ಅಲ್‌ಖೈದಾ ಜತೆ ನಂಟಿನ ಆರೋಪ | ಭಾರತದ ಮೇಲೆ ದಾಳಿ ನಡೆಸುವಂತೆ ಮನವಿ ಮಾಡಿದ್ದ ಬಂಧಿತ ಮಹಿಳೆ

ಮೇ 9 ರಂದು ಆರೋಪಿ ಶಮಾ ಪರ್ವೀನ್‌ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಪಾಕ್‌ ಸೇನಾ ಮುಖ್ಯಸ್ಥ ಮುನೀರ್‌ ಫೋಟೋ ಹಂಚಿಕೊಂಡು, 'ಇಸ್ಲಾಂ ಅನುಷ್ಠಾನ, ಮುಸ್ಲಿಂ ಪ್ರದೇಶಗಳ ಏಕೀಕರಣ, ಹಿಂದುತ್ವ ನಿರ್ಮೂಲನೆಗಾಗಿ ಖಿಲಾಫತ್ ಯೋಜನೆ ಸ್ವೀಕರಿಸಿ ಎಂದು ಪೋಸ್ಟ್‌ ಮಾಡಿದ್ದಳು.;

Update: 2025-08-07 05:58 GMT
ಬಂಧಿತ ಮಹಿಳೆ ಪರ್ವೀನ್

ಬೆಂಗಳೂರಿನಲ್ಲಿ ಇತ್ತೀಚೆಗೆ ಗುಜರಾತ್‌ ಉಗ್ರ ನಿಗ್ರಹ ದಳದ (ಎಟಿಎಸ್‌) ಅಧಿಕಾರಿಗಳು ಬಂಧಿಸಿದ್ದ ಜಾರ್ಖಂಡ್‌ ಮೂಲದ ಮಹಿಳೆಯು ಭಾರೀ ವಿಧ್ವಂಸಕ ಕೃತ್ಯಗಳನ್ನು ಎಸಗಲು ನಿಷೇಧಿತ ಉಗ್ರ ಸಂಘಟನೆ ಅಲ್‌ಖೈದಾ ಹಾಗೂ ಪಾಕಿಸ್ತಾನಕ್ಕೆ ಮಾಹಿತಿ ರವಾನಿಸಿದ್ದ ಸ್ಫೋಟಕ ಸಂಗತಿ ತನಿಖೆಯಿಂದ ಬಯಲಾಗಿದೆ. 

ಭಾರತ- ಪಾಕ್‌ ಸಂಘರ್ಷದ ವೇಳೆ ಭಾರತೀಯ ಸೇನೆ ನಡೆಸಿದ ಆಪರೇಷನ್‌ ಸಿಂಧೂರ ಕಾರ್ಯಾಚರಣೆಗೆ ತೀವ್ರ ಕುಪಿತಳಾಗಿದ್ದ ಆರೋಪಿ ಮಹಿಳೆ ಶಮಾ ಪರ್ವೀನ್‌ ಅನ್ಸಾರಿ, ಭಾರತದ ಮೇಲೆ ಆಕ್ರಮಣ ಮಾಡುವಂತೆ ಪಾಕ್‌ ಸೇನಾ ಮುಖ್ಯಸ್ಥ ಅಸೀಮ್‌ ಮುನೀರ್‌ ಮನವಿ ಮಾಡಿದ್ದಳು ಎಂದು ತಿಳಿದುಬಂದಿದೆ.

ಭಾರತದ ಮೇಲೆ ದಾಳಿ ಮಾಡಿ, ಮುಸ್ಲಿಂ ಪ್ರದೇಶಗಳನ್ನು ಏಕೀಕರಿಸುವಂತೆ ಮನವಿ ಮಾಡಿದ್ದಳು. ಬೆಂಗಳೂರಿನಲ್ಲಿ ಇದ್ದುಕೊಂಡೇ ಪಾಕ್‌ ಸೇನಾ ಮುಖ್ಯಸ್ಥರಿಗೆ ಮೇ 9 ರಂದು ಫೇಸ್‌ಬುಕ್‌ ಪೋಸ್ಟ್‌ ಮೂಲಕ ಮನವಿ ಮಾಡಿದ್ದಳು. ಭಾರತದ ಮೇಲೆ ದಾಳಿ ಮಾಡುವ ಇರುವ ಸುವರ್ಣಾವಕಾಶ ಬಳಸಿಕೊಳ್ಳುವಂತೆ ವಿನಂತಿಸಿದ್ದಳು ಎಂಬುದು ಬಯಲಾಗಿದೆ. 

ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಖಾತೆಯಿಂದ ದುಷ್ಕೃತ್ಯ ಬಯಲು

ಆರೋಪಿ ಶಮಾ ಪರ್ವೀನ್‌ ಅನ್ಸಾರಿ ಎರಡು ಫೇಸ್‌ಬುಕ್ ಹಾಗೂ ಒಂದು ಇನ್‌ಸ್ಟಾಗ್ರಾಂ ಖಾತೆ ಬಳಸುತ್ತಿದ್ದಳು. ಈಕೆಯ  ಇನ್‌ ಸ್ಟಾಗ್ರಾಂನಲ್ಲಿ ಸುಮಾರು 10 ಸಾವಿರ ಫಾಲೋವರ್ಸ್‌ ಇದ್ದು, ಪ್ರಚೋದನಕಾರಿ, ಜಿಹಾದಿ ಹಾಗೂ ಭಾರತ ವಿರೋಧಿ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಳು ಎಂದು ಗುಜರಾತ್‌ ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೇ 9 ರಂದು ಫೇಸ್‌ಬುಕ್‌ ಖಾತೆಯಲ್ಲಿ ಪಾಕ್‌ ಸೇನಾ ಮುಖ್ಯಸ್ಥ ಮುನೀರ್‌ ಫೋಟೋ ಹಂಚಿಕೊಂಡು, 'ಇಸ್ಲಾಂ ಅನುಷ್ಠಾನ, ಮುಸ್ಲಿಂ ಪ್ರದೇಶಗಳ ಏಕೀಕರಣ ಹಾಗೂ ಹಿಂದುತ್ವ, ಯಹೂದಿ ಧರ್ಮವನ್ನು ನಿರ್ಮೂಲನೆ ಮಾಡಲು ಖಿಲಾಫತ್ ಯೋಜನೆ ಸ್ವೀಕರಿಸಿ, ಮುನ್ನುಗ್ಗಿ' ಎಂದು ಪೋಸ್ಟ್ ಮಾಡಿದ್ದಳು ಎಂಬುದು ತಿಳಿದು ಬಂದಿದೆ.

ನಿಷೇಧಿತ ಉಗ್ರ ಸಂಘಟನೆಯ ಅಲ್‌ಖೈದಾ ವಿಚಾರಗಳನ್ನು ಹರಡುತ್ತಿದ್ದ ಆರೋಪದ ಮೇಲೆ ಜು.29ರಂದು ಬೆಂಗಳೂರಿನ ಹೆಬ್ಬಾಳ ಸಮೀಪದ ಮನೋರಾಯನಪಾಳ್ಯದಲ್ಲಿ ಆರೋಪಿ ಶಮಾ ಪರ್ವೀನ್ ಅನ್ಸಾರಿಯನ್ನು ಗುಜರಾತ್‌ ಎಟಿಎಸ್‌ ಪೊಲೀಸರು ಬಂಧಿಸಿದ್ದರು. ಆಕೆಯ ಮನೆಯಿಂದ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದರು. 

ಬಂಧನದ ನಂತರ ಆಕೆಯನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಿ ವಿಚಾರಣೆಗಾಗಿ ಗುಜರಾತ್‌ಗೆ ಕರೆದುಕೊಂಡು ಹೋಗಲಾಗಿತ್ತು.

