ಬಿಸಿಸಿಐ ಅಂಪೈರ್ ಕೆ.ಶ್ರೀನಾಥ್ ಅವರ 'ಹ್ಯಾಂಡ್​ಬುಕ್ ಆಫ್ ಕ್ರಿಕೆಟ್ ಸೈಕಾಲಜಿ' ಬಿಡುಗಡೆ

ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಇದು ತರಬೇತುದಾರರು, ಮಾಜಿ ಕ್ರಿಕೆಟಿಗರು ಮತ್ತು ಪತ್ರಕರ್ತರ ಅಧ್ಯಾಯಗಳನ್ನು ಒಳಗೊಂಡಿದೆ.;

Update: 2025-03-15 09:20 GMT

ಹ್ಯಾಂಡ್​ಬುಕ್​ ಆಫ್​ ಕ್ರಿಕೆಟ್ ಅನ್ನು ದಿಗ್ಗಜ ಕ್ರಿಕೆಟಿಗರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.

ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಮತ್ತು ಪ್ರಸ್ತುತ ಬಿಸಿಸಿಐ ಅಂಪೈರ್ ಕೆ.ಶ್ರೀನಾಥ್ ಮತ್ತು ಸ್ಪೋರ್ಟ್ಸ್​ ಮೆಂಟಲ್​ ಕಂಡೀಷನಿಂಗ್ ಕೋಚ್​​ ಎಂ.ಎನ್.ವಿಶ್ವನಾಥ್ ಅವರು ಜತೆಯಾಗಿ ಬರೆದಿರುವ 'ಹ್ಯಾಂಡ್​ಬುಕ್ ಆಫ್ ಕ್ರಿಕೆಟ್ ಸೈಕಾಲಜಿ' ಶುಕ್ರವಾರ (ಮಾರ್ಚ್ 14) ಬಿಡುಗಡಗೊಂಡಿತು. ಭಾರತದ ಮಾಜಿ ಆಟಗಾರರಾದ ಡಬ್ಲ್ಯು.ವಿ.ರಾಮನ್, ದೊಡ್ಡ ಗಣೇಶ್ ಮತ್ತು ಶ್ರೀನಾಥ್ ಅರವಿಂದ್ ಸೇರಿದಂತೆ ಹಲವಾರು ಮಾಜಿ ಕ್ರಿಕೆಟಿಗರ ಸಮ್ಮುಖದಲ್ಲಿ ಬಿಡುಗಡೆಗೊಂಡಿತು.

ಕರ್ನಾಟಕ ಮತ್ತು ತಮಿಳುನಾಡು ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ ಮತ್ತು ನಿವೃತ್ತಿಯ ನಂತರ ಅಂಪೈರಿಂಗ್ ವೃತ್ತಿ ಮಾಡುತ್ತಿರುವ ಶ್ರೀನಾಥ್, ಕಾರ್ಯಕ್ರಮದಲ್ಲಿ ತಮ್ಮ ಆಟದ ದಿನಗಳನ್ನು ನೆನಪಿಸಿಕೊಂಡರು. ಈ ವೇಳೆ ಅವರು ಒಂದು ರಾಜ್ಯ ಬಿಟ್ಟು ಮತ್ತೊಂದು ರಾಜ್ಯಕ್ಕೆ ಹೋಗಲು ಮಾನಸಿಕವಾಗಿ ಹೇಗೆ ಸಿದ್ಧವಾಗಿರಬೇಕಾಗುತ್ತದೆ ಎಂದು ಹೇಳಿದರು.

ಶ್ರೀನಾಥ್ ಮತ್ತು ರಾಮನ್ ಹೇಳಿದ್ದೇನು?

"ರಾಜ್ಯ ತಂಡವನ್ನು ಬದಲಾಯಿಸಲು ನಾನು ಮಾನಸಿಕವಾಗಿ ಸದೃಢನಾಗಬೇಕಾಗಿತ್ತು. ಆದಾಗ್ಯೂ, ನಾನು ಚೆನ್ನೈ ನಗರದಲ್ಲಿ ಅದ್ಭುತ 19 ವರ್ಷಗಳನ್ನು ಕಳೆದಿದ್ದೇನೆ,"ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್​​ಸಿಎ) ಮಾನ್ಯತೆ ಪಡೆದಿರುವ ಲೆವೆಲ್ ಬಿ ಕೋಚ್​ ಆಗಿರುವ 55 ವರ್ಷದ ಶ್ರೀನಾಥ್ ಹೇಳಿದರು.

