ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಯಶಸ್ವಿ ಕಾರ್ಯಾಚರಣೆ: 6 ಉಗ್ರರ ಹತ್ಯೆ
ವಿಕ್ಟರ್ ಫೋರ್ಸ್‌ನ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಮೇಜರ್ ಜನರಲ್ ಧನಂಜಯ್ ಜೋಶಿ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ.;
ಶ್ರೀನಗರ: ಏಪ್ರಿಲ್ 22ರ ಪಹಲ್ಗಾಮ್ ದಾಳಿಯ ನಂತರ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿರುವ ಭಾರತೀಯ ಭದ್ರತಾ ಪಡೆಗಳು, ಕಳೆದ ಮೂರು ದಿನಗಳಲ್ಲಿ ಕಾಶ್ಮೀರದಲ್ಲಿ ಆರು ಜನ ಉಗ್ರರನ್ನು ಹೊಡೆದುರುಳಿಸಿವೆ.
ವಿಕ್ಟರ್ ಫೋರ್ಸ್‌ನ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಮೇಜರ್ ಜನರಲ್ ಧನಂಜಯ್ ಜೋಶಿ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದು, ದಕ್ಷಿಣ ಕಾಶ್ಮೀರದಲ್ಲಿ ಎರಡು ಪ್ರತ್ಯೇಕ ಪ್ರಮುಖ ಕಾರ್ಯಾಚರಣೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
"ಸಿಆರ್‌ಪಿಎಫ್, ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿಯಾಗಿ ಶೋಪಿಯಾನ್‌ನ ಕೆಲ್ಲಾರ್ ಮತ್ತು ಪುಲ್ವಾಮಾದ ತ್ರಾಲ್‌ನಲ್ಲಿ ಈ ಕಾರ್ಯಾಚರಣೆಗಳನ್ನು ಕೈಗೊಂಡವು. ಒಟ್ಟು ಆರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಭದ್ರತಾ ಪಡೆಗಳ ನಡುವಿನ ಅತ್ಯುತ್ತಮ ಸಮನ್ವಯದಿಂದಾಗಿ ಇದು ಸಾಧ್ಯವಾಯಿತು," ಎಂದು ಮೇಜರ್ ಜನರಲ್ ಜೋಶಿ ಸುದ್ದಿಗಾರರಿಗೆ ತಿಳಿಸಿದರು. ಈ ಕಾರ್ಯಾಚರಣೆಗಳು ಭಯೋತ್ಪಾದನೆ ನಿಗ್ರಹದಲ್ಲಿ ಭದ್ರತಾ ಪಡೆಗಳ ಬದ್ಧತೆಯನ್ನು ಪುನರುಚ್ಚರಿಸಿವೆ.