ರಾಜ್ಯಸಭೆ: ಉಪಾಧ್ಯಕ್ಷರ ಪದಚ್ಯುತಿಗೆ ನಿರ್ಣಯ ಮಂಡನೆಗೆ ಪ್ರತಿಪಕ್ಷಗಳ ಚಿಂತನೆ

ಧನಕರ್‌ ಅವರ ಪದಚ್ಯುತಿ ನಿರ್ಣಯವನ್ನು ಯಾವಾಗ ಮತ್ತು ಹೇಗೆ ಮಂಡಿಸಬೇಕು ಎಂಬ ಬಗೆಗಿನ ಚರ್ಚೆ ಗಳನ್ನು ಮುಂದುವರಿಸುವ ನಿರೀಕ್ಷೆಯಿದೆ ಎಂದು ಪ್ರತಿಪಕ್ಷದ ಮೂಲಗಳು ತಿಳಿಸಿವೆ.

Update: 2024-08-10 09:58 GMT

ಸಂಸತ್ತಿನ ಮುಂಗಾರು ಅಧಿವೇಶನ ಶುಕ್ರವಾರ ಮುಕ್ತಾಯಗೊಂಡಿದ್ದು, ರಾಜ್ಯಸಭಾಧ್ಯಕ್ಷ ಜಗದೀಪ್ ಧನಖರ್ ಮತ್ತು ಇಂಡಿಯ ಒಕ್ಕೂಟದ ಸಂಸದರ ನಡುವಿನ ವಿಶ್ವಾಸದ ಕೊರತೆ ಇದೆ ಎಂಬ ಖಚಿತ ಚಿಹ್ನೆಗಳು ಕಂಡುಬಂದಿವೆ. ರಾಜ್ಯಸಭೆಯನ್ನು ಮುಂದೂಡುವ ಸ್ವಲ್ಪ ಸಮಯದ ಮೊದಲು ಧನಕರ್‌ ಹಾಗೂ ಪ್ರತಿಪಕ್ಷಗಳ ನಡುವೆ ಬಿರುಸಿನ ವಾದವಿವಾದ ನಡೆದಿದ್ದು, ಪ್ರತಿಪಕ್ಷಗಳು ಅವರನ್ನು ಉಪಾಧ್ಯಕ್ಷ ಸ್ಥಾನದಿಂದ ತೆಗೆದುಹಾಕುವ ನಿರ್ಣಯವನ್ನು ಮಂಡಿಸಲು ಮುಂದಾಗಿವೆ. 

ಆಗಸ್ಟ್‌ 12ಕ್ಕೆ ಮುಗಿಯಬೇಕಿದ್ದ ಮುಂಗಾರು ಅಧಿವೇಶನ ಮುಂಚಿತವಾಗಿ ಮುಕ್ತಾಯಗೊಂಡಿರುವುದರಿಂದ, ಅಂತಹ ಪ್ರಸ್ತಾಪವನ್ನು ಯಾವಾಗ ಮಂಡಿಸಲಾಗುವುದು ಎಂಬ ಕುರಿತು ಇಂಡಿಯ ಒಕ್ಕೂಟದ ಸದಸ್ಯರಲ್ಲಿ ಸ್ಪಷ್ಟತೆ ಇಲ್ಲ. ಆದರೆ, ಧನಕರ್‌ ಅವರು ಸದನದ ಅಧ್ಯಕ್ಷ ರಾಗಿ ಇರುವವರೆಗೆ ರಾಜ್ಯಸಭೆಯಲ್ಲಿ ನಮ್ಮ ಧ್ವನಿ ಕೇಳಲು ಅವಕಾಶವಿಲ್ಲ ಎಂಬುದು ವಿರೋಧ ಪಕ್ಷದ ಒಟ್ಟಾರೆ ಅಭಿಪ್ರಾಯವಾಗಿದೆ.

ಚರ್ಚೆ ಮುಂದುವರಿಕೆ ನಿರೀಕ್ಷೆ: ಧನಕರ್‌ ಪದಚ್ಯುತಿ ನಿರ್ಣಯವನ್ನು ಯಾವಾಗ ಮತ್ತು ಹೇಗೆ ಮಂಡಿಸಬೇಕು ಎಂಬ ಬಗೆಗಿನ ಚರ್ಚೆ ಗಳನ್ನು ಮುಂದುವರಿಸುವ ನಿರೀಕ್ಷೆಯಿದೆ ಎಂದು ಪ್ರತಿಪಕ್ಷದ ಮೂಲಗಳು ತಿಳಿಸಿವೆ.

