26/11 ಆರೋಪಿ ತಹವ್ವೂರ್ ರಾಣಾನ ಧ್ವನಿ, ಕೈಬರಹದ ಮಾದರಿ ಸಂಗ್ರಹಕ್ಕೆ ಕೋರ್ಟ್ ಅನುಮತಿ

64ರ ವರ್ಷದ ಪಾಕಿಸ್ತಾನ ಮೂಲದ ಕೆನಡಾದ ಪ್ರಜೆಯಾಗಿರುವ ರಾಣಾ, ಅಮೆರಿಕದಿಂದ ಭಾರತಕ್ಕೆ ಗಡೀಪಾರು ಆಗಿದ್ದ. ಭಯೋತ್ಪಾದನಾ ಕೃತ್ಯದ ಮುಖ್ಯ ಆರೋಪಿ ಡೇವಿಡ್ ಕೋಲ್ಮನ್ ಹೆಡ್ಲಿ ಜೊತೆ ಆತ ನಂಟು ಹೊಂದಿದ್ದ ಎಂದು ಎನ್​ಐಎ ಆರೋಪಿಸಿದೆ.;

Update: 2025-05-01 08:50 GMT

ತಹಾವ್ವೂರ್ ರಾಣಾ.

2008ರಲ್ಲಿ ನಡೆದ 26/11 ಮುಂಬಯಿ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ತಹವ್ವೂರ್ ಹುಸೇನ್ ರಾಣಾನ ಧ್ವನಿ ಮತ್ತು ಕೈಬರಹ ಮಾದರಿಗಳನ್ನು ಸಂಗ್ರಹಿಸಲು ದೆಹಲಿ ಎನ್​ಐಎ ವಿಶೇಷ ಕೋರ್ಟ್​​, ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA)ಗೆ ಅನುಮತಿ ನೀಡಿದೆ. ನ್ಯಾಯಾಧೀಶ ಚಂದರ್ ಜೀತ್ ಸಿಂಗ್ ಅವರು ಈ ಆದೇಶ ನೀಡಿದ್ದಾರೆ. ಅವರು ಈ ಹಿಂದೆ ರಾಣಾನ ಕಸ್ಟಡಿ ಅವಧಿಯನ್ನು 12 ದಿನಗಳವರೆಗೆ ವಿಸ್ತರಿಸಿದ್ದರು.

64ರ ವರ್ಷದ ಪಾಕಿಸ್ತಾನ ಮೂಲದ ಕೆನಡಾದ ಪ್ರಜೆಯಾಗಿರುವ ರಾಣಾ, ಅಮೆರಿಕದಿಂದ ಭಾರತಕ್ಕೆ ಗಡೀಪಾರು ಆಗಿದ್ದ. ಭಯೋತ್ಪಾದನಾ ಕೃತ್ಯದ ಮುಖ್ಯ ಆರೋಪಿ ಡೇವಿಡ್ ಕೋಲ್ಮನ್ ಹೆಡ್ಲಿ ಜೊತೆ ಆತ ನಂಟು ಹೊಂದಿದ್ದ ಎಂದು ಎನ್​ಐಎ ಆರೋಪಿಸಿದೆ. ರಾಣಾ ಈಗ ಎನ್​ಐಎ ಕಸ್ಟಡಿಯಲ್ಲಿದ್ದು, ತನಿಖಾಧಿಕಾರಿಗಳು ಆತನನ್ನು ಸತತವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಆತನ ವಿರುದ್ಧದ ಸಾಕ್ಷಿ ಸಂಗ್ರಹಿಸಲು ಧ್ವನಿ ಮತ್ತು ಕೈಬಹರದ ದಾಖಲೆಯನ್ನು ಪಡೆಯುತ್ತಿದ್ದಾರೆ.

ರಾಣಾನನ್ನು ಏಪ್ರಿಲ್ 10ರಂದು ಭಾರತಕ್ಕೆ ತರಲಾಗಿದೆ. ಆತನ ಗಡಿಪಾರಿಗೆ ಅಮೆರಿಕದ ಸುಪ್ರೀಂ ಕೋರ್ಟ್ ಏಪ್ರಿಲ್ 4ರಂದು ತೀರ್ಪು ನೀಡಿತ್ತು. ಇದೀಗ ಮುಂಬೈ ದಾಳಿಯಲ್ಲಿ ಆತನ ಪಾತ್ರವನ್ನು ಸಂಪೂರ್ಣವಾಗಿ ಸಾಕ್ಷ್ಮೀಕರಿಸಲು ಎನ್​​ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಎನ್​​ಐಎ ನ್ಯಾಯಾಲಯವು. ರಾಣಾನ 18 ದಿನಗಳ ಕಸ್ಟಡಿ ಅವಧಿ ಏಪ್ರಿಲ್ 28ರಂದು ಮುಗಿದ ಬಳಿಕ 12 ದಿನಗಳ ಕಾಲ ವಿಸ್ತರಣೆ ನೀಡಿತ್ತು. ಎನ್​ಐಎ ತನಿಖಾಧಿಕಾರಿಗಳು, ದಾಳಿಯ ಸಂದರ್ಭದಲ್ಲಿ ದಾಖಲಾದ ದೂರವಾಣಿ ಸಂಭಾಷಣೆಗಳು ಮತ್ತು ಇತರ ದಾಖಲೆಗಳೊಂದಿಗೆ ಹೋಲಿಕೆ ಮಾಡಲು ಮುಂದಾಗಿದ್ದಾರೆ. 

Similar News