ಬಿಹಾರ: ಕುಸಿದ 12ನೇ ಸೇತುವೆ; ಸುಪ್ರೀಂ ಕದ ತಟ್ಟಿದ ವಕೀಲ

ಸರನ್ ಮತ್ತು ಸಿವಾನ್ ಜಿಲ್ಲೆಗಳಲ್ಲಿನ ಹಳ್ಳಿಗಳನ್ನು ಸಂಪರ್ಕಿಸುವ, ಗಂಡಕಿ ನದಿಗೆ 15 ವರ್ಷಗಳ ಹಿಂದೆ ಕಟ್ಟಿದ್ದ ಸೇತುವೆ ಗುರುವಾರ ಕುಸಿದಿದೆ. ಕಳೆದ 15 ದಿನಗಳಲ್ಲಿ 12 ಸೇತುವೆಗಳು ನೆಲ ಕಚ್ಚಿವೆ.

Update: 2024-07-04 11:28 GMT

ಬಿಹಾರದಲ್ಲಿ ಸೇತುವೆ ಕುಸಿತ ಸರಣಿಯೋಪಾದಿಯಲ್ಲಿ ಮುಂದುವರಿದಿದೆ. ಕಳೆದ 15 ದಿನಗಳಲ್ಲಿ 12 ನೇ ಸೇತುವೆ ಸರನ್ ಜಿಲ್ಲೆಯಲ್ಲಿ ಗುರುವಾರ (ಜುಲೈ 4) ಕುಸಿಯಿತು. ಇದು 48 ಗಂಟೆಗಿಂತ ಕಡಿಮೆ ಅವಧಿಯಲ್ಲಿ ಸರನ್‌ನಲ್ಲಿ ಕುಸಿದ ಮೂರನೇ ಸೇತುವೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮನ್ ಸಮೀರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸರನ್ ಮತ್ತು ಸಿವಾನ್ ಜಿಲ್ಲೆಗಳನ್ನು ಸಂಪರ್ಕಿಸುವ ಗಂಡಕಿ ನದಿ ಮೇಲಿನ 15 ವರ್ಷಗಳಷ್ಟು ಹಳೆಯ ಸೇತುವೆ ಕುಸಿತ ಇತ್ತೀಚಿನದು. ಘಟನೆಯಲ್ಲಿ ಪ್ರಾಣಹಾನಿ ಸಂಭವಿಸಿಲ್ಲ. ಇತ್ತೀಚೆಗೆ ನದಿಯಲ್ಲಿ ಹೂಳು ತೆಗೆದಿರುವುದು ಕುಸಿತಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಆರು ಜಿಲ್ಲೆಗಳು ಬಾಧಿತ: ಬುಧವಾರ (ಜುಲೈ 3) ಸರನ್‌ನ ಗಂಡಕಿ ನದಿಗೆ ಕಟ್ಟಿದ್ದ ಎರಡು ಸೇತುವೆಗಳು ಕೆಲವೇ ಗಂಟೆಗಳ ಅಂತರದಲ್ಲಿ ಕುಸಿದವು. ಇವು ಕೇವಲ ಒಂದು ಕಿಲೋಮೀಟರ್ ಅಂತರದಲ್ಲಿವೆ. ಒಂದನ್ನು 2004ರಲ್ಲಿ ಮತ್ತು ಇನ್ನೊಂದನ್ನು ಬ್ರಿಟಿಷರ ಕಾಲದಲ್ಲಿ ಕಟ್ಟಲಾಗಿತ್ತು. 

ಕಳೆದ ಎರಡು ವಾರದಲ್ಲಿ ಸಿವಾನ್, ಮಧುಬನಿ, ಅರಾರಿಯಾ, ಪೂರ್ವ ಚಂಪಾರಣ್ ಮತ್ತು ಕಿಶನ್‌ಗಂಜ್ ಜಿಲ್ಲೆಗಳಲ್ಲಿ ಒಂಬತ್ತು ಸೇತುವೆಗಳು ಕುಸಿದಿವೆ. ಭಾರೀ ಮಳೆ ಘಟನೆಗೆ ಕಾರಣವಾಗಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ.

ಸುಪ್ರೀಂನಲ್ಲಿ ಪಿಐಎಲ್:‌ ಲೆಕ್ಕಪರಿಶೋಧನೆ ಮತ್ತು ಸಂಶೋಧನೆಗಳ ಆಧಾರದ ಮೇಲೆ ಬಲಪಡಿಸಬಹುದಾದ ಅಥವಾ ಕೆಡವಬಹುದಾದ ಸೇತುವೆಗಳನ್ನು ಗುರುತಿಸಲು ತಜ್ಞರ ಸಮಿತಿ ನೇಮಿಸಲು ಬಿಹಾರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. 

