ಸಂವಿಧಾನದ ಪುನಾರಚನೆ, ಮೀಸಲು ಅಂತ್ಯ ಅಜೆಂಡಾವನ್ನು ಬಿಜೆಪಿ-ಆರ್‌ಎಸ್‌ಎಸ್ ಕೈ ಬಿಡುವ ಸಾಧ್ಯತೆ ಕಡಿಮೆ

ಬಿಜೆಪಿಗೆ ಸಂಪೂರ್ಣ ಬಹುಮತದ ಕೊರತೆ ಇರುವುದರಿಂದ ಅದರ ಕಾರ್ಯಸೂಚಿಗಳು ಸದ್ಯಕ್ಕೆ ಸ್ಥಗಿತ ಗೊಂಡಿರಬಹುದು. ಆದರೆ, ಕೇಸರಿ ಪಡೆ ನಿರಂತರ ಪರಿಶ್ರಮಕ್ಕೆ ಹೆಸರುವಾಸಿಯಾಗಿದೆ; ಅದು ಅವರ ಶಕ್ತಿಯೂ ಹೌದು.

Update: 2024-07-15 12:33 GMT

18 ನೇ ಲೋಕಸಭೆ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದ ಪ್ರಮುಖ ಕಥನವೆಂದರೆ, ಬಿಜೆಪಿ 400 ಸ್ಥಾನ ಗಳಿಸಿದಲ್ಲಿ ಸಂವಿಧಾನವನ್ನು ಪುನಃ ಬರೆಯಬಹುದು ಮತ್ತು ಮೀಸಲು ರದ್ದುಗೊಳಿಸಬಹುದು ಎಂಬುದು.

ಪ್ರಧಾನಿ ನರೇಂದ್ರ ಮೋದಿ ಅವರೇ 'ಅಬ್ ಕಿ ಬಾರ್ 400 ಪಾರ್' (ಈ ಬಾರಿ 400 ದಾಟುತ್ತೇವೆ) ಎಂಬ ಘೋಷಣೆ ಮೂಲಕ ಕಥನವನ್ನು ಆರಂಭಿಸಿದರು. ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಹಲವು ನಾಯಕರಿಗೆ ಲೋಕಸಭೆಯಲ್ಲಿ ಸಂಪೂರ್ಣ ಬಹುಮತ ಪಡೆದ ನಂತರ ಪಕ್ಷ ಸಂವಿಧಾನವನ್ನು ಬದಲಿಸುತ್ತದೆ ಎಂದು ಹೇಳಲು ಈ ಘೋಷಣೆಯು ಪ್ರಚೋದನೆಯನ್ನು ನೀಡಿತು. 

ಸಂವಿಧಾನ, ಮೀಸಲು ಕುರಿತ ಕಥನ: ಈ ಹೇಳಿಕೆ ನಂತರ ಬಿಜೆಪಿಯು ವಿಲಕ್ಷಣವಾದ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು. 'ಮೋದಿ ಕಿ ಗ್ಯಾರಂಟಿ' ಎಂಬ ಪ್ರಣಾಳಿಕೆಯ ಶೀರ್ಷಿಕೆಯೇ ಬಿಜೆಪಿ-ಆರ್‌ಎಸ್‌ಎಸ್ ಸಂಯೋಜನೆಗಿಂತ ಮೋದಿ ದೊಡ್ಡ ಘಟಕ ಎಂಬ ಸಂದೇಶವನ್ನು ನೀಡಿತು. ರಾಷ್ಟ್ರದ ರಾಜಕೀಯ ಸಂರಚನೆಯಲ್ಲಿ ತೀವ್ರ ಬದಲಾವಣೆಯೊಂದಿಗೆ ಸರ್ವಾಧಿಕಾರ ಹೊರಹೊಮ್ಮಬ ಹುದು ಎಂಬ ವದಂತಿಗಳನ್ನು ಹರಡಿತು. 

ಹೊಸ ಸರ್ಕಾರ ಯಾವ ರೀತಿಯ ವ್ಯವಸ್ಥೆಯನ್ನು ಜಾರಿಗೊಳಿಸುತ್ತದೆ ಎಂಬುದು ಗೊತ್ತಿರಲಿಲ್ಲ. ಆದರೆ, ಹೆಚ್ಚಿನ ಸಂಖ್ಯೆಯ ಬಿಜೆಪಿಯೇತರ ಮತದಾರರು ರಾಷ್ಟ್ರಕ್ಕೆ ಬೇಡವಾದದ್ದು ಸಂಭವಿಸಲಿದೆ ಎಂದು ಊಹಿಸಿದರು. 

