ಅರವಿಂದ್ ಕೇಜ್ರಿವಾಲ್ ಅಹಂಕಾರಕ್ಕೆ ಆಮ್ ಆದ್ಮಿ ಪಾರ್ಟಿಯ ಅವನತಿ
ಅರವಿಂದ್ ಕೇಜ್ರಿವಾಲ್ ಅವರ ಏಕಮುಖಿ ಧೋರಣೆ ಮತ್ತು ತಮ್ಮ ನಿಷ್ಠಾವಂತರನ್ನು ಮಾತ್ರ ಹತ್ತಿರಕ್ಕೆ ಸೇರಿಸಿಕೊಂಡು ಕೋಟೆ ಕಟ್ಟುವ ಕ್ರಮವು ಪಕ್ಷಕ್ಕೆ ಹಿನ್ನಡೆ ಉಂಟು ಮಾಡಿದವು. ಹಿರಿಯ ನಾಯಕರು ಒಬ್ಬೊಬ್ಬರೇ ಅವರಿಂದ ದೂರವಾಗುವುದಕ್ಕೆ ಕಾರಣವಾಯಿತು.;
ಅಹಂಕಾರ ಮತ್ತು ತಾವು ಹೇಳಿದ್ದೇ ಸರಿ ಎಂಬ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಧೋರಣೆಯಿಂದಾಗಿ ಅವರ ಪಕ್ಷವು ಬಹುಮತ ನಷ್ಟಮಾಡಿಕೊಂಡಿತು. ಅಷ್ಟೂ ಅಲ್ಲದೆ 2013ರಿಂದ ಮೂರು ಬಾರಿ ಗೆದ್ದಿದ್ದ ತನ್ನ ವಿಧಾನಸಭಾ ಸ್ಥಾನವನ್ನೂ ಮಾಜಿ ಸಿಎಂ ಕಳೆದುಕೊಂಡಿದ್ದು ವಿಪರ್ಯಾಸ.
ಆಪ್ (AAP) ಪಕ್ಷವು ತನ್ನ ಮೊದಲ ಐದು ವರ್ಷದ ಆಡಳಿತಾವಧಿ ಮುಗಿಸಿ 2020ರಲ್ಲಿ ಯಾವುದೇ ತಪ್ಪು ಮಾಡದೇ ಅಧಿಕಾರಕ್ಕೆ ಬಂತು. ಈ ವೇಳೆ ಪಕ್ಷದ ಆತ್ಮರತಿ ಆರಂಭಗೊಂಡಿತು.
ಕೇಜ್ರಿವಾಲ್ ಅವರು ತಮ್ಮ ಮೊದಲ ಎರಡು ಅಧಿಕಾರವಧಿಯಲ್ಲಿ ಕೈಗೊಂಡಿದ್ದ ಕೆಲಸಗಳು ಗೆಲುವುಗಳನ್ನು ಸಲೀಸಾಗಿ ಮಾಡುತ್ತವೆ ಎಂದು ತಪ್ಪಾಗಿ ಊಹಿಸಿದರು. 2013-14ರ 49 ದಿನಗಳ ಅಲ್ಪಾವಧಿ ಆಡಳಿತ ಮತ್ತು 2015ರ ಎರಡನೇ ಅವಧಿಯ ಯಶಸ್ವಿ ಆಡಳಿತದ ಬಳಿಕ ಹೊಸ ಪ್ರಯತ್ನಗಳ ಅಗತ್ಯವೇ ಇಲ್ಲ ಎಂದು ಭಾವಿಸಿದರು.
ಉಚಿತ ಕೊಡುಗೆಗಳು ಸಾಕಾಗಲಿಲ್ಲ
ನಿರ್ದಿಷ್ಟ ಮಿತಿಯೊಳಗಿನ ಉಚಿತ ವಿದ್ಯುತ್ ಮತ್ತು ನೀರು, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿನ ಪ್ರಗತಿ ಆಪ್ ಬೆಂಬಲಿಸಲು ಕಾರಣವಾದವು. . ಈ ಯೋಜನೆಗಳನ್ನೇ ನಿರಂತರವಾಗಿ ಪ್ರಚಾರ ಮಾಡಿದರೆ ಸಾಕು ಬೇರೆ ಯಾವ ಅಭಿವೃದ್ಧಿಯೂ ಅಗತ್ಯವಿಲ್ಲ ಎಂದು ಆಪ್ ನಾಯಕರು ನಂಬಿದ್ದು ತಪ್ಪು ಎಣಿಕೆಯಾಗಿತ್ತು.
