ಪಾನಮತ್ತ ಚಾಲಕನ ಅಟ್ಟಹಾಸಕ್ಕೆ ಐವರು ಬಲಿ, ಇಬ್ಬರಿಗೆ ಗಂಭೀರ ಗಾಯ
ಅತಿವೇಗದಿಂದ ಕಾರು ಚಲಾಯಿಸುತ್ತಿದ್ದ ಚಾಲಕ, ಮೊದಲು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ನಂತರ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿದ್ದ ಜನರ ಮೇಲೆ ಕಾರನ್ನು ಹರಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಇತ್ರ
ಉತ್ತರ ಪ್ರದೇಶದ ಆಗ್ರಾದಲ್ಲಿ ಶುಕ್ರವಾರ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ, ಪಾದಚಾರಿಗಳ ಮೇಲೆ ವೇಗವಾಗಿ ಕಾರು ಹರಿದು ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಗ್ರಾದ ನ್ಯೂ ಆಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಸೆಂಟ್ರಲ್ ಹಿಂದಿ ಇನ್‌ಸ್ಟಿಟ್ಯೂಟ್ ಬಳಿಯ ನಾಗ್ಲಾ ಬುಧಿ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ.
ಅತಿವೇಗದಿಂದ ಕಾರು ಚಲಾಯಿಸುತ್ತಿದ್ದ ಚಾಲಕ, ಮೊದಲು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ನಂತರ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿದ್ದ ಜನರ ಮೇಲೆ ಕಾರನ್ನು ಹರಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತದ ತೀವ್ರತೆಗೆ ಬಬ್ಲಿ (33), ಭಾನು ಪ್ರತಾಪ್ (25), ಕಮಲ್ (23), ಕೃಷ್ಣ (20) ಮತ್ತು ಬಂತೇಶ್ (21) ಎಂಬ ಐವರು ಸಾವಿಗೀಡಾಗಿದ್ದಾರೆ. ಮೃತರಲ್ಲೊಬ್ಬರಾದ ಭಾನು ಪ್ರತಾಪ್, ಖಾಸಗಿ ಕಂಪನಿಯೊಂದರಲ್ಲಿ ಪಾರ್ಸೆಲ್ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ರಾಹುಲ್ ಮತ್ತು ಗೋಲು ಎಂಬ ಇಬ್ಬರನ್ನು ಸರೋಜಿನಿ ನಾಯ್ಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಈ ಕುರಿತು ಮಾಹಿತಿ ನೀಡಿದ ಆಗ್ರಾ ಸಹಾಯಕ ಪೊಲೀಸ್ ಆಯುಕ್ತ (ACP) ಶೇಷ ಮಣಿ ಉಪಾಧ್ಯಾಯ, "ಘಟನೆಗೆ ಕಾರಣನಾದ ಕಾರು ಚಾಲಕನನ್ನು ತಕ್ಷಣವೇ ಬಂಧಿಸಲಾಗಿದ್ದು, ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಚಾಲಕ ಮದ್ಯಪಾನ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.