ಅದೇ ಸಮಯದಲ್ಲಿ ಆರ್‌ಎಸ್‌ಎಸ್-ಬಿಜೆಪಿ ಸಂಯೋಜನೆಯು ಮೀಸಲು ವ್ಯವಸ್ಥೆಯನ್ನು ನಿಧಾನವಾಗಿ ಕಿತ್ತುಹಾಕಲಿದೆ ಎಂಬ ಭಾವನೆ ಇತರ ಹಿಂದುಳಿದ ವರ್ಗಗಳು (ಒಬಿಸಿ), ದಲಿತರು ಮತ್ತು ಆದಿವಾಸಿಗಳಲ್ಲಿ ಬೇರೂರಲು ಆರಂಭವಾಯಿತು. ಬಿಜೆಪಿ ನೇತೃತ್ವದ ಸರ್ಕಾರವು ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯುಎಸ್)ಗಳಿಗೆ ಶೇ.10 ಮೀಸಲು ಪರಿಚಯಿಸಿದ ನಂತರ ಮತ್ತು ಸಾರ್ವಜನಿಕ ವಲಯದ ಪ್ರಮುಖ ಉದ್ಯಮ(ಪಿಎಸ್‌ಯು)ಗಳ ಖಾಸಗೀಕರಣವನ್ನು ಆರಂಭಿಸಿದ ನಂತರ ಈ ಭಾವನೆ ತೀವ್ರಗೊಂಡಿತು. 

ಮಂಡಲ್ ವಿರೋಧಿ ನಿಲುವು:‌ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರ ಎರಡನೇ ಅವಧಿಯಲ್ಲಿ 370 ನೇ ವಿಧಿ ರದ್ದು, ಅಯೋಧ್ಯೆಯಲ್ಲಿ ರಾಮ ಮಂದಿರದ ತರಾತುರಿ ಉದ್ಘಾಟನೆ ಸೇರಿದಂತೆ ಬಿಜೆಪಿಯ ಅನೇಕ ದೀರ್ಘ ಕಾಲೀನ ಕಾರ್ಯಸೂಚಿಗಳನ್ನು ಜಾರಿಗೆ ತಂದಿತು. ಮೀಸಲು ರದ್ದು ಮುಂದಿನದು ಎಂಬ ಆತಂಕವನ್ನು ಗಟ್ಟಿಗೊಳಿಸಿತು.

1990 ರ ದಶಕದಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಮಂಡಲ್‌ ವಿರೋಧಿ ನಿಲುವಿಗೆ ನಾನು ಸಾಕ್ಷಿಯಾಗಿದ್ದೆ. ಆಗ ನಾನು ಮಂಡಲ್ ಪರ ಬರಹಗಾರರು ಮತ್ತು ಕಾರ್ಯಕರ್ತರಲ್ಲಿ ಒಬ್ಬನಾಗಿದ್ದೆ. ಆದರೆ, ಕಠಿಣ ನಿಲುವಿನಿಂದ ಒಬಿಸಿಗಳೆಂದು ಕರೆಯಲ್ಪಡುವ ಹೆಚ್ಚಿನ ಸಂಖ್ಯೆಯ ಶೂದ್ರರು ಸಂಘಟನೆಯನ್ನು ತೊರೆಯುತ್ತಾರೆ ಎಂದು ಅರಿತ ಬಳಿಕ ಅವರು ಕ್ರಮೇಣ ತಮ್ಮ ನಿಲುವು ಮೃದುಗೊಳಿಸಿದರು.

ಆಗಿನ ಪಿ.ವಿ. ನರಸಿಂಹ ರಾವ್ ಸರ್ಕಾರವು ಕೇಂದ್ರ ಸರ್ಕಾರದ ಉದ್ಯೋಗಗಳು ಮತ್ತು ಇತರ ಸಾರ್ವಜನಿಕ ಕ್ಷೇತ್ರಗಳಲ್ಲಿ ಒಬಿಸಿಗಳಿಗೆ ಶೇ.27 ಮೀಸಲು ನೀಡುವ 1992 ರ ಮಂಡಲ್ ತೀರ್ಪು ಮತ್ತು ಮಂಡಲ್ ಆಯೋಗದ ಶಿಫಾರಸಿನ ಅನುಷ್ಠಾನದ ನಂತರ ಒಬಿಸಿ ಮೀಸಲನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಾಯಿತು.

