ನಂದಿಗ್ರಾಮದಲ್ಲಿ ಕಾರ್ಯಕರ್ತೆ ಕೊಲೆ: ಬಿಜೆಪಿಯಿಂದ ಪ್ರತಿಭಟನೆ, ಸಿಎಂ ವರದಿ ಕೇಳಿದ ರಾಜ್ಯಪಾಲ

ನಂದಿಗ್ರಾಮದಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಪರಿಶಿಷ್ಟ ಸಮುದಾಯದ ಕಾರ್ಯಕರ್ತೆಯ ಹತ್ಯೆ ನಡೆದಿದ್ದು, ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಕ್ಷೇತ್ರದಲ್ಲಿ ಮೇ 25 ರಂದು ಮತದಾನ ನಡೆಯಲಿದೆ.;

Update: 2024-05-24 07:13 GMT

ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಪರಿಶಿಷ್ಟಸಮುದಾಯದ ಕಾರ್ಯಕರ್ತೆಯ ಹತ್ಯೆಯನ್ನು ಪ್ರತಿಭಟಿಸಿ, ವ್ಯಾಪಕ ಪ್ರತಿಭಟನೆ ನಡೆದಿದೆ.  ಪುರ್ಬಾ ಮೇದಿನಿಪುರ ಜಿಲ್ಲೆಯ ತಮ್ಲುಕ್ ಲೋಕಸಭೆ ಕ್ಷೇತ್ರಕ್ಕೆ ಒಳಪಡುವ ನಂದಿಗ್ರಾಮ, ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರ ಪ್ರಾಬಲ್ಯದ ಪ್ರದೇಶ. 

ವರದಿ ನೀಡಲು ರಾಜ್ಯಪಾಲರ ಸೂಚನೆ: ಹತ್ಯೆ ಕುರಿತು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್, ತಕ್ಷಣ ಕ್ರಮ ಕೈಗೊಳ್ಳುವಂತೆ ಮತ್ತು ಕ್ರಮ ಕೈಗೊಂಡ ವರದಿ ಸಲ್ಲಿಸುವಂತೆ ಸಿಎಂಗೆ ಸೂಚಿಸಿದ್ದಾರೆ. 

ಅಧಿಕೃತ ಸಂವಹನದಲ್ಲಿ, ರಕ್ತದೋಕುಳಿಯನ್ನು ಕೊನೆಗೊಳಿಸಬೇಕು. ಮಾದರಿ ನೀತಿ ಸಂಹಿತೆಗೆ ಅನುಗುಣವಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಿದರು. ʻನಂದಿಗ್ರಾಮದಲ್ಲಿ ರಾಜ್ಯ ಸರ್ಕಾರ ಪ್ರಾಯೋಜಿತ ಹಿಂಸಾಚಾರ ನಡೆಯುತ್ತಿದೆ. ಸಂವಿಧಾನದ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸ ಲಾಗುವುದು ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು,ʼ ಎಂದು ಎಚ್ಚರಿಸಿದರು. ಗುರುವಾರ ಸಂಜೆ ರಾಜ್ಯ ಸಚಿವಾಲಯಕ್ಕೆ ಪತ್ರ ಕಳುಹಿಸಲಾಗಿದೆ. 

ʻಸಂವಿಧಾನದ ವಿಧಿ 167ರಡಿ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಮತ್ತು ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸಬೇಕು. ಸಂವಿಧಾನದ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ತೆಗೆದುಕೊಳ್ಳಲಾಗುವುದು. ಮಾದರಿ ಸಂಹಿತೆಯ ಅನ್ವಯ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಬೇಕು,ʼ ಎಂದು ಹೇಳಿದ್ದಾರೆ.

