ಐಬಿಎಮ್‌ನಲ್ಲಿ ಉದ್ಯೋಗ ಕಡಿತ
ಐಬಿಎಮ್ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಈ ಐಟಿ ಸಂಸ್ಥೆಯ ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗದಲ್ಲಿ ಉದ್ಯೋಗ ಕಡಿತವಾಗಲಿದೆ ಎನ್ನಲಾಗಿದೆ.
ಐಬಿಎಮ್ (International Business Machines Corp) ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಈ ಐಟಿ ಸಂಸ್ಥೆಯ ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗದಲ್ಲಿ ಉದ್ಯೋಗ ಕಡಿತವಾಗಲಿದೆ ಎನ್ನಲಾಗಿದೆ. ನಿರ್ದಿಷ್ಟವಾಗಿ ಎಷ್ಟು ಸಂಖ್ಯೆಯ ಉದ್ಯೋಗ ಕಡಿತವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಐಬಿಎಂನ ಮುಖ್ಯ ಸಂವಹನ ಅಧಿಕಾರಿ ಜೊನಾಥನ್ ಅಡಾಶೆಕ್ ಅವರು ಇಲಾಖೆಯ ಉದ್ಯೋಗಿಗಳೊಂದಿಗೆ ನಡೆಸಿದ ಸಭೆಯಲ್ಲಿ ವಜಾಗೊಳಿಸುವ ನಿರ್ಧಾರವನ್ನು ಪ್ರಕಟಿಸಿದರು. ಈ ಬಗ್ಗೆ ಕಂಪೆನಿ ಅಧಿಕೃತವಾಗಿ ಇನ್ನೂ ಹೇಳಿಕೆ ಹೊರಡಿಸಿಲ್ಲ.
AI ಪ್ರಾಬಲ್ಯ
ʼʼಮುಂಬರುವ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ)ಯ ಅಳವಡಿಕೆಯಿಂದಾಗಿ ನೇಮಕಾತಿಯನ್ನು ಸ್ಥಗಿತಗೊಳಿಸುವ ನಿರೀಕ್ಷೆಯಿದೆʼʼ ಎಂದು ಕಂಪನಿಯ ಸಿಇಒ ಅರವಿಂದ್ ಕೃಷ್ಣ ಕಳೆದ ವರ್ಷ ಹೇಳಿದ್ದರು. ʼʼಮಾನವ ಸಂಪನ್ಮೂಲದಂತಹ ಬ್ಯಾಕ್ ಆಫೀಸ್ ಕಾರ್ಯಗಳಲ್ಲಿ ನೇಮಕಾತಿಯನ್ನು ಸ್ಥಗಿತಗೊಳಿಸಲಾಗುವುದು ಅಥವಾ ನಿಧಾನಗೊಳಿಸಲಾಗುವುದುʼʼ ಎಂದು ಅರವಿಂದ್ ಕೃಷ್ಣ ತಿಳಿಸಿದ್ದರು. ಅವರ ಪ್ರಕಾರ ಐದು ವರ್ಷದಲ್ಲಿ ಶೇ. 30ರಷ್ಟು ಉದ್ಯೋಗಿಗಳ ಕೆಲಸವನ್ನು ಎಐ ಮತ್ತು ಆಟೊಮೇಶನ್ ಮಾಡಲಿವೆಯಂತೆ. ಅದರ ಭಾಗವಾಗಿ ಉದ್ಯೋಗ ಕಡಿತ ನಡೆಯಲಿದೆಯಾ ಎನ್ನುವುದು ಸ್ಪಷ್ಟವಾಗಿಲ್ಲ.
3,900 ಉದ್ಯೋಗಿಗಳ ವಜಾ
ಐಬಿಎಂ 3,900 ಜನರನ್ನು ಕೆಲಸದಿಂದ ತೆಗೆಯಲಿರುವುದಾಗಿ ಜನವರಿಯಲ್ಲಿ ಹೇಳಿತ್ತು. ಈ ಕಾರ್ಯದಿಂದ ಸಂಸ್ಥೆಗೆ 400 ಮಿಲಿಯನ್ ಡಾಲರ್ (33,12,92,00,000 ರೂ.) ಹಣ ಉಳಿತಾಯವಾಗಬಹುದು ಎನ್ನುವ ನಿರೀಕ್ಷೆ ಇದೆ. ಈ ಹಣವನ್ನು ಪುನಾರಚನೆ ಕಾರ್ಯಗಳಿಗೆ ಬಳಸಲಾಗುವುದು ಎಂದು ಅಂದು ಐಬಿಎಂನ ಚೀಫ್ ಫೈನಾನ್ಷಿಯಲ್ ಆಫೀಸರ್ ಜೇಮ್ಸ್ ಕೆವನಾಘ್ ತಿಳಿಸಿದ್ದರು.