Exclusive Interview | ʼದ ಫೆಡರಲ್ ಕರ್ನಾಟಕʼದ ಜತೆ ವೆಂಕಟೇಶ್ ಪ್ರಸಾದ್ ಮಾತುಕತೆ; ಕೆಎಸ್‌ಸಿಎಗೆ ಅಂಟಿದ ಕಳಂಕ ತೊಳೆಯುವ ಭರವಸೆ
ಅನಿಲ್ ಮತ್ತು ಶ್ರೀನಾಥ್ ಅವರು 2010ರಲ್ಲಿ ಮಾಡಿದಂತೆ ನಾವು ಕೂಡ ಕ್ರಿಕೆಟ್‌ನಿಂದ ಪಡೆದಿದ್ದನ್ನು ವಾಪಸ್ ನೀಡಲು ಬಯಸುತ್ತೇವೆ. ನಾವು ಇದೇ ಮಣ್ಣಿನಿಂದ ಬಂದಿದ್ದೇವೆ, ಈ ಮಣ್ಣಿಗೆ ಏನಾದರೂ ಕೊಡುಗೆ ನೀಡುವುದು ನಮ್ಮ ಕರ್ತವ್ಯ” ಎಂದು ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ಸ್ಥಾನದ ಚುನಾವಣೆ ದಿನೇ ದಿನೇ ಕಳೆಗಟ್ಟುತ್ತಿದೆ. 25 ವರ್ಷಗಳ ಬ್ರಿಜೇಶ್ ಪಟೇಲ್ ಅಧಿಪತ್ಯಕ್ಕೆ ಇತಿಶ್ರೀ ಹಾಡಲು ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಸ್ಪರ್ಧೆಗೆ ಇಳಿದಿದ್ದಾರೆ.
ವೆಂಕಟೇಶ್ ಪ್ರಸಾದ್ ಸ್ಪರ್ಧೆ ಬೆಂಬಲಿಸಿ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರು ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.
ʼದ ಫೆಡರಲ್ ಕರ್ನಾಟಕʼಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಅವರು, ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಾಕಷ್ಟು ಹಿನ್ನೆಡೆಗಳನ್ನು ಕಂಡಿದೆ. ಸರಿಯಾದ ಅಕಾಡೆಮಿಗಳು ಇಲ್ಲ. ಮೈದಾನಗಳು ಕೂಡ ನಾಶವಾಗಿವೆ. ವಿಶೇಷವಾಗಿ ಗ್ರಾಮಾಂತರ ಕೇಂದ್ರಗಳಲ್ಲಿ ಕ್ರಿಕೆಟ್ ಮೂಲಸೌಕರ್ಯ ಸಂಪೂರ್ಣ ಹಾಳಾಗಿದೆ. ಕೆಎಸ್‌ಸಿಎ ಗತವೈಭವ ಮರಳಿಸುವ ಸಲುವಾಗಿ ಸ್ಪರ್ಧೆಗೆ ಇಳಿದಿದ್ದೇನೆ ಎಂದು ಹೇಳಿದ್ದಾರೆ.
ಸುಜಿತ್ ಸೋಮಸುಂದರ್ ನೀಡಿದ ಪವರ್ ಪಾಯಿಂಟ್ ಪ್ರಸ್ತುತಿಯಲ್ಲಿ ನೋಡಿದಂತೆ ಪರಿಸ್ಥಿತಿ ತುಂಬಾ ದುಸ್ಥಿತಿಯಲ್ಲಿದೆ. ಪ್ರತಿಷ್ಠಿತ ಚಿನ್ನಸ್ವಾಮಿ ಕ್ರೀಡಾಂಗಣವೂ ಹಾಳಾಗಿರುವ ಸ್ಥಿತಿಯಲ್ಲಿದೆ.
