Champions Trophy 2025: ನ್ಯೂಜಿಲೆಂಡ್​ ​ ತಂಡವನ್ನು ಮಣಿಸಿ ಚಾಂಪಿಯ್ಸ್ ಟ್ರೋಫಿ ಗೆದ್ದ ಭಾರತ

ಈ ಜಯದೊಂದಿಗೆ 2000ರ ಚಾಂಪಿಯನ್ಸ್ ಫೈನಲ್​ ಸೋಲಿಗೆ 25 ವರ್ಷಗಳ ನಂತರ ಸೇಡು ತೀರಿಸಿಕೊಂಡಿದೆ. 2002, 2013ರಲ್ಲಿ ಟ್ರೋಫಿ ಎತ್ತಿ ಹಿಡಿದ್ದಿದ್ದ ಭಾರತ ಇದೀಗ 12 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ ಬರ ನೀಗಿಸಿದೆ.;

Update: 2025-03-09 16:41 GMT

ಭಾರತ ಕ್ರಿಕೆಟ್ ತಂಡ ಮೂರನೇ ಚಾಂಪಿಯನ್ಸ್‌ ಟ್ರೋಫಿ ತನ್ನದಾಗಿಸಿಕೊಂಡಿದೆ. ಅತ್ಯಂತ ರೋಚಕವಾಗಿ ನಡೆದ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಭಾರತ ತಂಡ 4 ವಿಕೆಟ್​ಗೆಲುವು ಸಾಧಿಸಿತು. ಕೊನೆಯವರೆಗೂ ಕಠಿಣ ಹೋರಾಟ ನಡೆಸಿದ್ದ ನ್ಯೂಜಿಲೆಂಡ್‌ ತಂಡ ಅಂತಿಮವಾಗಿ ಸೋಲು ಒಪ್ಪಿಕೊಂಡಿತು. ಭಾರತ ತಂಡದ ಪರ ಅರ್ಧಶತಕ ಸಿಡಿಸಿದ ನಾಯಕ ರೋಹಿತ್‌ ಶರ್ಮಾ ಗೆಲುವಿನ ರೂವಾರಿ ಎನಿಸಿಕೊಂಡರು.

ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್‌ ತಂಡ ನೀಡಿದ್ದ 252 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ರೋಹಿತ್‌ ಶರ್ಮಾ(76 ರನ್‌) ಅರ್ಧಶತಕದ ಬಲದಿಂದ 49 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 254 ರನ್‌ಗಳನ್ನು ಗಳಿಸಿ ಗೆಲುವು ಸಾಧಿಸಿತು. ಟೀಮ್‌ ಇಂಡಿಯಾದ ಚೇಸಿಂಗ್‌ನಲ್ಲಿ ನಾಯಕ ರೋಹಿತ್‌ ಶರ್ಮಾ ಜೊತೆಗೆ ಶ್ರೇಯಸ್‌ ಅಯ್ಯರ್‌ (48) ಹಾಗೂ ಕೆಎಲ್‌ ರಾಹುಲ್‌ (34*) ದೊಡ್ಡ ಪಾತ್ರ ವಹಿಸಿದರು.

ಈ ಜಯದೊಂದಿಗೆ 2000ರ ಚಾಂಪಿಯನ್ಸ್ ಫೈನಲ್​ ಸೋಲಿಗೆ 25 ವರ್ಷಗಳ ನಂತರ ಸೇಡು ತೀರಿಸಿಕೊಂಡಿದೆ. 2002, 2013ರಲ್ಲಿ ಟ್ರೋಫಿ ಎತ್ತಿ ಹಿಡಿದ್ದಿದ್ದ ಭಾರತ ಇದೀಗ 12 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ ಬರ ನೀಗಿಸಿದೆ.

2017ರಲ್ಲಿ ಪಾಕಿಸ್ತಾನ ವಿರುದ್ಧ ಸೋತು ರನ್ನರ್​ಅಪ್ ಆಗಿದ್ದ ಮೆನ್ ಇನ್ ಬ್ಲ್ಯೂ, 2024ರ ವಿಶ್ವಕಪ್ ನಂತರ ಸತತ 2ನೇ ಐಸಿಸಿ ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ಹಾಲಿ ಟೂರ್ನಿಯಲ್ಲಿ ಅಜೇಯ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದೆ ಭಾರತ.

