ಏರ್ ಟ್ಯಾಕ್ಸಿಗಳು ಶೀಘ್ರದಲ್ಲೇ ವಾಸ್ತವ: ಪ್ರಧಾನಿ
ನಾಗರಿಕ ವಿಮಾನಯಾನ ಕ್ಷೇತ್ರವು ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಮತ್ತು ಅನೇಕ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಆಕಾಶವು ಎಲ್ಲರಿಗೂ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪ್ರಧಾನಿ ಹೇಳಿದರು.;
ಪ್ರಾದೇಶಿಕ ವೈಮಾನಿಕ ಸಂಪರ್ಕ ಯೋಜನೆಯಿಂದಾಗಿ ವಿಮಾನಯಾನವು ಹೆಚ್ಚು ಜನರನ್ನು ತಲುಪುವಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದರು.
ದೆಹಲಿಯಲ್ಲಿ ನಾಗರಿಕ ವಿಮಾನಯಾನ ಕುರಿತ ಎರಡನೇ ಏಷ್ಯಾ ಪೆಸಿಫಿಕ್ ಸಚಿವರ ಸಮ್ಮೇಳನದಲ್ಲಿ ಪ್ರಧಾನಿ ಮಾತನಾಡಿದರು.
ಭಾರತೀಯ ನಾಗರಿಕ ವಿಮಾನಯಾನ ಕ್ಷೇತ್ರದ ಬೆಳವಣಿಗೆಯನ್ನು ಎತ್ತಿ ಹಿಡಿದ ಅವರು, ನಾಗರಿಕ ವಿಮಾನಯಾನ ಕ್ಷೇತ್ರವು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ ಮತ್ತು ಅನೇಕ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಆಕಾಶವು ಎಲ್ಲರಿಗೂ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಜನರ ವಿಮಾನಯಾನದ ಕನಸು ನನಸಾಗಬೇಕು ಎಂದು ಮೋದಿ ಹೇಳಿದರು.
ಅಂತಾರಾಷ್ಟ್ರೀಯ ಬೌದ್ಧ ಸರ್ಕೀಟ್: ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಬೌದ್ಧ ಸರ್ಕೀಟಿನ ಕಲ್ಪನೆಯನ್ನು ಅನಾವರಣಗೊಳಿಸಿದರು.
ಕೆಳ ಮಧ್ಯಮ ವರ್ಗದ ಜನರಿಗೆ ವಿಮಾನ ಸಂಚಾರಕ್ಕೆ ಸಹಾಯ ಮಾಡಿರುವ ಪ್ರಾದೇಶಿಕ ವಾಯು ಸಂಪರ್ಕ ಯೋಜನೆ ಉಡಾನ್ ಅಡಿಯಲ್ಲಿ, 14 ದಶಲಕ್ಷ ಜನ ಪ್ರಯಾಣಿಸಿದ್ದಾರೆ ಎಂದು ಮೋದಿ ಹೇಳಿದರು.
ಬೆಳೆಯುತ್ತಿರುವ ಮಧ್ಯಮ ವರ್ಗ ಮತ್ತು ಅವರ ಬೇಡಿಕೆ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಪ್ರೇರಕ ಶಕ್ತಿಗಳಾಗಿವೆ. ಉಡಾನ್ ವಿಮಾನ ಪ್ರಯಾಣವು ಎಲ್ಲರಿಗೂ ಲಭ್ಯವಾಗುವಂತೆ ಮಾಡಿದೆ. ಏರ್ ಟ್ಯಾಕ್ಸಿಗಳು ಶೀಘ್ರದಲ್ಲೇ ವಾಸ್ತವ ಆಗಲಿವೆ ಎಂದು ಹೇಳಿದರು.
ಬುಧವಾರ ಆರಂಭವಾದ ಎರಡು ದಿನಗಳ ಸಮ್ಮೇಳನದಲ್ಲಿ ಏಷ್ಯಾ ಪೆಸಿಫಿಕ್ ವಲಯದ ಸಾರಿಗೆ ಮತ್ತು ವಿಮಾನಯಾನ ಸಚಿವರು, ನಿಯಂತ್ರಣ ಸಂಸ್ಥೆಗಳು ಮತ್ತು ಉದ್ಯಮದ ತಜ್ಞರು ಸೇರಿದಂತೆ 29 ದೇಶಗಳ 300 ಪ್ರತಿನಿಧಿಗಳು ಭಾಗವಹಿಸಿದ್ದರು.