ನಾವು ಕ್ರಿಕೆಟ್‌ಗೆ ಜೀವ ತುಂಬಬೇಕು. ಇತ್ತೀಚಿಗೆ ಐಪಿಎಲ್ ವಿಜಯೋತ್ಸವದಲ್ಲಿ ಸಂಭವಿಸಿದ ಅವ್ಯವಸ್ಥೆ ಮತ್ತು ಕಾಲ್ತುಳಿತ ಘಟನೆಗಳು ಮನಸ್ಸಿಗೆ ತುಂಬಾ ನೋವುಂಟು ಮಾಡಿವೆ. ಈ ದುರ್ಘಟನೆ ಬಳಿಕ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿಲ್ಲ. ಅಂತಹ ಎಲ್ಲಾ ಪಂದ್ಯಗಳನ್ನು ನಾವು ಕಳೆದುಕೊಂಡಿದ್ದೇವೆ ಎಂದು ಈಗಿನ ಕೆಎಸ್‌ಸಿಎ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಲ್ತುಳಿತ ಘಟನೆಯ ಬಳಿಕ ಹಾಳಾಗಿರುವ ಚಿನ್ನಸ್ವಾಮಿ ಕ್ರೀಡಾಂಗಣ ಹೆಸರನ್ನು ಮತ್ತೆ ಪ್ರಜ್ವಲಿಸುವಂತೆ ಮಾಡಲು ಬಯಸುತ್ತೇವೆ. ಇದು ಒಂದು ಐಕಾನಿಕ್ ಕ್ರೀಡಾಂಗಣ. ಅದರ ಗತವೈಭವವನ್ನು ಮರಳಿ ತರುವುದು ನಮ್ಮ ಗುರಿ. ಸರ್ಕಾರದೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುತ್ತೇವೆ. ಈ ಎಲ್ಲಾ ಕೆಲಸಗಳನ್ನೂ ಚುನಾವಣೆ ನಂತರ ಮಾಡಬೇಕು. ಹಾಗಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದೇನೆ” ಎಂದು ಹೇಳಿದ್ದಾರೆ.
ತಮ್ಮ ʼಟೀಮ್ ಗೇಮ್ ಚೇಂಜರ್ಸ್ʼ ಕುರಿತು ಮಾತನಾಡಿದ ಪ್ರಸಾದ್, “ನನ್ನ ನೇತೃತ್ವದ ತಂಡದಲ್ಲಿ ನಾನು ಅಧ್ಯಕ್ಷ, ವಿನಯ ಮೃತ್ಯುಂಜಯ ಕಾರ್ಯದರ್ಶಿ, ಸುಜಿತ್ ಸೋಮಸುಂದರ್ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ನಮ್ಮ ತಂಡ ಬಲಿಷ್ಠವಾಗಿದೆ. ನಾವು ಯಾರನ್ನಾದರೂ ಎದುರಿಸಲು ಸಿದ್ಧ. ನಮ್ಮ ಗುರಿಯೂ ಒಂದೇ, ಕೆಎಸ್‌ಸಿಎ ಕಳೆದುಕೊಂಡಿರುವ ಕೀರ್ತಿಯನ್ನು ಮರಳಿ ತರುವುದು ಮತ್ತು ನಂಬಿಕೆಯನ್ನು ಮರುನಿರ್ಮಿಸುವುದು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಬ್ರಿಜೇಶ್ ಪಟೇಲ್ ವಿರುದ್ಧದ ಆರೋಪಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ರಿಮೋಟ್ ಕಂಟ್ರೋಲ್’ ಮೂಲಕವೇ ಎಲ್ಲವನ್ನು ನಿಯಂತ್ರಿಸುತ್ತಿದ್ದಾರೆ. ಈಗ ನಾವು ‘ರಿಯಲ್ ಕಂಟ್ರೋಲ್’ ತರಬೇಕು. ಇಲ್ಲದಿದ್ದರೆ ನಾವು ಅವರ ತಂಡವನ್ನು ‘ಶಾಂತಕುಮಾರ್ ತಂಡ’ ಎಂದು ಕರೆಯಬೇಕಾಗಿತ್ತು ಎಂದು ಹೇಳಿದ್ದಾರೆ.
