ನಟ ವಿಜಯ್‌ ದಳಪತಿ ಚೊಚ್ಚಲ ಸಮಾವೇಶ | ದ್ರಾವಿಡವಾದ ,ಜಾತ್ಯತೀತ ನಿಲುವು ಘೋಷಣೆ

ತಮಿಳಿಗ ವೆಟ್ರಿ ಕಳಗಂ ಪಕ್ಷದ ಮೂಲ ಸಿದ್ಧಾಂತಗಳನ್ನು ವಿವರಿಸಿದ ವಿಜಯ್‌, ರಾಜ್ಯಪಾಲರ ಹುದ್ದೆಯ ರದ್ದು, ಸಾಪ್ರದಾಯಿಕ ಮೀಸಲಾತಿ ಬದಲು ಜನಸಂಖ್ಯೆ ಅನುಪಾತದ ಆಧಾರದ ಮೀಸಲಾತಿ, ದ್ವಿಭಾಷಾ ನೀತಿ ಮಹಿಳಾ ಸಬಲೀಕರಣ ಹಾಗೂ ಸಮಾನತೆಯ ನಿಲುವನ್ನು ಪ್ರಕಟಿಸಿದ್ದಾರೆ.

Update: 2024-10-28 03:58 GMT

ತಮಿಳು ಚಿತ್ರರಂಗದ ಖ್ಯಾತ ನಟ, ಅಭಿಮಾನಿಗಳ ಪಾಲಿನ ದಳಪತಿ(ಥಲಪತಿ), ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ಸಂಸ್ಥಾಪಕ ಜೋಸೆಫ್‌ ವಿಜಯ್‌ ಚಂದ್ರಶೇಖರ್ (ವಿಜಯ್‌ ದಳಪತಿ) ಅವರು ಚೊಚ್ಚಲ ಬೃಹತ್‌ ರಾಜಕೀಯ ಸಮಾವೇಶ ನಡೆಸುವ ತಮಿಳುನಾಡಿನ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

2024 ಫೆ. 2ರಂದು ತಮಿಳಿಗ ವೆಟ್ರಿ ಕಳಗಂ ಪಕ್ಷ ಸ್ಥಾಪನೆ ಮೂಲಕ ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದ್ದ ವಿಜಯ್‌ ಅವರ ರಾಜಕೀಯ ನಿಲುವು, ನೀತಿಗಳು ರಹಸ್ಯವಾಗಿದ್ದವು. ಇದೀಗ 2026 ರ ತಮಿಳುನಾಡು ವಿಧಾನಸಭೆ ಚುನಾವಣೆ ಕೇಂದ್ರೀಕರಿಸಿ ಭಾನುವಾರ ವಿಳ್ಳುಪುರಂ ಜಿಲ್ಲೆಯಲ್ಲಿ 2 ಲಕ್ಷ ಅಭಿಮಾನಿಗಳು ಹಾಗೂ ಕಾರ್ಯಕರ್ತರನ್ನು ಸೇರಿಸಿ ಬೃಹತ್‌ ಸಮಾವೇಶ ನಡೆಸುವ ಜೊತೆಗೆ ಪಕ್ಷದ ಸಿದ್ಧಾಂತ, ನೀತಿಗಳನ್ನು ಬಹಿರಂಗಪಡಿಸಿದ್ದಾರೆ.

ಭ್ರಷ್ಟಾಚಾರ ಹಾಗೂ ವಿಭಜಕ ಶಕ್ತಿಗಳೇ ಪಕ್ಷದ ದೊಡ್ಡ ಶತ್ರುಗಳು ಎಂದು ಹೇಳುವ ಜೊತೆಗೆ ದ್ರಾವಿಡವಾದ ಹಾಗೂ ಜಾತ್ಯತೀತ ನಿಲುವುಗಳ ಸಮ್ಮಿಶ್ರಣವೇ ಪಕ್ಷದ ಪ್ರಮುಖ ನೀತಿ ಎಂದು ಘೋಷಿಸಿದ್ದಾರೆ.