ತವರಿನಲ್ಲಿ 2023ರ ಏಕದಿನ ವಿಶ್ವಕಪ್ ಸೋತು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ಟೀಮ್ ಇಂಡಿಯಾ, ಸತತ 2 ಟ್ರೋಫಿ ಗೆದ್ದು ಸಮಾಧಾನಪಡಿಸಿದೆ. ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಇದಕ್ಕಿಂತ ಖುಷಿ ಇನ್ನೇನಿಲ್ಲ.

ಕಿವೀಸ್ ನೀಡಿದ್ದ 252 ರನ್​ಗಳ ಗುರಿ ಬೆನ್ನಟ್ಟಿದ ರೋಹಿತ್ ಪಡೆ, 49 ಓವರ್​​ಗಳಲ್ಲಿ ಗುರಿ ಮುಟ್ಟಿತು. ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಗೆದ್ದ ಎಂಎಸ್ ಧೋನಿ ಬಳಿಕ ವಿಶ್ವದ 2ನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗಂಗೂಲಿ, ಧೋನಿ ಬಳಿಕ ಚಾಂಪಿಯನ್ಸ್ ಟ್ರೋಫಿ ಜಯಿಸಿದ ಭಾರತದ 3ನೇ ನಾಯಕ ರೋಹಿತ್​ ಶರ್ಮಾ.

ಭಾರತದ ಭರ್ಜರಿ ಹೋರಾಟ

ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆಯಿತು. ವಿಲ್ ಯಂಗ್ ಮತ್ತು ರಚಿನ್ ರವೀಂದ್ರ ಮೊದಲ ವಿಕೆಟ್​ಗೆ 57 ರನ್ ಕಲೆ ಹಾಕಿದರು. ಈ ಜೋಡಿಯನ್ನು ವರುಣ್ ಚಕ್ರವರ್ತಿ ಮುರಿದರು. ಪರಿಣಾಮ ಯಂಗ್ 15ಕ್ಕೆ ಆಟ ಮುಗಿಸಿದರು. ಬಳಿಕ 2 ಜೀವದಾನ ಪಡೆದಿದ್ದ ರಚಿನ್ ರವೀಂದ್ರ 37 ರನ್ ಗಳಿಸಿದ್ದಾಗ ಕುಲ್ದೀಪ್​ ಯಾದವ್ ಗೂಗ್ಲಿ ಎಸೆತಕ್ಕೆ ಕ್ಲೀನ್ ಬೋಲ್ಡ್ ಆದರು. ಬಳಿಕ ಕುಲ್ದೀಪ್ ಎಸೆದ ತನ್ನ ಎರಡನೇ ಓವರ್​​ನಲ್ಲೇ ಕೇನ್​ ವಿಲಿಯಮ್ಸನ್​ (14) ಸುಲಭ ಕೊಟ್ಟರು. ಟಾಮ್ ಲಾಥಮ್ (14) ಕೂಡ ಹೆಚ್ಚು ಹೊತ್ತು ಇರಲಿಲ್ಲ. ಇದರೊಂದಿಗೆ ಕಿವೀಸ್​ ಮೇಲೆ ಭಾರತದ ಸ್ಪಿನ್ನರ್​​​ಗಳ ಹಿಡಿತ ಸಾಧಿಸಿದರು.

ಈ ಹಂತದಲ್ಲಿ ಡ್ಯಾರಿಲ್ ಮಿಚೆಲ್ ಮತ್ತು ಮೈಕಲ್ ಬ್ರೇಸ್​ವೆಲ್ ಮಿಂಚಿದರು. ಇಬ್ಬರು ಸಹ ಆಕರ್ಷಕ ಅರ್ಧಶತಕಗಳನ್ನು ಬಾರಿಸಿ ಗಮನ ಸೆಳೆದರು. ಇದರೊಂದಿಗೆ ತಂಡದ ಮೊತ್ತವನ್ನು ಗಡಿ ದಾಟಿಸಿದರು. ಆರಂಭದಲ್ಲಿ ಮೇಲುಗೈ ಸಾಧಿಸಿದ ಸ್ಪಿನ್ನರ್​​ಗಳು ಮಧ್ಯಮ ಓವರ್​​ಗಳಲ್ಲಿ ಕೊಂಚ ರನ್ ಲೀಕ್ ಮಾಡಿದರು. ಮಿಚೆಲ್ 101 ಎಸೆತಗಳಲ್ಲಿ 3 ಬೌಂಡರಿ 63 ರನ್ ಗಳಿಸಿದ್ದಾರೆ. ಮೈಕಲ್ ಬ್ರೇಸ್​ವೆಲ್ 40 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್​ 53 ರನ್ ಗಳಿಸಿ ತಂಡದ ಗಡಿ 250ರ ಗಡಿ ದಾಟಿಸಿದರು. ಇವರ ಜೊತೆಗೆ ಗ್ಲೆನ್ ಫಿಲಿಪ್ಸ್ ಸಹ ಅಮೋಘ 34 ರನ್​​ಗಳ ಕಾಣಿಕೆ ನೀಡಿದರು.

