Atishi Marlena : ದೆಹಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕಿಯಾಗಿ ಆತಿಶಿ ಆಯ್ಕೆ
Atishi Marlena : 43 ವರ್ಷದ ಆತಿಶಿ ಅವರು ಹಿಂದಿನ ಆಡಳಿತದ ಅವಧಿಯಲ್ಲಿ ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕರು ಜೈಲಿನಲ್ಲಿ ಇದ್ದಾಗ ರಾಜಕೀಯವಾಗಿ ಮುನ್ನೆಲೆಗೆ ಬಂದಿದ್ದರು.;
ದೆಹಲಿ ವಿಧಾನಸಭೆಯ ಪ್ರತಿ ಪಕ್ಷದ ನಾಯಕಿಯಾಗಿ ಮಾಜಿ ಸಿಎಂ ಅತಿಶಿ (Atishi Marlena) ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಆಮ್ ಆದ್ಮಿ ಪಕ್ಷದ (AAP) ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಇದರೊಂದಿಗೆ ದಿಲ್ಲಿ ವಿಧಾನಸಭೆಯ ಮೊದಲ ಮಹಿಳಾ ವಿಪಕ್ಷ ನಾಯಕಿ ಎಂಬ ಹೆಗ್ಗಳಿಕೆಗೆ ಅತಿಶಿ ಪಾತ್ರರಾಗಿದ್ದಾರೆ. ಇಂದು ನಡೆದ ಸಭೆಯಲ್ಲಿ ಆಪ್ ಸಂಚಾಲಕ ಸೇರಿದಂತೆ ಪಕ್ಷದ 22 ಶಾಸಕರು ಭಾಗವಹಿಸಿದ್ದರು.
"ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಯೋಜಕ ಅರವಿಂದ್ ಕೇಜ್ರಿವಾಲ್ ಮತ್ತು ಪಕ್ಷದ ಶಾಸಕರಿಗೆ ನಾನು ಧನ್ಯವಾದಗಳು ತಿಳಿಸುತ್ತೇನೆ. ಶಕ್ತಿಯುತ ಪ್ರತಿಪಕ್ಷವು ಜನರ ಧ್ವನಿಯಾಗಿ ಕಾರ್ಯನಿರ್ವಹಿಸಲಿದೆ. ಬಿಜೆಪಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುವಂತೆ ಮಾಡಲು ಆಮ್ಆದ್ಮಿ ಪಕ್ಷ ಪ್ರಯತ್ನಿಸಲಿದೆ ," ಎಂದು ಅತಿಶಿ ತಮ್ಮ ಆಯ್ಕೆ ಬಳಿಕ ಪ್ರತಿಕ್ರಿಯಿಸಿದ್ದಾರೆ.
ದೆಹಲಿ ವಿಧಾನಸಭೆಯ ಮೊದಲ ಅಧಿವೇಶನ ಫೆಬ್ರವರಿ 24 ರಂದು ಆರಂಭವಾಗಲಿದೆ. ಮೂರು ದಿನಗಳ ಈ ಅಧಿವೇಶನದಲ್ಲಿ, ಹಿಂದಿನ ಆಪ್ ಸರ್ಕಾರದ ಕಾರ್ಯಕ್ಷಮತೆಯ ವಿರುದ್ಧ ಬಾಕಿ ಇರುವ ಸಿಎಜಿ ವರದಿಗಳನ್ನು ಸದನದಲ್ಲಿ ಮಂಡಿಸಲಾಗುವುದು ಎಂದು ಆಡಳಿತಾರೂಢ ಬಿಜೆಪಿ ಸರ್ಕಾರ ಹೇಳಿದೆ.
43 ವರ್ಷದ ಆತಿಶಿ ಅವರು ಹಿಂದಿನ ಆಡಳಿತದ ಅವಧಿಯಲ್ಲಿ ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕರು ಜೈಲಿನಲ್ಲಿ ಇದ್ದಾಗ ರಾಜಕೀಯವಾಗಿ ಪ್ರಾಬಲ್ಯ ಪಡೆದಿದ್ದರು. ವದೆಹಲಿ ಮದ್ಯ ನೀತಿ ಪ್ರಕರಣ ಸಂಬಂಧ ಜೈಲಿಗೆ ಹೋಗಿದ್ದ ಕೇಜ್ರಿವಾಲ್ ಬಿಡುಗಡೆಗೊಂಡು ಬಂದು ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಆತಿಶಿ ಆ ಹುದ್ದೆಗೆ ಏರಿದ್ದರು.
ಇತ್ತೀಚೆಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ, ಅತಿಶಿ ಕಲ್ಕಾಜಿ ಕ್ಷೇತ್ರದಿಂದ ಬಿಜೆಪಿಯ ಮಾಜಿ ಸಂಸದ ರಮೇಶ್ ಬಿಧುರಿ ವಿರುದ್ಧ ಭರ್ಜರಿ ಪೈಪೋಟಿ ನೀಡಿ ಗೆಲುವು ಸಾಧಿಸಿದ್ದರು.
ಸೋಮವಾರದಿಂದ ಅಧಿವೇಶನ
ಫೆಬ್ರವರಿ 24ರಂದು ದೆಹಲಿ ವಿಧಾನಸಭಾ ಅಧಿವೇಶನ ಆರಂಭವಾಗಲಿದೆ. ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಮತ್ತು ಹೊಸ ಸ್ಪೀಕರ್ ನೇಮಕಗೊಳ್ಳಲಿದ್ದಾರೆ. ವಿಜೇಂದರ್ ಗುಪ್ತಾ ಅವರನ್ನು ಸ್ಪೀಕರ್ ಆಗಿ ನಾಮನಿರ್ದೇಶನ ಮಾಡಲಾಗಿದ್ದು, ಈ ಮಧ್ಯೆ ಅರವಿಂದರ್ ಸಿಂಗ್ ಲವ್ಲಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಗಿದೆ.
ಅಧಿವೇಶನದ ಎರಡನೇ ದಿನ (ಫೆಬ್ರವರಿ 25), ಕಂಟ್ರೋಲರ್ ಆಡಿಟರ್ ಜನರಲ್ (ಸಿಎಜಿ) ವರದಿಯನ್ನು ಮಂಡಿಸಲಾಗುವುದು. ಬಿಜೆಪಿ ಶಾಸಕ ಹರೀಶ್ ಖುರಾನಾ ಅವರು ವರದಿಯನ್ನು ಮಂಡಿಸುವುದರೊಂದಿಗೆ, ಅಬಕಾರಿ ನೀತಿಯಲ್ಲಿನ ಭ್ರಷ್ಟಾಚಾರ ಮತ್ತು ಅಕ್ರಮಗಳ ಮಾಹಿತಿ ಬಹಿರಂಗಗೊಳ್ಳಲಿದೆ ಎಂದು ಬಿಜೆಪಿ ಹೇಳಿದೆ.
ಈ ತಿಂಗಳ ಆರಂಭದಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 70 ವಿಧಾನಸಭಾ ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದರೆ, ಆಪ್ 22 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ ಈ ಬಾರಿಯೂ ಶೂನ್ಯ ಸುತ್ತಿದೆ.