ತಮಿಳುನಾಡಿನಲ್ಲಿ ರಾಜ್ಯಪಾಲರ ಹುದ್ದೆಯ ರದ್ದು, ಸಾಪ್ರದಾಯಿಕ ಮೀಸಲಾತಿ ಬದಲು ಜನಸಂಖ್ಯೆ ಅನುಪಾತದ ಆಧಾರದ ಮೀಸಲಾತಿ, ದ್ವಿಭಾಷಾ ನೀತಿ  ಮಹಿಳಾ ಸಬಲೀಕರಣ ಹಾಗೂ ಸಮಾನತೆಯ ಪಕ್ಷದ ನಿಲುವನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದಾರೆ. ವಿಜಯ್‌ ಅವರು ತಮ್ಮ ಚೊಚ್ಚಲ ರಾಜಕೀಯ ಭಾಷಣದಲ್ಲಿ ಪ್ರಸ್ತಾಪಿಸಿದ ಹಲವು ಸಂಗತಿಗಳು ರಾಜಕೀಯ ವಿಶ್ಲೇಷಣೆಗೆ ಒಳಪಟ್ಟಿವೆ.

ಅಧಿಕಾರ ಹಂಚಿಕೆಗೆ ಮುಕ್ತ

2026 ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಮಿಳಿಗ ವೆಟ್ರಿ ಕಳಗಂ ಸ್ಪರ್ಧಿಸುವ ಘೋಷಣೆ ಮಾಡಿದ್ದಾರೆ. ಮುಂದುವರಿದು, ಸಮಾನ ಮನಸ್ಕ ಪಕ್ಷಗಳೊಂದಿಗೆ ಅಧಿಕಾರ ಹಂಚಿಕೆಗೆ ಮುಕ್ತವಾಗಿದ್ದೇವೆ. ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸುವ ಅಚಲ ನಂಬಿಕೆ ಇದೆ. ಫಲಿತಾಂಶ ಅತಂತ್ರವಾದರೆ ಮೈತ್ರಿಗೂ ನಾವು ಮುಕ್ತ ಮನಸ್ಸು ಹೊಂದಿದ್ದೇವೆ ಎಂದು ಹೇಳುವ ಮೂಲಕ ವಿಜಯ್‌ ಅವರು ಅಧಿಕಾರ ಹಿಡಿಯುವ ಪಣ ತೊಟ್ಟಿದ್ದಾರೆ.

ಪ್ರಚೋದಿಸುವ ಬುದ್ದಿವಂತಿಕೆಯ ನಡೆ

ಚುನಾವಣೆಗೂ ಮುನ್ನವೇ ಟಿವಿಕೆ ಪಕ್ಷವು ಅಧಿಕಾರ ಹಂಚಿಕೆಯ ಪ್ರಸ್ತಾಪ ಇರಿಸಿರುವುದು ಸಣ್ಣಪುಟ್ಟ ರಾಜಕೀಯ ಪಕ್ಷಗಳನ್ನು ಪ್ರಚೋದಿಸುವಂತಿದೆ. ಇದು ವಿಜಯ್ ಅವರ ಬುದ್ಧಿವಂತಿಕೆಯ ನಡೆಯಾಗಿದೆ ಎಂದು ಹಿರಿಯ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕರಾದ ಆರ್. ರಂಗರಾಜ್ ಅವರು ದ ಫೆಡರಲ್‌ಗೆ ತಿಳಿಸಿದರು.

ವಿಜಯ್‌ ಅವರ ಈ ಪ್ರಸ್ತಾಪವನ್ನು ಡಿಎಂಕೆ ಮತ್ತು ಎಐಎಡಿಎಂಕೆ ನಾಯಕರು ತಿರಸ್ಕರಿಸಿರಬಹುದು. ಆದರೆ, ʼವಿದುತಲೈ ಚಿರುತೈಗಲ್ ಕಚ್ಚಿʼ (ವಿಸಿಕೆ) ಯಂತಹ ಸಣ್ಣ ಪಕ್ಷಗಳಿಗೆ ಅಧಿಕಾರದ ಆಮಿಷ ಒಡ್ಡುವಂತಿದೆ. ಇದು ಚುನಾವಣಾ ಪೂರ್ವ ಮೈತ್ರಿಯ ಲಕ್ಷಣವನ್ನು ತೋರಿಸುತ್ತದೆ ಎಂದು ರಂಗರಾಜ್‌ ಅಭಿಪ್ರಾಯಪಟ್ಟಿದ್ದಾರೆ.

