8th Pay Commission : 8ನೇ ವೇತನ ಆಯೋಗ ಜಾರಿಯಾದರೆ ಸರ್ಕಾರಿ ನೌಕರರ ಬೇಸಿಕ್‌ ಸ್ಯಾಲರಿ ಎಷ್ಟು ಹೆಚ್ಚಾಗುತ್ತದೆ?

8th Pay Commission : 8ನೇ ವೇತನ ಆಯೋಗದ ಶಿಫಾರಸು ಜಾರಿಗೆ ಬಂದರೆ ಸರ್ಕಾರಿ ನೌಕರರ ಮೂಲ ವೇತನ ಶೇ.186ರಷ್ಟು ಏರಿಕೆಯಾಗಲಿದೆ ಎಂದು ತಿಳಿದುಬಂದಿದೆ. ಬೇಸಿಕ್ ಸ್ಯಾಲರಿಯೇ 18 ಸಾವಿರ ರೂ.ನಿಂದ 51,480 ರೂ.ಗೆ ಏರಿಕೆಯಾಗಲಿದೆ.;

Update: 2025-01-16 11:27 GMT
ಪ್ರಾತಿನಿಧಿಕ ಚಿತ್ರ

ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವು ಹೊಸ ವರ್ಷಕ್ಕೆ ಬಂಪರ್ ಉಡುಗೊರೆ ಕೊಟ್ಟಿದ್ದು, 8ನೇ ವೇತನ ಆಯೋಗದ ರಚನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಆಯೋಗ ಶಿಫಾರಸುಗಳ ಆಧಾರದ ಮೇಲೆ ಸರ್ಕಾರಿ ನೌಕರರ ಸಂಬಳದಲ್ಲಿ ಏರಿಕೆಯಾಗಲಿದೆ. 2025ರ ಬಜೆಟ್ ಮಂಡನೆಯ ಕೆಲವು ದಿನಗಳ ಮೊದಲು ಕೇಂದ್ರ ಸಚಿವ ಸಂಪುಟವು ವೇತನ ಆಯೋಗಕ್ಕೆ ಅನುಮೋದನೆ ನೀಡಿದೆ.

ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಪರಿಷ್ಕರಿಸಲು 8ನೇ ವೇತನ ಆಯೋಗದ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಪ್ರಕಟಿಸಿದ್ದಾರೆ.

ಸ್ಯಾಲರಿ ಭರ್ಜರಿ ಏರಿಕೆ?

8ನೇ ವೇತನ ಆಯೋಗದ ಶಿಫಾರಸು ಜಾರಿಗೆ ಬಂದರೆ ಸರ್ಕಾರಿ ನೌಕರರ ಮೂಲ ವೇತನ ಶೇ.186ರಷ್ಟು ಏರಿಕೆಯಾಗಲಿದೆ ಎಂದು ತಿಳಿದುಬಂದಿದೆ. ಬೇಸಿಕ್ ಸ್ಯಾಲರಿಯೇ 18 ಸಾವಿರ ರೂ.ನಿಂದ 51,480 ರೂ.ಗೆ ಏರಿಕೆಯಾಗಲಿದೆ. ಪಿಂಚಣಿ ಕೂಡ 9 ಸಾವಿರ ರೂ.ನಿಂದ 25,740 ರೂ.ಗೆ ಏರಿಕೆಯಾಗಲಿದೆ ಎಂದು ತಿಳಿದುಬಂದಿದೆ.

ಸದ್ಯ ಕೇಂದ್ರ ಸರ್ಕಾರವು 8ನೇ ವೇತನ ಆಯೋಗದ ರಚನೆಗೆ ಅನುಮೋದನೆ ನೀಡಿದೆ. ಆದರೆ, 2026ರವರೆಗೂ 7ನೇ ವೇತನ ಆಯೋಗದ ಅನ್ವಯವೇ ಸಂಬಳ ಸಿಗಲಿದೆ. ಕೇಂದ್ರ ಸರ್ಕಾರಿ ನೌಕರರಿಗೆ 8 ನೇ ವೇತನ ಆಯೋಗವನ್ನು ಕ್ಯಾಬಿನೆಟ್ ಅನುಮೋದಿಸಿದೆ ಎಂದು ಅಶ್ವಿನಿ ವೈಷ್ಣವ್ ದೃಢಪಡಿಸಿದ್ದರೂ ಅದರ ರಚನೆಯ ನಿಖರ ದಿನಾಂಕ ಇನ್ನೂ ಘೋಷಿಸಲಾಗಿಲ್ಲ.

8ನೇ ವೇತನ ಆಯೋಗ ರಚನೆ ಯಾವಾಗ?

2026ರ ವೇಳೆಗೆ ಆಯೋಗ ರಚಿಸಲಾಗುವುದು ಎಂದಷ್ಟೇ ಕೇಂದ್ರ ಸಚಿವರು ಘೋಷಿಸಿದ್ದಾರೆ. ವರದಿಗಳ ಪ್ರಕಾರ, 8 ನೇ ವೇತನ ಆಯೋಗವು ಜನವರಿ 1, 2026 ರಿಂದ ಜಾರಿಗೆ ಬರಲಿದೆ. ಆಯೋಗದ ಅನುಷ್ಠಾನದ ಮೇಲ್ವಿಚಾರಣೆಗಾಗಿ, ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರನ್ನು ಶೀಘ್ರದಲ್ಲೇ ನೇಮಿಸಲಾಗುವುದು ಎಂದೂ ಅಶ್ವಿನಿ ವೈಷ್ಣವ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 8ನೇ ವೇತನ ಆಯೋಗ ರಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

7ನೇ ವೇತನ ಆಯೋಗದಲ್ಲಆದ ಬದಲಾವಣೆ ಏನು?

