PMLA Case| ಎಎಪಿ ಶಾಸಕ ಅಮಾನತುಲ್ಲಾ ಖಾನ್ ಬಂಧನ
ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡು, ಬಿಜೆಪಿ ತನ್ನ ನಾಯಕರಿಗೆ ಕಿರುಕುಳ ನೀಡುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ದೆಹಲಿ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಸೋಮವಾರ (ಸೆಪ್ಟೆಂಬರ್ 2) ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.
ದೆಹಲಿಯ ಓಖ್ಲಾ ಪ್ರದೇಶದಲ್ಲಿನ ನಿವಾಸದಲ್ಲಿ ಶೋಧ ನಡೆಸಿದ ನಂತರ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಖಾನ್(50) ಅವರ ವಿರುದ್ಧ ವಕ್ಫ್ ಬೋರ್ಡ್‌ನ ಸಿಬಿಐ ಪ್ರಕರಣ ಮತ್ತು ದೆಹಲಿ ಎಸಿಬಿಯ ಅಕ್ರಮ ಆಸ್ತಿ ಆರೋಪ ಪ್ರಕರಣಗಳಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್‌ನಲ್ಲಿ ಅವರನ್ನು ಕೊನೆಯದಾಗಿ ಪ್ರಶ್ನಿಸಿದ್ದು, ಆನಂತರ ಖಾನ್ ಕನಿಷ್ಠ ಹತ್ತು ಸಮನ್ಸ್ ತಪ್ಪಿಸಿದ್ದಾರೆ ಎಂದು ಇಡಿ ತಿಳಿಸಿದೆ.
ಎಕ್ಸ್ ನಲ್ಲಿ ಖಾನ್ ಅವರ ಪೋಸ್ಟ್: ಇದಕ್ಕೂ ಮೊದಲು, ಖಾನ್ ತಮ್ಮ ಎಕ್ಸ್ ನಲ್ಲಿ ವಿಡಿಯೋ ಹಾಕಿದ್ದರು; ʻಇದೀಗ ಮುಂಜಾನೆ. ಸರ್ವಾಧಿಕಾರಿ ಆಜ್ಞೆ ಮೇರೆಗೆ ಅವನ ಕೈಗೊಂಬೆ ಇಡಿ ನನ್ನ ಮನೆಗೆ ತಲುಪಿದೆ. ನನಗೆ ಮತ್ತು ಎಎಪಿ ನಾಯಕರಿಗೆ ಕಿರುಕುಳ ನೀಡುವ ಯಾವುದೇ ಅವಕಾಶವನ್ನುಅವರು ಬಿಡುತ್ತಿಲ್ಲ. ಈ ಸರ್ವಾಧಿಕಾರ ಎಷ್ಟು ದಿನ ಇರುತ್ತದೆ?,ʼ ಎಂದು ಪ್ರಶ್ನಿಸಿದ್ದಾರೆ.
ʻನನ್ನ ಅತ್ತೆಗೆ ನಾಲ್ಕು ದಿನಗಳ ಹಿಂದೆ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಆಗಿದೆ. ಅವರು ನನ್ನ ಬಳಿ ಇದ್ದಾಳೆ. ನಾನು ಇಡಿಯ ಪ್ರತಿ ನೋಟಿಸಿಗೆ ಉತ್ತರಿಸಿದ್ದೇನೆ. ಕಳೆದ ಎರಡು ವರ್ಷಗಳಿಂದ ಅವರು ನನಗೆ ಕಿರುಕುಳ ನೀಡುತ್ತಿದ್ದಾರೆ ಮತ್ತು ನನ್ನ ವಿರುದ್ಧ ನಕಲಿ ಪ್ರಕರಣ ದಾಖಲಿಸುತ್ತಿದ್ದಾರೆ. ಆದರೆ, ನಾವು ತಲೆಬಾಗುವುದಿಲ್ಲ, ಹೆದರುವುದಿಲ್ಲ. ಜೈಲಿಗೆ ಕಳುಹಿಸಿದರೆ, ಹಿಂದಿನಂತೆ ಈ ಬಾರಿಯೂ ನ್ಯಾಯ ಸಿಗಲಿದೆ,ʼ ಎಂದು ಬರೆದಿದ್ದಾರೆ.
ಆಮ್ ಆದ್ಮಿ ಪಾರ್ಟಿ (ಎಎಪಿ) ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ, ಬಿಜೆಪಿಯು ಇಡಿ ಮೂಲಕ ತನ್ನ ನಾಯಕರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದೆ. ʻಬಿಜೆಪಿಯ ಇಡಿ ಇಂದು ಮುಂಜಾನೆ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರ ಮನೆಗೆ ದಾಳಿ ಮಾಡಲು ತಲುಪಿದೆ. ಇತರ ಎಎಪಿ ನಾಯಕರಂತೆ, ಖಾನ್ ವಿರುದ್ಧವೂ ಯಾವುದೇ ಪುರಾವೆಗಳಿಲ್ಲ. ಬಿಜೆಪಿಯು ಆಪ್ ಮತ್ತು ಅದರ ನಾಯಕರ ನೈತಿಕ ಸ್ಥೈರ್ಯವನ್ನು ಮುರಿಯಲು ಪ್ರಯತ್ನಿಸುತ್ತಿದೆ,ʼ ಎಂದು ಬರೆದಿದೆ.