ಸನಾತನ ಧರ್ಮ ಕುರಿತ ಡಿಎಂಕೆ ಪಕ್ಷದ ಸೈದ್ಧಾಂತಿಕ ನಿಲುವಿಗೆ ಸಂಪೂರ್ಣ ವ್ಯತಿರಿಕ್ತವಾಗಿ ಎಲ್ಲಾ ಧರ್ಮಗಳನ್ನು ಗೌರವಿಸುವ, ವಿಭಜಕ ಶಕ್ತಿಗಳ ವಿರುದ್ಧ ಹೋರಾಡುವ ಪ್ರಸ್ತಾವೂ ಕೂಡ ವಿಜಯ್‌ ಅವರ ಜಾಣ್ಮೆಯ ಪ್ರದರ್ಶನವಾಗಿದೆ. ಆದರೆ, ದ್ರಾವಿಡನಾಡಿನಲ್ಲಿ ಅವರ ರಾಜಕೀಯ ತಂತ್ರ ಎಷ್ಟರಮಟ್ಟಿಗೆ ಫಲಿಸಲಿದೆ ಎಂಬುದು ಪ್ರಶ್ನೆಯಾಗಿದೆ.

ಸಂಭಾವ್ಯ ಮತ ಸೆಳೆಯುವ ತಂತ್ರ

ಅಧ್ಯಾತ್ಮದ ಸ್ವೀಕಾರ, ಮೂಲಭೂತವಾದ ತಿರಸ್ಕಾರ ಹಾಗೂ ಭ್ರಷ್ಟಾಚಾರ ವಿರೋಧಿಸುವ ನೀತಿಗಳ ಮಿಶ್ರಣವು ತಮಿಳುನಾಡಿನಲ್ಲಿ ಹೊಸದಲ್ಲದಿದ್ದರೂ ಎಐಎಡಿಎಂಕೆ ಮತ್ತು ಡಿಎಂಕೆ ಪಕ್ಷದಲ್ಲಿನ ವರ್ಚಸ್ಸಿನ ನಾಯಕತ್ವ ಕೊರತೆಯು ವಿಜಯ್‌ ಅವರಿಗೆ ಮತಗಳನ್ನು ಸೆಳೆಯಬಹುದು ಎಂದು ರಂಗರಾಜ್ ವಿವರಿಸಿದ್ದಾರೆ.

ಇನ್ನು ಇಲ್ಲಿಯವರೆಗೆ ನಟನನ್ನಾಗಿ ನೋಡಿದ್ದ ಅಭಿಮಾನಿಗಳು ಈಗ ರಾಜಕಾರಣಿಯಾಗಿ ನೋಡಲು ಇಷ್ಟಪಡುತ್ತಿದ್ದಾರೆ. ಆ ಮೂಲಕ 2026 ರ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಹೊಸ ಭರವಸೆ ಹುಟ್ಟಿಸಿದೆ ಎಂದು ವಿಶ್ಲೇಷಿಸಿದ್ದಾರೆ.

