RCB Unbox Event 2024 | ʼಇದು ಆರ್‌ಸಿಬಿಯ ಹೊಸ ಅಧ್ಯಾಯʼ ಎಂದು ಕನ್ನಡದಲ್ಲಿಯೇ ಹೇಳಿದ ವಿರಾಟ್
ಆರ್‌ಸಿಬಿ ತಂಡದ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಆರ್‌ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಕನ್ನಡದಲ್ಲಿಯೇ ಮಾತನಾಡಿದ್ದಾರೆ.;
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ (ಮಾ. 19) ನಡೆದ ಆರ್‌ಸಿಬಿ ತಂಡದ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಆರ್‌ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಕನ್ನಡದಲ್ಲಿಯೇ ಮಾತನಾಡಿದ್ದಾರೆ.
ಈ ಕಾರ್ಯಕ್ರಮದ ವೇಳೆ ಕೊಯ್ಲಿ ವೇದಿಕೆಯಲ್ಲಿ ಮಾತನಾಡುತ್ತಾ, ʼಇದು ಆರ್‌ಸಿಬಿಯ ಹೊಸ ಅಧ್ಯಾಯʼ ಎಂದು ಹೇಳಿ ನೆರೆದಿದ್ದ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ಅಭಿಮಾನಿಗಳು ಶಿಳ್ಳೆ, ಚಪ್ಪಾಳೆಯೊಂದಿಗೆ ವಿರಾಟ್ ಕನ್ನಡ ಮಾತಿಗೆ ಸಂಭ್ರಮಿಸಿದರು.
ಹೆಸರು, ಜೆರ್ಸಿ ಬಣ್ಣ ಬದಲಾವಣೆ
ಈ ಬಾರಿ ಆರ್‌ಸಿಬಿ ಹಲವು ಬದಲಾವಣೆಯನ್ನು ತಂದಿವೆ. ʼರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ʼ ಹೆಸರಿನ ಬದಲಿಗೆ ಈ ಬಾರಿ ಆರ್‌ಸಿಬಿ ʼರಾಯಲ್ ಚಾಲೆಂಜರ್ಸ್ ಬೆಂಗಳೂರುʼ ಹೆಸರಿನಲ್ಲಿ ಕಣಕ್ಕಿಳಿಯಲಿದೆ. ಹೆಸರಿನ ಬದಲಾವಣೆಯೊಂದಿಗೆ ಆರ್‌ಸಿಬಿ ತಂಡದ ಜೆರ್ಸಿ ಬಣ್ಣ ಕೂಡ ಬದಲಾಗಿದೆ. ಈ ಹಿಂದೆಯಿದ್ದ ಕಪ್ಪು-ಕೆಂಪು ಬಣ್ಣಗಳ ಬದಲಿಗೆ ಈ ಬಾರಿಯ ಐಪಿಎಲ್ನಲ್ಲಿ ಆರ್‌ಸಿಬಿ ನೀಲಿ-ಕೆಂಪು ಬಣ್ಣಗಳ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.
ಆರ್‌ಸಿಬಿ ಮಹಿಳಾ ಆಟಗಾರ್ತಿಯರಿಗೆ ಭವ್ಯ ಸ್ವಾಗತ
ಆರ್‌ಸಿಬಿ ಅನ್‌ಬಾಕ್ಸಿಂಗ್ ಕಾರ್ಯಕ್ರಮಕ್ಕೂ ಮುನ್ನ, ಡಬ್ಲ್ಯೂಪಿಎಲ್-2024 ಟ್ರೋಫಿ ಗೆದ್ದ ಮಹಿಳಾ ಆಟಗಾರ್ತಿಯರಿಗೆ ಪುರುಷರ ತಂಡವು ಭವ್ಯ ಸ್ವಾಗತ ಕೋರಿತು. ಡಬ್ಲ್ಯೂಪಿಎಲ್ ಟ್ರೋಫಿ ಹಿಡಿದು ಮಹಿಳಾ ತಂಡದ ನಾಯಕಿ ಫೀಲ್ಡಿಗೆ ಎಂಟ್ರಿ ಕೊಟ್ಟರು. ಅವರ ಜೊತೆ ತಂಡದ ಆಟಗಾರರು ಸಾಲಾಗಿ ಬಂದರು. ಅವರನ್ನು ಆರ್‌ಸಿಬಿ ತಂಡದ ಪುರುಷ ಆಟಗಾರರು ಸಾಲಾಗಿ ನಿಂತು ಚಪ್ಪಾಳೆ ತಟ್ಟಿ ಸ್ವಾಗತ ಕೋರಿದರು. ಈ ದೃಶ್ಯದ ವೀಡಿಯೋವನ್ನು ಆರ್‌ಸಿಬಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಆರ್‌ಸಿಬಿ ಮಹಿಳಾ ತಂಡವು ವುಮೆನ್ಸ್ ಪ್ರೀಮಿಯರ್ ಲೀಗ್ ಟ್ರೋಫಿಯನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಇತ್ತ ಆರ್‌ಸಿಬಿ ಅಭಿಮಾನಿಗಳು ʼಈ ಸಲ ಕಪ್ ನಮ್ದೆʼ ಎನ್ನುವ ಬದಲಿಗೆ ʼಮತ್ತೊಮ್ಮೆ ಈ ಸಲ ಕಪ್ ನಮ್ದುʼ ಎಂದು ಪುನರುಚ್ಚರಿಸಿದ್ದಾರೆ.