ಸಂವಿಧಾನದ ಪ್ರಕಾರ, ಉಪಾಧ್ಯಕ್ಷರ ಪದಚ್ಯುತಿ ಪ್ರಕ್ರಿಯೆಯು ರಾಷ್ಟ್ರಪತಿ ವಿರುದ್ಧ ದೋಷಾರೋಪದಷ್ಟು ತೊಡಕಿನ ಅಥವಾ ಬೆದರಿಸುವಂಥ ಪ್ರಕ್ರಿಯೆಯಲ್ಲ. ಸಂವಿಧಾನದ 67 (ಬಿ) ವಿಧಿ ಪ್ರಕಾರ, ʼ ರಾಜ್ಯಗಳ ಪರಿಷತ್ತಿನ ಎಲ್ಲಾ ಸದಸ್ಯರು ಬಹುಮತದಿಂದ ಅಂಗೀಕರಿಸಲ್ಪಟ್ಟ ಮತ್ತು ಸಂಸತ್ತಿನ ಒಪ್ಪಿಗೆ ಮೂಲಕ ಉಪರಾಷ್ಟ್ರಪತಿಯನ್ನು ಅವರ ಕಚೇರಿಯಿಂದ ತೆಗೆದುಹಾಕಬಹುದು. ಆದರೆ, ನಿರ್ಣಯವನ್ನು ಮಂಡಿಸುವ ಮುನ್ನ ಅವರಿಗೆ ಕನಿಷ್ಠ 14 ದಿನಗಳ ಸೂಚನೆ ನೀಡಬೇಕು,ʼ.

ಅಂತಹ ನಿರ್ಣಯವನ್ನು ಮಂಡಿಸುವ ಮೊದಲು ಹದಿನೈದು ದಿನಗಳ ನೋಟಿಸ್ ನೀಡಬೇಕಾಗುತ್ತದೆ. ಪ್ರತಿಪಕ್ಷಗಳು ಮೇಲ್ಮನೆಯಲ್ಲಿ ಬಹುಮತವನ್ನು ಒಟ್ಟುಗೂಡಿಸಿದರೆ ಮಾತ್ರ ನಿರ್ಣಯ ಅಂಗೀಕಾರವಾಗುತ್ತದೆ; ಎನ್ಡಿಎಯ 106 ಕ್ಕೆ ಪ್ರತಿಯಾಗಿ ಇಂಡಿಯ ಒಕ್ಕೂಟ 87 ಸದಸ್ಯ ಬಲ ಹೊಂದಿರುವುದರಿಂದ, ಈ ತಡೆಯನ್ನು ದಾಟಲು ಸಾಧ್ಯವಾಗುವುದಿಲ್ಲ ಎಂದು ಇಂಡಿಯ ಒಕ್ಕೂಟಕ್ಕೆ ಗೊತ್ತಿದೆ.

ಪ್ರಬಲ ಪ್ರತಿಭಟನೆಯ ರೂಪಕ: ಆದರೆ, ಇಂಡಿಯ ಒಕ್ಕೂಟದ ಹಿರಿಯ ಸಂಸದರು ಸೂಚಿಸಿದಂತೆ, ʻಸಭಾಪತಿ ಪದಚ್ಯುತಿಗೆ ನಿರ್ಣಯವನ್ನು ಮಂಡಿಸುವ ಮೂಲಕ, ಅದು ಅಂಗೀಕಾರವಾಗದಿದ್ದರೂ, ಅದು ಸದನದ ಕಲಾಪದಲ್ಲಿ ಅಧ್ಯಕ್ಷರ ಪಕ್ಷಪಾತ ನಡವಳಿಕೆ ವಿರುದ್ಧ ನಾವು ನೋಂದಾಯಿಸಬಹುದಾದ ಪ್ರಬಲ ಪ್ರತಿಭಟನೆಯ ರೂಪ ಆಗಿರಲಿದೆʼ.