ಬಿಹಾರದಲ್ಲಿ ಒಬಿಸಿ ನಾಯಕರು: ಆದರೆ, ಹಿಂದುಳಿದ ವರ್ಗಗಳನ್ನು ಗುರುತಿಸಲು 1977 ರಲ್ಲಿ ಆಗಿನ ಜನತಾ ಪಕ್ಷದ ಸರ್ಕಾರ ರಚಿಸಿದ ಆಯೋಗದ ನೇತೃತ್ವ ವಹಿಸಿದ್ದ ಬಿ.ಪಿ. ಮಂಡಲ್ ಮತ್ತು ವಿಶೇಷವಾಗಿ, ಬಿಹಾರದಲ್ಲಿ ಒಬಿಸಿ ಪರ ರಾಜಕೀಯ ಧ್ವನಿಗಳ ಬಗ್ಗೆ ಆರ್‌ಎಸ್‌ಎಸ್‌ನ ಉನ್ನತ ನಾಯಕತ್ವವು ಬಹಳ ಸಿಟ್ಟಾಗಿತ್ತು. 

ಬಿಹಾರದಲ್ಲಿ ಬಿಜೆಪಿಯ ಒಬಿಸಿ ಶ್ರೇಣಿಯಿಂದ ಹೊರಹೊಮ್ಮಿದ ಮಂಡಲ್‌ ಅವರಂತಹ ನಾಯಕರನ್ನು ಆರ್‌ಎಸ್‌ಎಸ್ ವಿರೋಧಿಸಿತು. ಬದಲಾಗಿ, ಹಿಂದುತ್ವದ ಧ್ವನಿಗಳು ಮತ್ತು ರಾಮ ಮಂದಿರ ಅಜೆಂಡಾವನ್ನು ಪ್ರಚಾರ ಮಾಡಿದ ಕಲ್ಯಾಣ್ ಸಿಂಗ್ ಮತ್ತು ಮೋದಿಯಂತಹ ಒಬಿಸಿ ನಾಯಕರನ್ನು ಬೆಂಬಲಿಸಿತು. 

ಈಗಲೂ ಕೂಡ ಬಿಹಾರದಲ್ಲಿ ಬಿಜೆಪಿಗೆ ಪ್ರಬಲ ಒಬಿಸಿ ನಾಯಕ ಇಲ್ಲ.ಕಾಲಕ್ರಮೇಣ ಬಿಹಾರದ ಬನಿಯಾಗಳು (ಲೇವಾದೇವಿಗಾರರು) ಒಬಿಸಿ ಪ್ರಮಾಣಪತ್ರಗಳನ್ನು ಪಡೆದುಕೊಂಡರು. ದಿವಂಗತ ಸೀತಾರಾಮ್ ಕೇಸರಿ ಮತ್ತು ಸುಶೀಲ್ ಕುಮಾರ್ ಮೋದಿ ಇಂಥ ಕೆಲವು ಉದಾಹರಣೆಗಳು.  

ರಾಜೀವ್‌ ಅವರಿಂದ ರಾಹುಲ್‌ವರೆಗೆ ಕಾಂಗ್ರೆಸ್‌ ನಿಲುವು: ಆಗಿನ ವಿ.ಪಿ. ಸಿಂಗ್ ಸರ್ಕಾರವು ಮಂಡಲ್ ಆಯೋಗದ ವರದಿ ಜಾರಿಗೊಳಿಸು ವುದನ್ನು ಕಾಂಗ್ರೆಸ್ ವಿರೋಧಿಸಿತ್ತು. ಆದರೆ, ಕಾಂಗ್ರೆಸ್ಸಿನ ವಿರೋಧಕ್ಕೆ ಮೀಸಲು ವಿರೋಧಿ ಸಿದ್ಧಾಂತ ಕಾರಣ ಆಗಿರಲಿಲ್ಲ.ಸಿಂಗ್‌ 1989 ರ ಲೋಕಸಭೆ ಚುನಾವಣೆಯಲ್ಲಿ ಸೋಲಿಸುವ ಮೂಲಕ ಕಾಂಗ್ರೆಸ್‌ ಏಕಸ್ವಾಮ್ಯವನ್ನು ಕೊನೆಗೊಳಿಸಿದ್ದುಆ ಕಹಿಗೆ ಕಾರಣವಾಗಿತ್ತು. 

