ಪ್ಯಾರಾಶೂಟಿಂಗ್‌ನಲ್ಲಿ ಭಾರತದ ಉತ್ತಮ ಪ್ರದರ್ಶನ : ಅವಾನಿ ಲೇಖರಾಗೆ ಚಿನ್ನದ ಪದಕ

ಭಾರತದ ಪ್ಯಾರಾ ಶೂಟಿಂಗ್ ಚಾಂಪಿಯನ್ ಅವಾನಿ ಲೇಖರಾ ಅವರು ದುಬೈನ ಅಲ್ ಐನ್‌ನಲ್ಲಿ ನಡೆದ 2025ರ ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ ಗೆಲುವು ಸಾಧಿಸಿದ್ದಾರೆ.

Update: 2025-11-02 08:00 GMT
Click the Play button to listen to article

ಭಾರತದ ಪ್ಯಾರಾ ಶೂಟಿಂಗ್ ಚಾಂಪಿಯನ್ ಅವಾನಿ ಲೇಖರಾ ಅವರು ದುಬೈನ ಅಲ್ ಐನ್‌ನಲ್ಲಿ ನಡೆದ 2025ರ ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್‌1 ವಿಭಾಗದಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಅವಾನಿ ಲೇಖರಾ ತಮ್ಮ ಅತ್ಯುತ್ತಮ ನಿಖರ ಶೂಟಿಂಗ್ ಕೌಶಲ್ಯದಿಂದ ಸ್ವೀಡನ್‌ನ ಅನ್ನಾ ಬೆಸ್ನನ್ ಅವರನ್ನು ಹಿಂದಿಕ್ಕಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಕಠಿಣ ಸ್ಪರ್ಧೆ ನಡೆದ ಅಂತಿಮ ಹಂತದಲ್ಲಿ ಅವಾನಿ ಅವರು ಶಾಂತ ಮನೋಭಾವದಿಂದ ಗುರಿಯತ್ತ ಗಮನ ಹರಿಸಿ ನಿರಂತರ ಶಾಟ್‌ಗಳಲ್ಲಿ ನಿಖರತೆ ತೋರಿದರು. 

ಈ ವಿಭಾಗದಲ್ಲಿ ಥೈಲ್ಯಾಂಡ್‌ನ ವನ್ನಿಪಾ ಲಿಯುಂಗ್ವಿಲೈ ಕಂಚಿನ ಪದಕ ಗಳಿಸಿದ್ದಾರೆ. ಅವಾನಿಯ ಈ ಸಾಧನೆ ಭಾರತದ ಪ್ಯಾರಾ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದ್ದು, ದೇಶದಾದ್ಯಂತ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಅವಾನಿ ಲೇಖರಾ ಅವರ ಈ ಜಯವು ಕೇವಲ ವೈಯಕ್ತಿಕ ಸಾಧನೆಯಷ್ಟೇ ಅಲ್ಲದೆ, ಪ್ಯಾರಾ ಶೂಟಿಂಗ್‌ನಲ್ಲಿ ಭಾರತವು ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಂದಾಳತ್ವ ವಹಿಸುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಅವಾನಿ ಅವರು ಮೊದಲು 2020ರ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಕಂಚು ಗೆದ್ದು ಇತಿಹಾಸ ನಿರ್ಮಿಸಿದ್ದರೆ, ಈಗ ಮತ್ತೆ ವಿಶ್ವಕಪ್ ವೇದಿಕೆಯಲ್ಲಿ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಮತ್ತೊಂದೆಡೆ ಭಾರತವು ಮಿಶ್ರ 50 ಮೀಟರ್ ಪಿಸ್ತೂಲ್ ಎಸ್‌ಎಚ್‌1 ವಿಭಾಗದಲ್ಲಿ ದ್ವಿಪದಕ ಸಾಧನೆ ಮಾಡಿದೆ.

ವೈಯಕ್ತಿಕ ವಿಭಾಗದಲ್ಲಿ ಆಕಾಶ್ ಚಿನ್ನದ ಪದಕ ಗೆದ್ದರೆ, ಅವರ ಸಹ ಆಟಗಾರ ಸಂದೀಪ್ ಕುಮಾರ್ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಂತಿಮ ಪಂದ್ಯದಲ್ಲಿ ಆಕಾಶ್ ಅವರು ಅತ್ಯುತ್ತಮ ಕೌಶಲ್ಯ ಪ್ರದರ್ಶಿಸಿ 223.1 ಅಂಕಗಳೊಂದಿಗೆ ಚಿನ್ನದ ಪದಕ ಜಯಿಸಿದರು. ಅವರ ಹಿಂದೆ ಸಂದೀಪ್ ಕುಮಾರ್ ಉತ್ತಮ ಹೋರಾಟ ತೋರಿದರೂ, ಅಲ್ಪ ಅಂತರದಿಂದ ಬೆಳ್ಳಿಗೆ ತೃಪ್ತಿಪಟ್ಟರು. ಭಾರತ ತಂಡವು ಎರಡು ಚಿನ್ನ, ಎರಡು ಬೆಳ್ಳಿ ಪದಕ ಗಳಿಸಿ ವಿಶ್ವಕಪ್ ವೇದಿಕೆಯಲ್ಲಿ ತನ್ನ ಬಲಿಷ್ಠ ಹಾದಿಯನ್ನು ತೋರಿಸಿದೆ.

ಕ್ರೀಡಾಭಿಮಾನಿಗಳು ಹಾಗೂ ಕ್ರೀಡಾ ವಲಯದ ತಜ್ಞರು ಅವಾನಿ ಲೇಖರಾ ಮತ್ತು ಭಾರತೀಯ ತಂಡದ ಈ ಪ್ರದರ್ಶನವನ್ನು ಭಾರತದ ಪ್ಯಾರಾ ಕ್ರೀಡೆಗಳ ಚರಿತ್ರೆಯಲ್ಲಿ ಹೊಸ ಅಧ್ಯಾಯ ಎಂದು ಕೊಂಡಾಡಿದ್ದಾರೆ. 

Tags:    

Similar News