Pune IED Case | ಮುಂಬೈ ವಿಮಾನ ನಿಲ್ದಾಣದಲ್ಲಿಇಬ್ಬರು ಐಸಿಸ್ ಉಗ್ರರ ಬಂಧನ

ಇಂಡೋನೇಷ್ಯಾದಿಂದ ಶುಕ್ರವಾರ ರಾತ್ರಿ ಭಾರತಕ್ಕೆ ಹಿಂತಿರುಗುತ್ತಿದ್ದಾಗ ಇಬ್ಬರು ಐಸಿಸ್‌ ಉಗ್ರರನ್ನು ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ -2 ರಲ್ಲಿ ವಲಸೆ ಅಧಿಕಾರಿಗಳು ತಡೆದಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ ವಶಕ್ಕೆ ಪಡೆದುಕೊಂಡಿದೆ.;

Update: 2025-05-17 07:33 GMT

ಎನ್‌ಐಎ

ನಿಷೇಧಿತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾದ (ISIS) ಸ್ಲೀಪರ್ ಮಾಡ್ಯೂಲ್‌ಗೆ ಸೇರಿದ ಇಬ್ಬರು ಶಂಕಿತ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಶನಿವಾರ ಬಂಧಿಸಿದೆ. 2023 ರಲ್ಲಿ ಪುಣೆಯಲ್ಲಿ ಐಇಡಿ (ಸ್ಫೋಟಕ ಸಾಧನ) ತಯಾರಿಕೆ ಮತ್ತು ಪರೀಕ್ಷೆಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. 

ಶಂಕಿತರನ್ನು ಅಬ್ದುಲ್ಲಾ ಫೈಯಾಜ್ ಶೇಖ್ ಅಲಿಯಾಸ್ ಡೈಪರ್‌ವಾಲಾ ಮತ್ತು ತಲ್ಹಾ ಲಿಯಾಕತ್ ಖಾನ್ ಎಂದು ಗುರುತಿಸಲಾಗಿದೆ. ಇಬ್ಬರೂ ಪುಣೆಯ ಕೊಂಧ್ವಾ ಪ್ರದೇಶದವರು. ಶುಕ್ರವಾರ ರಾತ್ರಿ ಇಂಡೋನೇಷ್ಯಾದಿಂದ ಭಾರತಕ್ಕೆ ವಾಪಸಾಗುತ್ತಿದ್ದ ವೇಳೆ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ -2 ರಲ್ಲಿ ವಲಸೆ ಅಧಿಕಾರಿಗಳು ತಡೆದು ವಶಕ್ಕೆ ಪಡೆದು, ರಾಷ್ಟ್ರೀಯ ತನಿಖಾ ಸಂಸ್ಥೆಗೆ ಒಪ್ಪಿಸಿದ್ದಾರೆ. 

ಇಬ್ಬರೂ ಆರೋಪಿಗಳು ಎರಡು ವರ್ಷಗಳಿಗೂ ಹೆಚ್ಚು ಕಾಲ ತಲೆಮರೆಸಿಕೊಂಡಿದ್ದರು. ಮುಂಬೈನ ಎನ್‌ಐಎ ವಿಶೇಷ ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ವಾರೆಂಟ್‌ ಹೊರಡಿಸಿತ್ತು. ಆರೋಪಿಗಳಿಬ್ಬರ ತಲೆಗೆ ಎನ್‌ಐಎ ತಲಾ 3 ಲಕ್ಷ ರೂ.ನಗದು ಬಹುಮಾನ ಘೋಷಿಸಿತ್ತು. 

ದೇಶದ ವಿರುದ್ಧ ಯುದ್ಧ ಸಾರಿದ ಆರೋಪ

ಭಾರತದಲ್ಲಿ ಶಾಂತಿ ಮತ್ತು ಕೋಮು ಸಾಮರಸ್ಯ ಕದಡುವ ಉದ್ದೇಶದಿಂದ ಈ ಆರೋಪಿಗಳು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಿದ್ದರು ಎಂದು ಎನ್‌ಐಎ ತಿಳಿಸಿದೆ. ಐಸಿಸ್‌ ಕಾರ್ಯಸೂಚಿಯಂತೆ ಹಿಂಸೆ ಮತ್ತು ಭಯೋತ್ಪಾದನೆ ಮೂಲಕ ದೇಶದಲ್ಲಿ ಇಸ್ಲಾಮಿಕ್ ಆಡಳಿತ ಸ್ಥಾಪಿಸಲು ಭಾರತ ಸರ್ಕಾರದ ವಿರುದ್ಧ ಯುದ್ಧ ನಡೆಸಲು ಆರೋಪಿಗಳು ಸಂಚು ರೂಪಿಸಿದ್ದರು. ಪುಣೆಯ ಕೊಂಡ್ವಾದಲ್ಲಿ ಅಬ್ದುಲ್ಲಾ ಫಯಾಜ್ ಶೇಖ್ ಬಾಡಿಗೆಗೆ ಪಡೆದಿದ್ದ ಮನೆಯಲ್ಲಿ ಐಇಡಿ ತಯಾರಿಕೆಯಲ್ಲಿ ಭಾಗಿಯಾಗಿದ್ದಾರೆಂದು ಎನ್‌ಐಎ ತಿಳಿಸಿದೆ.

2022-2023ರ ಅವಧಿಯಲ್ಲಿ ಆರೋಪಿಗಳು ಈ ಸ್ಥಳಗಳಲ್ಲಿ ಬಾಂಬ್ ತಯಾರಿಕೆ ಮತ್ತು ತರಬೇತಿಗೆ ಸಂಬಂಧಿಸಿದ ಕಾರ್ಯಾಗಾರ ಆಯೋಜಿಸಿದ್ದರು. ಅದಲ್ಲದೆ ಅವರು ಸಿದ್ಧಪಡಿಸಿದ ಐಇಡಿಯನ್ನು ಪರೀಕ್ಷೆಗೆ ಸ್ಫೋಟ ನಡೆಸಿದ್ದರು. ಪ್ರಕರಣದ ಎಲ್ಲಾ 10 ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳಡಿ ಎನ್‌ಐಎ ಆರೋಪಪಟ್ಟಿ ಸಲ್ಲಿಸಿತ್ತು.

ಪ್ರಕರಣದಲ್ಲಿ ಅಬ್ದುಲ್ಲಾ ಫಯಾಜ್ ಶೇಖ್ ಮತ್ತು ತಲ್ಹಾ ಖಾನ್ ಅವರಲ್ಲದೆ, ಮೊಹಮ್ಮದ್ ಇಮ್ರಾನ್ ಖಾನ್, ಮೊಹಮ್ಮದ್ ಯೂನಸ್ ಸಾಕಿ, ಅಬ್ದುಲ್ ಖಾದಿರ್ ಪಠಾಣ್, ಸಿಮಾಬ್ ನಾಸಿರುದ್ದೀನ್ ಖಾಜಿ, ಜುಲ್ಫಿಕರ್ ಅಲಿ ಬರೋಡಾವಾಲಾ, ಶಾಮಿಲ್ ನಾಚನ್, ಅಖಿಫ್ ನಾಚನ್ ಮತ್ತು ಶಹನಾವಾಜ್ ನಾಚನ್ ಮತ್ತು ಶಹನವಾಜ್ ನಾಚನ್ ಎಂಬುವರನ್ನು ಬಂಧಿಸಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

Tags:    

Similar News