ಎಸ್ಒಪಿ ಪಾಲಿಸದ ಗುಜರಾತ್‌ ಎಟಿಎಸ್‌

ಬೆಂಗಳೂರಿನಲ್ಲಿ ಅಲ್‌ಖೈದಾ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಜಾರ್ಖಂಡ್‌ ಮೂಲದ ಮಹಿಳೆಯನ್ನು ಬಂಧಿಸಿದರೂ ಗುಜರಾತ್‌ ಎಟಿಎಸ್‌ ಅಧಿಕಾರಿಗಳು ರಾಜ್ಯ ಗೃಹ ಇಲಾಖೆಗೆ ಯಾವುದೇ ಮಾಹಿತಿ ನೀಡಿರಲಿಲ್ಲ. 

ಬೇರೆ ರಾಜ್ಯಗಳಲ್ಲಿ ಯಾವುದೇ ಒಬ್ಬ ವ್ಯಕ್ತಿಯನ್ನು ಬಂಧಿಸುವ ವೇಳೆ ಅನುಸರಿಸಬೇಕಾದ ಪ್ರಮಾಣಿತ ಕಾರ್ಯಾಚರಣಾ ವಿಧಾನದ(ಎಸ್‌ಒಪಿ) ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕೆಂಬ ನಿಯಮವಿದೆ. ಅಲ್‌ಖೈದಾ ಜತೆ ನಂಟು ಹೊಂದಿರುವ ಮಹಿಳೆ ಕರ್ನಾಟಕದವರಲ್ಲ. ಆಕೆಯ ಬಂಧನದ ಬಗ್ಗೆ ಗುಜರಾತ್ ಎಟಿಎಸ್ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದರು.

ಆರೋಪಿ ಶಮಾ ಪರ್ವೀನ್ ಹೆಬ್ಬಾಳದ ತನ್ನ ಸಹೋದರನ ಮನೆಯಲ್ಲಿ ನೆಲೆಸಿದ್ದಳು. ಎಲ್ಲಿಯೂ ಕೆಲಸಕ್ಕೆ ಹೋಗದೇ  ಕಾಲಕಳೆಯುತ್ತಿದ್ದಳು. ಬೆಂಗಳೂರಿನಲ್ಲಿ ಸ್ಲೀಪರ್‌ ಸೆಲ್‌ ಆಗಿ ಅಲ್ ಖೈದಾ ಸಂಘಟನೆಯ ಜಾಲವನ್ನು ಬಲಪಡಿಸುತ್ತಿದ್ದಳು ಎಂದು ಕಂಡು ಬಂದಿದೆ.

ಇತರೆ ಆರೋಪಿಗಳೊಂದಿಗೆ ನಂಟು

ಬಂಧಿತ ಆರೋಪಿ ಶಮಾ ಪರ್ವೀನ್‌, ಅಲ್ ಖೈದಾ ಕಾರ್ಯಕರ್ತರ ವಿಡಿಯೊಗಳನ್ನು ಹಂಚಿಕೊಂಡಿದ್ದಳು. ಯುವಕರನ್ನು ಭಯೋತ್ಪಾದನೆಗೆ ಪ್ರೋತ್ಸಾಹಿಸುತ್ತಿದ್ದಳು.  ಗುಜರಾತ್ ಎಟಿಎಸ್ ಅಧಿಕಾರಿಗಳು ಈ ಹಿಂದೆ ಬಂಧಿಸಿದ್ದ ನಾಲ್ವರು ಅಲ್ ಖೈದಾ ಕಾರ್ಯಕರ್ತರಾದ ಮೊಹಮ್ಮದ್ ಫೈಕ್, ಎಂಡಿ ಫರ್ದೀನ್, ಸೈಫುಲ್ಲಾ ಖುರೇಷಿ ಹಾಗೂ ಜೀಶನ್ ಅಲಿ ಎಂಬುವರೊಂದಿಗೂ ನಂಟು ಹೊಂದಿದ್ದ ಸಂಗತಿ ತನಿಖೆಯಿಂದ ಬಯಲಾಗಿತ್ತು. ಅದರ ಆಧಾರದ ಮೇಲೆ ಗುಜರಾತ್‌ ಎಟಿಎಸ್‌ ಅಧಿಕಾರಿಗಳು ಬೆಂಗಳೂರಿಗೆ ಬಂದು ಆಕೆಯನ್ನು ಬಂಧಿಸಿದ್ದರು. 

Tags:    

Similar News