Naxal Encounter| ಛತ್ತೀಸಗಢದಲ್ಲಿ ಎನ್‌ಕೌಂಟರ್‌: 26 ನಕ್ಸಲರ ಹತ್ಯೆ

ಗುಂಡಿನ ಚಕಮಕಿಯಲ್ಲಿ ಪೊಲೀಸರಿಗೆ ಬೆಂಬಲ ನೀಡುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಪೊಲೀಸ್ ಸಿಬ್ಬಂದಿ ಒಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.;

Update: 2025-05-21 11:57 GMT

ಸಾಂದರ್ಭಿಕ ಚಿತ್ರ

ಛತ್ತೀಸ್‌ಗಢದ ನಾರಾಯಣಪುರ-ಬಿಜಾಪುರ ಜಿಲ್ಲೆಗಳ ಗಡಿಯಲ್ಲಿರುವ ಅರಣ್ಯದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 26 ಮಾವೋವಾದಿಗಳು ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಭದ್ರತಾ ಪಡೆ ಅಧಿಕಾರಿಗಳು ಬುಧವಾರ (ಮೇ 21) ಪ್ರಕಟಣೆ ಹೊರಡಿಸಿದ್ದಾರೆ. 

ಸಿಪಿಐ (ಮಾವೋವಾದಿ) ಉನ್ನತ ನಾಯಕ ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜ್ ಹತರಾದ ನಕ್ಸಲರಲ್ಲಿ ಸೇರಿದ್ದಾರೆ ಎಂದು ಹೇಳಲಾಗುತ್ತಿದೆ. ಗುಂಡಿನ ಚಕಮಕಿಯಲ್ಲಿ ಪೊಲೀಸರಿಗೆ ಬೆಂಬಲ ನೀಡುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು,  ಪೊಲೀಸ್ ಸಿಬ್ಬಂದಿ ಒಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ನಕ್ಸಲ್ ವಿರೋಧಿ ಕಾರ್ಯಾಚರಣೆ

ಅಭುಜ್ಮದ್ ಮತ್ತು ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದ ನಡುವಿನ ದಟ್ಟ ಕಾಡುಗಳಲ್ಲಿ ಈ ಎನ್ಕೌಂಟರ್ ನಡೆದಿದ್ದು, ನಾಲ್ಕು ಜಿಲ್ಲೆಗಳ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಪೊಲೀಸರ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿದ್ದಾಗ ಈ ಎನ್ಕೌಂಟರ್ ನಡೆದಿದೆ ಎಂದು ಉಪಮುಖ್ಯಮಂತ್ರಿ ವಿಜಯ್ ಶರ್ಮಾ ತಿಳಿಸಿದ್ದಾರೆ.

"26 ಕ್ಕೂ ಹೆಚ್ಚು ನಕ್ಸಲರು ಸಾವನ್ನಪ್ಪಿದ್ದಾರೆ, ಅವರಲ್ಲಿ ಕೆಲವರು ಬಹುಶಃ ಉನ್ನತ ಕೇಡರ್ ಆಗಿರಬಹುದು. ಈ ಕಾರ್ಯಾಚರಣೆಯಲ್ಲಿ ಪೊಲೀಸರ ಮಾಹಿತಿದಾರನೊಬ್ಬ ಮೃತಪಟ್ಟಿದ್ದು, ಒಬ್ಬ ಪೊಲೀಸ್ ಪೇದೆ  ಗಾಯಗೊಂಡಿದ್ದಾರೆ" ಅವರು ತಿಳಿಸಿದ್ದಾರೆ. ಕೂಂಬಿಂಗ್ ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.

ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿರುವ ಕರಂಗುಟ್ಟ ಬೆಟ್ಟಗಳ ಸುತ್ತಲಿನ ದಟ್ಟ ಕಾಡುಗಳಲ್ಲಿ 21 ದಿನಗಳ ಕಾಲ ನಡೆದ ಬೃಹತ್ ಕಾರ್ಯಾಚರಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಭದ್ರತಾ ಪಡೆಗಳು ಕನಿಷ್ಠ 31 ನಕ್ಸಲರನ್ನು ಎನ್ಕೌಂಟರ್‌ ಮಾಡಿದ್ದವು. ಏಪ್ರಿಲ್ 21 ರಂದು ಪ್ರಾರಂಭವಾದ 21 ದಿನಗಳ ಕಾರ್ಯಾಚರಣೆಯಲ್ಲಿ,  31 ಮಾವೋವಾದಿಗಳನ್ನು ಪಡೆಗಳು ಎನ್ಕೌಂಟರ್‌ ಮಾಡಿದ್ದು, ಇದರಲ್ಲಿ 28 ಜನರನ್ನು ಗುರುತಿಸಲಾಗಿದೆ ಎಂದು ಸಿಆರ್‌ಪಿಎಫ್ ಮಹಾನಿರ್ದೇಶಕ ಜಿಪಿ ಸಿಂಗ್ ಮತ್ತು ಛತ್ತೀಸ್‌ಗಢ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅರುಣ್ ದೇವ್ ಗೌತಮ್ ತಿಳಿಸಿದ್ದಾರೆ.

ಇಲ್ಲಿಯವರೆಗೆ ಗುರುತಿಸಲಾದ ನಕ್ಸಲರ ಮೇಲೆ 1.72 ಕೋಟಿ ರೂ. ಬಹುಮಾನವಿದೆ ಎಂದು ಛತ್ತೀಸ್‌ಗಢ ಪೊಲೀಸ್ ಹೆಚ್ಚುವರಿ ಮಹಾನಿರ್ದೇಶಕ (ನಕ್ಸಲ್ ವಿರೋಧಿ ಕಾರ್ಯಾಚರಣೆ) ವಿವೇಕಾನಂದ್ ಹೇಳಿದ್ದಾರೆ. ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಮತ್ತು ಐಇಡಿಗಳನ್ನು ತಯಾರಿಸುತ್ತಿದ್ದ ನಕ್ಸಲೀಯರ ನಾಲ್ಕು ತಾಂತ್ರಿಕ ಘಟಕಗಳನ್ನು ನಾಶಪಡಿಸಿವೆ. ಈ ಕಾರ್ಯಾಚರಣೆಯಲ್ಲಿ ಸಂಗ್ರಹಿಸಿದ್ದ ಮಾಹಿತಿಗಳನ್ನು ವಿಶ್ಲೇಷಿಸಿದಾಗ ಇದರಲ್ಲಿ ಹಲವಾರು ಹಿರಿಯ ಮಾವೋವಾದಿ ನಾಯಕರು ಎನ್‌ಕೌಂಟರ್‌ಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ ಅಥವಾ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಊಹಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Similar News