ಗುಂಪು ಹತ್ಯೆ: ಆಲಿಗಢದಲ್ಲಿ ಉದ್ವಿಗ್ನ ಪರಿಸ್ಥಿತಿ, ಭದ್ರತೆ ಹೆಚ್ಚಳ

Update: 2024-06-20 09:04 GMT

ಆಲಿಗಢದಲ್ಲಿ ವ್ಯಕ್ತಿಯೊಬ್ಬನ ಗುಂಪು ಹತ್ಯೆ ನಂತರ ಉದ್ವಿಗ್ನ ಪರಿಸ್ಥಿತಿ ಕಂಡುಬಂದ ಮಾರನೇ ದಿನ, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಮುಖ್ಯ ಧರ್ಮಗುರು ಶಾಂತಿಯನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. 

ಮಾಮು ಭಂಜಾ ಪ್ರದೇಶದಲ್ಲಿ ಫರೀದ್ ಎಂಬುವರ ಮೇಲೆ ಗುಂಪೊಂದು ಮಂಗಳವಾರ ರಾತ್ರಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಪೊಲೀಸ ರು ಆರು ಜನರನ್ನು ಬಂಧಿಸಿದ್ದಾರೆ. ಘಟನೆಯಿಂದ ಪ್ರದೇಶದಲ್ಲಿ ಕೋಮು ಉದ್ವಿಗ್ನತೆ ಉಂಟಾಗಿತ್ತು. 

ಪರಿಸ್ಥಿತಿ ಶಾಂತಿಯುತವಾಗಿದೆ ಮತ್ತು ನಿಯಂತ್ರಣದಲ್ಲಿದೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ಅಮಿತ್ ಕುಮಾರ್ ಗುರುವಾರ ಹೇಳಿದ್ದಾರೆ. ʻನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಹಲ್ಲೆ ನಡೆದ ಪ್ರದೇಶದಲ್ಲಿ ಸಾಕಷ್ಟು ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ,ʼ ಎಂದು ಅವರು ಹೇಳಿದರು.

ಧಾರ್ಮಿಕ  ಮುಖ್ಯಸ್ಥ ಮುಫ್ತಿ ಖಾಲಿದ್ ಹಮೀದ್ ಅವರು ನಗರದಲ್ಲಿ ಶಾಂತಿ ಮತ್ತು ಹಿಂದೂ-ಮುಸ್ಲಿಂ ಸೌಹಾರ್ದಕ್ಕಾಗಿ ಕರೆ ನೀಡಿದರು. ʻಪೊಲೀಸರು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕು,ʼ ಎಂದರು.

ʻಮಂಗಳವಾರ ರಾತ್ರಿ ಕೆಲಸದಿಂದ ಮನೆಗೆ ಮರಳುತ್ತಿದ್ದಾಗ, ಕಳ್ಳತನದ ಶಂಕೆಯ ಮೇರೆಗೆ ಮಾಮು ಭಂಜಾ ಪ್ರದೇಶದ ಕೆಲವು ನಿವಾಸಿಗಳು ಫರೀದ್‌ ಅವರನ್ನು ಗುಂಪುಗೂಡಿಸಿ ಥಳಿಸಿದ್ದಾರೆ ಎಂದು ಅವರ ಕುಟುಂಬದವರು ದೂರು ನೀಡಿದ್ದಾರೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಎಂ ಶೇಖರ್ ಪಾಠಕ್ ಬುಧವಾರ ತಿಳಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ತಲುಪುವ ಹೊತ್ತಿಗೆ ಫರೀದ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮಲ್ಖಾನ್ ಸಿಂಗ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಮೃತಪಟ್ಟರು ಎಂದು ಪಾಠಕ್ ಹೇಳಿದರು. 

ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಯಲ್ಲಿ ಜಮಾಯಿಸಿದ ಜನರು, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು. 

ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರು ಮಂದಿಯನ್ನು ಬಂಧಿಸಲಾಗಿದೆ. ಕೆಲವು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪಾಠಕ್ ಹೇಳಿದರು. 

ʻಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ,ʼ ಎಂದು ಎಸ್‌ಎಸ್‌ಪಿ ಸಂಜಯ್ ಸುಮನ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು. ಸಬ್ಜಿ ಮಂಡಿ ಮತ್ತು ಅಬ್ದುಲ್ ಕರೀಂ ಚೌಕ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ʻಸೂಕ್ಷ್ಮ ತಾಣಗಳುʼ ಎಂದು ಗುರುತಿಸಿದ ಕೆಲವು ಪ್ರದೇಶಗಳಲ್ಲಿ ಪೊಲೀಸ್ ಗಸ್ತು ತೀವ್ರಗೊಳಿಸಲಾಗಿದೆ.

ʻಅಮಾಯಕರನ್ನು ಕಪೋಲಕಲ್ಪಿತ ಸಾಕ್ಷ್ಯದ ಆಧಾರದಲ್ಲಿ ಬಂಧಿಸಬಾರದು,ʼ ಎಂದು ಒತ್ತಾಯಿಸಿ ಶಾಸಕ ಮುಖ್ತಾರ್‌ ವಾರ್ಷ್ಣೆ ನೇತೃತ್ವದಲ್ಲಿ ಬಿಜೆಪಿ ಮುಖಂಡರು ರೈಲ್ವೆ ರಸ್ತೆ ಬಳಿ ಧರಣಿ ನಡೆಸಿದರು. ಕಾನೂನು ಪ್ರಕ್ರಿಯೆ ಅನುಸರಿಸಿ ಬಂಧಿಸಲಾಗುವುದು ಎಂದು ಎಸ್ಪಿ ಪಾಠಕ್ ಭರವಸೆ ನೀಡಿದರು.

Tags:    

Similar News