ಅಮರನಾಥ ಯಾತ್ರೆಗೆ ಶುಭಾರಂಭ

52 ದಿನಗಳ ಯಾತ್ರೆ ಆಗಸ್ಟ್ 19 ರಂದು ಮುಕ್ತಾಯಗೊಳ್ಳಲಿದೆ. ಕಳೆದ ವರ್ಷ 4.5 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಗುಹಾ ದೇಗುಲಕ್ಕೆ ಪೂಜೆ ಸಲ್ಲಿಸಿದ್ದರು.;

Update: 2024-06-29 07:34 GMT

ಶ್ರೀನಗರ/ಜಮ್ಮು: ಅಮರನಾಥ ಯಾತ್ರೆ ಶನಿವಾರ ಪ್ರಾರಂಭವಾಗಿದ್ದು, ಯಾತ್ರಿಕರ ಮೊದಲ ತಂಡ ಬಾಲ್ಟಾಲ್ ಮತ್ತು ನುನ್ವಾನ್‌ನಲ್ಲಿರುವ ಅವಳಿ ಬೇಸ್ ಕ್ಯಾಂಪ್‌ಗಳಿಂದ ದಕ್ಷಿಣ ಕಾಶ್ಮೀರ ಹಿಮಾಲಯದ 3,880 ಮೀಟರ್ ಎತ್ತರದ ಗುಹಾ ದೇಗುಲಕ್ಕೆ ಪ್ರಯಾಣವನ್ನು ಪ್ರಾರಂಭಿಸಿದೆ ಎಂದು ಅಧಿಕಾರಿಗಳು ಹೇಳಿದರು. 

ಯಾತ್ರೆಯು 2 ಮಾರ್ಗಗಳಾದ, ಅನಂತನಾಗ್‌ನ ಸಾಂಪ್ರದಾಯಿಕ 48 ಕಿಲೋಮೀಟರ್ ನುನ್ವಾನ್-ಪಹಲ್ಗಾಮ್ ಮಾರ್ಗ ಮತ್ತು ಗಂದರ್‌ ಬಾಲ್‌ನಲ್ಲಿ 14 ಕಿಲೋಮೀಟರ್ ಕಡಿಮೆ ದೂರದ ಆದರೆ ಕಡಿದಾದ ಬಾಲ್ಟಾಲ್ ಮಾರ್ಗದ ಮೂಲಕ ಆರಂಭಗೊಂಡಿತು. ಆಯಾ ಜಿಲ್ಲಾಧಿ ಕಾರಿ ಮತ್ತು ಹಿರಿಯ ಪೊಲೀಸ್ ಹಾಗೂ ನಾಗರಿಕ ಆಡಳಿತದ ಅಧಿಕಾರಿಗಳು ಧ್ವಜಾರೋಹಣದ ಮೂಲಕ ಯಾತ್ರೆಗೆ ಆರಂಭ ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಶುಕ್ರವಾರ ಜಮ್ಮುವಿನ ಭಗವತಿ ನಗರದ ಯಾತ್ರಿ ನಿವಾಸ ಬೇಸ್ ಕ್ಯಾಂಪ್‌ನಿಂದ 4,603 ಯಾತ್ರಿಕರ ಮೊದಲ ಬ್ಯಾಚ್‌ಗೆ ಧ್ವಜಾರೋಹಣ ಮಾಡಿದರು. ಮಧ್ಯಾಹ್ನ ಕಾಶ್ಮೀರ ಕಣಿವೆ ತಲುಪಿದ ಯಾತ್ರಾರ್ಥಿಗಳಿಗೆ ಆಡಳಿತ ವರ್ಗ ಮತ್ತು ಸ್ಥಳೀಯರು ಅದ್ದೂರಿ ಸ್ವಾಗತ ನೀಡಿದರು. ಯಾತ್ರಿಗಳು ಗುಹಾ ದೇವಾಲಯದಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಶಿವನ ಲಿಂಗಕ್ಕೆ ನಮನ ಸಲ್ಲಿಸುತ್ತಾರೆ.

ಯಾತ್ರೆ ಸುಗಮವಾಗಿ ನಡೆಯಲು ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಪೊಲೀಸ್, ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್, ಇಂಡೋ ಟಿಬೆಟಿಯನ್ ಬಾರ್ಡರ್ ಪೋಲೀಸ್ ಮತ್ತು ಇತರ ಅರೆಸೇನಾ ಪಡೆಗಳ ಸಾವಿರಾರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವೈಮಾನಿಕ ಕಣ್ಗಾವಲ ನ್ನು ಇರಿಸಲಾಗುತ್ತದೆ.

52 ದಿನಗಳ ಯಾತ್ರೆ ಆಗಸ್ಟ್ 19 ರಂದು ಮುಕ್ತಾಯಗೊಳ್ಳಲಿದೆ.

1,069 ಭಕ್ತರ ಮೊದಲ ತಂಡ ಬಾಲ್ಟಾಲ್‌ಗೆ ಮುಂಜಾನೆ 4 ಗಂಟೆಗೆ ಹಾಗೂ 812 ಯಾತ್ರಾರ್ಥಿಗಳ ತಂಡ 30 ನಿಮಿಷಗಳ ನಂತರ ಪಹಲ್ಗಾಮ್‌ಗೆ ಪ್ರಯಾಣ ಬೆಳೆಸಿತು. 1,881 ಯಾತ್ರಾರ್ಥಿಗಳ ಎರಡನೇ ತಂಡ ಶನಿವಾರ ಬಿಗಿ ಭದ್ರತೆಯ ನಡುವೆ ಭಗವತಿ ನಗರ ಮೂಲ ಶಿಬಿರದಿಂದ ನಿರ್ಗಮಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 427 ಮಹಿಳೆಯರು ಮತ್ತು 294 ಸಾಧುಗಳಿದ್ದ ಗುಂಪು ಪ್ರತ್ಯೇಕವಾಗಿ 200 ವಾಹನಗಳಲ್ಲಿ ಭದ್ರತಾ ಪಡೆಗಳ ಬೆಂಗಾವಲಿನಲ್ಲಿ ಮುನ್ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ 4.5 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಗುಹಾ ದೇಗುಲಕ್ಕೆ ಪೂಜೆ ಸಲ್ಲಿಸಿದ್ದರು.

Tags:    

Similar News