ಏರ್ ಇಂಡಿಯಾ ವಿಮಾನ ದುರಂತ: ಪ್ರಾಥಮಿಕ ವರದಿ 'ಪಕ್ಷಪಾತದ್ದು' ಎಂದು ಪೈಲಟ್‌ಗಳ ಸಂಘಟನೆ ಆಕ್ಷೇಪ

ತನಿಖೆಗಳು ಗೌಪ್ಯವಾಗಿರಬೇಕಾದುದರಿಂದ, ಅನಧಿಕೃತ ಸೋರಿಕೆಗಳು ತನಿಖೆಯ ವಿಶ್ವಾಸಾರ್ಹತೆ ಮತ್ತು ಸಾರ್ವಜನಿಕ ನಂಬಿಕೆಗೆ ಧಕ್ಕೆ ತರುತ್ತವೆ ಎಂದು ಸಂಘಟನೆ ಹೇಳಿದೆ.;

Update: 2025-07-12 12:14 GMT

ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ವಿಮಾನ ದುರಂತ ತನಿಖಾ ಬ್ಯೂರೋ (AAIB) ಬಿಡುಗಡೆ ಮಾಡಿದ ಪ್ರಾಥಮಿಕ ವರದಿಯು ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿಮಾನ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಇಂಧನ ಸ್ವಿಚ್‌ಗಳನ್ನು 'ಕಟ್‌ಆಫ್' ಮಾಡಲಾಗಿತ್ತು ಎಂದು ವರದಿ ಹೇಳುತ್ತಿದ್ದಂತೆ, ಏರ್‌ಲೈನ್ ಪೈಲಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ALPA-I) ಶನಿವಾರ (ಜುಲೈ 12) ಆಕ್ಷೇಪ ವ್ಯಕ್ತಪಡಿಸಿ, ಇದು ಪಕ್ಷಪಾತದ ವರದಿ ಎಂದು ಆರೋಪಿಸಿದೆ.

"ತನಿಖೆಯ ಸ್ವರೂಪ ಮತ್ತು ದಿಕ್ಕು ಪೈಲಟ್‌ಗಳ ತಪ್ಪು ಎಂಬುದನ್ನು ಸೂಚಿಸುತ್ತಿದೆ. ಹೀಗಾಗಿ, ಸತ್ಯಾಂಶ ಆಧಾರಿತ ತನಿಖೆ ನಡೆಯಬೇಕು" ಎಂದು ಆಲ್ಪಾ ಐ ತನ್ನ ಹೇಳಿಕೆಯಲ್ಲಿ ಒತ್ತಾಯಿಸಿದೆ. ಅಲ್ಲದೆ, ಈ ವರದಿಯು ಯಾವುದೇ ಅಧಿಕೃತ ಸಹಿ ಅಥವಾ ಗುರುತಿಲ್ಲದೆ ಮಾಧ್ಯಮಗಳಿಗೆ ಸೋರಿಕೆಯಾಗಿದೆ ಎಂದು ಆಲ್ಪಾ ಐ ಆಕ್ಷೇಪಿಸಿದೆ. ತನಿಖೆಗಳು ಗೌಪ್ಯವಾಗಿರಬೇಕಾದುದರಿಂದ, ಇಂತಹ ಅನಧಿಕೃತ ಸೋರಿಕೆಗಳು ತನಿಖೆಯ ವಿಶ್ವಾಸಾರ್ಹತೆ ಮತ್ತು ಸಾರ್ವಜನಿಕ ನಂಬಿಕೆಗೆ ಧಕ್ಕೆ ತರುತ್ತವೆ ಎಂದು ಸಂಘಟನೆ ಹೇಳಿದೆ.

ಪಾರದರ್ಶಕತೆಗೆ ಪೈಲಟ್‌ಗಳ ಒತ್ತಾಯ

ಆಲ್ಪಾ ಐಅಧ್ಯಕ್ಷ ಕ್ಯಾಪ್ಟನ್ ಸ್ಯಾಮ್ ಥಾಮಸ್ ಸಹಿ ಮಾಡಿದ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ತನಿಖೆಯ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು, ವೀಕ್ಷಕರಾಗಿಯಾದರೂ ಭಾಗವಹಿಸಲು ಅವಕಾಶ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಪ್ರಾಥಮಿಕ ವರದಿ ಅಂತಿಮವಲ್ಲ ಎಂದ ಕೇಂದ್ರ ಸಚಿವರು

ಕೇಂದ್ರ ನಾಗರಿಕ ವಿಮಾನಯಾನ ಮತ್ತು ಸಹಕಾರ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೊಲ್ ಅವರು ಅಹಮದಾಬಾದ್ ವಿಮಾನ ದುರಂತದ ಬಗ್ಗೆ ಎಎಐಬಿ ನೀಡಿರುವ ವರದಿಯು ಕೇವಲ ಪ್ರಾಥಮಿಕವಾಗಿದ್ದು, ಇದರ ಆಧಾರದ ಮೇಲೆ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲಾಗದು ಎಂದು ಸ್ಪಷ್ಟಪಡಿಸಿದ್ದಾರೆ. ಪೈಲಟ್‌ಗಳ ನಡುವಿನ ಸಂಭಾಷಣೆ ಬಹಳ ಸಂಕ್ಷಿಪ್ತವಾಗಿದ್ದರಿಂದ, ಅದರ ಆಧಾರದ ಮೇಲೆ ತೀರ್ಮಾನ ಕೈಗೊಳ್ಳುವುದು ಸೂಕ್ತವಲ್ಲ ಎಂದು ಅವರು ತಿಳಿಸಿದರು.

"ಇದು ಪ್ರಾಥಮಿಕ ವರದಿಯಾಗಿದೆ. ಇದರ ಆಧಾರದ ಮೇಲೆ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಲಾಗದು. ಹಿಂದೆ, ಇಂತಹ ದುರಂತಗಳ ಸಂದರ್ಭದಲ್ಲಿ ಬ್ಲಾಕ್ ಬಾಕ್ಸ್ ಅನ್ನು ವಿದೇಶಕ್ಕೆ ಕಳುಹಿಸಬೇಕಿತ್ತು. ಈಗ ನಾವು ತನಿಖೆಯನ್ನು ಶೀಘ್ರವಾಗಿ ಪೂರ್ಣಗೊಳಿಸಬಹುದು. ಎಎಐಬಿ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಇದರಲ್ಲಿ ಸಚಿವಾಲಯದಿಂದ ಯಾವುದೇ ಹಸ್ತಕ್ಷೇಪವಿಲ್ಲ" ಎಂದು ಅವರು ಹೇಳಿದರು. "ಪೈಲಟ್‌ಗಳ ಸಂಭಾಷಣೆಯ ಆಧಾರದ ಮೇಲೆ ಯಾವುದೇ ತೀರ್ಮಾನ ಕೈಗೊಳ್ಳಲಾಗದು, ಏಕೆಂದರೆ ಅದು ತುಂಬಾ ಸಂಕ್ಷಿಪ್ತವಾಗಿದೆ. ಮುಂದಿನ ತನಿಖೆ ಅಗತ್ಯವಿದೆ. ಆ ವರದಿಗಾಗಿ ನಾವು ಕಾಯಬೇಕು," ಎಂದು ಸಚಿವರು ಪುನರುಚ್ಚರಿಸಿದರು.

Tags:    

Similar News