ರಾಮನ್ ಅವರು ತಮ್ಮ ಆಟದ ದಿನಗಳಲ್ಲಿ. ಆಟಗಾರರ ನಡುವಿನ ಸ್ನೇಹದ ಬಗ್ಗೆ ಮಾತನಾಡಿದರು. ಈ ಪುಸ್ತಕವು ಕ್ರಿಕೆಟಿಗರಿಗೆ ಮಾತ್ರವಲ್ಲದೆ ಬೇರೆ ಕ್ರೀಡಾಪಟುಗಳಿಗೂ ಅನ್ವಯ ಎಂದು ಹೇಳಿದರು. ಯುವ ಕ್ರಿಕೆಟಿಗರು ಅನುಭವಿಸುವ ಒತ್ತಡಗಳ ವಿಚಾರವಾಗಿಯೂ ಅವರು ಮಾತನಾಡಿದರು.

ಅನಿಲ್​ ಕುಂಬ್ಳೆ ಮುನ್ನುಡಿ

ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಪುಸ್ತಕ ತರಬೇತುದಾರರು, ಮಾಜಿ ಕ್ರಿಕೆಟಿಗರು ಮತ್ತು ಪತ್ರಕರ್ತರ ಆಟದ ಮಾನಸಿಕ ಅಂಶಗಳ ಬಗ್ಗೆ ಅಧ್ಯಾಯಗಳನ್ನು ಹೊಂದಿದೆ.

"ಕೆ.ಶ್ರೀನಾಥ್ (ಕುಂಬಿ) ಮತ್ತು ಎಂ.ಎನ್.ವಿಶ್ವನಾಥ್ ಅವರು ಈ ಪುಸ್ತಕವನ್ನು ಹೊರತಂದಿರುವುದು ನನಗೆ ಸಂತೋಷವಾಗಿದೆ, ಇದು ಉದಯೋನ್ಮುಖ ಕ್ರಿಕೆಟಿಗರಿಗೆ ಮಾನಸಿಕ ಸ್ವಾಸ್ಥ್ಯದ ಮೌಲ್ಯ ಮತ್ತು ಮಹತ್ವ ಅರಿತುಕೊಳ್ಳಲು ಸಹಾಯ ಮಾಡುತ್ತದೆ" ಎಂದು ಕುಂಬ್ಳೆ ಹೇಳಿದರು.

34 ಅಧ್ಯಾಯಗಳು

ಬೆಂಗಳೂರಿನ ಜಯನಗರದಲ್ಲಿ ಶ್ರೀನಾಥ್ ಅವರೊಂದಿಗೆ ಆಡಿದ ದಿನಗಳನ್ನು ಕುಂಬ್ಳೆ ನೆನಪಿಸಿಕೊಂಡರು. "ನಾವು ಚಿಕ್ಕ ಮಕ್ಕಳಾಗಿದ್ದಾಗ ಟೆನ್ನಿಸ್ ಬಾಲ್ ಮತ್ತು ರಬ್ಬರ್ ಬಾಲ್ ಕ್ರಿಕೆಟ್ ಆಡುತ್ತಿದ್ದೆವು, ಕ್ರಮೇಣ ಕ್ಲಬ್ ಕ್ರಿಕೆಟ್​ಗೆ ಕಾಲಿಟ್ಟೆವು ಮತ್ತು ಅಂತಿಮವಾಗಿ ಕರ್ನಾಟಕ ಜೂನಿಯರ್ ಮತ್ತು ಸೀನಿಯರ್ ತಂಡಗಳೊಂದಿಗೆ ರಾಜ್ಯ ಸಹ ಆಟಗಾರರಾದೆವು. ಸ್ವಲ್ಪ ಸಮಯದ ನಂತರ, ಶ್ರೀನಾಥ್​ ತಮಿಳುನಾಡು ಪರ ಆಡಿದರು. 1996 ರಲ್ಲಿ ಚೆನ್ನೈನಲ್ಲಿ ನಡೆದ ರಣಜಿ ಟ್ರೋಫಿ ಫೈನಲ್​ನಲ್ಲಿ ತಮಿಳುನಾಡು ವಿರುದ್ಧ ಆಡಿದ್ದು ನನ್ನ ಮರೆಯಲಾಗದ ನೆನಪುಗಳಲ್ಲಿ ಒಂದಾಗಿದೆ ಎಂದು ಹೇಳಿದರು. 

Tags:    

Similar News