ದೆಹಲಿಯ ಮತದಾರರು ಭಿನ್ನವಾಗಿ ಯೋಚಿಸಿದರು. ಮುನ್ಸಿಪಲ್ ಕೌನ್ಸಿಲ್ ಆಫ್ ಡೆಲ್ಲಿಯನ್ನು ಡಿಸೆಂಬರ್ 2022ರಲ್ಲಿ ಗೆದ್ದ ನಂತರ, ಜನರು ಇನ್ನಷ್ಟು ಅಭಿವೃದ್ಧಿ ಮತ್ತು ಸುಧಾರಣೆಗಳು ಬೇಕು ಎಂದು ಭಾವಿಸಿದರು.
ಕೇಜ್ರಿವಾಲ್ ತಮ್ಮ ಕೆಲಸವನ್ನು ಮೌಲ್ಯಮಾಪನ ಮಾಡದಿರುವ ದೊಡ್ಡ ತಪ್ಪು ಮಾಡಿದರು. ಅವರ ಕೊನೇ ಹಂತದ ವೈಖರಿ ಹೇಗಿತ್ತು ಎಂಬುದರ ಆಧಾರದಲ್ಲಿ ಜನರು ಮತ ಚಲಾಯಿಸುತ್ತಾರೆ ಎಂಬ ಸತ್ಯವನ್ನು ಅವರು ಅರಿತುಕೊಳ್ಳಲಿಲ್ಲ.
ಮೋದಿಯಂತೆಯೇ ಕೇಜ್ರಿವಾಲ್, ಆದರೆ...
ನರೇಂದ್ರ ಮೋದಿಯವರ ಧೋರಣೆಯಂತೆಯೇ ಕೇಜ್ರಿವಾಲ್ ತಮ್ಮ ಹಳೆಯ ಯೋಜನೆಗಳ ಕುರಿತು ಪದೇ ಪದೇ ಮಾತನಾಡುತ್ತಿದ್ದರು. ಆದರೆ, ಮೋದಿ ಹಳೆಯ ಯೋಜನೆಗಳನ್ನು ಹೇಳುವ ಜತೆಗೆ ನಿರಂತರವಾಗಿ ಹೊಸ ಯೋಜನೆಗಳನ್ನು ಪ್ರಕಟಿಸುತ್ತಿದ್ದರು. ಅವುಗಳು ಜಾರಿಯಾಗುತ್ತವೆಯೇ ಎಂಬುದು ಬೇರೆ ಮಾತು.
ಮೂಲ ತತ್ವಗಳಿಗೆ ಪೆಟ್ಟು
ಆಮ್ ಆದ್ಮಿ ಪಾರ್ಟಿ ಹುಟ್ಟಿರುವುದೇ ‘ಭ್ರಷ್ಟಾಚಾರದ ವಿರುದ್ಧ ಭಾರತ’ ಚಳುವಳಿಯಿಂದ. ಈ ಚಳುವಳಿ ಸಂಪೂರ್ಣ ಪ್ರಜಾಪ್ರಭುತ್ವ ಮತ್ತು ಸಂಘಟಿತ ನಿರ್ಧಾರ ತೆಗೆದುಕೊಳ್ಳುವ ವಿಧಾನಗಳನ್ನು ಅನುಸರಿಸಿತ್ತು. 2013ರ ಡಿಸೆಂಬರ್‌ನಲ್ಲಿ ಕೇಜ್ರಿವಾಲ್ ಪಕ್ಷದ ಮುಖ್ಯಸ್ಥರಾಗುತ್ತಿದ್ದಂತೆ, ನಿರ್ಧಾರ ಕೈಗೊಳ್ಳುವ ಎಲ್ಲ ಸಮಿತಿಗಳನ್ನು ದುರ್ಬಲಗೊಳಿಸಿ ತಾವೇ ತೀರ್ಮಾನಗಳನ್ನು ಕೈಗೊಳ್ಳಲು ಶುರುಮಾಡಿದರು.
ಪಕ್ಷದ ಹಿರಿಯ ನಾಯಕರಿಗೂ ಟಿವಿ ಮಾಧ್ಯಮಗಳ ಮೂಲಕ ಕೇಜ್ರಿವಾಲ್ ಅವರ ನಿರ್ಧಾರಗಳನ್ನು ತಿಳಿದುಕೊಳ್ಳುವಂತಹ ಸ್ಥಿತಿ ಬಂತು. ಪಕ್ಷ ಭಿನ್ನಮತಿಯರ ತಾಣವಾಯಿತು. ಹಲವರು ಪಕ್ಷ ತೊರೆದರು.
