ದೆಹಲಿಯ 40ಕ್ಕೂ ಹೆಚ್ಚು ಶಾಲೆಗಳಿಗೆ ಇಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ

ಶಾಲಾ ಆವರಣದಲ್ಲಿ ಬಾಂಬ್ ಗಳನ್ನು ಇರಿಸಲಾಗಿದೆ ಮತ್ತು ಸ್ಫೋಟಗಳನ್ನು ತಡೆಯಲು 30,000 ಡಾಲರ್ ನೀಡಬೇಕು ಎಂದು ದುಷ್ಕರ್ಮಿಗಳು ಬೇಡಿಕೆ ಇಟ್ಟಿದ್ದರು.;

Update: 2024-12-09 06:14 GMT
ದೆಹಲಿಯ ಶಾಲೆಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ.

ದೆಹಲಿಯ 40 ಕ್ಕೂ ಹೆಚ್ಚು ಶಾಲೆಗಳಿಗೆ ಇಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆಗಳು ಬಂದಿವೆ. ಸಮಗ್ರ ತಪಾಸಣೆಯ ನಂತರ ಅನುಮಾನಾಸ್ಪದವಾಗಿ ಏನೂ ಕಂಡುಬರದ ಕಾರಣ ದೆಹಲಿ ಪೊಲೀಸರು ಬೆದರಿಕೆಗಳನ್ನು ಹುಸಿ ಎಂದು ಘೋಷಿಸಿದ್ದಾರೆ.

ದೆಹಲಿ ಪೊಲೀಸರ ಪ್ರಕಾರ, ಭಾನುವಾರ (ಡಿಸೆಂಬರ್ 8) ರಾತ್ರಿ 11.30 ರ ಸುಮಾರಿಗೆ ಶಾಲೆಗಳಿಗೆ ಇಮೇಲ್​​ಗಳನ್ನು ಕಳುಹಿಸಲಾಗಿದೆ. ಶಾಲಾ ಆವರಣದಲ್ಲಿ ಬಾಂಬ್ ಗಳನ್ನು ಇರಿಸಲಾಗಿದೆ ಮತ್ತು ಸ್ಫೋಟಗಳನ್ನು ತಡೆಯಲು 30,000 ಡಾಲರ್ ನೀಡಬೇಕು ಎಂದು ದುಷ್ಕರ್ಮಿಗಳು ಬೇಡಿಕೆ ಇಟ್ಟಿದ್ದರು.

ಸುದ್ದಿ ಸಂಸ್ಥೆ ಎಎನ್ಐ ಪ್ರಕಾರ, "ನಾನು ಕಟ್ಟಡದೊಳಗೆ ಅನೇಕ ಬಾಂಬ್​​ಗಳನ್ನು (ಲೆಡ್ ಅಜೈಡ್, ಡಿಟೋನೇಟರ್​ಗಳಲ್ಲಿ ಬಳಸುವ ಸ್ಫೋಟಕ ಸಂಯುಕ್ತ) ಇರಿಸಿದ್ದೇನೆ. ನಾನು ಕಟ್ಟಡದೊಳಗೆ ಅನೇಕ ಬಾಂಬ್​​ಗಳನ್ನು ಇರಿಸಿದೆ. ಬಾಂಬ್​ಗಳು ಚಿಕ್ಕದಾಗಿವೆ ಮತ್ತು ಚೆನ್ನಾಗಿ ಅಡಗಿವೆ. ಇದು ಕಟ್ಟಡಕ್ಕೆ ಹೆಚ್ಚು ಹಾನಿಯನ್ನುಂಟು ಮಾಡುವುದಿಲ್ಲ, ಆದರೆ ಬಾಂಬ್​​ಗಳು ಸ್ಫೋಟಿಸಿದಾಗ ಅನೇಕ ಜನರು ಗಾಯಗೊಳ್ಳುತ್ತಾರೆ. ನೀವೆಲ್ಲರೂ ಕಷ್ಟ ಅನುಭವಿಸಲು ಮತ್ತು ಕೈಕಾಲುಗಳನ್ನು ಕಳೆದುಕೊಳ್ಳುತ್ತೀರಿ. ನನಗೆ 30,000 ಡಾಲರ್ ಸಿಗದಿದ್ದರೆ, ನಾನು ಬಾಂಬ್​​ಗಳನ್ನು ಸ್ಫೋಟಿಸುತ್ತೇನೆ" ಎಂದು ಬೆದರಿಕೆ ಇಮೇಲ್​​ನಲ್ಲಿ ಬರೆಯಲಾಗಿದೆ.

ಸರಣಿ ಹುಸಿ ಬಾಂಬ್ ಕರೆಗಳು  

ದೆಹಲಿ ಪಬ್ಲಿಕ್ ಶಾಲೆ, ಆರ್.ಕೆ.ಪುರಂ ಮತ್ತು ಪಶ್ಚಿಮ ವಿಹಾರ್​ನ ಜಿ.ಡಿ.ಗೋಯೆಂಕಾ ಪಬ್ಲಿಕ್ ಶಾಲೆಗಳು ಬೆದರಿಕೆಗೆ ಒಳಗಾಗಿವೆ. ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಕೆಲವು ತಿಂಗಳುಗಳಿಂದ ಅನೇಕ ಶಾಲೆಗಳು, ವಿಮಾನ ನಿಲ್ದಾಣಗಳು ಮತ್ತು ಇತರ ಸಂಸ್ಥೆಗಳಿಗೆ ಸರಣಿ ಹುಸಿ ಬಾಂಬ್ ಬೆದರಿಕೆಗಳು ಬಂದಿವೆ. ಅಕ್ಟೋಬರ್ 20ರಂದು ದೆಹಲಿಯ ರೋಹಿಣಿ ಪ್ರದೇಶದ ಆರ್​ಪಿಎಫ್​ ಶಾಲೆಯ ಗೋಡೆಯಲ್ಲಿ ಪ್ರಬಲ ಸ್ಫೋಟ ಸಂಭವಿಸಿ ಕಟ್ಟಡದ ಗೋಡೆಯಲ್ಲಿ ರಂಧ್ರ ಉಂಟಾಗಿ ಹತ್ತಿರದ ಅಂಗಡಿಗಳು ಮತ್ತು ವಾಹನಗಳಿಗೆ ಹಾನಿಯಾಗಿದ್ದವು.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ, ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು 2024ರಲ್ಲಿ ವಿಮಾನಯಾನ ಸಂಸ್ಥೆಗಳಿಗೆ ಬಂದಿರುವ ಹುಸಿ ಬೆದರಿಕೆ ಕರೆಗಳ ಸಂಖ್ಯೆ 994 ಎಂದು ಮಾಹಿತಿ ನೀಡಿದ್ದರು. 

Tags:    

Similar News