ವಿಶ್ವ ಚೆಸ್ ಚಾಂಪಿಯನ್ಶಿಪ್ ಗೆದ್ದ ಗುಕೇಶ್ಭಾರತದ ಗ್ರ್ಯಾಂಡ್ ಮಾಸ್ಟರ್ ಡಿ ಗುಕೇಶ್ ಗುರುವಾರ ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ವಿನೂತನ ದಾಖಲೆ ಮಾಡಿದ್ದಾರೆ. ವ ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ ಶಿಪ್ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅವರು ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.
ಗುರುವಾರ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ 14ನೇ ಮತ್ತು ಅಂತಿಮ ಸುತ್ತಿನ ಪಂದ್ಯದಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ.ಗುಕೇಶ್ ಅವರು ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಇದರ ಜೊತೆಗೆ 18ನೇ ವಯಸ್ಸಿಗೆ ಚಾಂಪಿಯನ್ ಆಗುವ ಮೂಲಕ ಚೆಸ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಚೆಸ್ ಪಟು ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ.
18 ವರ್ಷದ ಗುಕೇಶ್ 7.5-6-5 ಅಂಕಗಳ ಅಂತರದಿಂದ ಲಿರೆನ್ ಅವರನ್ನು ಸೋಲಿಸುವ ಮೂಲಕ ವಿಶ್ವ ಪ್ರಶಸ್ತಿಯನ್ನು ಗೆದ್ದುಕೊಂಡರು. ಇದರೊಂದಿಗೆ ಬರೋಬ್ಬರಿ 12 ವರ್ಷಗಳ ಬಳಿಕ ಭಾರತೀಯ ಚೆಸ್ ಆಟಗಾರನೊಬ್ಬ ಈ ಪ್ರಶಸ್ತಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ಲಾಸಿಕಲ್ ಟೈಮ್ ಕಂಟ್ರೋಲ್ ಸ್ವರೂಪದಲ್ಲಿ 14 ನೇ ಮತ್ತು ಅಂತಿಮ ಗೇಮ್ ಅನ್ನು ಗುಕೇಶ್ ಗೆದ್ದು 7.5-6.5 ಅಂಕಗಳೊಂದಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಚಾಂಪಿಯನ್ ಶಿಪ್ ಗೆಲ್ಲಲು ಒಬ್ಬ ಆಟಗಾರನು 7.5 ಅಂಕಗಳನ್ನು ಗಳಿಸಬೇಕಾಗಿತ್ತು.
ವಿಶ್ವನಾಥನ್ ಆನಂದ್ ನಂತರ ವಿಶ್ವ ಚೆಸ್ ಚಾಂಪಿಯನ್ ಪಟ್ಟ ಅಲಂಕರಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ 18 ವರ್ಷದ ಗುಕೇಶ್ ಪಾತ್ರರಾಗಿದ್ದಾರೆ.
ನಾಲ್ಕು ಗಂಟೆಗಳಲ್ಲಿ 58 ನಡೆಗಳ ನಂತರ ಲಿರೆನ್ ವಿರುದ್ಧ 14 ನೇ ಪಂದ್ಯವನ್ನು ಗೆದ್ದ ಗುಕೇಶ್, ಒಟ್ಟಾರೆಯಾಗಿ 18 ನೇ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಾರೆ. ಗುರುವಾರದ ಪಂದ್ಯವೂ ಡ್ರಾಗೊಂಡಿದ್ದರೆ, ಶುಕ್ರವಾರ ಕಡಿಮೆ ಅವಧಿಯ ಟೈ-ವಿರಾಮಗಳಲ್ಲಿ ವಿಜೇತರನ್ನು ನಿರ್ಧರಿಸಬೇಕಾಗಿತ್ತು. ಆದರೆ, ಗುರುವಾರದ ನಿರ್ಣಾಯಕ ಪಂದ್ಯಕ್ಕೆ ಮೊದಲು ಗುಕೇಶ್ ಮೂರನೇ ಮತ್ತು 11 ನೇ ಸುತ್ತುಗಳನ್ನು ಗೆದ್ದರು. 32 ವರ್ಷದ ಲಿರೆನ್ ಆರಂಭಿಕ ಮತ್ತು 12 ನೇ ಗೇಮ್ ಗಳಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದ್ದರು.
ಗುಕೇಶ್ ಹೇಳಿದ್ದೇನು?
"ನಾನು ಕಳೆದ 10 ವರ್ಷಗಳಿಂದ ಈ ಕ್ಷಣದ ಬಗ್ಗೆ ಕನಸು ಕಾಣುತ್ತಿದ್ದೆ. ಕನಸನ್ನು ನನಸು ಮಾಡಿದ್ದಕ್ಕೆ ಸಂತೋಷವಾಗಿದೆ' ಎಂದು ಗುಕೇಶ್ ಗೆಲುವಿನ ಬಳಿಕ ಹೇಳಿದ್ದಾರೆ.
ಆನಂದ್ 2000, 2007, 2008, 2010 ಮತ್ತು 2012 ರಲ್ಲಿ ಐದು ವಿಶ್ವ ಚೆಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಗುಕೇಶ್ ಅವರ ಸಾಧನೆಗೆ ಮೊದಲು, ರಷ್ಯಾದ ದಂತಕಥೆ ಗ್ಯಾರಿ ಕಾಸ್ಪರೋವ್ ಅವರು 1985 ರಲ್ಲಿ ಅನಾಟೋಲಿ ಕಾರ್ಪೊವ್ ಅವರನ್ನು ಸೋಲಿಸಿ 22 ನೇ ವಯಸ್ಸಿನಲ್ಲಿ ಪ್ರಶಸ್ತಿ ಗೆದ್ದು ವಿಶ್ವ ದಾಖಲೆ ಮಾಡಿದ್ದರು. ಈ ವರ್ಷದ ಆರಂಭದಲ್ಲಿ ಕ್ಯಾಂಡಿಡೇಟ್ಸ್ ಪಂದ್ಯಾವಳಿ ಗೆದ್ದ ನಂತರ ಗುಕೇಶ್ ವಿಶ್ವ ಚಾಂಪಿಯನ್ಶಿಪ್ ಗೆದ್ದಿದ್ದರು.