ಚಾಂಪಿಯನ್ಸ್ ಟ್ರೋಫಿ ಗೆದ್ದವರು, ಸೋತವರು (1998-2025)

1998 - ದಕ್ಷಿಣ ಆಫ್ರಿಕಾ (ವೆಸ್ಟ್ ಇಂಡೀಸ್)

2000- ನ್ಯೂಜಿಲೆಂಡ್ (ಭಾರತ)

2002 - ಭಾರತ - ಶ್ರೀಲಂಕಾ (ಜಂಟಿ ಚಾಂಪಿಯನ್)

2004 - ವೆಸ್ಟ್ ಇಂಡೀಸ್ (ಇಂಗ್ಲೆಂಡ್)

2006 - ಆಸ್ಟ್ರೇಲಿಯಾ (ವೆಸ್ಟ್ ಇಂಡೀಸ್)

2009 - ಆಸ್ಟ್ರೇಲಿಯಾ (ನ್ಯೂಜಿಲೆಂಡ್)

2013 - ಭಾರತ (ಇಂಗ್ಲೆಂಡ್)

2017 - ಪಾಕಿಸ್ತಾನ (ಭಾರತ)

2025 - ಭಾರತ (ನ್ಯೂಜಿಲೆಂಡ್)

ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಕ್ಕಿದ ನಾಯಕರು


ಹ್ಯಾನ್ಸಿ ಕ್ರೋನಿಯೆ - ದಕ್ಷಿಣ ಆಫ್ರಿಕಾ (1998)

ಸ್ಟೀಫನ್ ಫ್ಲೆಮಿಂಗ್ - ನ್ಯೂಜಿಲೆಂಡ್ (2000)

ಸೌತ್ ಗಂಗೂಲಿ (ಭಾರತ) ಮತ್ತು ಸನತ್ ಜಯಸೂರ್ಯ (ಶ್ರೀಲಂಕಾ) - (ಜಂಟಿ ಚಾಂಪಿಯನ್) - 2002

ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಕ್ಕಿದ ನಾಯಕರು

ಹ್ಯಾನ್ಸಿ ಕ್ರೋನಿಯೆ - ದಕ್ಷಿಣ ಆಫ್ರಿಕಾ (1998)

ಸ್ಟೀಫನ್ ಫ್ಲೆಮಿಂಗ್ - ನ್ಯೂಜಿಲೆಂಡ್ (2000)

ಸೌತ್ ಗಂಗೂಲಿ (ಭಾರತ) ಮತ್ತು ಸನತ್ ಜಯಸೂರ್ಯ (ಶ್ರೀಲಂಕಾ) - (ಜಂಟಿ ಚಾಂಪಿಯನ್) - 2002

ಬ್ರಿಯಾನ್ ಲಾರಾ - ವೆಸ್ಟ್ ಇಂಡೀಸ್ (2004)

ರಿಕಿ ಪಾಂಟಿಂಗ್ - ಆಸ್ಟ್ರೇಲಿಯಾ (2006)

ರಿಕಿ ಪಾಂಟಿಂಗ್ - ಆಸ್ಟ್ರೇಲಿಯಾ (2009)

ಎಂಎಸ್ ಧೋನಿ - ಭಾರತ (2013)

ಸರ್ಫರಾಜ್ ಅಹ್ಮದ್ - ಪಾಕಿಸ್ತಾನ (2017)

ರೋಹಿತ್​ ಶರ್ಮಾ - ಭಾರತ (2025)

Tags:    

Similar News