ಅದೇ ಕಾಂಗ್ರೆಸ್ ಪಕ್ಷ 2006 ರಲ್ಲಿ ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿ ಮೀಸಲು ಜಾರಿಗೆ ತಂದಿತು ಮತ್ತು ಖಾಸಗಿ ಕ್ಷೇತ್ರದಲ್ಲೂ ಮೀಸಲು ಪ್ರಸ್ತಾಪಿಸಿತು. 

ಇದಕ್ಕೆ ವ್ಯತಿರಿಕ್ತವಾಗಿ, ಬಿಜೆಪಿ ಯಾವಾಗಲೂ ಖಾಸಗಿ ಕ್ಷೇತ್ರದಲ್ಲಿ ಮೀಸಲು ವಿರೋಧಿಸಿದೆ. ಇದರಿಂದಾಗಿಯೇ ಕುಟುಂಬಗಳ ಹಿಡಿತದಲ್ಲಿರುವ ಭಾರಿ ಕಂಪನಿಗಳು ಕಾಂಗ್ರೆಸ್ ವಿರುದ್ಧ ಇವೆ. 

ಆರೆಸ್ಸೆಸ್-ಬಿಜೆಪಿ ಜೋಡಿ ಮತ್ತು ಕಾಂಗ್ರೆಸ್ ನಡುವಿನ ಮೂಲಭೂತ ವ್ಯತ್ಯಾಸವೆಂದರೆ, ಕೇಸರಿ ಪಕ್ಷವು ಕೋಮುವಾದದ ಜೊತೆಗೆ ಜಾತಿವಾದಿಯೂ ಹೌದು. 

ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಮುಖವಾಣಿಯಾಗಿ ಹೊರಹೊಮ್ಮಿದ ನಂತರ, ಅವರು ಮೀಸಲು ಪರ ನಿಲುವು ತೆಗೆದುಕೊಂಡರು. ಜಾತಿ ಗಣತಿಗೆ ಆಂದೋಲನ ಮತ್ತು ಸುಪ್ರೀಂ ಕೋರ್ಟ್ ವಿಧಿಸಿದ ಶೇ. 50 ರಷ್ಟು ಮೀಸಲು ಮಿತಿ ತೆಗೆದುಹಾಕುವ ಕುರಿತು ಇತ್ತೀಚಿನ ಚುನಾವಣೆ ಸಂದರ್ಭದಲ್ಲಿ ನಡೆಸಿದ ಪ್ರಚಾರಗಳು ಕಾಂಗ್ರೆಸ್‌ನ ನಿಲುವನ್ನು ಪ್ರತಿಬಿಂಬಿಸುತ್ತವೆ.

ಮೀಸಲು vs ಮಂದಿರ ಚಳವಳಿ: ಒಬಿಸಿ ಎಂಬ ಅರ್ಹತೆ ಮೇಲೆ ಪ್ರಧಾನಿಯಾದ ಮೋದಿ ಅವರು ಮಿಸಲಿನ ಪ್ರಬಲ ವಿರೋಧಿ ಮತ್ತು ಮೀಸಲು ಹೋರಾಟ ಉತ್ತುಂಗದಲ್ಲಿದ್ದಾಗ ಮಂದಿರ ಚಳವಳಿ(ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ)ಯ ಪ್ರಮುಖ ಸಂಘಟಕರಲ್ಲಿ ಒಬ್ಬರಾಗಿದ್ದರು.

ಆರ್‌ಎಸ್‌ಎಸ್ ಒಬಿಸಿ ನಾಯಕರು ಮತ್ತು ಕಾರ್ಯಕರ್ತರ ಮೇಲೆ ಹಿಡಿತವನ್ನು ಬಿಗಿಗೊಳಿಸುತ್ತಿದ್ದಂತೆ, ಸಂಘಟನೆಯಲ್ಲಿದ್ದ ಮತ್ತು ಬಿಜೆಪಿಯ ಅನೇಕ ಒಬಿಸಿ ನಾಯಕರು ಪಕ್ಷದ ಆಜ್ಞೆ ಮೇರೆಗೆ ದೇವಾಲಯದ ವಿಷಯದಲ್ಲಿ ಉಗ್ರ ನಿಲುವು ತೆಗೆದುಕೊಳ್ಳಲು ಪ್ರಾರಂಭಿಸಿದರು.

