Ahmedabad Plane Crash: ಅಹಮದಾಬಾದ್ ವಿಮಾನ ದುರಂತ: ಇದುವರೆಗಿನ ಮಾಹಿತಿ ಇಲ್ಲಿದೆ
ಏರ್ ಇಂಡಿಯಾ ವಿಮಾನವು 242 ಪ್ರಯಾಣಿಕರನ್ನು ಹೊತ್ತುಕೊಂಡು ಗುರುವಾರ ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಇರುವ ಮೇಘಾನಿನಗರ ಪ್ರದೇಶದಲ್ಲಿ ಕುಸಿದಿದೆ ಎಂಬ ವರದಿಗಳು ಬರುತ್ತಿವೆ.;
ಗುರುವಾರ ಮಧ್ಯಾಹ್ನ ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಮೇಘನಿನಗರ್ ಪ್ರದೇಶದಲ್ಲಿ ಏರ್ ಇಂಡಿಯಾದ ಪ್ರಯಾಣಿಕ ವಿಮಾನ ಪತನಗೊಂಡು ಹಲವರು ಮೃತಪಟ್ಟಿದ್ದಾರೆ. ಲಂಡನ್ಗೆ ತೆರಳುತ್ತಿದ್ದ ಈ ವಿಮಾನವು ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೊಳಗಾಗಿದೆ. ಈ ಭೀಕರ ಘಟನೆಯ ಕುರಿತ ವಿವರಗಳು ಇಲ್ಲಿವೆ
ಇದುವರೆಗಿನ ಮಾಹಿತಿ
- ಮಾರ್ಗ: ಅಹಮದಾಬಾದ್ನಿಂದ ಲಂಡನ್ಗೆ
- ಫ್ಲೈಟ್: ಏರ್ ಇಂಡಿಯಾ ಫ್ಲೈಟ್ AI171
- ವಿಮಾನದ ಪ್ರಕಾರ: ಬೋಯಿಂಗ್ 787 ಡ್ರೀಮ್ಲೈನರ್
- ನೋಂದಣಿ: VT-ANB
- ಪ್ರಯಾಣಿಕರ ಸಂಖ್ಯೆ: 242 (230 ಪ್ರಯಾಣಿಕರು, 12 ಸಿಬ್ಬಂದಿ)
- ಕಮಾಂಡರ್: ಕ್ಯಾಪ್ಟನ್ ಸುಮೀತ್ ಸಭರ್ವಾಲ್ (ಲೈನ್ ಟ್ರೈನಿಂಗ್ ಕ್ಯಾಪ್ಟನ್)
- ವೈಮಾನಿಕ ಹಾರಾಟ ಅನುಭವ: 8,200 ಗಂಟೆಗಳು
- ಫಸ್ಟ್ ಆಫೀಸರ್: ಕ್ಲೈವ್ ಕುಂದರ್
- ವೈಮಾನಿಕ ಅನುಭವ: 1,100 ಗಂಟೆಗಳು
- ದುರಂತದ ಸ್ಥಳ: ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಮೇಘನಿನಗರ್ ಪ್ರದೇಶ
- ನಿರ್ಗಮನ ಸಮಯ: 13:39 IST (08:09 UTC)
- ರನ್ವೇ: ಅಹಮದಾಬಾದ್ ವಿಮಾನ ನಿಲ್ದಾಣದ ರನ್ವೇ 23
- ಘಟನೆ: ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನವು ವಿಮಾನ ನಿಲ್ದಾಣದ ಹೊರಕ್ಕೆ ಬಿತ್ತು. ಏರ್ ಟ್ರಾಫಿಕ್ ಕಂಟ್ರೋಲ್ಗೆ (ATC) ಮೇಡೇ (MAYDAY) ತುರ್ತು ಕರೆ ಮಾಡಲಾಗಿತ್ತು; ಆನಂತರ ಸಂಪರ್ಕ ಕಡಿತಗೊಂಡಿತ್ತು. ದುರಂತದ ಸ್ಥಳದಲ್ಲಿ ದಟ್ಟವಾದ ಕಪ್ಪು ಹೊಗೆ ಕಂಡುಬಂದಿದೆ.
- ಪ್ರಸ್ತುತ ಸ್ಥಿತಿ: ತುರ್ತು ಸೇವೆಗಳು ರಕ್ಷಣಾ ಮತ್ತು ಸ್ಥಳಾಂತರ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ವಾಹನಗಳು ಕಾರ್ಯನಿರ್ವಹಿಸುತ್ತಿವೆ.
- ಸಾವು-ನೋವು: ಖಚಿತವಾಗಿಲ್ಲ, ಆದರೂ 100 ಹೆಚ್ಚು ಮಂದಿ ಕೆಲವರು ಗಾಯಗೊಂಡಿರುವ ಬಗ್ಗೆ ವರದಿಗಳಿವೆ.
- ತನಿಖೆ: ವಿಮಾನ ನಿಲ್ದಾಣ ಅಧಿಕಾರಿಗಳು ಆಂತರಿಕ ತನಿಖೆಯನ್ನು ಆರಂಭಿಸಿದ್ದಾರೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಈ ಘಟನೆಯನ್ನು ದೃಢೀಕರಿಸಿದೆ. ದುರಂತದ ಕಾರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆ ನಡೆಯಲಿದೆ.
ಈ ದುರಂತವು ಬೋಯಿಂಗ್ 787 ಡ್ರೀಮ್ಲೈನರ್ನ ಮೊದಲ ದುರಂತವಾಗಿದೆ ಎಂದು ಏವಿಯೇಷನ್ ಸೇಫ್ಟಿ ನೆಟ್ವರ್ಕ್ ಡೇಟಾಬೇಸ್ ತಿಳಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ಮುಖ್ಯಮಂತ್ರಿ, ಗೃಹ ಸಚಿವ ಮತ್ತು ಅಹಮದಾಬಾದ್ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಸಂಪೂರ್ಣ ಸಹಕಾರವನ್ನು ಒದಗಿಸುವ ಭರವಸೆಯನ್ನು ನೀಡಿದ್ದಾರೆ.
ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎಲ್ಲಾ ವಿಮಾನ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರಿಗೆ ತಮ್ಮ ವಿಮಾನ ಸಂಸ್ಥೆಗಳೊಂದಿಗೆ ಇತ್ತೀಚಿನ ನವೀಕರಣಗಳಿಗಾಗಿ ಸಂಪರ್ಕದಲ್ಲಿರಲು ಸಲಹೆ ನೀಡಲಾಗಿದೆ.
ಏರ್ ಇಂಡಿಯಾ ತನ್ನ ಎಕ್ಸ್ ಹ್ಯಾಂಡಲ್ನಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ: "ಫ್ಲೈಟ್ AI171, ಅಹಮದಾಬಾದ್-ಲಂಡನ್ ಗ್ಯಾಟ್ವಿಕ್, ಇಂದು, ಜೂನ್ 12, 2025 ರಂದು ಒಂದು ಘಟನೆಗೆ ಸಿಲುಕಿದೆ. ಈ ಕ್ಷಣದಲ್ಲಿ, ನಾವು ವಿವರಗಳನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ ಮತ್ತು ಶೀಘ್ರದಲ್ಲೇ http://airindia.com ಮತ್ತು ನಮ್ಮ ಎಕ್ಸ್ ಹ್ಯಾಂಡಲ್ನಲ್ಲಿ ಮತ್ತಷ್ಟು ಅಪ್ಡೇಟ್ಗಳನ್ನು ಹಂಚಿಕೊಳ್ಳುತ್ತೇವೆ."