ಇಂಡಿಯ ಒಕ್ಕೂಟದ ಬಹುತೇಕ ಎಲ್ಲಾ ರಾಜ್ಯಸಭೆ ಸದಸ್ಯರು ಮಂಡಿಸಿದಾಗ, ನಿರ್ಣಯಕ್ಕೆ ಸಹಿ ಹಾಕಲು ಸಮ್ಮತಿಸಿದ್ದಾರೆ ಎಂದು ಮೂಲಗಳು ದ ಫೆಡರಲ್‌ಗೆ ತಿಳಿಸಿವೆ. ಆಂಧ್ರದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ)ದ 11 ಮತ್ತು ಒಡಿಶಾ ಮಾಜಿ ಸಿಎಂ ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ (ಬಿಜೆಡಿ)ದ 8 ಸದಸ್ಯರ ಬೆಂಬಲ ಪಡೆಯಲು ಇಂಡಿಯ ಒಕ್ಕೂಟ ಪ್ರಯತ್ನಿಸಬಹುದು.

ಧನಖರ್ ಮತ್ತು ಇಂಡಿಯ ಒಕ್ಕೂಟದ ಸಂಸದರು ಆಗಾಗ ಕಟುವಾದ ಪದಗಳ ವಿನಿಮಯದಲ್ಲಿ ತೊಡಗುತ್ತಾರೆ. ಜೂನ್ 4 ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ನಂತರ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಬಲ ಹೆಚ್ಚಿರುವುದರಿಂದ, ಅವುಗಳ ಧೈರ್ಯ ಹೆಚ್ಚಿದೆ. ರಾಜ್ಯಸಭೆಯ ಕಲಾಪಗಳಲ್ಲಿ ಧನಖರ್ ಅವರು ಬಿಜೆಪಿ ಪರವಾಗಿ ಹೆಚ್ಚು ಒಲವು ತೋರಿದ್ದಾರೆ.

ʻಲೋಕಸಭೆಯ ಫಲಿತಾಂಶದಲ್ಲಿ ಪ್ರತಿಬಿಂಬಿತವಾಗಿರುವ ದೇಶದ ಮನಸ್ಥಿತಿಯನ್ನು ಧನಕರ್ ಗಮನದಲ್ಲಿ ಇಟ್ಟುಕೊಳ್ಳುತ್ತಾರೆ ಮತ್ತು ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ತಮ್ಮ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡುತ್ತಾರೆ ಎಂದು ಭಾವಿಸಿದ್ದೆವು. ದುರದೃಷ್ಟವಶಾತ್ ಅವರು ಪಕ್ಷಪಾತ ವರ್ತನೆ ಮುಂದುವರಿಸಿದರು. ಆಗಾಗ ತಾವು ಮತ್ತು ಜೆ.ಪಿ. ನಡ್ಡಾ ಸಭಾನಾಯಕರು ಎಂಬಂತೆ ವರ್ತಿಸುತ್ತಿದ್ದಾರೆ,ʼ ಎಂದು ಇಂಡಿಯ ಒಕ್ಕೂಟದ ನಾಯಕರೊಬ್ಬರು ದ ಫೆಡರಲ್‌ ಗೆ ಹೇಳಿದರು.

ಪರಿಸ್ಥಿತಿ ಹದಗೆಡುತ್ತಿದೆ: ಮುಂಗಾರು ಅಧಿವೇಶನ ಆರಂಭವಾದ ಬಳಿಕ ಧನಖರ್ ಮತ್ತು ಪ್ರತಿಪಕ್ಷಗಳ ನಡುವೆ ಹಲವು ವಿಷಯಗಳ ಬಗ್ಗೆ ಘರ್ಷಣೆ ನಡೆದಿದ್ದು, ಕಳೆದ ಕೆಲವು ದಿನಗಳಿಂದ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ.

ಧನಕರ್‌ ಅವರು ಗುರುವಾರ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರಿಯಾನ್ ಅವರ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸುವ ಬಗ್ಗೆ ವಿವರವಾದ ಚರ್ಚೆ ಬೇಡಿಕೆಯನ್ನು ನಿರಾಕರಿಸಿದರು. ಆನಂತರ ʻನೀವು ಎಷ್ಟು ಧೈರ್ಯದಿಂದ ಕೂಗುತ್ತೀರಿʼ ಎಂದು ಓಬ್ರಿಯಾನ್‌ ಅವರನ್ನು ಖಂಡಿಸಿ, ಥಟ್ಟನೆ ಸದನದಿಂದ ಹೊರನಡೆದರು.