ರಾಷ್ಟ್ರೀಯ ಮಟ್ಟದಲ್ಲಿ ಒಬಿಸಿ ಮೀಸಲನ್ನು ಪೆರಿಯಾರ್ ಸಿದ್ಧಾಂತದ ವಿಜಯ ಮತ್ತು ಆರ್‌ಎಸ್‌ಎಸ್-ಬಿಜೆಪಿ ಮೇಲ್ಜಾತಿ ಸಿದ್ಧಾಂತದ ಅಂತ್ಯ ಎದು ಪರಿಗಣಿಸಲಾಗಿದೆ. ಜಾತಿ ವಿನಾಶದ ಕಲ್ಪನೆಯನ್ನು ಆರೆಸ್ಸೆಸ್, ತನ್ನ ಶತ್ರುವಿನಂತೆ ನೋಡಿದೆ. ಒಬಿಸಿ ಮೀಸಲು ಜಾರಿಗೊಳಿಸುವುದ ರೊಂದಿಗೆ ವಿ.ಪಿ. ಸಿಂಗ್ ಸರ್ಕಾರವು ಅಂಬೇಡ್ಕರ್ ಅವರಿಗೆ ಹೊಸ ಜೀವ ತಂದಿತು.

ಅಧ್ಯಕ್ಷೀಯ ಆಡಳಿತ ವ್ಯವಸ್ಥೆ: 2014 ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸ್ಪಷ್ಟ ಬಹುಮತ ಗಳಿಸಿದ ನಂತರ, ದೇಶದ ರಾಜಕೀಯ ವ್ಯವಸ್ಥೆಯನ್ನು ಅಧ್ಯಕ್ಷೀಯ ಮಾದರಿಗೆ ಬದಲಿಸುವ ಬಗ್ಗೆ ಮಾತುಗಳು ಕೇಳಿಬಂದವು.

ಇಂಡಿಯಾ ಒಕ್ಕೂಟ ತನ್ನ ಅಭಿಯಾನವನ್ನು 'ಸಂವಿಧಾನ ಬದಲು' ಸಂಕಥನದ ಮೇಲೆ ಆಧರಿಸಿದಾಗ, ದೇಶದ ಮತದಾರರ ಸಾಮೂಹಿಕ ಪ್ರಜ್ಞೆಯಲ್ಲಿದ್ದ ಕಲ್ಪನೆ ಮತ್ತೆ ಜೀವಂತಗೊಂಡಿತು.

ಅದೃಷ್ಟವಶಾತ್, ಹೆಚ್ಚಿನ ಸಂಖ್ಯೆಯ ಮತದಾರರು ಸಂವಿಧಾನ ನಿಜವಾಗಿಯೂ ಅಪಾಯದಲ್ಲಿದೆ ಎಂದು ಅರಿತುಕೊಂಡರು. ಬಿಜೆಪಿ ಸಂವಿಧಾನವನ್ನು ಟೀಕಿಸುತ್ತಿದೆ ಮತ್ತು ಅದನ್ನು ಬದಲಿಸಲು ಬಯಸುತ್ತಿದೆ ಎಂಬ ಅಂಶ ಹಾದಿ ಮಾತಾಯಿತು.

370 ನೇ ವಿಧಿಯ ರದ್ದುಗೊಳಿಸುವಿಕೆ ನೀಡಿದ ಸೂಚನೆಯನ್ನು ಜನ ಗ್ರಹಿಸಿದರು ಮತ್ತು ಬಿಜೆಪಿಯು ಒಬಿಸಿ, ಎಸ್‌ಸಿ ಮತ್ತು ಎಸ್‌ಟಿಗಳಿಗೆ ಮೀಸಲು ರದ್ದುಗೊಳಿಸಬಹುದು ಎಂದುಕೊಂಡರು. ಇದರಿಂದ ಬಿಜೆಪಿಯನ್ನು ಚುನಾವಣೆಯಲ್ಲಿ ಗೆಲ್ಲದಂತೆ ನೋಡಿಕೊಳ್ಳಬೇಕು ಎಂಬ ಆಲೋಚನೆ ಹುಟ್ಟಿಕೊಂಡಿತು.