ವಕೀಲ ಬ್ರಜೇಶ್ ಸಿಂಗ್ ಅವರು ಸಲ್ಲಿಸಿದ ಪಿಐಎಲ್‌, ಪ್ರವಾಹ ಮತ್ತು ಅಧಿಕ ಮಳೆಯಿಂದ ಸೇತುವೆಗಳ ಸುರಕ್ಷತೆ ಮತ್ತು ದೀರ್ಘಾಯುಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಉನ್ನತ ಮಟ್ಟದ ತಜ್ಞರ ಸಮಿತಿ ಸ್ಥಾಪಿಸುವುದರ ಜೊತೆಗೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ನಿಯತಾಂಕಗಳ ಪ್ರಕಾರ ಸೇತುವೆಗಳ ಮೇಲ್ವಿಚಾರಣೆಯನ್ನು ಅವರು ಕೋರಿದ್ದಾರೆ. 

ಸಿಎಂ ನಡೆ: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದ ಎಲ್ಲಾ ಹಳೆಯ ಸೇತುವೆಗಳ ಸಮೀಕ್ಷೆ ನಡೆಸುವಂತೆ ಮತ್ತು ತಕ್ಷಣ ದುರಸ್ತಿ ಅಗತ್ಯವಿರುವ ಸೇತುವೆಗಳನ್ನು ಗುರುತಿಸಲು, ರಸ್ತೆ ನಿರ್ಮಾಣ ಮತ್ತು ಗ್ರಾಮೀಣ ಕಾಮಗಾರಿ ಇಲಾಖೆಗಳಿಗೆ ಸೂಚಿಸಿದ್ದಾರೆ. 

ಜೂನ್ 27 ಮತ್ತು ಜೂನ್ 30 ರ ನಡುವೆ ಕಿಶನ್‌ಗಂಜ್‌ನಲ್ಲಿ ಎರಡು ಸೇತುವೆಗಳು ಒಂದರ ನಂತರ ಇನ್ನೊಂದು ಕುಸಿದವು. ಪೂರ್ವ ಚಂಪಾರಣ್‌ನ ಘೋಡಸಹನ್‌ನಲ್ಲಿ 1.5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಿದ್ದ ಸೇತುವೆ ಕುಸಿಯಿತು. ಜುಲೈ 3 ರಂದು ಸಿವಾನ್ ಜಿಲ್ಲೆಯ ಮಹಾರಾಜ್‌ಗಂಜ್ ಬ್ಲಾಕ್‌ನಲ್ಲಿ ಮೂರು ಸೇತುವೆಗಳು ಮುರಿದುಬಿದ್ದವು. ಜುಲೈ 2 ರಂದು ಸಿವಾನ್‌ನ ಗಂಡಕಿ ಮತ್ತು ಅದೇ ಜಿಲ್ಲೆಯ ತೆಗ್ರಾ ಬ್ಲಾಕ್‌ನಲ್ಲಿ ಎರಡು ಸೇತುವೆಗಳು ಕುಸಿದವು. ಜೂನ್ 18 ರಂದು ಅರಾರಿಯಾದಲ್ಲಿ ಬಕ್ರಾ ನದಿಗೆ ನಿರ್ಮಿಸುತ್ತಿದ್ದ ಮತ್ತೊಂದು ಸೇತುವೆ ಕುಸಿಯಿತು.

ತೇಜಸ್ವಿ ಯಾದವ್ ವ್ಯಂಗ್ಯ: ಆರ್‌ ಜೆಡಿ ನಾಯಕ ತೇಜಸ್ವಿ ಯಾದವ್ ಗುರುವಾರ ಎಕ್ಸ್‌ನಲ್ಲಿ ವ್ಯಂಗ್ಯಭರಿತ ಟ್ವೀಟ್‌ ಮಾಡಿದ್ದಾರೆ: ʻಜುಲೈ 4ರಂದು ಬಿಹಾ ರದಲ್ಲಿ ಮತ್ತೊಂದು ಸೇತುವೆ ಕುಸಿದಿದೆ. ಜುಲೈ 3ರಂದು ಐದು ಸೇತುವೆಗಳು ಕುಸಿದವು. ಜೂನ್ 18ರಿಂದ ಇಲ್ಲಿಯವರೆಗೆ 12 ಸೇತುವೆಗಳು ಕುಸಿದಿವೆ. ಈ ಸಾಧನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂಪೂರ್ಣ ಮೌನ ತಳೆದಿದ್ದು, ಮೂಕರಾಗಿ ದ್ದಾರೆ. ಈ ಶುಭದಾಯಕ ಭ್ರಷ್ಟಾಚಾರವನ್ನು ಜಂಗಲ್ ರಾಜ್ ಆಗಿ ಪರಿವರ್ತಿಸುವುದು ಹೇಗೆ ಎಂದು ಅವರು ಯೋಚಿಸುತ್ತಿದ್ದಾರೆʼ .

Tags:    

Similar News