ದ ಪ್ರಿಂಟರ್ಸ್ ಮೈಸೂರ್ ಲಿಮಿಟೆಡ್‌ನ ನಿರ್ದೇಶಕರಾದ ಕೆ.ಎನ್.ಶಾಂತಕುಮಾರ್ ಒಳ್ಳೆಯ ವ್ಯಕ್ತಿ, ಒಮ್ಮೆ ಭೇಟಿಯಾಗಿದ್ದೇನೆ. ಆದರೆ, ಅವರ ಹಿಂದೆ ಬೇರೆ ಶಕ್ತಿ ಕೆಲಸ ಮಾಡುತ್ತಿದೆ. ಆದ್ದರಿಂದ ನಾವು ಬದಲಾವಣೆಯನ್ನು ತರಲು ಬಂದಿದ್ದೇವೆ. ಅನಿಲ್ ಮತ್ತು ಶ್ರೀನಾಥ್ ಅವರು 2010ರಲ್ಲಿ ಮಾಡಿದಂತೆ ನಾವು ಕೂಡ ಕ್ರಿಕೆಟ್‌ನಿಂದ ಪಡೆದಿದ್ದನ್ನು ವಾಪಸ್ ನೀಡಲು ಬಯಸುತ್ತೇವೆ. ನಾವು ಇದೇ ಮಣ್ಣಿನಿಂದ ಬಂದಿದ್ದೇವೆ, ಈ ಮಣ್ಣಿಗೆ ಏನಾದರೂ ಕೊಡುಗೆ ನೀಡುವುದು ನಮ್ಮ ಕರ್ತವ್ಯ” ಎಂದಿದ್ದಾರೆ.
ಕೆಎಸ್‌ಸಿಎ ಸದಸ್ಯರ ಬೆಂಬಲದ ಕುರಿತು ಕೇಳಿದಾಗ, “ಎಲ್ಲರಿಂದ ಅದ್ಭುತ ಪ್ರತಿಕ್ರಿಯೆ ಬಂದಿದೆ. ಎಲ್ಲರೂ ಬದಲಾವಣೆ ಬಯಸಿದ್ದಾರೆ. ಬಹುತೇಕ ಜೀವಿತಾವಧಿ (ಲೈಫ್‌ಟೈಮ್) ಸದಸ್ಯರು 70–75 ವರ್ಷದವರು. ಅವರನ್ನು ಕ್ರೀಡಾಂಗಣಕ್ಕೆ ಬರಮಾಡಿಕೊಳ್ಳುವುದು ಕಷ್ಟ. ಡಿಜಿಟಲ್ ಯುಗದಲ್ಲಿ ನಾವು ಅವರಿಗೆ ಸೌಲಭ್ಯ ಒದಗಿಸಬೇಕು, ತೊಂದರೆ ಕೊಡಬಾರದು” ಎಂದು ಹೇಳಿದ್ದಾರೆ.
ಜನಸಾಮಾನ್ಯರಿಗೆ ಹಾಗೂ ಜೀವಿತಾವಧಿ ಸದಸ್ಯರಿಗೆ ಕ್ರಿಕೆಟ್ ವೀಕ್ಷಣೆಯ ಉತ್ತಮ ಅನುಭವ ಸಿಗಬೇಕು. ಈಗ ಮೈದಾನದ ಅರ್ಧ ಭಾಗವೇ ಕಾಣುವುದಿಲ್ಲ, ಅದರ ಅರ್ಥವೇನು?, ಕೇವಲ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಿಕೊಂಡರೆ ಪ್ರಯೋಜನವಿಲ್ಲ.ಆ ಹಣವನ್ನು ಕ್ರಿಕೆಟ್ ಮೂಲಸೌಕರ್ಯ ಅಭಿವೃದ್ಧಿಗೆ ಹೂಡಬೇಕು. ಬಿಸಿಸಿಐ ಹಣ ಕೊಡುತ್ತಿರುವುದೇ ಅದಕ್ಕಾಗಿ ಎಂದು ಹೇಳಿದ್ದಾರೆ.
ಚುನಾವಣೆಗಳ ನಂತರ ನಮ್ಮ ತಂಡ ಬಂದರೆ ನಿಜವಾದ ಬದಲಾವಣೆ ತರುವ ವಿಶ್ವಾಸವಿದೆ. ಅದೇ ರೀತಿ ಸವಾಲುಗಳೂ ಇವೆ. ಆದರೆ ನಾವು ಅದನ್ನು ಎದುರಿಸಲು ಸಿದ್ಧ ಎಂದು ವೆಂಕಟೇಶ್ ಪ್ರಸಾದ್ ಅವರು ತಮ್ಮ ಯೋಜನೆಗಳ ಕುರಿತು ವಿವರಿಸಿದ್ದಾರೆ.
ʼದ ಫೆಡರಲ್ ಕರ್ನಾಟಕʼಕ್ಕೆ ವೆಂಕಟೇಶ್ ಪ್ರಸಾದ್ ನೀಡಿದ ಸಂದರ್ಶನದ ಪೂರ್ಣ ವಿವರ ವೀಕ್ಷಿಸಲು ಈ ಕೆಳಗಿನ ವಿಡಿಯೊ ನೋಡಿ