ನಾಯಕತ್ವದ ಪರಿತ್ಯಾಗವೆಂಬ ಪ್ರಹಸನ
ಕೇಜ್ರಿವಾಲ್ ಅವರ ಪರಿತ್ಯಾಗದ ಪ್ರಹಸನ 2013ರಿಂದಲೇ ಪ್ರಾರಂಭಗೊಂಡಿತ್ತು. ಚುನಾವಣೆಯ ಕೆಲವು ದಿನಗಳ ತನಕವೂ ಅವರು ಮುಂದುವರಿಸಿದ್ದರು. ಕೆಲವು ನಾಯಕರು ಹೊಸ ಅವಕಾಶಕ್ಕಾಗಿ ಆಪ್ ತೊರೆದರು. ಈ ವೇಳೆ ಕೇಜ್ರಿವಾಲ್ ಅವರ ನೇಮಕ ವಿಧಾನದ ದೌರ್ಬಲ್ಯ ಬಹಿರಂಗವಾಯಿತು.
ಆಯ್ಕೆ ಸಮಿತಿಗಳ ಅಭಾವ
ಕೇಜ್ರಿವಾಲ್ ತಮ್ಮ ಸುತ್ತ ನಿಷ್ಠಾವಂತರನ್ನು ಮಾತ್ರ ಸೇರಿಸಿಕೊಂಡರು. ಉಳಿದವರು ಆದೇಶ ಪಾಲನೆಗೆ ಸೀಮಿತರಾದರು. ಇದರಿಂದ ಪಕ್ಷದ ಆಂತರಿಕ ಪ್ರಜಾಪ್ರಭುತ್ವ ಕುಸಿಯಿತು. 2020ರ ಭರ್ಜರಿ ಗೆಲುವು ತಮ್ಮ ನಿರ್ಧಾರಕ್ಕೆ ಸಿಕ್ಕ ಮಾನ್ಯತೆ ಎಂದು ಅವರು ತಪ್ಪಾಗಿ ಭಾವಿಸಿದರು.
ಅಕ್ರಮಗಳು ಮತ್ತು ಹಿನ್ನಡೆ
ಆಮ್ ಆದ್ಮಿ ಪಾರ್ಟಿ ಆರಂಭದಲ್ಲಿ ಪ್ರತಿಪಾದಿಸಿದ್ದ ಪರ್ಯಾಯ ರಾಜಕೀಯದ ತತ್ವಗಳು ಮರೆಯಾಗತೊಡಗಿದವು. ಅವು ಸಾಮಾನ್ಯ ರಾಜಕೀಯ ಪಕ್ಷಗಳಂತೆಯೇ ಬದಲಾಯಿತು. ದೆಹಲಿಯ ಅಬಕಾರಿ ನೀತಿ ಪಕ್ಷದ ಮೌಲ್ಯಕ್ಕೆ ಮಸಿ ಬಳಿಯಿತು. ಆಂದೋಲನ ಮಾಡುತ್ತಿದ್ದ ಆಪ್ ಹಾಗೂ ರಾಜಕೀಯ ಪಕ್ಷವಾಗಿ ಆಪ್ ನಡುವಿನ ವ್ಯತ್ಯಾಸ ಜನರಿಗೆ ಅರಿವಾಯಿತು. ದೆಹಲಿಯ ಸಿಎಂ ಅಧಿಕಾರವನ್ನು ಲೆಫ್ಟಿನೆಂಟ್ ಗವರ್ನರ್ ಪ್ರತಿನಿತ್ಯ ಮೊಟಕುಗೊಳಿಸುತ್ತಿದ್ದಾರೆ ಎಂಬ ವಾದವನ್ನು ಜನ ನಂಬುವಂತೆ ಮಾಡಲು ಸಾಧ್ಯವಾಗಲಿಲ್ಲ.
ಕಾನೂನು ಮತ್ತು ಆಡಳಿತ ದೋಷಗಳು
ಕೇಜ್ರಿವಾಲ್ ಅವರು ಸರ್ಕಾರದ ನ್ಯಾಷನಲ್ ಕ್ಯಾಪಿಟಲ್ ಟೆರಿಟರಿ ಆಕ್ಟ್, 1992ರ ವ್ಯಾಪ್ತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಆಡಳಿತ ನಡೆಸಲು ಯತ್ನಿಸಿದರು. ಮೊದಲ 49 ದಿನಗಳ ಆಡಳಿತಾವಧಿಯಿಂದಲೇ ಅವರು ಸಂಪೂರ್ಣ ರಾಜ್ಯದ ಮುಖ್ಯಮಂತ್ರಿಗಳಷ್ಟು ಅಧಿಕಾರ ಕೇಂದ್ರಾಡಳಿತ ಪ್ರದೇಶ ದೆಹಲಿಯ ಮುಖ್ಯಮಂತ್ರಿಗೂ ಇದೆ ಎಂಬಂತೆ ನಡೆದುಕೊಂಡರು.