ಬದಲಾವಣೆ ಕುರಿತ ಪ್ರಸ್ತಾಪ

ತಮಿಳಿಗ ವೆಟ್ರಿ ಕಳಗಂ ಪಕ್ಷದ ಮೂಲ ಸಿದ್ಧಾಂತಗಳನ್ನು ವಿವರಿಸಿದ ವಿಜಯ್ ಅವರು, ಪೆರಿಯಾರ್, ಇ.ವಿ.ರಾಮಸಾಮಿ, ಕೆ.ಕಾಮರಾಜ್, ಬಾಬಾಸಾಹೇಬ್ ಅಂಬೇಡ್ಕರ್, ವೇಲು ನಾಚಿಯಾರ್ ಮತ್ತು ಅಂಜಲೈ ಅಮ್ಮಾಳ್ ಅವರು ಹಾಕಿಕೊಟ್ಟ ಹಾದಿಯಲ್ಲಿ ಪಕ್ಷ ಮುನ್ನಡೆಯಲಿದೆ. ದ್ರಾವಿಡ ನಾಯಕ ಪೆರಿಯಾರ್ ಅವರು ಮಂಡಿಸಿದ ಸಾಮಾಜಿಕ ನ್ಯಾಯ ಮತ್ತು ಮಹಿಳಾ ಸಬಲೀಕರಣದ ನೀತಿಗಳಿಗೆ ಬಲ ತುಂಬಲು ಬಯಸುತ್ತದೆ ಎಂದು ಹೇಳುವ ಮೂಲಕ ವಿಜಯ್‌ ಅವರು ಬದಲಾವಣೆಯತ್ತ ಗಮನ ಹರಿಸಿದ್ದಾರೆ.

ಬದಲಾವಣೆ ಮತ್ತು ವಿಕಸನದ ಅಗತ್ಯವು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಜಕೀಯ ಕ್ಷೇತ್ರಕ್ಕೂ ಅಗತ್ಯವಾಗಿದೆ. ಈ ಬದಲಾವಣೆ ತರಲು ಪಕ್ಷ ಶ್ರಮಿಸಲಿದೆ ಎಂದು ವಿಜಯ್‌ ಹೇಳಿದ್ದಾರೆ.

ಆತಂಕದಲ್ಲಿ ಭಾಷಣ?

ವಿಜಯ್ ಅವರು ರಾಜಕಾರಣಿಯಾಗಿ ಪದಾರ್ಪಣೆ ಮಾಡಿದ ಸಮಾವೇಶದಲ್ಲಿ ಪ್ರೇಕ್ಷಕರ ದೊಡ್ಡ ಸಮೂಹವನ್ನು ಎದುರುಗೊಂಡಾಗ ಸ್ವಲ್ಪ ಆತ್ಮವಿಶ್ವಾಸದ ಕೊರತೆ ವಿಜಯ್‌ ಅವರಲ್ಲಿ ಕಾಣುತ್ತಿತ್ತು ಎಂದು ಮತ್ತೊಬ್ಬ ಹಿರಿಯ ಪತ್ರಕರ್ತ ಆರ್.ಇಳಂಗೋವನ್ ಗಮನಿಸಿದ್ದಾರೆ.

ಜನಸಮೂಹ ಕಂಡು ನಟ ವಿಜಯ್‌ ದಿಗ್ಬ್ರಾಂತಗೊಂಡರು. ಭಾಷಣದ ಪ್ರಸ್ತುತಿಯು ಅಷ್ಟೇನೂ ಖಚಿತತೆಯಿಂದ ಕೂಡಿರಲಿಲ್ಲ. ವಿಜಯ್ ಅವರು ತಮ್ಮ ಆಲೋಚನೆಗಳನ್ನು ಜನರ ಮುಂದಿಡುವಾಗ ಆತಂಕದಲ್ಲೇ ಇದ್ದರು ಎಂದು ಇಲಂಗೋವನ್ ದಿ ಫೆಡರಲ್‌ಗೆ ತಿಳಿಸಿದರು.

' ಕುಟುಂಬ ರಾಜಕಾರಣ ಪಕ್ಷ', ವಿಭಜಕ ಶಕ್ತಿಗಳು ಮತ್ತು ಧರ್ಮಾಂಧತೆ ಟೀಕಿಸುವ ಪಕ್ಷ ಎಂದು ಪರೋಕ್ಷವಾಗಿ ಡಿಎಂಕೆ ನಿಲುವನ್ನು ಟೀಕಿಸುವಾಗ ಹಿಂಜರಿಯುತ್ತಿದ್ದರುʼ ಎಂಬುದನ್ನು ಇಳಂಗೋವನ್ ಗಮನಿಸಿದ್ದಾರೆ.