ಗರಿಷ್ಠ ಖಾಸಗೀಕರಣ: ಬಿಜೆಪಿ ಸಂಸತ್ತಿನಲ್ಲಿ ಪೂರ್ಣ ಬಹುಮತ ಪಡೆಯುವುದನ್ನು ತಡೆಯುವ ಮೂಲಕ ಮತದಾರರು ಭಾಗಶಃ ಯಶಸ್ವಿಯಾಗಿದ್ದಾರೆ.

ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿಯಂತಹ ಕೈಗಾರಿಕೋದ್ಯಮಿಗಳು ಬಿಜೆಪಿಯನ್ನು ಸಂಪೂರ್ಣವಾಗಿ ಬೆಂಬಲಿಸುವುದು ಸ್ಪಷ್ಟವಾಗಿತ್ತು. ಬಹುತೇಕ ಏಕಸ್ವಾಮ್ಯ ಕಂಪನಿಗಳು ಮೇಲ್ಜಾತಿಯಿಂದ ಬಂದವರ ಒಡೆತನದಲ್ಲಿರುವುದರಿಂದ, ಬಿಜೆಪಿ ಆಡಳಿತದಲ್ಲಿ ಖಾಸಗೀಕರಣವನ್ನು ಗರಿಷ್ಠಗೊಳಿಸಬೇಕು ಎಂಬ ಅಭಿಪ್ರಾಯ ಅವರಲ್ಲಿದೆ.

ಬಿಜೆಪಿ ನೀತಿ ಆಯೋಗದಂಥ ಸರ್ಕಾರಿ ಸಂಸ್ಥೆಗಳಿಗೆ ಮೇಲ್ಜಾತಿಗಳಿಂದ ಬಂದ ಹಲವು ಖಾಸಗೀಕರಣದ ಪರವಿರುವ ಅರ್ಥಶಾಸ್ತ್ರಜ್ಞರನ್ನು ನೇಮಿಸಿತು. ಅಮೆರಿಕನ್ ಪ್ರಜೆಗಳು ಸೇರಿದಂತೆ ಅರವಿಂದ್ ಪನಗರಿಯಾ ಅವರಂತಹ ಅರ್ಥಶಾಸ್ತ್ರಜ್ಞರಿಗೆ ಪ್ರಮುಖ ಸಂಸ್ಥೆಗಳ ಮುಖ್ಯಸ್ಥರನ್ನಾಗಿ ಮಾಡಲಾಗಿದೆ (ಪನಗರಿಯಾ ಅವರನ್ನು ಬಿಹಾರದ ನಳಂದ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಿಸಲಾಗಿದೆ).

ಆದರೆ, ಅಪಾಯ ಇನ್ನೂತೊಲಗಿಲ್ಲ: ಆದರೆ, ಸಂವಿಧಾನಕ್ಕೆ ಕುತ್ತು ಇನ್ನೂ ತೊಲಗಿಲ್ಲ. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯು ಸಂವಿಧಾನವನ್ನು ಮತ್ತೆ ಬರೆಯುವ ಮತ್ತು ಮೀಸಲು ರದ್ದುಗೊಳಿಸುವಿಕೆಯನ್ನು ಸದ್ಯಕ್ಕೆ ಮುಂದೆ ಹಾಕಿದೆ.

ಆರ್‌ಎಸ್‌ಎಸ್‌ ನ ಸಂಘಟನೆಗಳು ಕಾರ್ಯಸೂಚಿ ಫಲಪ್ರದವಾಗುವವರೆಗೆ, ಪರಿಶ್ರಮ ಮತ್ತು ತಾಳ್ಮೆಯಿಂದ ಕೆಲಸ ಮಾಡುವಲ್ಲಿ ಹೆಸರು ವಾಸಿಯಾಗಿವೆ. ಅದು ಅವುಗಳ ಶಕ್ತಿ. ಅವರು ತಮ್ಮ ಕಾರ್ಯಸೂಚಿಯನ್ನು ಯಶಸ್ವಿಯಾಗಿ ಸಾಧಿಸುವ ಮೊದಲು, ಜಮ್ಮು ಮತ್ತು ಕಾಶ್ಮೀರ ಹಾಗೂ ರಾಮ ಜನ್ಮಭೂಮಿ ಸಮಸ್ಯೆ ಕುರಿತು ದಶಕಗಳ ಕಾಲ ಕೆಲಸ ಮಾಡಿದರು.