ಶುಕ್ರವಾರ ಧನಖರ್ ಮತ್ತು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ನಡುವಿನ ಪ್ರಾರಂಭವಾದ ವಾದ, ತ್ವರಿತವಾಗಿ ಮೌಖಿಕ ಯುದ್ಧಕ್ಕೆ ಕಾರಣವಾಯಿತು. ಬಿಜೆಪಿ ಸಂಸದ ಘನಶ್ಯಾಮ್ ತಿವಾರಿ ಅವರು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕೆಲವು ದಿನಗಳ ಹಿಂದೆ ಸದನದಲ್ಲಿ ಮಾಡಿದ್ದ ಟೀಕೆಗಳನ್ನು ಕಡತದಿಂದ ತೆಗೆದುಹಾಕಬೇಕೆಂಬ ಕಾಂಗ್ರೆಸ್ ಬೇಡಿಕೆ ಕುರಿತು ತೀರ್ಪು ನೀಡುವಂತೆ ಧನಕರ್ ಅವರನ್ನು ಜೈರಾಮ್‌ ರಮೇಶ್‌ ಒತ್ತಾಯಿಸಿದರು.

ತಿವಾರಿ ಮತ್ತು ಖರ್ಗೆ ಅವರು ತಮ್ಮ ಚೇಂಬರ್‌ನಲ್ಲಿ ನಡೆದ ಸಭೆಯಲ್ಲಿ ಸಮಸ್ಯೆಯನ್ನು ಪರಿಹರಿಸಿಕೊಂಡಿದ್ದಾರೆ ಮತ್ತು ಬಿಜೆಪಿ ಸಂಸದರ ಸಂಸ್ಕೃತದ ಹೇಳಿಕೆಗಳು ಖರ್ಗೆ ಅವರ ʻಪ್ರಶಂಸೆʼ ಮಾಡಿವೆ . ಆದರೆ, ಅದನ್ನು ʻತಪ್ಪಾಗಿ ಅರ್ಥೈಸಲಾಗಿದೆʼ ಎಂದು ಧನಖರ್‌ ಹೇಳಿದರು. ರಮೇಶ್ ಮತ್ತು ರಾಜ್ಯಸಭೆಯ ಕಾಂಗ್ರೆಸ್ ಉಪನಾಯಕ ಪ್ರಮೋದ್ ತಿವಾರಿ ಅವರು ಧನಖರ್‌ ಅವರ ಹೇಳಿಕೆಗೆ ಅಸಮ್ಮತಿ ವ್ಯಕ್ತಪಡಿಸಿದರು. ಬಿಜೆಪಿ ಸಂಸದ ಸದನದಲ್ಲಿ ಸ್ಪಷ್ಟೀಕರಣ ನೀಡಬೇಕು ಮತ್ತು ಕ್ಷಮೆಯಾಚಿಸಬೇಕು; ಸಭಾಧ್ಯಕ್ಷರ ಕೊಠಡಿಯಲ್ಲಿ ಅಲ್ಲ ಎಂದು ಹೇಳಿ ದರು.ಬೇಡಿಕೆಯನ್ನು ಧನಖರ್ ತಿರಸ್ಕರಿಸುತ್ತಿದ್ದಂತೆ, ಪ್ರತಿಪಕ್ಷಗಳು ಪ್ರತಿಭಟನೆ ಆರಂಭಿಸಿದವು.

ಜಯಾ ಬಚ್ಚನ್ ಅವರೊಂದಿಗೆ ವಾಗ್ವಾದ: ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್, ಧನಖರ್ ಅವರ ಧ್ವನಿಗೆ ಆಕ್ಷೇಪ ವ್ಯಕ್ತಪಡಿಸಿದರು. 