ರಾಜಕೀಯ ಪಕ್ಷವೊಂದರ ಕಾರ್ಯವೈಖರಿ ಅರ್ಥಮಾಡಿಕೊಳ್ಳಲು ವಿಜಯ್‌ ಅವರಿಗೆ ಸಮಯ ಹಿಡಿಯಬಹುದು. ಆದರೆ, ಸಭ್ಯ ರಾಜಕಾರಣ ಮಾಡಬಹುದು ಎಂಬುದು ವಿಜಯ್‌ ಅವರ ನಿಲುವುಗಳಿಂದ ಗಮನಿಸಬಹುದು ಎಂದಿದ್ದಾರೆ.

ಸಮಾನತೆಯತ್ತ ವಿಜಯ್‌ ಚಿತ್ತ

ವಿಜಯ್ ಅವರು ಮಹಿಳಾ ಸಬಲೀಕರಣ, ಜಾತಿ ಜನಗಣತಿಯ ಆಧಾರದ ಮೇಲೆ ಅನುಪಾತದ ಮೀಸಲಾತಿ ಮತ್ತು ಸಮಾನತೆ ಪಾಲನೆಯ ಉಲ್ಲೇಖ ಮಾಡಿದ್ದಾರೆ. ಅವರ ಪಕ್ಷದಲ್ಲಿ ಮಹಿಳೆಯರು ಪ್ರಧಾನ ಪಾತ್ರ ವಹಿಸಲಿದ್ದಾರೆ ಎಂಬುದು ಅವರ ಸಬಲೀಕರ ನೀತಿಯಿಂದ ವೇದ್ಯವಾಗುತ್ತದೆ ಎನ್ನಲಾಗಿದೆ.

ನೀಟ್ ವಿಚಾರವಾಗಿ ಅರಿಯಲೂರು ವಿದ್ಯಾರ್ಥಿನಿ ಅನಿತಾ ಆತ್ಮಹತ್ಯೆ ಘಟನೆ ಸ್ಮರಿಸುವ ಮೂಲಕ ವಿಜಯ್, ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ನನ್ನನ್ನು ಪ್ರೀತಿಯಿಂದ ʼವಿಜಯ್ ಅಣ್ಣಾ" ಎಂದು ಕರೆಯುವ ಜನರಿಗೆ ಏನನ್ನಾದರೂ ಕೊಡಬೇಕೆಂಬ ಕಾರಣಕ್ಕೆ ರಾಜಕೀಯ ಪ್ರವೇಶಿಸಿದ್ದೇನೆ ಎಂದು ಹೇಳಿರುವುದು ಅವರ ಸಮಾನತೆ ನಿಲುವಿಗೆ ಸಾಕ್ಷಿಯಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಚಿತ್ರರಂಗದಿಂದ ಕೊಂಚ ಅಂತರದ ಸುಳಿವು

ಇತ್ತೀಚಿನ ತಮಿಳು ಚಿತ್ರ ಗ್ರೇಟೆಸ್ಟ್ ಆಫ್ ಆಲ್ ಟೈಮ್ (GOAT) ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿದೆ. ರಾಜಕೀಯದ ಮೂಲಕ ಜನರ ಸೇವೆ ಸಲ್ಲಿಸಲು ತಾವು ವೃತ್ತಿಜೀವನದಿಂದ ಕೊಂಚ ಅಂತರ ಕಾಯ್ದುಕೊಳ್ಳುತ್ತೇನೆ, ಭಾರಿ ವೇತನದ ಚೆಕ್‌ಗಳನ್ನು ತ್ಯಜಿಸುತ್ತಿದ್ದೇನೆ ಎಂದು ವಿಜಯ್‌ ಘೋಷಿಸಿದರು.