ಮಹಿಳೆ ಹತ್ಯೆ: 1 ಬಂಧನ- ಸೋಣಚೂರ ಗ್ರಾಮದ ಬಿಜೆಪಿ ಕಾರ್ಯಕರ್ತೆ ರಥಿಬಾಲಾ ಅರ್ಹಿ ಅವರ ಹತ್ಯೆಗೆ ಟಿಎಂಸಿ ಬೆಂಬಲಿತ ಕ್ರಿಮಿನಲ್‌ಗಳು ಕಾರಣ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತರು ನಂದಿಗ್ರಾಮದಲ್ಲಿ ಟೈರ್‌ಗಳನ್ನು ಸುಟ್ಟು, ರಸ್ತೆ ತಡೆ ನಡೆಸಿ, ಅಂಗಡಿಗಳನ್ನು ಬಂದ್‌ ಮಾಡಿದರು. ಬುಧವಾರ (ಮೇ 22) ರಾತ್ರಿ ಅಪರಿಚಿತ ದುಷ್ಕರ್ಮಿಗಳು ನಡೆಸಿದ ಹಲ್ಲೆಯಲ್ಲಿ ರಥಿಬಾಲಾ ಅವರ ಪುತ್ರ ಸಂಜಯ್ ಮತ್ತು ಇತರ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಗುಂಪನ್ನು ಚದುರಿಸಲು ಪೊಲೀಸರು, ಕೇಂದ್ರ ಪಡೆಗಳು ಮತ್ತು ಆರ್‌ಎಎಫ್ ಸಿಬ್ಬಂದಿ ಲಾಠಿಚಾರ್ಜ್ ಮಾಡಿದರು. ಹತ್ಯೆಗೆ ಸಂಬಂಧಿಸಿ ದಂತೆ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ನಂದಿಗ್ರಾಮದಲ್ಲಿ ಬಂದ್‌ಗೆ ನೀಡಿದ್ದ ಕರೆಯನ್ನು ಹಿಂಪಡೆದಿದೆ ಎಂದು ಸ್ಥಳೀಯ ಮುಖಂಡರು ತಿಳಿಸಿದ್ದಾರೆ.

ಮತಗಟ್ಟೆ ಕಾವಲು: ʻರಥಿಬಾಲಾ ಮತ್ತು ಇತರ ಕಾರ್ಯಕರ್ತರಿಗೆ ಸ್ಥಳೀಯ ಮತಗಟ್ಟೆಯನ್ನು ಕಾವಲು ಕಾಯುವ ಕೆಲಸ ವಹಿಸಲಾಗಿತ್ತು. ಟಿಎಂಸಿ ಬೆಂಬಲಿತರು ಅವರ ಮೇಲೆ ದಾಳಿ ಮಾಡಿ, ಕೊಲೆ ಮಾಡಿದ್ದಾರೆ,ʼ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಘನಾದ್ ಪಾಲ್ ತಿಳಿಸಿದ್ದಾರೆ.

ಸಂಜಯ್ ಸ್ಥಿತಿ ಗಂಭೀರವಾಗಿದ್ದು, ಅವರನ್ನು ನಗರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇತರರು ಸ್ಥಳೀಯ ವೈದ್ಯಕೀಯ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪಾಲ್ ಹೇಳಿದರು. ಈ ಆರೋಪ ತಳ್ಳಿಹಾಕಿರುವ ನಂದಿಗ್ರಾಮ್ ಟಿಎಂಸಿ ನಾಯಕ ಸ್ವದೇಶ್ ದಾಸ್, ರಥಿಬಾಲಾ ಅವರ ಸಾವಿಗೆ ಕೌಟುಂಬಿಕ ವಿವಾದ ಕಾರಣ ಎಂದು ಹೇಳಿದರು. 

ಅಭಿಷೇಕ್ ಬ್ಯಾನರ್ಜಿ ದೂಷಿಸಿದ ಸುವೇಂದು: ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಸಾರ್ವಜನಿಕ ಭಾಷಣದ ನಂತರ ಈ ಹತ್ಯೆ ನಡೆದಿದೆ ಎಂದಿರುವ ಬಿಜೆಪಿ ನಾಯಕ ಸುವೆಂದು ಅಧಿಕಾರಿ , ʻನೆನ್ನೆ ನಂದಿಗ್ರಾಮದಲ್ಲಿ ಸೋದರಳಿಯನ ಪ್ರಚೋದನೆಯ ನೇರ ಪರಿಣಾಮ ಈ ಹತ್ಯೆ. ಸೋಲಿನ ಭಯದಿಂದ ಟಿಎಂಸಿ ಈ ಕೊಲೆಯನ್ನು ರೂಪಿಸಿದೆ. ಹೆಣ್ಣನ್ನು ಕಡಿದು ಸಾಯಿಸುವಾಗ ಜಿಹಾದಿಗಳ ಕೈ ನಡುಗುವುದಿಲ್ಲ. ಬಿಜೆಪಿ ಕಾನೂನು ಹಾಗೂ ಪ್ರಜಾಸತ್ತಾತ್ಮಕ ವಿಧಾನಗಳಿಂದ ಪ್ರತಿಕ್ರಿಯಿಸುತ್ತದೆ,ʼ ಎಂದು ಎಕ್ಸ್‌ ನಲ್ಲಿ ಪ್ರತಿಕ್ರಿಯಿಸಿದ್ದಾರೆ. 

ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಹಾಗೂ ನಂದಿಗ್ರಾಮ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ನಿಯೋಜಿಸಿದ್ದ ಕೇಂದ್ರ ಪಡೆಗಳ ವಿರುದ್ಧ ವಾಗ್ದಾಳಿ ನಡೆಸಿ, ʻಇಲ್ಲಿ ಎಸ್‌ಸಿ ಸಮುದಾಯದ ಮಹಿಳೆಯನ್ನು ಟಿಎಂಸಿ ಗೂಂಡಾಗಳು ಹತ್ಯೆ ಮಾಡಿದ್ದಾರೆ. ನೀವು ಏನೂ ಮಾಡುತ್ತಿಲ್ಲ. ನೀವು ಕರ್ತವ್ಯ ನಿರ್ವಹಿಸುವುದು ಯಾವಾಗ?,ʼ ಅವರು ಪ್ರಶ್ನಿಸಿದರು. 

ಕಂಠಿಯಲ್ಲಿ ನಡೆದ ಚುನಾವಣೆ ಸಭೆಯಲ್ಲಿ ಅಭಿಷೇಕ್ ವಿರುದ್ಧ ಕಿಡಿಕಾರಿ, ʻನಾನು ಮಣ್ಣಿನ ಮಗ. ಈ ಘಟನೆಗೆ ಪ್ರತೀಕಾರ ತೀರಿಸಿಕೊಳ್ಳುತ್ತೇನೆ. ನಿನ್ನೆ ನಂದಿಗ್ರಾಮದಲ್ಲಿ ನಡೆದ ಸಭೆಯಲ್ಲಿ ಅಭಿಷೇಕ್ ಬ್ಯಾನರ್ಜಿ ಅವರ ಪ್ರಚೋದನೆಯಿಂದ ರಕ್ತಪಾತ ನಡೆದಿದೆ. ಇಲ್ಲಿ ಸೋಲು ಖಚಿತ ಎಂಬ ಕಾರಣಕ್ಕೆ ಟಿಎಂಸಿ ಈ ಬರ್ಬರ ಹತ್ಯೆ ಮಾಡಿದೆ,ʼ ಎಂದು ದೂರಿದರು.

ಬಿಜೆಪಿಯಿಂದ ಚುನಾವಣೆ ಆಯೋಗಕ್ಕೆ ಪತ್ರ: ಪುರ್ಬಾ ಮೇದಿನಿಪುರ್ ಜಿಲ್ಲೆಯ ಎಸ್ಪಿಯನ್ನು ತಕ್ಷಣವೇ ತೆಗೆದುಹಾಕುವಂತೆ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ ಪತ್ರ ಬರೆದಿದೆ.

ʻಮೇ 16 ರಂದು ಹಲ್ದಿಯಾದಲ್ಲಿ ನಡೆದ ಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರು ನೀಡಿದ ಹೇಳಿಕೆಗಳಿಂದ ಈ ಕೊಲೆಯಾಗಿದೆ. 2021 ರ ವಿಧಾನಸಭೆ ಚುನಾವಣೆಯಲ್ಲಿ ತನ್ನ ಸೋಲಿಗೆ ನಂದಿಗ್ರಾಮದ ಜನರ ಮೇಲೆ ಸೇಡು ತೀರಿಸಿಕೊಳ್ಳು ವುದಾಗಿ ಬ್ಯಾನರ್ಜಿ ಹೇಳಿದ್ದಾರೆ,ʼ ಎಂದು ಆಯೋಗಕ್ಕೆ ಬಿಜೆಪಿ ಪತ್ರ ಬರೆದಿದೆ.

ʻಪ್ರಜಾಪ್ರಭುತ್ವದಲ್ಲಿ ಇಂತಹ ಹಿಂಸಾಚಾರ ಸ್ವೀಕಾರಾರ್ಹವಲ್ಲ. ರಥಿಬಾಲಾ ಅರ್ಹಿ ಮತ್ತು ಎಲ್ಲಾ ಸಂತ್ರಸ್ತರಿಗೆ ನ್ಯಾಯ ಖಾತರಿಪಡಿಸುತ್ತೇವೆ,ʼ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಎಕ್ಸ್‌ನಲ್ಲಿ ಬರೆದಿದ್ದಾರೆ. ಆದರೆ, ಟಿಎಂಸಿ ನಾಯಕ ಶಂತನು ಸೇನ್, ʻಘಟನೆಗೆ ಬಿಜೆಪಿಯ ಹಳೆಯ ಕಾರ್ಯಕರ್ತರು ಮತ್ತು ಹೊಸಬರ ನಡುವಿನ ಆಂತರಿಕ ಕಲಹ ಕಾರಣ,ʼ ಎಂದಿದ್ದಾರೆ.  

Tags:    

Similar News