ಕೆಲವು ದಿನಗಳ ಹಿಂದೆ, ಜಯಾ ಬಚ್ಚನ್ ಅವರು ಧನಖರ್ ಮತ್ತು ರಾಜ್ಯಸಭೆ ಉಪಾಧ್ಯಕ್ಷ ಹರಿವಂಶ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಐದನೇ ಅವಧಿಯ ಸಂಸದೆ ತಮ್ಮನ್ನು ಜಯಾ ಬಚ್ಚನ್ ಎಂದು ಕರೆಯಬೇಕು ಮತ್ತು ಪತಿಯ ಹೆಸರಿನಿಂದ ಗುರುತಿಸುವ ಅಗತ್ಯವಿಲ್ಲ ಎಂದು ಹೇಳಿದ್ದರು. ಚುನಾವಣೆ ಪ್ರಮಾಣಪತ್ರದಲ್ಲಿ ನಮೂದಿಸಿದ ಹೆಸರನ್ನು ಉಪಸಭಾಪತಿ ಅನುಸರಿಸುತ್ತಿದ್ದಾರೆ ಎಂದು ಧನಖರ್‌ ಹೇಳಿದ್ದರು. ಜಯಾ ಮತ್ತು ಇತರ ಹಲವಾರು ಮಹಿಳಾ ಸದಸ್ಯೆಯರು ಅಧ್ಯಕ್ಷರ ವಿವರಣೆಗೆ ಆಶ್ಚರ್ಯ ವ್ಯಕ್ತಪಡಿಸಿದ್ದು,ಇದು ʻಹಿಂದೆಂದೂ ನಡೆದಿಲ್ಲʼ ಮತ್ತು ʻಸಂಸದೆಯರ ಗುರುತನ್ನು ವ್ಯಕ್ತಿಯೊಬ್ಬರ ಪತ್ನಿ ಎಂಬಂತೆ ಕಡಿಮೆಗೊಳಿಸುವುದುʼ ಪಿತೃಪ್ರಧಾನ ಮನಸ್ಥಿತಿ ಎಂದು ಹೇಳಿದ್ದರು. 

ಶುಕ್ರವಾರ ಕೂಡ ಜಯಾ ಬಚ್ಚನ್ ಮಾತನಾಡಲು ಬಯಸಿದಾಗ, ಧನಖರ್ ಅವರನ್ನು ʻಜಯಾ ಅಮಿತಾಭ್‌ ಬಚ್ಚನ್ʼ ಎಂದು ಕರೆದರು. ಜಯಾ ಅವರು ಆರಂಭದಲ್ಲಿ ಅದನ್ನು ಪರಿಗಣಿಸದೆ ಇದ್ದರೂ, ʻಧ್ವನಿʼ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದರು. ಸದನ ಸಂಪೂರ್ಣ ಗೊಂದಲದಲ್ಲಿ ಮುಳುಗಿತು. ಧನಖರ್‌ ಅವರು ಸ್ಪರ್ಧೆಗಿಳಿದಂತೆ ಕೂಗಿದರು. 

ʻಜಯಾಜಿ, ನೀವು ಬಹಳ ಪ್ರಖ್ಯಾತರು. ಆದರೆ, ನಟನೊಬ್ಬ ನಿರ್ದೇಶಕ ಹೇಳಿದಂತೆ ಕೇಳಬೇಕಾಗುತ್ತದೆ ಎಂಬುದು ನಿಮಗೆ ತಿಳಿದಿದೆ,ʼ ಎಂದು ಹೇಳಿದವರೇ, ʻನನಗೆ ಪಾಠ ಹೇಳಬೇಡಿ. ನೀವು ನನ್ನ ಧ್ವನಿ ಬಗ್ಗೆ ಹೇಳುತ್ತೀರಿ .ಇಷ್ಟು ಸಾಕು; ನೀವು ಯಾರೇ ಆಗಿರಬಹುದು, ನೀವು ಸೆಲೆಬ್ರಿಟಿ ಆಗಿರಬಹುದು. ನೀವು ಶಿಷ್ಟಾಚಾರವನ್ನು ಅರ್ಥಮಾಡಿಕೊಳ್ಳಬೇಕು. ನಾನು ಇದನ್ನೆಲ್ಲ ಸಹಿಸುವುದಿಲ್ಲ ... ನೀವು ಮಾತ್ರ ಪ್ರಖ್ಯಾತರು ಎಂದುಕೊಳ್ಳಬೇಡಿ. ನಾವು ಕೂಡ ಖ್ಯಾತರಾಗಿಯೇ ಇಲ್ಲಿಗೆ ಬಂದಿದ್ದೇವೆ,ʼ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದರು. 

ಒಟ್ಟಾದ ಸೋನಿಯಾ, ಜಯಾ ಬಚ್ಚನ್:‌ ಧನಖರ್‌ ಈ ಹಿಂದೆಯೂ ಹಲವು ಸಂದರ್ಭಗಳಲ್ಲಿ ವಿರೋಧ ಪಕ್ಷದ ಸಂಸದರನ್ನು ವಾಗ್ದಂಡನೆಗೆ ಒಳಪಡಿಸಿದ್ದಾರೆ; ಅವರನ್ನು ಉಪದ್ರವಕಾರಿ ಎಂದು ಕರೆದಿದ್ದಾರೆ; ದೇಶವನ್ನು ಅಸ್ಥಿರಗೊಳಿಸಲು ಹೊರಟಿದ್ದಾರೆ ಎಂದು ಶುಕ್ರವಾರ ದೂರಿದರು. ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷಗಳು ಸಭಾತ್ಯಾಗ ನಡೆಸಿದವು.