ವಿಮರ್ಶಕರು ನನ್ನ ಹೇಳಿಕೆಯನ್ನು ಭಿನ್ನವಾಗಿ ಅರ್ಥೈಸಬಹುದು. ವಿಜಯ್‌ ಒಬ್ಬ ನಟನಷ್ಟೇ ಎಂದು. ಆದರೆ, ದಿವಂಗತ ಎಂ.ಜಿ ರಾಮಚಂದ್ರನ್ (ಎಂಜಿಆರ್) ಮತ್ತು ಎನ್‌.ಟಿ ರಾಮರಾವ್ (ಎನ್‌ಟಿಆರ್) ಅವರು ರಾಜಕೀಯಕ್ಕೆ ಧುಮುಕುವ ಮೊದಲು ನಟರೇ ಆಗಿದ್ದರು. ಜನರಿಗೆ ಸೇವೆ ಸಲ್ಲಿಸುತ್ತಿದ್ದರು ಎಂದು ವಿಜಯ್‌ ಹೇಳಿದರು.

ಎಂಜಿಆರ್ ಛಾಯೆ?

ವಿಜಯ್‌ ಅವರ ಚೊಚ್ಚಲ ರಾಜಕೀಯ ಸಮಾವೇಶವನ್ನು ಎಐಎಡಿಎಂಕೆ ನಾಯಕ ಎಂಜಿಆರ್‌ ಅವರಿಗೆ ಹೋಲಿಸಬಹುದೇ ಎಂಬ ಪ್ರಶ್ನೆಯನ್ನು ಇಳಂಗೋವನ್ ತಳ್ಳಿಹಾಕಿದ್ದಾರೆ.

ಎಂಜಿಆರ್ ಅವರ ಚೊಚ್ಚಲ ಭಾಷಣದಲ್ಲಿ ಭ್ರಷ್ಟಾಚಾರದ ಕುರಿತು ಮಾತನಾಡಿದ್ದಕ್ಕೆ ಅವರನ್ನು ಡಿಎಂಕೆ ಪಕ್ಷದಿಂದ ಹೊರಹಾಕಲಾಯಿತು ಎಂಬುದನ್ನು ನೆನಪಿಟ್ಟುಕೊಳ್ಳಬೇಕಿದೆ. ಎಂಜಿಆರ್‌ ಅವರು ಜಿಲ್ಲಾ ಮಟ್ಟದ ಘಟಕಗಳನ್ನು ಸ್ಥಾಪಿಸಲು ಸಮಸ್ಯೆ ಎದುರಿಸಿದ್ದರೂ ಅದಾಗಲೇ ನಟನಾಗಿ ಜನಪ್ರಿಯರಾಗಿದ್ದರಿಂದ ರಾಜಕೀಯ ಕ್ಷೇತ್ರದಲ್ಲಿ ಯಶಸ್ವಿಯಾದರು. ಹಾಗಾಗಿ ನಟನಾಗಿ ಮಾತ್ರವಲ್ಲದೆ ದ್ರಾವಿಡ ರಾಜಕಾರಣಿಯಾಗಿಯೂ ಬೆಳೆದರು.

ಆದರೆ, ವಿಜಯ್ ಅವರ ವಿಷಯದಲ್ಲಿಅದು ಬೇರೆ. ರಾಜಕೀಯದಲ್ಲಿ ಬೆಳೆಯಲು ಸಮಯ ಬೇಕಾಗಬಹುದು. ಇಬ್ಬರನ್ನು (ಎಂಜಿಆರ್ ಮತ್ತು ವಿಜಯ್) ಹೋಲಿಸಲಾಗುವುದಿಲ್ಲ. ಇಬ್ಬರೂ ಜನಪ್ರಿಯ ನಟರಿರಬಹುದು. ಆದರೆ ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆಗೆ ಸಾಕಷ್ಟು ವರ್ಷಗಳು ಬೇಕಾಗಬಹುದು ಎಂದು ಅವರು ಇಳಂಗೋವನ್‌ ವಿಶ್ಲೇಷಿಸಿದ್ದಾರೆ.

Tags:    

Similar News