ಭಾರತ-ಪಾಕ್ ಸಂಘರ್ಷದಲ್ಲಿ 5 ಯುದ್ಧ ವಿಮಾನ ಧ್ವಂಸ; ಕುತೂಹಲ ಮೂಡಿಸಿದ ಟ್ರಂಪ್ ಹೇಳಿಕೆ

ಭಾರತದ ಜೊತೆಗಿನ ಸಂಘರ್ಷದಲ್ಲಿ ಐದು ಯುದ್ಧ ವಿಮಾನಗಳು ಧ್ವಂಸಗೊಂಡಿವೆ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಯುದ್ಧ ವಿಮಾನಗಳು ಭಾರತಕ್ಕೆ ಸೇರಿವೆಯೋ, ಪಾಕಿಸ್ತಾನದವೋ ಎಂಬುದನ್ನು ಸ್ಪಷ್ಟಪಡಿಸಿಲ್ಲ.;

Update: 2025-07-19 07:39 GMT

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ "ಐದು ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ" ಎಂದು ಹೇಳಿದ್ದಾರೆ

ಭಾರತ-ಪಾಕಿಸ್ತಾನದ ಮಿಲಿಟರಿ ಸಂಘರ್ಷದ ವೇಳೆ 5 ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದು ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ. ಆದರೆ, ಆ ಯುದ್ಧ ವಿಮಾನಗಳು ಪಾಕಿಸ್ತಾನದವೋ, ಭಾರತದವೋ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ. 

ಶ್ವೇತಭವನದಲ್ಲಿ ರಿಪಬ್ಲಿಕನ್ ಸಂಸದರೊಂದಿಗೆ ಭೋಜನಕೂಟದ ಸಮಯದಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದರು. ಆದರೆ, ಆ ಐದು ವಿಮಾನಗಳು ಯಾವ ದೇಶದವು ಎಂದು ಖಚಿತವಾಗಿ ಹೇಳಿಲ್ಲ.

ಟ್ರಂಪ್ ಮತ್ತೊಮ್ಮೆ ವ್ಯಾಪಾರ ಬಳಸಿಕೊಂಡು ಎರಡೂ ದೇಶಗಳ ನಡುವೆ ಕದನ ವಿರಾಮ ತಂದಿದ್ದೇನೆ ಎಂದು ಪ್ರತಿಪಾದಿಸಿದ್ದರು. 

ಮೇ ತಿಂಗಳ ಆರಂಭದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಘರ್ಷಣೆ ಬಗ್ಗೆ ಮಾತನಾಡಿದ್ದ ಟ್ರಂಪ್, "ವಾಸ್ತವವಾಗಿ ವಿಮಾನಗಳನ್ನು ಗಾಳಿಯಲ್ಲಿ ಹೊಡೆದುರುಳಿಸಲಾಗುತ್ತಿತ್ತು. ನಾಲ್ಕು ಅಥವಾ ಐದು ಇರಬಹುದು, ಆದರೆ ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ಟ್ರಂಪ್‌ ಹೇಳಿಕೆ ನೀಡಿದ್ದಾರೆ. 

ಈ ಹಿಂದೆ, ಪಾಕಿಸ್ತಾನವು ತಾನು ಭಾರತದ ಐದು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿತ್ತು.

ಜೆಟ್‌ಗಳ ಕುರಿತು ಸಂಘರ್ಷದ ಹೇಳಿಕೆಗಳು

ಪಾಕಿಸ್ತಾನವು ತನ್ನ ವಾಯುಪಡೆಯು ಮೂರು ರಫೇಲ್ ಯುದ್ಧ ವಿಮಾನಗಳು ಸೇರಿದಂತೆ ಹಲವಾರು ಭಾರತೀಯ ವಿಮಾನಗಳನ್ನು ಹೊಡೆದುರುಳಿಸಿದೆ ಮತ್ತು ಭಾರತೀಯ ಪೈಲಟ್‌ಗಳನ್ನು ವಶಕ್ಕೆ ಪಡೆದಿದೆ ಎಂದು ಹೇಳಿಕೊಂಡೇ ಬಂದಿತ್ತು.

ಕದನ ವಿರಾಮದ ನಂತರದ ದಿನಗಳಲ್ಲಿ ಭಾರತೀಯ ವಾಯುಪಡೆ (ಐಎಎಫ್) ವಿಮಾನಗಳನ್ನು ಕಳೆದುಕೊಂಡಿದೆ ಎಂದು ಭಾರತದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ದೃಢಪಡಿಸಿದ್ದರು. ಆದರೆ, ಭಾರತದ ಆರು ಜೆಟ್‌ಗಳು ನಾಶವಾಗಿವೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ತಳ್ಳಿಹಾಕಿದ್ದರು.  

ಪಹಲ್ಗಾಮ್ ದಾಳಿಯ ನಂತರ ಭಾರತದ ಆಪರೇಷನ್ ಸಿಂಧೂರ್

ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ಘಟನೆಯಲ್ಲಿ 26 ನಾಗರಿಕರು ಮೃತಪಟ್ಟಿದ್ದರು.  ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾದ ಪ್ರತಿನಿಧಿ ಮತ್ತು ಕಾಶ್ಮೀರದಲ್ಲಿ ಹಿಂಸಾಚಾರವನ್ನು ಉತ್ತೇಜಿಸುವ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು. ದಾಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಪಡೆಗಳು ಮೇ 7 ರ ಬೆಳಿಗ್ಗೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಪ್ರಾರಂಭಿಸಿ ನಿಯಂತ್ರಣ ರೇಖೆಯ ಬಳಿ ಮತ್ತು ಪಾಕಿಸ್ತಾನದೊಳಗಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು. ಇದರ ನಂತರ ಫೈಟರ್ ಜೆಟ್‌ಗಳು, ಡ್ರೋನ್‌ಗಳು ಮತ್ತು ಕ್ಷಿಪಣಿಗಳ ದಾಳಿಗಳು ನಡೆದಿದ್ದವು. ಬಳಿಕ ಮೇ 10 ರಂದು ಕದನ ವಿರಾಮದೊಂದಿಗೆ ಕೊನೆಗೊಂಡಿತ್ತು. 

Tags:    

Similar News