ಆದ್ದರಿಂದ, ಅವರು ಪಕ್ಷದಲ್ಲಿರುವ ಒಬಿಸಿಗಳು, ದಲಿತರು ಮತ್ತು ಆದಿವಾಸಿಗಳಿಗೆ ಸಂವಿಧಾನ ಹಾಗೂ ಮೀಸಲು ರಕ್ಷಣೆಗಿಂತ ಕರ್ಮಭೂಮಿ (ಕ್ರಿಯಾ ಭೂಮಿ) ಮತ್ತು ಜನ್ಮಭೂಮಿ (ಮಾತೃಭೂಮಿ) ರಕ್ಷಣೆ ಹೆಚ್ಚು ಮುಖ್ಯವೆಂದು ಮನವರಿಕೆ ಮಾಡುವ ಕಾರ್ಯಸೂಚಿಯನ್ನು ಮುಂದುವರಿಸುತ್ತಾರೆ ಎಂದು ಭಾವಿಸುವುದು ಸುರಕ್ಷಿತ.

ಸಂವಿಧಾನವೇ ಸಂರಕ್ಷಕ: ಹಿಂದುತ್ವವು ಆಳವಾಗಿ ಬೇರೂರಿರುವ ಸಿದ್ಧಾಂತ. ಅದು ಜಾತಿಯ ಸ್ತರಗಳ ಮೂಲಕ ಸಮಾಜದೊಳಗೆ ನುಸುಳಿತು. ಐತಿಹಾಸಿಕವಾಗಿ, ಶೂದ್ರರು / ಒಬಿಸಿಗಳ ಸಂಖ್ಯೆಯ ಹೊರತಾಗಿಯೂ, ತಮ್ಮನ್ನು ನಾಲ್ಕನೇ ವರ್ಣ (ಜಾತಿ) ಎಂದು ಪರಿಗಣಿಸುವುದನ್ನು ಅವರು ವಿರೋಧಿಸಲಿಲ್ಲ ಮತ್ತು ಅಧೀನ ಜೀವನವನ್ನು ನಡೆಸಿದರು. ಆದರೆ, ಸಂವಿಧಾನ ಅವರಿಗೆ ಅಧಿಕಾರ ನೀಡಿತು ಮತ್ತು ಅವರನ್ನು ಜಾಗೃತರಾಗುವಂತೆ ಹಾಗೂ ಪ್ರಶ್ನಿಸುವಂತೆ ಮಾಡಿತು.

ಇದರ ಹೊರತಾಗಿಯೂ, ಶೂದ್ರರು-ಒಬಿಸಿಗಳಲ್ಲಿ ಆರ್‌ಎಸ್‌ಎಸ್-ಬಿಜೆಪಿ ಮತ್ತು ಹಿಂದೂ ಧಾರ್ಮಿಕ ವ್ಯವಸ್ಥೆಯನ್ನು ನಿಜವಾಗಿ ಮುನ್ನಡೆಸು ತ್ತಿರುವ ದ್ವಿಜ (ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರು)ರೊಂದಿಗೆ ಸಾಮಾಜಿಕ-ಅಧ್ಯಾತ್ಮಿಕ ಸಮಾನತೆಯನ್ನು ಸಾಧಿಸಬೇಕೆಂಬ ಕೆಚ್ಚು ಇಲ್ಲ. ಒಬಿಸಿಗಳು- ದಲಿತರು ಈಗಿನ ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಅಗತ್ಯವಾದ ಅಧ್ಯಾತ್ಮಿಕ ಪ್ರಜಾಪ್ರಭುತ್ವದ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡಿಲ್ಲ.

ಅಧ್ಯಾತ್ಮಿಕ ಸರ್ವಾಧಿಕಾರವು ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ಕಿತ್ತುಹಾಕುವ ದಿಕ್ಕಿನಲ್ಲಿ ಕೆಲಸ ಮಾಡಲಿದೆ; ಇಂದಲ್ಲದಿದ್ದರೆ ನಾಳೆ. ಅಂಬೇಡ್ಕರ್‌ ಅವರು ಆ ಅಪಾಯದ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದು ಇದೇ ಕಾರಣಕ್ಕೆ.

Tags:    

Similar News