ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಪಾರುಪಲ್ಲಿ ಕಶ್ಯಪ್ ದಾಂಪತ್ಯ ಅಂತ್ಯ

2018ರ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಖ್ಯಾತ ಕ್ರೀಡಾ ಜೋಡಿಯ ಏಳುವರೆ ವರ್ಷಗಳ ದಾಂಪತ್ಯ ಸಂಬಂಧ ಈಗ ಅಂತ್ಯಗೊಂಡಿದೆ.;

Update: 2025-07-14 04:11 GMT

ಭಾರತದ ಹೆಮ್ಮೆಯ ಒಲಿಂಪಿಕ್ ಕಂಚಿನ ಪದಕ ವಿಜೇತೆ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ತಮ್ಮ ಪತಿ ಮತ್ತು ಮಾಜಿ ಉನ್ನತ ಮಟ್ಟದ ಷಟ್ಲರ್ ಪಾರುಪಲ್ಲಿ ಕಶ್ಯಪ್ ಅವರಿಂದ ಪ್ರತ್ಯೇಕವಾಗುವುದಾಗಿ ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ.

2018ರ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಖ್ಯಾತ ಕ್ರೀಡಾ ಜೋಡಿಯ ಏಳುವರೆ ವರ್ಷಗಳ ದಾಂಪತ್ಯ ಸಂಬಂಧ ಈಗ ಅಂತ್ಯಗೊಂಡಿದೆ. ಭಾನುವಾರ ರಾತ್ರಿ ಸೈನಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೈಯಕ್ತಿಕ ಪೋಸ್ಟ್, ಕ್ರೀಡಾ ಜಗತ್ತಿನಲ್ಲಿ ಅಚ್ಚರಿ ಮೂಡಿಸಿದೆ.

ಸೈನಾ ತಮ್ಮ ಪೋಸ್ಟ್‌ನಲ್ಲಿ, "ಕೆಲವೊಮ್ಮೆ ಜೀವನ ನಮ್ಮನ್ನು ವಿಭಿನ್ನ ದಿಕ್ಕುಗಳಲ್ಲಿ ಕೊಂಡೊಯ್ಯುತ್ತದೆ. ತೀವ್ರ ಚಿಂತನೆ ಮತ್ತು ಪರಿಗಣನೆಯ ನಂತರ, ಕಶ್ಯಪ್ ಪಾರುಪಲ್ಲಿ ಮತ್ತು ನಾನು ಪ್ರತ್ಯೇಕವಾಗಲು ನಿರ್ಧರಿಸಿದ್ದೇವೆ. ನಾವು ನಮಗೆ ಮತ್ತು ಒಬ್ಬರಿಗೊಬ್ಬರು ಸಮಾಧಾನದ ಹಾದಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಜತೆಗೆ ಕಳೆ ನೆನಪುಗಳಿಗೆ ನಾನು ಕೃತಜ್ಞಳಾಗಿದ್ದೇನೆ.. ಈ ಸಮಯದಲ್ಲಿ ನಮ್ಮ ಖಾಸಗಿ ಜೀವನವನ್ನು ಅರ್ಥಮಾಡಿಕೊಂಡು ಗೌರವಿಸುವಂತೆ ವಿನಂತಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಈ ಇಬ್ಬರು ಚಾಂಪಿಯನ್‌ಗಳು ತಮ್ಮ ಕ್ರೀಡಾ ಜೀವನದ ಆರಂಭಿಕ ದಿನಗಳಲ್ಲಿ ಹೈದರಾಬಾದ್‌ನ ಖ್ಯಾತ ಪುಲ್ಲೆಲಾ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು.

ಸೈನಾ ಮತ್ತು ಕಶ್ಯಪ್ ಕ್ರೀಡಾ ಸಾಧನೆಗಳು

ಸೈನಾ ನೆಹ್ವಾಲ್, 2008 ರಲ್ಲಿ BWF ವರ್ಲ್ಡ್ ಜೂನಿಯರ್ ಚಾಂಪಿಯನ್‌ಶಿಪ್ ಗೆದ್ದು, ನಂತರ ಒಲಿಂಪಿಕ್ಸ್‌‌ನಲ್ಲಿ ಕ್ವಾರ್ಟರ್-ಫೈನಲ್‌ ತಲುಪಿದ ಭಾರತದ ಮೊದಲ ಮಹಿಳಾ ಷಟ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. . 2012ರ ಒಲಿಂಪಿಕ್ಸ್‌‌ನಲ್ಲಿ ಭಾರತಕ್ಕೆ ಬ್ಯಾಡ್ಮಿಂಟನ್‌ನಲ್ಲಿ ಮೊದಲ ಕಂಚಿನ ಪದಕ ತಂದುಕೊಟ್ಟರು.

ಪಾರುಪಲ್ಲಿ ಕಶ್ಯಪ್ ಕೂಡ ಭಾರತೀಯ ಬ್ಯಾಡ್ಮಿಂಟನ್‌ನಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. 2014ರ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ, 32 ವರ್ಷಗಳ ನಂತರ ಈ ಸಾಧನೆ ಮಾಡಿದ ಮೊದಲ ಭಾರತೀಯ ಪುರುಷ ಶಟ್ಲರ್ ಎಂಬ ಖ್ಯಾತಿ ಗಳಿಸಿದ್ದರು. 2012ರ ಲಂಡನ್ ಒಲಿಂಪಿಕ್ಸ್‌‌ನಲ್ಲಿ ಕ್ವಾರ್ಟರ್-ಫೈನಲ್‌ ತಲುಪಿ, ಭಾರತದ ಮೊದಲ ಪುರುಷ ಷಟ್ಲರ್ ಎಂಬ ದಾಖಲೆ ಬರೆದಿದ್ದರು.

2013 ರಲ್ಲಿ ತಮ್ಮ ವೃತ್ತಿಜೀವನದ ಅತ್ಯುನ್ನತ 6ನೇ ಶ್ರೇಯಾಂಕವನ್ನು ತಲುಪಿದ ಕಶ್ಯಪ್, 2024 ರಲ್ಲಿ ವೃತ್ತಿಪರ ಆಟದಿಂದ ನಿವೃತ್ತರಾಗಿ ಇದೀಗ ತರಬೇತುದಾರರಾಗಿ ತಮ್ಮ ಜೀವನವನ್ನು ಮುಂದುವರಿಸಿದ್ದಾರೆ.  

Tags:    

Similar News