ಸಿಖ್ ಧಾರ್ಮಿಕ ಚಿಹ್ನೆಗಳ ಬಳಕೆ; ರಾಹುಲ್ ವಿರುದ್ಧ ವಾಗ್ದಾಳಿ

Update: 2024-09-10 11:16 GMT

ರಾಹುಲ್‌ ಗಾಂಧಿ ಅವರು ಭಾರತದಲ್ಲಿ ಸೈದ್ಧಾಂತಿಕ ಕದನ ನಡೆಯುತ್ತಿದೆ ಎಂಬುದನ್ನು ವಿವರಿಸಲು ಸಿಖ್ಖರ ಧಾರ್ಮಿಕ  ಚಿಹ್ನೆಗಳನ್ನು ಬಳಸಿದ್ದನ್ನು ಬಿಜೆಪಿಯ ಸಿಖ್‌ ನಾಯಕರು ಖಂಡಿಸಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ರಾಹುಲ್, ವರ್ಜೀನಿಯಾದಲ್ಲಿ ಭಾರತದಲ್ಲಿ ರಾಜಕೀಯ ಹೋರಾಟವು ಎಲ್ಲಾ ಧರ್ಮಗಳಿಗೆ ಸ್ವಾತಂತ್ರ್ಯವನ್ನು ಖಾತ್ರಿಪಡಿಸುತ್ತದೆ ಎಂದು ಹೇಳಿದರು. 

ಸಭಿಕರಲ್ಲಿದ್ದ ಸಿಖ್‌ ಸಮುದಾಯದ ವ್ಯಕ್ತಿಯನ್ನು ಉದ್ಧೇಶಿಸಿ, ʻಮೊದಲಿಗೆ ನೀವು ಯಾವುದಕ್ಕೆ ಹೋರಾಟ ಎಂಬುದನ್ನು ಅರ್ಥಮಾಡಿಕೊಳ್ಳ ಬೇಕು. ಹೋರಾಟ ರಾಜಕೀಯಕ್ಕೆ ಸೀಮಿತವಲ್ಲ; ತೋರಿಕೆಯ ಹೋರಾಟವಲ್ಲ. ನಿಮ್ಮ ಹೆಸರೇನು?ʼ ಎಂದು ಕೇಳಿದ್ದರು. 

ರಾಹುಲ್ ಹೇಳಿದ್ದೇನು?: ʻಸಿಖ್‌ ಸಮುದಾಯದ ವ್ಯಕ್ತಿಗೆ ಪೇಟ, ಕಡಾ ಧರಿಸಲು ಅವಕಾಶ ನೀಡಲಾಗುವುದೇ? ಅಥವಾ, ಆತ ಗುರುದ್ವಾರಕ್ಕೆ ಹೋಗಲು ಆಗುವುದೇ ಎಂಬ ಬಗ್ಗೆ ಹೋರಾಟ ಇರಲಿದೆ. ಹೋರಾಟವು ಆತನಿಗಾಗಿ ಮಾತ್ರವಲ್ಲ, ಎಲ್ಲಾ ಧರ್ಮಗಳವರಿಗೂ,ʼ ಎಂದು ರಾಹುಲ್ ಹೇಳಿದ್ದರು.

ಕೇಂದ್ರ ಸಚಿವ ಹರ್ದೀಪ್ ಪುರಿ ಅವರು, ರಾಹುಲ್‌ ಅವರು ಅಮೆರಿಕದಲ್ಲಿ ಸಿಖ್ಖರು ಮತ್ತು ಆರ್‌ಎಸ್‌ಎಸ್ ಅನ್ನು ಟೀಕಿಸಿದ್ದಾರೆ. ಭಾರತೀಯ ವಲಸಿಗರಲ್ಲಿ ಅಪಾಯಕಾರಿ ನಿರೂಪಣೆಯನ್ನು ಹರಡುತ್ತಿದ್ದಾರೆ ಎಂದು ದೂರಿದ್ದಾರೆ.

ʻಅವರು ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ತಪ್ಪು. ಅವರು ಸಾಮಾನ್ಯ ನಾಗರಿಕ ಅಲ್ಲ; ವಿರೋಧ ಪಕ್ಷದ ನಾಯಕ. ಸಿಖ್ಖರು ಅಸ್ತಿತ್ವದ ಬಿಕ್ಕಟ್ಟು ಎದುರಿಸಿದ್ದು ಗಾಂಧಿ ಕುಟುಂಬ ಅಧಿಕಾರದಲ್ಲಿದ್ದಾಗ ಮಾತ್ರ,ʼ ಎಂದು ಪುರಿ ಹೇಳಿದರು.

ದೇಶದ ಪ್ರತಿಷ್ಠೆಗೆ ಧಕ್ಕೆ: ʻರಾಹುಲ್ ಅವರು ದೇಶದ ಪ್ರತಿಷ್ಠೆಗೆ ಧಕ್ಕೆ ತರುತ್ತಿದ್ದಾರೆ. ಇದು ದೇಶದ್ರೋಹಕ್ಕೆ ಸಮಾನ,ʼ ಎಂದು ಕೇಂದ್ರ ಸಚಿವ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟೀಕಿಸಿದ್ದಾರೆ.

ಬಿಜೆಪಿ ವಕ್ತಾರ ಆರ್‌.ಪಿ. ಸಿಂಗ್,ʻ ಭಾರತದಲ್ಲಿ ಈ ಹೇಳಿಕೆಗಳನ್ನು ರಾಹುಲ್ ಪುನರಾವರ್ತಿಸಲಿ. ಅವರನ್ನು ನ್ಯಾಯಾಲಯಕ್ಕೆ ಎಳೆಯಲಾಗುತ್ತದೆ,ʼ ಎಂದು ಹೇಳಿದರು.

ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ, ʻನಿಮ್ಮ ಕೊಳಕು ರಾಜಕೀಯ ದೇಶವನ್ನು ಮುಳುಗಿಸುತ್ತಿದೆ. ಭಾರತದಲ್ಲಿ ಸಿಖ್ಖರು ಪೇಟ ಮತ್ತು ಕಡಾ ಧರಿಸಲು ಸಾಧ್ಯವಿಲ್ಲ ಎನ್ನುವಷ್ಟು ಕೆಳಮಟ್ಟಕ್ಕೆ ಇಳಿದಿದ್ದೀರಿ. ದೇಶದಲ್ಲಿ ಸಿಖ್ಖರು ಮತ್ತು ಗುರುದ್ವಾರಗಳು ಸುರಕ್ಷಿತವಾಗಿಲ್ಲ ಎಂದು ಹೇಳುತ್ತೀರಿ. ನಿಮ್ಮ ಮಾತನ್ನು ಖಂಡಿಸುತ್ತೇನೆ,ʼ ಎಂದು ಹೇಳಿದರು. 

Tags:    

Similar News