‌

ಆರನೇ ಹಂತ: 7 ರಾಜ್ಯಗಳ 57 ಕ್ಷೇತ್ರಗಳಲ್ಲಿ ಮೇ 25ರಂದು ಮತಚಲಾವಣೆ ನಡೆಯಲಿದೆ. ಬಿಹಾರ(8), ಹರ್ಯಾಣ(10), ಜಾರ್ಖಂಡ(4), ಒಡಿಷಾ(6), ಉತ್ತರಪ್ರದೇಶ(14), ಪಶ್ಚಿಮ ಬಂಗಾಳ(8), ದಿಲ್ಲಿ(7)

ಏಳನೇ ಹಂತ: 8 ರಾಜ್ಯಗಳ 57 ಸ್ಥಾನಗಳಿಗೆ ಜೂನ್‌ 1ರಂದು ಚುನಾವಣೆ ನಡೆಯಲಿದೆ. ಬಿಹಾರ(8), ಹಿಮಾಚಲ ಪ್ರದೇಶ(4), ಜಾರ್ಖಂಡ(3), ಒಡಿಷಾ(6), ಪಂಜಾಬ್‌/ಉತ್ತರಪ್ರದೇಶ(ತಲಾ 13), ಪಶ್ಚಿಮ ಬಂಗಾಳ(9), ಚಂಡೀಗಡ(1).

ಜೂನ್‌ 4ರಂದು ಮತ ಎಣಿಕೆ ನಡೆಯಲಿದೆ. ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟ ಅಥವಾ ಇಂಡಿಯಾ ಅಲಯನ್ಸ್‌ ಹಣೆಬರಹ ಗೊತ್ತಾಗಲಿದೆ.

Tags:    

Similar News