ಸಂಸತ್ತಿನ ಹೊರಗೆ ಸೋನಿಯಾ ಮತ್ತು ಜಯಾ ಬಚ್ಚನ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ʻಅಧ್ಯಕ್ಷರು ಕ್ಷಮೆಯಾಚನೆ ಮಾಡಬೇಕು,ʼ ಎಂದು ಹೇಳಿದರು. ಸೋನಿಯಾ ಮತ್ತು ಜಯಾ ಬಚ್ಚನ್ ಒಗ್ಗಟ್ಟು ರಾಜಕೀಯ ಎಷ್ಟು ಅನಿರೀಕ್ಷಿತ ಮತ್ತು ಹೇಗೂ ಆಗಬಹುದು ಎಂಬುದಕ್ಕೆ ಸಾಕ್ಷಿ. ನೆಹರು-ಗಾಂಧಿ ಮತ್ತು ಬಚ್ಚನ್‌ಗಳು ಒಂದು ಕಾಲದಲ್ಲಿ ಸ್ನೇಹಿತರಾಗಿದ್ದರು. ಆದರೆ, ಕಳೆದ ಮೂರು ದಶಕಗಳಿಂದ ಎರಡೂ ಕುಟುಂಬ ಗಳು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರಲಿಲ್ಲ. ಜಯಾ ಅವರು ಎಸ್‌ಪಿ ಸಂಸದೆಯಾಗಿ ಕಾಂಗ್ರೆಸ್ ಟೀಕಾಕಾರರಾಗಿದ್ದರು. ಬಿಜೆಪಿ ವಿರುದ್ಧ ಕಾಂಗ್ರೆಸ್ ಮತ್ತು ಎಸ್‌ಪಿ ಒಗ್ಗೂಡಿದ ನಂತರ, ಸೋನಿಯಾ ಮತ್ತು ಜಯಾ ಬಚ್ಚನ್ ಕೂಡ ರಾಜಕೀಯವಾಗಿ ಒಂದಾಗಿದ್ದಾರೆ.

ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರತಿಭಟನೆಯನ್ನು ಕೂಡ ಧನಖರ್ ಲೆಕ್ಕಿಸಲಿಲ್ಲ. ಪ್ರತಿಪಕ್ಷಗಳು ಹೊರನಡೆದ ನಂತರ ಅವರು ಇಂಡಿಯ ಒಕ್ಕೂಟದ ಸಂಸದರನ್ನು ಖಂಡಿಸಲು ಆಡಳಿತ ಪಕ್ಷಕ್ಕೆ ಅವಕಾಶ ನೀಡಿದರು.

ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ: ಆನಂತರ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿಧ್ವನಿಸುತ್ತ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದರು. ಇಂಡಿಯ ಒಕ್ಕೂಟ ತಮ್ಮನ್ನು ಗುರಿಯಾಗಿಸಿಕೊಂಡಿದ್ದರೂ, ಅದರ ನಿಜವಾದ ಗುರಿ ಮೋದಿ ಎಂದು ಸೂಚಿಸಿದರು.

ʻನಾವು ವಿಕಸಿತ ಭಾರತವನ್ನು ಸೃಷ್ಟಿಸುತ್ತಿದ್ದೇವೆ. ಜಗತ್ತು ನಮ್ಮನ್ನು ಗುರುತಿಸುತ್ತಿದೆ. ಆರು ದಶಕಗಳ ನಂತರ ಭಾರತ ಜಾಗತಿಕ ಮನ್ನಣೆ ಯನ್ನು ಹೊಂದಿರುವ ಪ್ರಧಾನ ಮಂತ್ರಿಯ ನಾಯಕತ್ವವನ್ನು ಹೊಂದಿದೆ. ರಾಷ್ಟ್ರಕ್ಕೆ ಆ ಬಗ್ಗೆ ಹೆಮ್ಮೆ ಇದೆ. ಕೆಲವರು ನೆರೆಯ ದೇಶದಲ್ಲಿನ ಘಟನೆಗಳನ್ನು ಗಮನಿಸುತ್ತ, ಪ್ರಚೋದನಕಾರಿ ಮತ್ತು ಖಂಡನೀಯ ನಿರೂಪಣೆಯಲ್ಲಿ ತೊಡಗಿದ್ದಾರೆ,ʼ ಎಂದು ಧನಖರ್ ಹೇಳಿದರು.