ಅಧಿಕಾರಿಗಳೊಂದಿಗೆ ಸಂಘರ್ಷ
ಕೇಜ್ರಿವಾಲ್ ದೆಹಲಿಯ ಲೆಫ್ಟಿನೆಂಟ್ ಗವರ್ನರ್‌ಗಳ ಜತೆ ನಿರಂತರ ಸಂಘರ್ಷ ನಡೆಸಿದರು. ಹಿಂದೆ ಯಾರೂ ಮಾಡದ ರೀತಿಯಲ್ಲಿಅವರು ಜಗಳವಾಡಿದರು. ಅವರ ನಾಯಕತ್ವ ಶೈಲಿ ಸ್ಪಷ್ಟವಾಗಿ ವೈಫಲ್ಯಕ್ಕೆ ತಿರುಗಿತು.
ಅನವಶ್ಯಕ ರಾಜಕೀಯ ಕ್ರಮಗಳು
2014ರಲ್ಲಿ ಜನಲೋಕಪಾಲ್ ಬಿಲ್ ಪಾಸಾಗಲಿಲ್ಲ ಎಂಬ ಕಾರಣ ನೀಡಿ ತಕ್ಷಣ ರಾಜೀನಾಮೆ ನೀಡಿದರು. ಇದರಿಂದ ಅವರ ಬೆಂಬಲಿಗರು ನಿರಾಶೆಗೊಂಡರು. ವಾರಣಾಸಿಯಲ್ಲಿ ನರೇಂದ್ರ ಮೋದಿಯ ವಿರುದ್ಧ ಸ್ಪರ್ಧಿಸಿದರು. 2024ರ ಅಧಿಕಾರ ತ್ಯಜಿಸುವ ತೀರ್ಮಾನವೂ ಇದೇ ರೀತಿಯ ಆಶ್ಚರ್ಯ ಮೂಡಿಸಿತ್ತು. ಇದರಿಂದ ಪಕ್ಷದ ಮತ ಶೇ. 10ರಷ್ಟು ಕುಸಿಯಿತು.
ಪುನರುಜ್ಜೀವನ ಸಾಧ್ಯವಿದೆಯಾ?
ಆಮ್ ಆದ್ಮಿ ಪಾರ್ಟಿ ಪುನಃ ಚೇತರಿಸಿಕೊಳ್ಳಬಹುದೇ? ಇದು ಕೇಜ್ರಿವಾಲ್ ಅವರ ಮುಂದಿನ ಆಲೋಚನಾ ಕ್ರಮಗಳನ್ನು ಅವಲಂಬಿಸಿದೆ. ಮೊದಲು ಎರಡು ಪ್ರಮುಖ ಅಡೆತಡೆಗಳು ಇವೆ – ಕಾನೂನು ಸಮಸ್ಯೆಗಳು ಮತ್ತು ಬಿಜೆಪಿ ಅವರ ಪಕ್ಷ ನಾಶ ಮಾಡಲು ಮಾಡಬಹುದಾದ ಪ್ರಯತ್ನಗಳು.
ಬದಲಾವಣೆ ಅಗತ್ಯ
ಕೇಜ್ರಿವಾಲ್ ತಮ್ಮ ಕಾರ್ಯವಿಧಾನವನ್ನು ಬದಲಾಯಿಸಬೇಕು. ಅವರು ತಮ್ಮ ಪಕ್ಷದೊಳಗೆ ಮತ್ತು ಪ್ರತಿಪಕ್ಷಗಳೊಂದಿಗೆ ಸಹಕಾರ ನೀಡುವ ಮನೋಭಾವ ಬೆಳೆಸಬೇಕು. ಈ ಸೋಲು ಅವರಿಗೇ ಸೀಮಿತವಲ್ಲ. ಈಗ ಅವರ ಬಳಿ ಬಲವಿಲ್ಲ. ಬಿಜೆಪಿ ಅವರ ರಾಜಕೀಯ ಪ್ರಭಾವ ಕಡಿಮೆ ಮಾಡಲು ಎಲ್ಲ ಪ್ರಯತ್ನಗಳನ್ನೂ ನಡೆಸಲಿದೆ. ಆದ್ದರಿಂದ, ಅವರು ಅತೀ ಕಡಿಮೆ ಸಮಯದಲ್ಲಿಯೇ ತಮ್ಮ ದೋಷಗಳನ್ನು ತಿದ್ದಿಕೊಳ್ಳಬೇಕು.