ಸಿರಿಯಾ ಬಿಕ್ಕಟ್ಟು | ಬಾಂಬ್‌ ಸ್ಪೋಟ, ಬೀದಿಗಳಲ್ಲಿ ಲೂಟಿ; ಭೀಕರತೆ ಬಿಚ್ಚಿಟ್ಟ ಭಾರತೀಯರು

ʼಸಿರಿಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ನಂತರ ಸ್ವದೇಶಕ್ಕೆ ಮರಳಲು ಬಯಸಿದ ಎಲ್ಲಾ ಭಾರತೀಯರನ್ನು ಸ್ಥಳಾಂತರಿಸಿದ್ದೇವೆ. ಇಲ್ಲಿಯವರೆಗೆ ಸಿರಿಯಾದಿಂದ 77 ಭಾರತೀಯರನ್ನು ಸ್ಥಳಾಂತರಿಸಲಾಗಿದೆʼ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

Update: 2024-12-15 09:54 GMT

ಬಿಕ್ಕಟ್ಟು ಪೀಡಿತ ಸಿರಿಯಾದ ವಿವಿಧೆಡೆ ಸಿಲುಕಿದ್ದ ಭಾರತೀಯರ ಮೊದಲ ತಂಡ ಶನಿವಾರ ರಾತ್ರಿ ತಾಯ್ನಾಡಿಗೆ ಮರಳಿದೆ. ಶನಿವಾರ ತಡರಾತ್ರಿ ನವದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದವರು ಸಿರಿಯಾದಲ್ಲಿ ತಲೆದೋರಿರುವ ಭೀತಿಯ ವಾತಾವರಣದ ಅನುಭವ ಹಂಚಿಕೊಂಡಿದ್ದಾರೆ. ಜೊತೆಗೆ ಭಾರತೀಯರ ಸುರಕ್ಷತೆಗಾಗಿ ರಾಯಭಾರಿ ಕಚೇರಿಯ ಪ್ರಯತ್ನವನ್ನೂ ಶ್ಲಾಘಿಸಿದ್ದಾರೆ.

ಚಂಡೀಗಢ ಮೂಲದ ಮೆಕ್ಯಾನಿಕಲ್‌ ಎಂಜಿನಿಯರ್ ಸುನೀಲ್ ದತ್ ಮಾತನಾಡಿ, ಸಿರಿಯಾ ಬೀದಿಗಳಲ್ಲಿ ಬಂಡುಕೋರರು ಸಾರ್ವಜನಿಕರ ಆಸ್ತಿಪಾಸ್ತಿಯನ್ನು ಲೂಟಿ ಮಾಡುತ್ತಿದ್ದಾರೆ. ಬೆಂಕಿಯ ಜ್ವಾಲೆ, ಬಾಂಬ್‌ ಸ್ಫೋಟದಿಂದ ಪರಿಸ್ಥಿತಿ ತೀವ್ರ ಹದಗೆಟ್ಟಿದೆ ಎಂದು ವಿವರಿಸಿದ್ದಾರೆ.

ಸಿರಿಯಾದ ವಿವಿಧ ಪ್ರದೇಶಗಳಲ್ಲಿ ಸಾಕಷ್ಟು ಭಾರತೀಯರು ನೆಲೆಸಿದ್ದರು. ಅವರನ್ನು ಸಂಪರ್ಕಿಸಿ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಭಾರತೀಯ ರಾಯಭಾರ ಕಚೇರಿ ನಿರಂತರವಾಗಿ ನಮ್ಮ ಸಂಪರ್ಕಲ್ಲಿತ್ತು. ಮನೆಗಳಿಂದ ಹೊರಬಾರದಂತೆ ಪದೇ ಪದೇ ಸಲಹೆ ನೀಡುತ್ತಿತ್ತು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸಚಿತ್‌ ಕಪೂರ್ ಎಂಬುವರು ಮಾತನಾಡಿ, ನಾವು ಏಳು ತಿಂಗಳ ಕಾಲ ಸಿರಿಯಾದಲ್ಲಿದ್ದೆವು. ಡಿ.7 ರಂದು ಬಂಡುಕೋರರ ದಾಳಿಯಿಂದ ಪರಿಸ್ಥಿತಿ ಹದಗೆಟ್ಟಿತ್ತು. ನಮ್ಮನ್ನು ಡಮಾಸ್ಕಸ್ ನಗರಕ್ಕೆ ಸ್ಥಳಾಂತರಿಸಲಾಯಿತು. ಎಲ್ಲೆಂದರಲ್ಲಿ ಬೆಂಕಿ ಮತ್ತು ಬಾಂಬ್ ಸ್ಫೋಟಗಳು ನಡೆಯುತ್ತಿದ್ದವು. 11 ಜನರ ತಂಡದೊಂದಿಗೆ ನಾನು ಐಷಾರಾಮಿ ಹೋಟೆಲ್‌ನಲ್ಲಿದ್ದೆ. ಬಂಡುಕೋರರ ಬೀದಿ ಬೀದಿಗಳಲ್ಲಿ ಲೂಟಿ ಮಾಡುತ್ತಿದ್ದರು ಎಂದು ನೆನಪಿಸಿಕೊಂಡರು.

ʼಸಿರಿಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ನಂತರ ಸ್ವದೇಶಕ್ಕೆ ಮರಳಲು ಬಯಸಿದ ಎಲ್ಲಾ ಭಾರತೀಯರನ್ನು ಸ್ಥಳಾಂತರಿಸಿದ್ದೇವೆ. ಇಲ್ಲಿಯವರೆಗೆ ಸಿರಿಯಾದಿಂದ 77 ಭಾರತೀಯರನ್ನು ಸ್ಥಳಾಂತರಿಸಲಾಗಿದೆʼ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸಾದ್ ಸರ್ವಾಧಿಕಾರ ಧೋರಣೆ ವಿರುದ್ಧ ಬಂಡುಕೋರರು ಹಿಂಸಾತ್ಮಕ ಹೋರಾಟ ಆರಂಭಿಸಿದ್ದರು. ಈಗ ಅಸಾದ್‌ ಅವರನ್ನು ಪದಚ್ಯುತಗೊಳಿಸಿ ಹೊಸ ಮಧ್ಯಂತರ ಸರ್ಕಾರ ರಚನೆಯಾಗಿದೆ. ಬಂಡುಕೋರರ ಗುಂಪು ಅಲ್ ಬಶೀರ್ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸಿದೆ.

Tags:    

Similar News