ಬಿಜೆಪಿ ವಕ್ತಾರರ ಹೇಳಿಕೆಗಳನ್ನು ಹೋಲುವಂಥ ಹೇಳಿಕೆ ನೀಡಿ, ʼಇವು ಸಾಮಾನ್ಯ ಅಡ್ಡಿಗಳಲ್ಲ,ಸಾಮಾನ್ಯ ಗೊಂದಲಗಳಲ್ಲ. ಚರ್ಚೆಗಳಿಗೆ ತಡೆ, ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅವಮಾನದ ಮೂಲಕ ಪ್ರಜಾಪ್ರಭುತ್ವ ಮತ್ತು ಸಂಸ್ಥೆಗಳನ್ನು ಕ್ಷುಲ್ಲಕಗೊಳಿಸಲಾಗುತ್ತಿದೆ. ಒಂದು ದೇಶದ ವೆಚ್ಚದಲ್ಲಿ ಸಣ್ಣ ಲಾಭಕ್ಕಾಗಿ ಇದನ್ನು ಮಾಡಲಾಗುತ್ತಿದೆ. ನನ್ನ ಕಣ್ಣೆದುರೇ ಇಂಥ ದೂಷಣೆ ನಡೆಯಿತು,ʼ.

ʻಈ ವೈರಸ್ ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತದೆ. ಅವರು ನನ್ನನ್ನು ಗುರಿಯಾಗಿಸಿಕೊಂಡಿಲ್ಲ ಎಂದು ನನಗೆ ತಿಳಿದಿದೆ. ನಿರಂತರವಾಗಿ ಮೂರನೇ ಬಾರಿಗೆ ಸರ್ಕಾರ ಅಸ್ತಿತ್ವದಲ್ಲಿದೆ ಎಂದು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರು ಪ್ರಜಾಪ್ರಭುತ್ವವನ್ನು ಗಂಡಾಂತರಕ್ಕೆ ತಳ್ಳಲು ಬಯಸುತ್ತಾರೆ,ʼ ಎಂದು ಹೇಳಿದರು.

ಪ್ರತಿಪಕ್ಷಗಳ ಪ್ರತಿದಾಳಿ: ಅವರ ಟೀಕೆಗಳು ಇನ್ನಷ್ಟು ಅಸಮಾಧಾನ ಉಂಟುಮಾಡಿದವು. ಹಿರಿಯ ಕಾಂಗ್ರೆಸ್ ಸಂಸದರಾದ ಪ್ರಮೋದ್ ತಿವಾರಿ ಮತ್ತು ಅಜಯ್ ಮಾಕೆನ್, ಸಭಾಪತಿ ವಿರುದ್ಧ ಸಂಪೂರ್ಣ ದಾಳಿ ನಡೆಸಿದರು.

ʻರಾಜ್ಯಸಭಾಧ್ಯಕ್ಷರು ಪ್ರತಿಪಕ್ಷಗಳಿಗೆ ಮಾತಿಗೆ ಅವಕಾಶ ನೀಡುತ್ತಿಲ್ಲ.ಪ್ರತಿಪಕ್ಷ ನಾಯಕನ ಮೈಕ್ ಆಫ್ ಆಗಿದೆ. ಪ್ರತಿಪಕ್ಷ ನಾಯಕನ ಮಾತಿಗೆ ಅಡ್ಡಿಪಡಿಸುತ್ತಾರೆ. ಸಭಾಪತಿ ಸರ್ಕಾರದ ಪರವಾಗಿ ಮತ್ತು ಪ್ರತಿಪಕ್ಷಗಳ ವಿರುದ್ಧ ಸದನ ನಡೆಸುತ್ತಿದ್ದಾರೆ. ಸಂಸತ್ತಿನ ಕಾರ್ಯ ಹೀಗೆ ಇರಬಾರದು; ಇದು ಸಂಸದೀಯ ಸಂಪ್ರದಾಯಗಳಿಗೆ ವಿರುದ್ಧ,ʼ ಎಂದು ತಿವಾರಿ ಸುದ್ದಿಗಾರರಿಗೆ ತಿಳಿಸಿದರು.

Tags:    

Similar News