7ನೇ ವೇತನ ಆಯೋಗದ ವೇತನ ಪರಿಷ್ಕರಣೆಗೆ ಬಂದಾಗ ನೌಕರರ ಸಂಘಗಳು 3.68 ಫಿಟ್ಮೆಂಟ್‌ಗೆ ಒತ್ತಾಯಿಸಿದ್ದರು. ಆದರೆ ಸರ್ಕಾರವು 2.57 ಫಿಟ್ಮೆಂಟ್ ನಿರ್ಧರಿಸಿತು. ಫಿಟ್ಮೆಂಟ್ ಎಂಬುದು ಸಂಬಳ ಮತ್ತು ಪಿಂಚಣಿಗಳನ್ನು ಲೆಕ್ಕಹಾಕಲು ಬಳಸುವ ಮಾನದಂಡ.

ಏಳನೇ ಆಯೋಗದಲ್ಲಿ ಸರ್ಕಾರಿ ನೌಕರರಿಗೆ ಕನಿಷ್ಠ ಮೂಲ ವೇತನ ತಿಂಗಳಿಗೆ 18,000 ರೂ.ಗೆ ಏರಿಸಿತ್ತು. ಆರನೇ ಆಯೋಗದಲ್ಲಿ 7 ಸಾವಿರ ರೂಪಾಯಿಗಳಿದ್ದವು. ಕನಿಷ್ಠ ಪಿಂಚಣಿಯನ್ನು 3,500 ರೂ.ಗಳಿಂದ 9,000 ರೂ.ಗೆ ಹೆಚ್ಚಿಸಲಾಗಿತ್ತು. ಗರಿಷ್ಠ ವೇತನ ₹ 2,50,000 ಮತ್ತು ಗರಿಷ್ಠ ಪಿಂಚಣಿ ₹ 1,25,000ಕ್ಕೆ ಏರಿತ್ತು.

7 ವೇತನ ಆಯೋಗವನ್ನು 2016 ರಲ್ಲಿ ಸ್ಥಾಪಿಸಲಾಗಿತ್ತು. ಅದರ ಅವಧಿ ಡಿಸೆಂಬರ್ 31, 2025 ರಂದು ಕೊನೆಗೊಳ್ಳುತ್ತದೆ. 7ನೇ ವೇತನ ಆಯೋಗದ ಅವಧಿ ಮುಗಿಯುವ ಮುನ್ನ, ಕೇಂದ್ರ ಸರ್ಕಾರಿ ನೌಕರರ ವೇತನ ಪರಿಷ್ಕರಿಸಲು 8ನೇ ವೇತನ ಆಯೋಗ ರಚಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

ವೇತನ ಆಯೋಗ ಎಂದರೇನು?

ಸರ್ಕಾರಿ ನೌಕರರಿಗೆ ವೇತನ ರಚನೆಗಳು, ಭತ್ಯೆಗಳು ಮತ್ತು ಇತರ ಪ್ರಯೋಜನಗಳನ್ನು ನಿರ್ಧರಿಸುವಲ್ಲಿ ವೇತನ ಆಯೋಗವು ನಿರ್ಣಾಯಕ ಪಾತ್ರ ವಹಿಸುತ್ತದೆ. ಆಯೋಗದ ಶಿಫಾರಸುಗಳು ದೇಶಾದ್ಯಂತ ಲಕ್ಷಾಂತರ ಕಾರ್ಮಿಕರು ಮತ್ತು ಪಿಂಚಣಿದಾರರ ಮೇಲೆ ಪರಿಣಾಮ ಬೀರುತ್ತವೆ.

49 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಸುಮಾರು 65 ಲಕ್ಷ ಪಿಂಚಣಿದಾರರು ಇದ್ದಾರೆ. ಹಣದುಬ್ಬರ ಸೇರಿದಂತೆ ವಿವಿಧ ಆರ್ಥಿಕ ಸೂಚಕಗಳನ್ನು ಪರಿಗಣಿಸಿ, ಕೇಂದ್ರ ಸರ್ಕಾರಿ ನೌಕರರ ವೇತನ ಶ್ರೇಣಿಗಳು, ಭತ್ಯೆಗಳನ್ನು ನಿರ್ಧರಿಸಲು ಪ್ರತಿ ಹತ್ತು ವರ್ಷಕ್ಕೊಮ್ಮೆ ವೇತನ ಆಯೋಗ ರಚಿಸುತ್ತದೆ.

1947ರಿಂದ, ಸರ್ಕಾರವು ಏಳು ವೇತನ ಆಯೋಗಗಳನ್ನು ರಚಿಸಿದೆ. ಸರ್ಕಾರಿ ನೌಕರರ ವೇತನ ರಚನೆಗಳು, ಪ್ರಯೋಜನಗಳು ಮತ್ತು ಭತ್ಯೆಗಳನ್ನು ನಿರ್ಧರಿಸುವಲ್ಲಿ ವೇತನ ಆಯೋಗವು ಪ್ರಮುಖ ಪಾತ್ರ ವಹಿಸುತ್ತದೆ. ಸರ್ಕಾರಿ ಸ್ವಾಮ್ಯದ ಹೆಚ್ಚಿನ ಸಂಸ್ಥೆಗಳು ಆಯೋಗದ ಶಿಫಾರಸುಗಳನ್ನು ಅನುಸರಿಸುತ್ತವೆ. 

Tags:    

Similar News